ADVERTISEMENT

ಜನಪದ ಕಲ್ಯಾಣಿ

ಡಾ. ಗುರುರಾಜ ಕರಜಗಿ
Published 19 ನವೆಂಬರ್ 2018, 19:39 IST
Last Updated 19 ನವೆಂಬರ್ 2018, 19:39 IST

ಭಗವಾನ್ ಬುದ್ಧ ಮನಸ್ಸಿನ ಸಂಯಮದ ವಿಷಯವಾಗಿ ಮಾತನಾಡುತ್ತಿದ್ದಾಗ ಈ ಜನಪದ ಕಲ್ಯಾಣಿಯ ಕಥೆಯನ್ನು ತೇಲಪತ್ತ ಜಾತಕದಲ್ಲಿ ಹೇಳಿದ.

ಜನಪದ ಕಲ್ಯಾಣಿ ಎಂಬ ತರುಣಿಯ ಲಾವಣ್ಯಕ್ಕೆ ಇಡೀ ಊರೇ ಮರುಳಾಗಿತ್ತು. ಜನಪದ ಕಲ್ಯಾಣಿ ಎಂದರೆ ಆರು ಶರೀರ ದೋಷಗಳಿಂದ ಮುಕ್ತಳಾದವಳು ಮತ್ತು ಐದು ಉತ್ತಮಿಕೆಗಳನ್ನು ಹೊಂದಿದವಳು. ಅವಳು ಹೆಚ್ಚು ಉದ್ದವೂ ಅಲ್ಲ, ತೀರ ಕುಳ್ಳೂ ಅಲ್ಲ. ಹೆಚ್ಚು ದಪ್ಪವೂ ಅಲ್ಲ. ತೀರ ತೆಳುವೂ ಅಲ್ಲ. ಹೆಚ್ಚು ಕಪ್ಪೂ ಅಲ್ಲ, ತೀರ ಬೆಳ್ಳಗಿರುವವಳೂ ಅಲ್ಲ. ಅವಳಿಗೆ ಮನುಷ್ಯರಿಗಿಂತ ಸುಂದರವಾದ ಬಣ್ಣ ಉಳ್ಳವಳಾದರೂ ದೈವೀವರ್ಣವನ್ನೂ ತಲುಪದವಳು. ಇದಲ್ಲದೆ ಉತ್ತಮವಾದ ಚರ್ಮ, ಉತ್ತಮವಾದ ಮಾಂಸ, ಉತ್ತಮ ನಾಡಿಗಳು, ಶ್ರೇಷ್ಠವಾದ ಮೂಳೆಗಳು ಹಾಗೂ ಉತ್ತಮವಾದ ವಯಸ್ಸು ಈ ಐದು ಉತ್ತಮಿಕೆಗಳನ್ನು ಪರಿಶ್ರಮಪಟ್ಟು ಪಡೆದ ಸಂಗೀತ ಹಾಗೂ ನೃತ್ಯಗಳು ಆಕೆಯ ಸೌಂದರ್ಯವನ್ನು ದ್ವಿಗುಣಗೊಳಿಸಿದ್ದವು.

ಆಕೆಯ ಸೌಂದರ್ಯ ಯಾವ ಮಟ್ಟದ್ದಾಗಿತ್ತೆಂದರೆ, ಆಕೆ ಹೊರಗೆ ಹೊರಟರೆ ಪುರುಷರ ಕಣ್ಣುಗಳು ಅವಳ ಕಡೆಗೇ ತಿರುಗಿಕೊಂಡು ಸಮ್ಮೋಹಿನಿಗೆ ಒಳಪಟ್ಟವರಂತೆ ನಡೆದುಕೊಳ್ಳುತ್ತಿದ್ದರು. ಗಂಡಸರಷ್ಟೇ ಏಕೆ, ಉಳಿದ ಸ್ತ್ರೀಯರೂ ತಮಗೆ ಅವಳ ಸೌಂದರ್ಯದ ಒಂದು ಭಾಗವಾದರೂ ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅಸೂಯೆಪಡುತ್ತಿದ್ದರು. ಆಕೆ ಉತ್ಸವಗಳಲ್ಲಿ ವೇದಿಕೆಯನ್ನೇರಿ ಹಾಡುತ್ತ, ನೃತ್ಯಮಾಡುತ್ತಿದ್ದಾಗ ಸುತ್ತ ನೆರೆದಿದ್ದ ಪುರುಷರು ‘ಸಾಧು, ಸಾಧು’ ಎಂದು ಕೂಗುತ್ತ, ಚಪ್ಪಾಳೆ ಹೊಡೆಯುತ್ತ, ತಲೆಯ ಮೇಲೆ ಸುತ್ತಿಕೊಂಡ ರುಮಾಲನ್ನು ಬಿಚ್ಚಿ ತೂರಾಡುತ್ತ ಸಂಯಮವನ್ನು ಕಳೆದುಕೊಳ್ಳುತ್ತಿದ್ದರು.

ADVERTISEMENT

ಇದನ್ನು ಗಮನಿಸಿದ ರಾಜ ಸೆರೆಮನೆಯಿಂದ ಒಬ್ಬ ಪುರುಷನನ್ನು ಕರೆಸಿ ಅವನ ಬೇಡಿಗಳನ್ನು ಕಳಚಿಸಿ ಅವನ ಹಿಂದೆ ಒಬ್ಬ ಸೈನಿಕನನ್ನು ನಿಲ್ಲಿಸಿ ಹೇಳಿದ, ‘ನಿನ್ನ ಕೈಯಲ್ಲಿ ಕಂಠಪೂರ್ತಿ ತುಂಬಿದ ಎಣ್ಣೆಯ ಪಾತ್ರೆಯನ್ನು ಕೊಡುತ್ತೇನೆ. ನೀನು ಜನಪರಕಲ್ಯಾಣಿ ನೃತ್ಯಮಾಡುವ ಸ್ಥಳಕ್ಕೆ ಹೋಗಬೇಕು. ಒಂದೇ ಒಂದು ಕ್ಷಣ ನಿನ್ನ ಮನಸ್ಸು ಚಂಚಲವಾಗಿ, ಅಲಕ್ಷ್ಯದಿಂದ ಒಂದು ತೊಟ್ಟು ಎಣ್ಣೆ ಕೆಳಗೆ ಬಿದ್ದರೆ ಈ ಸೈನಿಕ ನಿನ್ನ ತಲೆ ಹಾರಿಸಿಬಿಡುತ್ತಾನೆ. ಎಚ್ಚರ’.

ಅವನ ಹಿಂದೆಯೇ ಹಿರಿದ ಖಡ್ಗದ ಸೈನಿಕ ನಡೆದ. ಆ ಕೈದಿಗೆ ಜೀವಭಯ ಹುಟ್ಟಿತು. ಎಣ್ಣೆಯ ಪಾತ್ರೆಯ ಮೇಲಿನಿಂದ ಒಂದು ಕ್ಷಣ ದೃಷ್ಟಿ ತೆಗೆದರೂ ತಲೆ ಹೋಗಿಬಿಡುತ್ತದೆ. ಅದಕ್ಕೆ ಆತ ಜನಪದಕಲ್ಯಾಣಿ ನೃತ್ಯಮಾಡುತ್ತಿದ್ದ ಪ್ರದೇಶದಲ್ಲೆಲ್ಲ ಸುತ್ತಾಡಿದರೂ ಬದುಕಿ ಉಳಿಯುವ ಇಚ್ಛೆಯಿಂದ ಸದಾ ಜಾಗರೂಕನಾಗಿರುತ್ತ, ಮರೆತಾದರೂ ಅರೆಕ್ಷಣ ಜನಪದ ಕಲ್ಯಾಣಿಯತ್ತ ನೋಡದೆ ಮರಳಿ ಅರಮನೆಗೆ ಬಂದ.

ಈ ಕಥೆಯನ್ನು ಬುದ್ಧ ಹೇಳಿದಾಗ ಭಿಕ್ಷುಗಳು ಹೇಳಿದರು, ‘ಭಂತೇ, ಈ ಕೈದಿ ದೊಡ್ಡ ಕೆಲಸವನ್ನು ಮಾಡಿದ. ಅವನ ಸಂಯಮವನ್ನು ಮೆಚ್ಚಬೇಕು. ಜನಪದಕಲ್ಯಾಣಿಯ ಕಡೆಗೆ ಒಂದು ಬಾರಿಯೂ ಕಣ್ಣೆತ್ತಿ ನೋಡದೆ ಸಾಧನೆ ಮಾಡಿದ’, ಬುದ್ಧ ನಕ್ಕು ಹೇಳಿದ, ‘ಅವನು ದೊಡ್ಡ ಕೆಲಸವನ್ನೇನೂ ಮಾಡಲಿಲ್ಲ. ತನ್ನ ಮುಂದಿರುವ ಎರಡು ಆಯ್ಕೆಗಳಲ್ಲಿ ತನಗೆ ಮುಖ್ಯವಾದ ಒಂದನ್ನು ಆಯ್ದುಕೊಂಡ. ಒಂದು ಆ ತರುಣಿಯನ್ನು ನೋಡಿ ಮನಸ್ಸಿಗೆ ಕ್ಷಣಮಾತ್ರದ ಸಂತೋಷ ಪಡೆಯುವುದು, ಎರಡನೆಯದು ಪ್ರಾಣ ಕಳೆದುಕೊಳ್ಳುವುದು. ಅವನ ಸಂಯಮ ಪ್ರಾಣವನ್ನು ಉಳಿಸಿಕೊಳ್ಳುವ ಏಕಮಾತ್ರ ಅವಕಾಶವಾಗಿತ್ತು. ಆ ತೈಲಪಾತ್ರೆ ನಮ್ಮ ಮನಸ್ಸಿನ ಸಂಯಮವಿದ್ದಂತೆ, ಜನಪದ ಕಲ್ಯಾಣಿ ಪ್ರಪಂಚದ ಆಕರ್ಷಣೆಯಿದ್ದಂತೆ. ಅದರ ಸೆಳವಿಗೆ ಸಿಕ್ಕು ಸಂಯಮ ಜಾರಿತೋ ಕರ್ಮದ ಕತ್ತಿ ಬದುಕನ್ನು ಕತ್ತ್ತರಿಸಿಬಿಡುತ್ತದೆ. ಆದ್ದರಿಂದ ಯಾವಾಗಲೂ ಜಾಗ್ರತರಾಗಿರಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.