ADVERTISEMENT

ಬುದ್ಧನ ಜಾತಕ ಕಥೆಗಳು | ಪರಿಸ್ಥಿತಿಗೆ ತಕ್ಕ ನಡತೆ

ಡಾ. ಗುರುರಾಜ ಕರಜಗಿ
Published 21 ನವೆಂಬರ್ 2019, 15:14 IST
Last Updated 21 ನವೆಂಬರ್ 2019, 15:14 IST
   

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅವನ ಪ್ರಧಾನ ಮಂತ್ರಿಯಾಗಿದ್ದ. ಅವನು ಯಾವಾಗಲೂ ರಾಜನಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿ ದೇಶ ಸರಿಯಾದ ದಾರಿಯಲ್ಲಿ ಹೋಗುವಂತೆ ನೋಡಿಕೊಳ್ಳುತ್ತಿದ್ದ.

ರಾಜನದೊಂದು ಸಮಸ್ಯೆ ಇತ್ತು. ಕೆಲವೊಮ್ಮೆ ರಾಜ ಅತಿಯಾದ ಅವಸರ ಮಾಡುತ್ತಿದ್ದ. ದುಡುಕಿ ತೀರ್ಮಾನ ತೆಗೆದುಕೊಳ್ಳುತ್ತಿದ್ದ. ಅವುಗಳಿಂದ ತೊಂದರೆಆಗುತ್ತಿತ್ತು. ಹಾಗೆ ತೊಂದರೆಯಾದಾಗ ಆತ ಬೇಜಾರುಮಾಡಿಕೊಳ್ಳುತ್ತಿದ್ದ. ಆಮೇಲಿನದು ಇನ್ನೊಂದು ವಿಚಿತ್ರ. ಆಗ ರಾಜ ಅತ್ಯಂತ ನಿಧಾನವಾಗುತ್ತಿದ್ದ. ಯಾವ ತೀರ್ಮಾನವನ್ನೂ ತೆಗೆದುಕೊಳ್ಳದೆ ಮುಂದೆ ಹಾಕುತ್ತಾ ಬರುತ್ತಿದ್ದ. ಎಲ್ಲದಕ್ಕೂ ಸೋಮಾರಿತನ. ಈ ಸೋಮಾರಿತನದಿಂದಲೂ ಅನೇಕ ಅವ್ಯವಸ್ಥೆಗಳಾಗುತ್ತಿದ್ದವು. ಪ್ರಧಾನ ಮಂತ್ರಿ, ಈ ರಾಜನಿಗೆ ಹೇಗೆ ತಿಳಿಹೇಳುವುದು ಎಂದು ಯೋಚಿಸುತ್ತಿದ್ದ.

ಒಂದು ಬಾರಿ ಮಂತ್ರಿ ರಾಜನೊಂದಿಗೆ ಬೇಟೆಯಾಡಲು ಕಾಡಿಗೆ ಹೋದ. ಅಲ್ಲಿ ಒಂದು ಪ್ರಸಂಗ. ಜಿಂಕೆಯೊಂದನ್ನು ಹುಲಿ ಬೆನ್ನಟ್ಟಿ ಓಡುತ್ತಿತ್ತು. ಜೀವಭಯದಿಂದ ತನ್ನ ಸ್ವಭಾವದ ವೇಗಕ್ಕಿಂತ ಹೆಚ್ಚು ವೇಗವಾಗಿ ಜಿಂಕೆ ಹಾರಿ ಹಾರಿ ಹೋಗುತ್ತಿತ್ತು. ಹೇಗೂ ಹುಲಿ ಮತ್ತೊಂದು ಜಿಂಕೆಯನ್ನು ಬೆನ್ನಟ್ಟಿದೆಯಲ್ಲ ಎಂದು ಇನ್ನೊಂದು ಜಿಂಕೆ ಸ್ವಲ್ಪ ನಿಧಾನವಾಗಿ ಓಡುತ್ತಿತ್ತು. ಆಗ ಓಡುತ್ತಿದ್ದ ಹುಲಿ ವೇಗದಿಂದ ಹೋಗುವ ಜಿಂಕೆಯನ್ನು ಬಿಟ್ಟು ಹತ್ತಿರದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಜಿಂಕೆಯನ್ನು ಹೊಡೆದು ಕಚ್ಚಿ ಎಳೆದುಕೊಂಡು ಹೊರಟಿತು.

ADVERTISEMENT

ಅದನ್ನು ನೋಡುತ್ತಿದ್ದ ರಾಜ, ‘ಅಯ್ಯೋ ಪಾಪ, ಈ ಜಿಂಕೆ ಏಕೆ ಸಿಕ್ಕಿ ಹಾಕಿಕೊಂಡಿತು?’ ಎಂದು ಕೇಳಿದ. ಆಗ ಮಂತ್ರಿ, ‘ಪ್ರಭೂ, ಇದು ಇನ್ನೊಂದು ಜಿಂಕೆಯ ತಪ್ಪು. ಹುಲಿ ಹತ್ತಿರವಿರುವಾಗ ನಿಧಾನವಾಗಿ ಹೋಗುವುದು ತಪ್ಪಲ್ಲವೇ? ವೇಗವಾಗಿ ಹೋಗಬೇಕಾದಾಗ ನಿಧಾನವಾಗಿ ಸಾಗುವುದು ಅನಾಹುತಕ್ಕೆ ದಾರಿ. ಇದು ಜಿಂಕೆಗೆ ಮಾತ್ರವಲ್ಲ, ನಮಗೂ ಅನ್ವಯಿಸುತ್ತದೆ’.

ಮುಂದೆ ನಡೆದಾಗ ರಾಜ ತನ್ನ ಕಾಲಬಳಿ ಒಂದು ವಿಚಿತ್ರವಾದ ಹುಳವನ್ನು ಕಂಡ. ‘ಇದು ಯಾವ ಹುಳ?’ ಎಂದು ಮಂತ್ರಿಯನ್ನು ಕೇಳಿದ. ಮಂತ್ರಿ ಅದನ್ನು ಗಮನಿಸಿ ಹೇಳಿದ, ‘ಸ್ವಾಮಿ, ಈ ಹುಳದ ಹೆಸರು ಗಜಕುಂಭ. ಇದರಂಥ ಸೋಮಾರಿ ಜೀವಿ ಪ್ರಪಂಚದಲ್ಲೇ ಇಲ್ಲ. ಅದು ಇಡೀ ದಿನ ನಡೆದರೂ ಒಂದು ಅಡಿ ಮುಂದೆ ಹೋಗುವುದಿಲ್ಲ’.

ಆಗ ರಾಜ ಕೇಳಿದ, ‘ನಾವು ಆಗಲೇ ನೋಡಿದೆವು, ನಿಧಾನವಾಗಿ ಸಾಗಿದ ಜಿಂಕೆ ಹುಲಿಯ ಪಾಲಾಯಿತು. ನಿಧಾನ ಅದರ ಪ್ರಾಣಕ್ಕೇ ಮುಳುವಾಯಿತು. ಹಾಗಿರುವಾಗ ಇಷ್ಟು ನಿಧಾನವಾಗಿರುವ ಗಜಕುಂಭ ಬದುಕಿ ಉಳಿಯುವುದು ಹೇಗೆ?’ ಮಂತ್ರಿ ಹೇಳಿದ, ಸ್ವಾಮಿ, ಜಿಂಕೆಯ ಕಥೆ ಬೇರೆ. ಈ ಹುಳ ಬದುಕಿದ್ದೇ ತನ್ನ ನಿಧಾನ ಗುಣದಿಂದ. ಕೆಲವೊಮ್ಮೆ ಅವಸರದಿಂದ ಅನಾಹುತಗಳಾಗುತ್ತವೆ’. ‘ಅದು ಹೇಗೆ?’ ಕೇಳಿದ ರಾಜ.

‘ಕಾಡಿನಲ್ಲಿ ಬೆಂಕಿ ಬಿದ್ದಾಗ ಅದು ನಿಧಾನವಾಗಿ ಪ್ರಾರಂಭವಾಗಿ ನಂತರ ಜೋರಾಗಿ ಹರಡುತ್ತದೆ. ಅದಕ್ಕೆ ಗಾಳಿಯ ಸಹಕಾರ ಸಿಗುತ್ತದೆ. ಆಗ ಈ ಹುಳ ದೂರ ಹೋಗುವುದಿಲ್ಲ. ಅದು ಜೋರಾಗಿ ಸರಿದರೆ, ಗಾಳಿಗೆ ಹಾರಿ ಬೆಂಕಿಗೆ ಬೀಳುತ್ತದೆ. ಅದು ನಿಧಾನವಾಗಿ ನೆಲವನ್ನು ಕೊರೆದು ಆಳಕ್ಕೆ ಹೋಗಿಬಿಡುತ್ತದೆ. ಅಷ್ಟು ಆಳಕ್ಕೆ ಹೋದ ಹುಳಕ್ಕೆ ಮೇಲಿನ ಬೆಂಕಿಯ ಝಳ ತಾಗುವುದಿಲ್ಲ, ಬದುಕಿಕೊಳ್ಳುತ್ತದೆ.

ಅದಕ್ಕೇ ಸ್ವಾಮಿ, ‘ನಿಧಾನಬೇಕಾದಾಗ ಅವಸರ ಮಾಡಬಾರದು, ಅವಸರ ಬೇಕಾದಾಗ ನಿಧಾನ ಮಾಡಬಾರದು. ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸಬೇಕು’ ಎಂದು ವಿವರಿಸಿದ ಮಂತ್ರಿ. ರಾಜನಿಗೆ ಇದರ ಅರ್ಥವಾಗಿ ಮುಂದೆ ಸರಿಯಾಗಿ ನಾಯಕತ್ವವನ್ನು ವಹಿಸಿದ.

ಈ ಮಾತು ನಮ್ಮ ಇಂದಿನ ಜೀವನದಲ್ಲೂ ತುಂಬ ಪ್ರಯೋಜನಕಾರಿಯಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.