ADVERTISEMENT

ಬೆರಗಿನ ಬೆಳಕು: ಕನ್ಯಾ ಪರೀಕ್ಷೆ

ಡಾ. ಗುರುರಾಜ ಕರಜಗಿ
Published 18 ಮಾರ್ಚ್ 2021, 19:30 IST
Last Updated 18 ಮಾರ್ಚ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮಹೋಷಧಕುಮಾರ ಅಮರಾದೇವಿಯನ್ನು ತನ್ನ ಹೆಂಡತಿಯಾಗಲು ತಕ್ಕ ಕನ್ಯೆ ಎಂದು ಮನದಲ್ಲಿ ತೀರ್ಮಾನಿಸಿದ. ಆದರೂ ಆಕೆಯ ಗುಣಗಳನ್ನು ಮತ್ತಷ್ಟು ಪರೀಕ್ಷೆ ಮಾಡಬೇಕು ಎಂದುಕೊಂಡ.

ಮಾತುಕತೆಯಾದ ಮೇಲೆ ಅಮರಾದೇವಿ, ‘ಸ್ವಾಮಿ, ನಾನು ಗೋಧಿಗಂಜಿ ತಂದಿದ್ದೇನೆ. ಕುಡಿಯುತ್ತೀರಾ?’ ಎಂದು ಕೇಳಿದಳು. ಆಹಾರವನ್ನು ಬೇಡವೆನ್ನುವುದು ಅಮಂಗಲವೆಂದುಕೊಂಡು, ‘ಆಯ್ತು ಕೊಡು, ದೇವಿ’ ಎಂದ. ಆಕೆ ಗಂಜಿಯ ಮಡಕೆಯನ್ನು ಕೆಳಗಿಳಿಸಿದಳು. ಕುಮಾರ ಗಮನಿಸುತ್ತಿದ್ದ. ಆಕೆ ಕೈ ತೊಳೆಯಲು ನೀರು ಕೊಟ್ಟರೆ ಸರಿ, ಇಲ್ಲವಾದರೆ ಆಕೆಯನ್ನು ಬಿಟ್ಟು ಹೋಗುತ್ತೇನೆ ಎಂದುಕೊಂಡ. ಆಕೆ ಒಂದು ಲೋಟದಲ್ಲಿ ಸ್ವಚ್ಛವಾದ ನೀರು ತೆಗೆದುಕೊಂಡು, ‘ಸ್ವಾಮಿ, ಊಟಕ್ಕೆ ಮೊದಲು ಕೈ ತೊಳೆಯಿರಿ’ ಎಂದು ನೀರು ಹಾಕಿದಳು. ಕುಮಾರನಿಗೆ ಸಂತೋಷವಾಯಿತು. ಆಕೆ ತಟ್ಟೆಯಲ್ಲಿ ನೀಡಿದ ಗಂಜಿಯನ್ನು ಕುಡಿದ. ಅದು ತುಂಬ ತೆಳ್ಳಗಾಗಿ, ಗೋಧಿಯ ಅಂಶ ಕಡಿಮೆಯಾಗಿತ್ತು. ‘ಭದ್ರೆ, ಗಂಜಿ ಬಹಳ ಮಂದವಾಗಿದೆ’ ಎಂದ. ಆಕೆ, ‘ಹೌದು, ಸ್ವಾಮಿ, ಈ ವರ್ಷ ಹೆಚ್ಚು ನೀರು ದೊರಕಲಿಲ್ಲ’ ಎಂದಳು. ಹಾಗೆಂದರೆ ಈ ವರ್ಷ ಮಳೆ ಕಡಿಮೆಯಾಗಿ, ಬೆಳೆ ಸರಿಯಾಗಿ ಬರದೆ, ಮನೆಯಲ್ಲಿ ಬಡತನ ಬಂದಿದೆ ಎಂದು ತಿಳಿದುಕೊಂಡ.

ಕೈ, ಬಾಯಿ ತೊಳೆದುಕೊಂಡು, ಆಕೆಯ ಮನೆಯ ವಿಳಾಸವನ್ನು ಕೇಳಿ ತಿಳಿದುಕೊಂಡ. ನಂತರ ಮನೆಯನ್ನು ಹುಡುಕಿಕೊಂಡು ಹೋದ. ಅಮರಾದೇವಿಯ ತಾಯಿ ಅವನನ್ನು ಪ್ರೀತಿಯಿಂದ ಸ್ವಾಗತಿಸಿದಳು. ಆಕೆಗೆ ಈತ ತನ್ನ ಮಗಳನ್ನು ಹುಡುಕಿಕೊಂಡು ಬಂದಿರಬೇಕು ಎನ್ನಿಸಿತು. ಕುಮಾರ ಮನೆಯನ್ನು ನೋಡಿದ. ಅವರು ದರಿದ್ರರಾಗಿದ್ದಾರೆಂದೂ, ಒಂದು ಕಾಲಕ್ಕೆ ಚೆನ್ನಾಗಿ ಬದುಕಿದವರೆಂದು ತಿಳಿಯಿತು.

ADVERTISEMENT

‘ಅಮ್ಮಾ, ನಾನೊಬ್ಬ ದರ್ಜಿ. ಹೊಲಿಯಲು ಯಾವುದಾದರೂ ಬಟ್ಟೆ ಇದ್ದರೆ ಕೊಡಿ’ ಎಂದ ಕುಮಾರ. ಆಕೆ,

‘ಬಟ್ಟೆಗಳಿವೆ, ಆದರೆ ಹೊಲಿಯಲು ಕೊಡಲು ಹಣವಿಲ್ಲ’ ಎಂದಳು.

‘ಅಮ್ಮಾ, ನನಗೆ ಕೂಲಿಯ ಅಪೇಕ್ಷೆ ಇಲ್ಲ. ಬಟ್ಟೆ ಕೊಡಿ ಹೊಲಿಯುತ್ತೇನೆ’ ಎಂದ ಮಹೋಷಧಕುಮಾರ. ಆಕೆ ಹಳೆ ಬಟ್ಟೆಗಳನ್ನು ತಂದುಕೊಟ್ಟಳು. ಆತ ಅವುಗಳನ್ನು ಕ್ಷಣಾರ್ಧದಲ್ಲಿ ಹೊಲಿದು ಸರಿ ಮಾಡುತ್ತಿದ್ದ. ಆಕೆ ತಮ್ಮ ಮನೆಯ ಸುತ್ತಮುತ್ತಲಿನವರಿಗೆ ಈ ಪವಾಡ ಸದೃಶ ಕೆಲಸವನ್ನು ಹರಡಿದಳು. ಜನ ಬಟ್ಟೆಗಳನ್ನು ತಂದು ತಂದು ಕೊಟ್ಟರು. ಒಂದೇ ದಿನದಲ್ಲಿ ಕುಮಾರ ಸಾವಿರ ನಾಣ್ಯಗಳನ್ನು ಸಂಪಾದಿಸಿದ. ಸಂಜೆಯ ಹೊತ್ತಿಗೆ ಅಮರಾದೇವಿ ತಲೆಯ ಮೇಲೆ ಸೌದೆಯ ಹೊರೆಯನ್ನು ಎತ್ತಿಕೊಂಡು ಬಂದು ಅಡುಗೆ ಮಾಡಿದಳು. ಊಟ ರುಚಿಯಾಗಿತ್ತು. ಹಾಗಾದರೆ ಕನ್ಯೆ ಪಾಕಶಾಸ್ತ್ರ ನಿಪುಣಿಯಾಗಿದ್ದಾಳೆ ಎಂದುಕೊಂಡ. ಎಲ್ಲರ ಊಟವಾದ ಮೇಲೆ ಏನಾದರೂ ಪದಾರ್ಥ ಉಳಿದಿದೆಯೇ ಎಂದು ಅಡುಗೆ ಮನೆಗೆ ಹೋಗಿ ನೋಡಿ ಬಂದ. ಯಾವ ಪದಾರ್ಥವೂ ಉಳಿದು ವ್ಯರ್ಥವಾಗಿರಲಿಲ್ಲ. ಆದ್ದರಿಂದ ಆಕೆ ತುಂಬ ಜಾಣೆ, ಯಾವ ಪದಾರ್ಥವನ್ನು ವ್ಯಯ ಮಾಡದೆ, ಹಣಕಾಸನ್ನು ಚೆನ್ನಾಗಿ ನಿಭಾಯಿಸುತ್ತಾಳೆ ಎಂದು ತಿಳಿದುಕೊಂಡ. ಆದರೂ, ಅಡುಗೆ ಯಾವುದೂ ಚೆನ್ನಾಗಿರಲಿಲ್ಲ, ಪದಾರ್ಥವನ್ನೆಲ್ಲ ವ್ಯರ್ಥ ಮಾಡಿದೆ ಎಂದು ಆಕೆಯನ್ನು ತೆಗಳಿದ. ಆಕೆ ಮಾತಿಗೆ ವಿರೋಧ ತೋರದೆ, ಮೃದುವಾಗಿ ನಕ್ಕಳು. ನಕ್ಕಿದ್ದು ಏಕೆ ಎಂದು ಕೇಳಿದಾಗ, ‘ನೀವು ಸುಮ್ಮನೆ ನನ್ನನ್ನು ಪರೀಕ್ಷಿಸಲು ತೆಗಳಿದ್ದು. ನೀವು ಊಟ ಮಾಡುವಾಗ ಮುಖದಲ್ಲಿ ಇದ್ದ ಸಂತೃಪ್ತಿಯನ್ನು ಕಂಡಿದ್ದೆ. ನೀವು ಎರಡೆರಡು ಬಾರಿ ಹಾಕಿಸಿಕೊಂಡಾಗ ಊಟ ಇಷ್ಟವಾಯಿತು ಎಂಬುದು ತಿಳಿದಿತ್ತು. ಅದಕ್ಕೆ ನಗೆ ಬಂತು’ ಎಂದಳು. ಹಾಗಾದರೆ ಈ ಹುಡುಗಿ ಮನಸ್ಸನ್ನು ಚೆನ್ನಾಗಿ ಅರಿಯುತ್ತಾಳೆ ಎಂಬುದು ಖಚಿತವಾಗಿ, ಮನಸ್ಸು ಆಕೆಯನ್ನು ಒಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.