ADVERTISEMENT

ಬೃಹತ್ ನಾಟಕರಂಗ

ಡಾ. ಗುರುರಾಜ ಕರಜಗಿ
Published 25 ಫೆಬ್ರುವರಿ 2020, 4:56 IST
Last Updated 25 ಫೆಬ್ರುವರಿ 2020, 4:56 IST
   

ನಾಟಕವ ನೋಡು ಬ್ರಹ್ಮಾಂಡರಂಗಸ್ಥಲದಿ |
ಕೋಟಿ ನಟರಾಂತಿಹರು ಚಿತ್ರಪಾತ್ರಗಳ ||
ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ |
ನೋಟಕರು ಮಾಟಕರೆ – ಮಂಕುತಿಮ್ಮ || 254 ||

ಪದ-ಅರ್ಥ: ನಟರಾಂತಿಹರು=ನಟರ+ಅಂತಿಹರು(ತಾಳಿಹರು, ಧರಿಸಿರುವರು) ನೋಟಕರು=ನೋಡುವವರು, ಪ್ರೇಕ್ಷಕರು, ಆಟಕರೆ=ಆಡುವವರು, ಪಾತ್ರಧಾರಿಗಳು

ವಾಚ್ಯಾರ್ಥ: ಬ್ರಹ್ಮಾಂಡವೆಂಬ ರಂಗಸ್ಥಲದಲ್ಲಿ ನಾಟಕವನ್ನು ನೋಡು. ಅಲ್ಲಿ ಕೋಟಿ ನಟರು ತಮ್ಮ ತಮ್ಮ ಪಾತ್ರಗಳನ್ನು ಧರಿಸಿದ್ದಾರೆ. ಈ ನಾಟಕಕ್ಕೆ ಆದಿಯಿಲ್ಲ, ಅಂತ್ಯವಿಲ್ಲ. ಇಲ್ಲಿ ನೋಡುವವರೂ ಪಾತ್ರಧಾರಿಗಳೇ.

ADVERTISEMENT

ವಿವರಣೆ: ಪ್ರಪಂಚವೇ ಒಂದು ಬೃಹತ್ ನಾಟಕ ಮಂದಿರ. ನಾಟಕ ಮಂದಿರವೆಂದ ಮೇಲೆ ಅಲ್ಲಿ ನಾಟಕದಲ್ಲಿ ನಟಿಸುವವರೂ ಇರಬೇಕು ಹಾಗೂ ಅದನ್ನು ನೋಡುವ ಪ್ರೇಕ್ಷಕರೂ ಇರಬೇಕು. ಆದರೆ ಈ ಪ್ರಪಂಚವೆಂಬ ನಾಟಕರಂಗದಲ್ಲಿ ಒಂದು ವಿಶೇಷ. ಇಲ್ಲಿರುವ ಪ್ರತಿಯೊಬ್ಬರೂ ನಟರೇ. ಅದಕ್ಕೇ ಇಲ್ಲಿ ಕೋಟಿ ಕೋಟಿ ನಟರು ತಮ್ಮ ತಮ್ಮ ಪಾತ್ರಗಳನ್ನು ತನ್ಮಯತೆಯಿಂದ ನಟಿಸುತ್ತಿದ್ದಾರೆ. ಅತ್ಯಂತ ವಿಶೇಷವೆಂದರೆ ಅವರಿಗೆ ತಾವು ನಟರು ಎಂಬುದು ಗೊತ್ತಿಲ್ಲ. ತಾವು ವಹಿಸುತ್ತಿರುವ ಪಾತ್ರವೇ ತಾವು ಎಂದು ಖಚಿತವಾಗಿ ನಂಬಿದ್ದಾರೆ. ನಾವೆಲ್ಲ ಹಾಗೆಯೇ ಅಲ್ಲವೆ? ನಾನು ಈ ಹೆಸರಿನವನು, ಇಂಥವರ ಮಗ / ಮಗಳು, ನನ್ನ ಉದ್ಯೋಗ ಇಂಥದ್ದು, ನನ್ನ ಬದುಕಿನ ಉದ್ದೇಶ ಇದು, ಇಂಥವರು ನನ್ನ ಹೆಂಡತಿ / ಗಂಡ, ಇವರು ನನ್ನ ಮಕ್ಕಳು ಹೀಗೆಲ್ಲ ನಂಬಿ ಮೈಮರೆತು ನಟಿಸುತ್ತಿದ್ದೇವೆ. ನಾವು ಕೇವಲ ಪಾತ್ರಧಾರಿಗಳು, ನಮ್ಮ ಪಾತ್ರ ಮುಗಿಯುವವರೆಗೆ ಆವೇಶದಿಂದ ಕುಣಿದು ಕುಪ್ಪಳಿಸುತ್ತೇವೆ. ಪಾತ್ರ ಮುಗಿದ ಮರುಕ್ಷಣ ಮರೆಯಾಗಿ ಹೋಗುತ್ತೇವೆ. ಮತ್ತೊಂದು ಪಾತ್ರ ಮುನ್ನಡೆಗೆ ಬರುತ್ತದೆ, ತನ್ನ ಅವಧಿಯು ಮುಗಿಯುವವರೆಗೆ ಕುಣಿಯುತ್ತದೆ. ಪ್ರತಿಯೊಂದು ಪಾತ್ರ ಹೀಗೆ ನೀರ ಮೇಲಿನ ಗುಳ್ಳೆಯಂತೆ ಬಂದು ಬಂದು ಒಡೆದುಹೋದರೂ ಗುಳ್ಳೆಗಳ ಪರಂಪರೆ ನಿಂತಿಲ್ಲ. ಮನುಷ್ಯ ಜೀವನವೂ ಹಾಗೆಯೇ ಅಲ್ಲವೆ? ಒಬ್ಬ ಮನುಷ್ಯ ಮರೆಯಾದರೂ ಪರಂಪರೆ ಹಾಗೆಯೇ ಮುಂದುವರೆಯುತ್ತಲೇ ಇದೆ.

ಅದನ್ನೇ ಕಗ್ಗ ಸುಂದರವಾಗಿ ‘ಈ ಆಟಕ್ಕೆ ಮೊದಲಿಲ್ಲ, ಕಡೆಯಿಲ್ಲ’ ಎನ್ನುತ್ತದೆ. ಪ್ರಪಂಚವಿರುವವರೆಗೆ ಅಂದರೆ ಈ ಬೃಹತ್ ನಾಟಕಮಂದಿರ ಇರುವವರೆಗೆ ನಟರ ಕೊರತೆಯಿಲ್ಲ. ಹಾಗಾದರೆ ಈ ನಾಟಕವನ್ನು ನೋಡುವ ಪ್ರೇಕ್ಷಕರು ಯಾರು? ಅದಕ್ಕೂ ಉತ್ತರ ಕಗ್ಗದಲ್ಲಿದೆ. ‘ನೋಟಕರೆ ಮಾಟಕರು’, ಇಲ್ಲಿ ನಟರೇ ಪ್ರೇಕ್ಷಕರು ಮತ್ತು ಪ್ರೇಕ್ಷಕರೇ ನಟರು. ನಾವು ಮತ್ತೊಬ್ಬರನ್ನು, ಅವರ ಜೀವನವನ್ನು ಗಮನಿಸುತ್ತೇವೆ. ಆಗ ನಾವು ಅವರ ನಾಟಕಕ್ಕೆ ಪ್ರೇಕ್ಷಕರು. ಮತ್ತೊಬ್ಬರು ನಮ್ಮನ್ನು ಹಾಗೆಯೇ ನೋಡುವುದಿಲ್ಲವೆ? ಆಗ ನಾವು ನಟರಾಗಿದ್ದೇವೆ, ಅವರು ಪ್ರೇಕ್ಷಕರಾಗಿದ್ದಾರೆ. ಹೀಗಾಗಿ ಈ ವಿಚಿತ್ರ ನಾಟಕ ಮಂದಿರದಲ್ಲಿರುವ ಎಲ್ಲರೂ ಒಂದು ರೀತಿಯ ನಟರಾಗಿ, ಮತ್ತೊಂದು ರೀತಿಯಲ್ಲಿ ಪ್ರೇಕ್ಷಕರಾಗಿದ್ದೇವೆ.

ನಾವು ನಟನೆಯಲ್ಲಿ ಎಷ್ಟು ಆಳವಾಗಿ ತೊಡಗಿಕೊಂಡಿದ್ದೇವೆಂದರೆ, ನಾವು ಎಲ್ಲರೂ ಮೂಲತಃ ಆ ಭಗವದ್ ಶಕ್ತಿಯ ಒಂದು ಕಿಡಿ, ಅದರದೇ ಒಂದು ಪುಟ್ಟ ರೂಪ ಎಂಬುದನ್ನು ಮರೆತು ಬೇರೆ ಬೇರೆ ಹೆಸರುಗಳಲ್ಲಿ, ರೂಪಗಳಲ್ಲಿ, ಸ್ತರಗಳಲ್ಲಿ ನಾಟಕದಲ್ಲಿ ಮಗ್ನರಾಗಿದ್ದೇವೆ. ಆ ಜ್ಞಾನ ಮೂಡಿದ ತಕ್ಷಣ ನಾಟಕರಂಗದ ನೈಜರೂಪ ಹೊಳೆಯುತ್ತದೆ, ಮನಸ್ಸು ನಾಟಕದಿಂದ ವಿಮುಖವಾಗಿ ಅಂತರ್ಮುಖಿಯಾಗುತ್ತದೆ, ತಿಳಿವು ಮೂಡುತ್ತದೆ. ಅಲ್ಲಿಯವರೆಗೂ ನಾಟಕದ ಬದುಕು ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.