ADVERTISEMENT

ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ | ಮಂಕುತಿಮ್ಮನ ಕಗ್ಗ

ಗುರುರಾಜ ಕರಜಗಿ ಬರಹ

ಡಾ. ಗುರುರಾಜ ಕರಜಗಿ
Published 20 ಮೇ 2020, 6:12 IST
Last Updated 20 ಮೇ 2020, 6:12 IST
ಡಿ.ವಿ.ಗುಂಡಪ್ಪ (ಡಿವಿಜಿ)
ಡಿ.ವಿ.ಗುಂಡಪ್ಪ (ಡಿವಿಜಿ)   

ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ |
ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು ||
ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದ |
ಸ್ಪರ್ಧಿಯೆ ತ್ರಿವಿಕ್ರಮಗೆ ? – ಮಂಕುತಿಮ್ಮ || 292 ||

ಪದ-ಅರ್ಥ: ತಿದ್ದಿಕೆಗಮೊಂದು=ತಿದ್ದಿಕೆಗಂ+ಒಂದು, ಬೆರಳನಿತು=ಬೆರಳಿನಷ್ಟು, ಸಾಮಿಂದ=ಸಾಮು/ವ್ಯಾಯಾಮಗಳಿಂದ.

ಗುರುರಾಜ ಕರಜಗಿ

ವಾಚ್ಯಾರ್ಥ: ಜಗತ್ತನ್ನು ತಿದ್ದುವ ಸಾಹಸಬೇಡ, ನಿನ್ನನ್ನು ಮೊದಲು ತಿದ್ದಿಕೊ. ಈ ತಿದ್ದುವಿಕೆಗೊಂದು ಮಿತಿಯಿರುವುದನ್ನು ಮರೆಯಬೇಡ. ಸಾಮು ಮತ್ತು ವ್ಯಾಯಾಮಗಳಿಂದ ಒಂದು ಬೆರಳನಷ್ಟು ಉದ್ದ ನೀನು ಬೆಳೆಯಬಹುದು ಆದರೆ ತ್ರಿವಿಕ್ರಮನೊಡನೆ ಸ್ಪರ್ಧೆ ಮಾಡಲಾದೀತೆ?

ADVERTISEMENT

ವಿವರಣೆ: ಒಂದು ಬಾರಿ ಡಾ. ಜಿ.ಪಿ.ರಾಜರತ್ನಂ ಅವರೊಡನೆ ಒಂದು ಕಾಲೇಜಿಗೆ ಹೋಗಿದ್ದೆ. ಅಲ್ಲಿ ಡಾ. ಜಿ.ಪಿ ರಾಜರತ್ನಂ ಅವರ ಭಾಷಣವಿತ್ತು. ಭಾಷಣಕಾರರ ಪರಿಚಯವನ್ನು ಮಾಡಲು ಪ್ರಾಂಶುಪಾಲರು ಎದ್ದರು. ಅವರಿಗೆ ಕನ್ನಡದಲ್ಲಿ ಸರಿಯಾಗಿ ಮಾತನಾಡಲು ಬರುವುದಿಲ್ಲವೆಂಬುದು ನನಗೆ ಗೊತ್ತಿತ್ತು. ಅವರಿಗೆ ಇಂಗ್ಲೀಷಿನಲ್ಲಿಯೇ ಮಾತನಾಡಲು ಹೇಳಿದೆ. ಅವರು ಹಟದಿಂದಲೇ ಕನ್ನಡದಲ್ಲಿ ಮಾತನಾಡಿದರು. ಅದೊಂದು ಭಯಂಕರ ಕೆಟ್ಟ ಕನ್ನಡ! ಏಕವಚನ, ಬಹುವಚನದಲ್ಲಿ ವ್ಯತ್ಯಾಸವಿರಲಿಲ್ಲ. ನಂತರ ಮಾತನಾಡಲು ರಾಜರತ್ನಂ ಎದ್ದರು. ಒಂದು ಕಥೆಯಿಂದ ಪ್ರಾರಂಭಿಸಿದರು. ಮಕ್ಕಳು ತುಂಬ ಕುತೂಹಲದಿಂದ ಕೇಳುತ್ತಿದ್ದರು.

‘ಒಂದು ಆಮೆ ಇತ್ತಂತೆ, ಅದರದೊಂದು ಮರಿ. ಸಮುದ್ರದಂಡೆಯ ಮೇಲೆ ಮರಿ ಸೊಟ್ಟಸೊಟ್ಟಾಗಿ ನಡೆಯುತ್ತಿತ್ತು. ಅದನ್ನು ಕಂಡು ಕೋಪದಿಂದ ತಾಯಿ ಆಮೆ, ದಡ್ಡ ಮುಂಡೆದೇ, ಹಾಗೆ ನಡೆಯುತ್ತಾರೇನೋ? ನೇರವಾಗಿ ನಡೆಯಬೇಕು. ನೀನು ನಡೆದಂತೆ ಸೊಟ್ಟಸೊಟ್ಟಾಗಿ ನಡೆಯಬಾರದು’ ಎಂದು ತಿದ್ದಿತು. ಆಗ ಮುಗ್ಧತೆಯಿಂದ ತಿರುಗಿ ನಿಂತ ಮರಿ ಕೇಳಿತು, ‘ಹಾಗಾದರೆ ಅಮ್ಮಾ, ನೇರವಾಗಿ ಹೋಗುವುದು ಹೇಗೆ ಎಂದು ತೋರಿಸು’, ತಾಯಿ ಮರಿಯ ಮುಂದೆ ಇನ್ನೂ ಸೊಟ್ಟಸೊಟ್ಟಾಗಿ ನಡೆಯಿತಂತೆ. ಅದಕ್ಕೇ ಮತ್ತೊಬ್ಬರನ್ನು ತಿದ್ದುವವರು ಮೊದಲು ತಾವು ಸರಿಯಾಗಿರಬೇಕು. ಈಗ ನಿಮ್ಮ ಪ್ರಿನ್ಸಿಪಾಲರು ತೋರಿಸಿದರಲ್ಲ, ಹಾಗೆ ಕನ್ನಡವನ್ನು ಎಂದಿಗೂ ಮಾತನಾಡಬಾರದು’ ರಾಜರತ್ನಂರವರ ಮಾತಿನ ನಂತರ ಹುಡುಗರು ಹೋ ಎಂದು ಬೆಂಚ್ ಕುಟ್ಟಿ ನಕ್ಕರು, ಪ್ರಿನ್ಸಿಪಾಲರು ನಗಲಿಲ್ಲ.

ಜಗತ್ತನ್ನು ತಿದ್ದುವ ಉಮೇದು ಬೇಡ. ನಮ್ಮನ್ನು ತಿದ್ದಕೊಂಡರೆ ಸಾಕು. ಅಷ್ಟರಮಟ್ಟಿಗೆ ಜಗತ್ತು ಚೆನ್ನಾಗಿರುತ್ತದೆ. ಯಾರನ್ನು ತಿದ್ದಲು, ಸರಿಪಡಿಸಲು ಹೊರಟರೂ ಅದಕ್ಕೊಂದು ಮಿತಿ ಇದೆ. ಎಲ್ಲವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಅದಕ್ಕೆ ನೂರು ಕಾರಣಗಳಿವೆ. ದೇಹಶ್ರಮದಿಂದ, ವ್ಯಾಯಾಮದಿಂದ ದೇಹವನ್ನು ಕೊಂಚ ಉದ್ದಮಾಡಿಕೊಳ್ಳಬಹುದೇನೊ. ಆದರೆ ನನ್ನ ದೇಹದ ರಚನೆ, ಅದರ ಬಣ್ಣ, ಉದ್ದ, ರೂಪ, ದೇಹದ ಜೀವಕೋಶಗಳಲ್ಲಿಯೇ ಅಡಗಿದೆ. ಅದನ್ನು ಪೂರ್ತಿಯಾಗಿ ತಿದ್ದಲು ಸಾಧ್ಯವಿಲ್ಲ. ವ್ಯಾಯಾಮಗಳಿಂದ ನಾನು ತ್ರಿವಿಕ್ರಮನಿಗೆ ಸ್ಪರ್ಧೆ ಒಡ್ಡುವುದು ಅಸಾಧ್ಯ.

ಪ್ರಪಂಚದಲ್ಲಿ ಎಲ್ಲಕ್ಕೂ ಮಿತಿಗಳಿವೆ. ಅವುಗಳನ್ನು ದಾಟುವುದು ಶಕ್ತಿಯನ್ನು ಮೀರಿದ್ದು. ಅಂದರೆ ಬದಲಾಯಿಸಲು ಪ್ರಯತ್ನವನ್ನೇ ಮಾಡಬಾರದೆ? ಖಂಡಿತ ಮಾಡಬೇಕು, ಸಾಧ್ಯವಿದ್ದಷ್ಟನ್ನು ಮಾಡಬೇಕು ಆದರೆ ಎಲ್ಲವನ್ನೂ ಬದಲಾಯಿಸುವುದು ಸಾಧ್ಯವಿಲ್ಲವೆಂಬ ಅರಿವೂ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.