ADVERTISEMENT

ಮನ ಬದಲಿಸಿದ ಬುದ್ಧಿವಂತಿಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 19:30 IST
Last Updated 16 ಫೆಬ್ರುವರಿ 2020, 19:30 IST
   

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅತ್ಯಂತ ಬಡಕುಟುಂಬವೊಂದರಲ್ಲಿ ಜನಿಸಿದ್ದ. ಅವನ ಹೆಸರು ಸುತನು ಎಂದಿತ್ತು. ಆತ ಬೆಳೆದು ದೊಡ್ಡವನಾದ ಮೇಲೆ ತನ್ನ ತಾಯಿಯನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದ.

ವಾರಾಣಸಿಯ ರಾಜನಿಗೆ ಬೇಟೆಯೆಂದರೆ ಬಲು ಹುಚ್ಚು. ಆತ ತನ್ನ ಪರಿವಾರದೊಂದಿಗೆ ಬೇಟೆಯಾಡಲು ಹೋದ. ಒಂದು ಜಿಂಕೆಯ ಬೆನ್ನು ಹತ್ತಿ ಓಡಿ, ಓಡಿ ಅದನ್ನು ಕೊಂದು ಹೊತ್ತುಕೊಂಡು ಬರುತ್ತಿದ್ದಾಗ ವಿಶ್ರಾಂತಿಗೆಂದು ಮರದ ಕೆಳಗೆ ಮಲಗಿದ. ಆ ಮರದಲ್ಲಿ ಒಬ್ಬ ಯಕ್ಷ ನೆಲೆ ಮಾಡಿಕೊಂಡಿದ್ದ. ಮರದ ನೆರಳಿನಲ್ಲಿ ಬಂದವರನ್ನು ಆತ ತಿನ್ನಬಹುದೆಂಬ ವರ ಇಂದ್ರನಿಂದ ದೊರೆತಿತ್ತು. ಅದಕ್ಕೇ ರಾಜ ಎದ್ದ ತಕ್ಷಣ ಅವನ ಕೈ ಹಿಡಿದು ‘ನೀನು ಮತ್ತು ನೀನು ಬೇಟೆಯಾಡಿದ ಜಿಂಕೆ ನನ್ನ ಆಹಾರ. ನಾನು ಮರದ ಯಕ್ಷ. ನನಗೆ ಇಂದ್ರನ ವರವಿದೆ’ ಎಂದ. ಆಗ ರಾಜ, ‘ಯಕ್ಷ, ನಿನಗೆ ಇಂದು ಮಾತ್ರ ಆಹಾರ ಬೇಕೋ ಅಥವಾ ನಿತ್ಯವೂ ಬೇಕೋ? ನಾನು ರಾಜನಾದ್ದರಿಂದ ದಿನವೂ ಆಹಾರದೊಂದಿಗೆ ಒಬ್ಬ ಮನುಷ್ಯನನ್ನು ನಿನಗೆ ಬಲಿಯಾಗಿ ಕಳುಹಿಸುತ್ತೇನೆ, ಆದೀತೇ?’ ಕೇಳಿದ. ಯಕ್ಷ ಅದಕ್ಕೆ ಒಪ್ಪಿದ.

ಮರುದಿನ ಮಂತ್ರಿಗಳಿಗೆ ಹೇಳಿ ಪ್ರತಿದಿನವೂ ಸೆರೆಮನೆಯಲ್ಲಿದ್ದ ಒಬ್ಬ ಮನುಷ್ಯನನ್ನು ಯಕ್ಷನ ಬಳಿಗೆ ಕಳುಹಿಸುವ ವ್ಯವಸ್ಥೆ ಮಾಡಿದ ರಾಜ. ಬರಬರುತ್ತ ಕೈದಿಗಳ ಸಂಖ್ಯೆ ತುಂಬ ಕಡಿಮೆಯಾಗುತ್ತಿತ್ತು. ಮಂತ್ರಿಗಳು ಸಲಹೆ ನೀಡಿದರು, ‘ಪ್ರಭು, ಸಾವಿರ ನಾಣ್ಯದ ಆಸೆ ತೋರಿಸಿದರೆ ಬಡವರು ಯಾರಾದರೂ ಬಂದೇ ತೀರುತ್ತಾರೆ. ಅವರನ್ನೇ ಕಳುಹಿಸೋಣ. ಯಾರು ಇದನ್ನು ಒಪ್ಪಿಕೊಳ್ಳುತ್ತಾರೋ ನೋಡುವುದಕ್ಕೆ ಡಂಗುರ ಸಾರಿಸೋಣ’. ರಾಜ ಅದಕ್ಕೂ ಒಪ್ಪಿಗೆ ನೀಡಿದ. ರಾಜ್ಯದಲ್ಲಿ ಡಂಗುರ ಸಾರಿಸಿದ್ದಾಯಿತು. ಈ ಡಂಗುರವನ್ನು ಕೇಳಿ ಬೋಧಿಸತ್ವ ಯೋಚಿಸಿದ, ಈ ಹಣವನ್ನು ಪಡೆದು ತಾನೇ ಯಕ್ಷನ ಬಳಿಗೆ ಹೋದರೆ ತನಗೆ ದೊರೆತ ಹಣದಿಂದ ತಾಯಿಯಾದರೂ ಸುಖವಾಗಿ ಬದುಕಬಹುದು. ತಾನು ಬುದ್ಧಿವಂತಿಕೆಯಿಂದ ಯಕ್ಷನನ್ನು ಗೆಲ್ಲಬಹುದು ಅಥವಾ ಅವನಿಗೆ ಬಲಿಯಾಗಬಹುದು. ಯಾವುದಾದರೂ ಸರಿ, ತನ್ನ ತಾಯಿ ಚೆನ್ನಾಗಿದ್ದರೆ ಸಾಕು ಎಂದುಕೊಂಡು ರಾಜನ ಬಳಿಗೆ ಹೋದ. ‘ರಾಜ, ನಾನು ಯಕ್ಷನಿಗೆ ಬಲಿಯಾಗಲು ಸಿದ್ಧನಿದ್ದೇನೆ. ನನಗೆ ಘೋಷಿಸಿದ ಹಣವನ್ನು ಕೊಡುವುದರೊಂದಿಗೆ ನಿನ್ನ ಪಾದರಕ್ಷೆಗಳನ್ನು ಹಾಗೂ ಕೊಡೆಯನ್ನು ಕೊಡಬೇಕು’ ಎಂದು ಬೇಡಿದ.

ADVERTISEMENT

ಅವುಗಳನ್ನು ತೆಗೆದುಕೊಂಡು ಮರದ ಬಳಿಗೆ ಹೋದ. ಜಾಗರೂಕನಾಗಿ ಕೊಡೆಯನ್ನು ಹಿಡಿದುಕೊಂಡು ರಾಜನ ಚಪ್ಪಲಿಗಳನ್ನು ಧರಿಸಿ, ಅರಮನೆಯಿಂದ ಕಳಿಸಿದ್ದ ಆಹಾರವನ್ನು ಮರದ ನೆರಳಿನ ಅಂಚಿಗಿಟ್ಟು, ಕೋಲಿನಿಂದ ನೆರಳಿನ ಕೆಳಗೆ ತಳ್ಳಿ, ಯಕ್ಷನಿಗೆ ಹೇಳಿದ, ‘ಯಕ್ಷ, ನಿನ್ನ ಆಹಾರ ಬಂದಿದೆ, ತೆಗೆದುಕೋ’. ಯಕ್ಷ ಕೂಗಿದ, ‘ಆ ಆಹಾರದಿಂದ ಏನಾದೀತು? ನೀನು ನೆರಳಿನಲ್ಲಿ ಬಾ. ನಿನ್ನನ್ನು ತಿನ್ನಬೇಕು’. ಬೋಧಿಸತ್ವ ಹೇಳಿದ, ‘ನಾನು ಕೊಡೆಯ ನೆರಳಲ್ಲಿದ್ದೇನೆ ಮತ್ತು ನನ್ನ ಕಾಲುಗಳು ನಿನ್ನ ನೆರಳಿನ ನೆಲವನ್ನು ಸೋಂಕುತ್ತಿಲ್ಲ. ಆದ್ದರಿಂದ ನೀನು ನನ್ನನ್ನು ತಿನ್ನಲಾರೆ’. ಯಕ್ಷ ಬೋಧಿಸತ್ವನ ಬುದ್ಧಿವಂತಿಕೆಗೆ ಸೋತು ಹೋದ. ‘ಅಯ್ಯಾ, ನಾನು ಹೀಗೆಯೇ ಯಾರನ್ನೂ ತಿನ್ನದೆ ಉಳಿದರೆ ಬದುಕುವುದು ಹೇಗೆ?’ ಎಂದು ಕೇಳಿದ. ಆಗ ಬೋಧಿಸತ್ವ, ‘ಯಕ್ಷ, ನೀನು ಹೀಗೆ ಕೆಟ್ಟ ಕೆಲಸಗಳನ್ನು ಮಾಡಿದ್ದರಿಂದಲೇ ಯಕ್ಷನಾಗಿ ಹುಟ್ಟಿದ್ದೀಯಾ. ಇನ್ನು ಮೇಲಾದರೂ ಕುಶಲ ಕಾರ್ಯಗಳನ್ನು ಮಾಡು. ನೀನು ಪಂಚಶೀಲದಲ್ಲಿ ಸ್ಥಾಪಿತನಾಗುತ್ತೀ. ನಿನ್ನನ್ನು ಈಗ ದ್ವೇಷಿಸುವ ಜನರೇ ಮುಂದೆ ಪೂಜಿಸುತ್ತಾರೆ’ ಎಂದು ಹಿತವಚನಗಳನ್ನು ಹೇಳಿದ. ಯಕ್ಷ ಮುಂದೆ ಮನುಷ್ಯರನ್ನು ಕೊಂದು ತಿನ್ನುವ ಹವ್ಯಾಸವನ್ನು ಬಿಟ್ಟು ಪುಣ್ಯಕಾರ್ಯಗಳನ್ನು ಮಾಡಿ ಸ್ವರ್ಗವನ್ನು ಸೇರಿದ.

ಕಠೋರ ವ್ಯಕ್ತಿಗಳ ಮನಸ್ಸನ್ನು ಬದಲಿಸಲು ಕೇವಲ ಒಳ್ಳೆಯತನ ಮಾತ್ರ ಸಾಲದು, ಅದಕ್ಕೆ ಸರಿಯಾದ ಬುದ್ಧಿವಂತಿಕೆಯೂ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.