ADVERTISEMENT

ಬೆರಗಿನ ಬೆಳಕು: ಉಕ್ಕುವ ಆತ್ಮತೃಪ್ತಿ

ಡಾ. ಗುರುರಾಜ ಕರಜಗಿ
Published 15 ನವೆಂಬರ್ 2021, 15:38 IST
Last Updated 15 ನವೆಂಬರ್ 2021, 15:38 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಸಂಗೀತ ತಲೆದೂಗಿಪುದು, ಹೊಟ್ಟೆ ತುಂಬೀತೇ?|
ತಂಗದಿರನೆಸಕ ಕಣ್ಣಮೃತ, ಕಣಜಕದೇಂ?||
ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ|
ಪೊಂಗುವಾತ್ಮವೆ ಲಾಭ – ಮಂಕುತಿಮ್ಮ ||498||

ಪದ-ಅರ್ಥ: ತಂಗದಿರನೆಸಕ= ತಂಗದಿರನ (ಚಂದ್ರನ)+ ಎಸಕ (ಬೆಳದಿಂಗಳು), ಕಣಜಕದೇಂ= ಕಣಜಕೆ (ಧಾನ್ಯ ತುಂಬುವ ಕಣಜಕ್ಕೆ)+ ಅದೇಂ (ಏನು ಪ್ರಯೋಜನ), ಪೊಂಗುವಾತ್ಮವೆ= ಪೊಂಗುವ (ಹೊಂದುವ, ಪಡೆಯುವ)+ ಆತ್ಮವೆ.

ವಾಚ್ಯಾರ್ಥ: ಸಂಗೀತ ಮನಸ್ಸನ್ನು ಒಲಿಸಬಹುದು ಆದರೆ ಅದರಿಂದ ಹೊಟ್ಟೆ ತುಂಬೀತೇ? ಚಂದ್ರನ ಬೆಳದಿಂಗಳು ಕಣ್ಣಿಗೆ ಸೊಗಸು ನೀಡೀತು, ಆದರೆ ಅದರಿಂದ ಧಾನ್ಯಗಳ ಕಣಜ ತುಂಬೀತೇ? ಹಾಗೆಂದು ಒಳ್ಳೆಯ ಕೆಲಸಗಳ ವಿಷಯವನ್ನು ಅಂಗಡಿಯ ವ್ಯಾಪಾರವನ್ನಾಗಿ ಮಾಡಬೇಡ. ಇವುಗಳಿಂದ ದೊರೆಯುವ ಲಾಭವೆಂದರೆ ಉಕ್ಕುವ ಆತ್ಮಸುಖ.

ADVERTISEMENT

ವಿವರಣೆ: ಮಿಯಾ ತಾನಸೇನ್ ಅಕ್ಬರನ ಆಸ್ಥಾನದ ಶ್ರೇಷ್ಠ ಮಣಿ. ಆತ ಅಕ್ಬರ ಮಹಾರಾಜನಿಗೆ ಅತ್ಯಂತ ಆಪ್ತ. ಜನ ಮನಸ್ಸಿನ ಕಳವಳಗಳನ್ನು, ಆತಂಕಗಳನ್ನು ತನ್ನ ಗಾಯನದ ಮೂಲಕ ಮರೆಯುವಂತೆ ಮಾಡುವ ಅಸಾಮಾನ್ಯ ಸಂಗೀತಗಾರ. ಒಂದು ಬಾರಿ ರಾಜ-ರಾಣಿಯರ ಮುಂದೆ ಅತ್ಯದ್ಭುತವಾಗಿ ಹಾಡಿದ ತಾನಸೇನ್‍ನನ್ನು ಇಬ್ಬರೂ ಬಹುವಾಗಿ ಹೊಗಳಿದರು. ಆಗ ತಾನಸೇನ್ ವಿನಯದಿಂದ, ‘ಪ್ರಭೂ, ನಾನು ಹಾಡಿದ್ದು ಏನೂ ಅಲ್ಲ. ನನ್ನ ಗುರು ಹರಿದಾಸರ ಹಾಡು ಇದಕ್ಕಿಂತ ಅನೇಕ ಪಾಲು ಮಿಗಿಲಾದದ್ದು’ ಎಂದು ಹೇಳಿದ. ಹರಿದಾಸರು ವಾಸವಾಗಿದ್ದುದು ಊರ ಹೊರಗಿನ ಯಮುನಾ ನದೀತೀರದ ಗುಡಿಸಲಿನಲ್ಲಿ. ಅಕ್ಬರ ಒತ್ತಾಯದಿಂದ ತಾನಸೇನ್‍ನನ್ನು ಕರೆದುಕೊಂಡು ಅಲ್ಲಿಗೆ ಹೋದ. ಹರಿದಾಸರು ಯಾರಿಗೋಸ್ಕರವೂ ಹಾಡುವವರಲ್ಲ, ಮನತುಂಬಿದಾಗ ಮಾತ್ರ ಹಾಡುವವರು. ಇವರು ಮರೆಯಲ್ಲಿ ಕಾದು ಕುಳಿತರು. ಸಂಜೆಯ ಸುಳಿಗಾಳಿ ಬೀಸತೊಡಗಿದಾಗ ಹರಿದಾಸರ ಕಂಠದ ಸಿರಿ ತೇಲಿಬಂತು. ರಾಜ ಮತ್ತು ತಾನಸೇನ್ ಮೈಮರೆತರು. ಮುಂದೆ ಒಂದು ವಾರ ರಾಜನ ತಲೆಯಲ್ಲಿ ಹರಿದಾಸರ ಹಾಡಿನ ಗುಂಗೇ ತುಂಬಿತ್ತು. ಅಕ್ಬರ್ ತಾನಸೇನ್‍ನನ್ನು ಕೇಳಿದ, ‘ತಾನಸೇನ್, ನಿನ್ನ ಹಾಡು ಅದ್ಭುತವೇ. ಆದರೆ ನಿನ್ನ ಗುರು ಹರಿದಾಸರು ಹಾಡುವಾಗ ಅವರ ಜೇನಿನಂಥ ಧ್ವನಿಯಲ್ಲಿ ಇಡೀ ಸೃಷ್ಟಿಯೇ ಪರವಶವಾಗಿ, ಅವರ ರಾಗಮಾಲೆಗೆ ತಕ್ಕಂತೆ ಮೈ ಮರೆತು ಕುಣಿಯುತ್ತಿರುವಂತೆ, ಭಾವಸಮಾಧಿಗೇರಿದಂತೆ ಭಾಸವಾಯಿತು. ಯಾಕೆ ಈ ವ್ಯತ್ಯಾಸ?’ ತಾನಸೇನ್ ವಿನಯದಿಂದ ಹೇಳಿದ, ‘ಪ್ರಭೂ, ಅದರ ಕಾರಣವಿಷ್ಟೆ. ನಾನು ಹೊಟ್ಟೆಪಾಡಿಗಾಗಿ ನಿಮ್ಮ ಮುಂದೆ ಹಾಡುವವನು. ಆದರೆ ನನ್ನ ಗುರುಗಳು ಕೇವಲ ಆತ್ಮತೃಪ್ತಿಗಾಗಿ, ಭಗವಂತನಿಗಾಗಿ ಮಾತ್ರ ಹಾಡುವವರು. ಅವರ ಗಾಯನ ದೈವಿಕ’.

ಇದು ಹೊಟ್ಟೆಪಾಡಿಗೆ ಹಾಡುವ ಮತ್ತು ಆತ್ಮತೃಪ್ತಿಗೆ ಹಾಡುವ ಕಲಾವಿದರ ನಡುವಿನ ವ್ಯತ್ಯಾಸ. ಹಾಗಾದರೆ ಬರೀ ಸಂಗೀತಸಾಧನೆ ಮಾಡಿದರೆ ಹೊಟ್ಟೆ ತುಂಬುತ್ತದೆಯೇ? ಎಂದು ಕೇಳುವವರು ಅನೇಕರಿದ್ದಾರೆ. ಹೌದು. ನಮಗೆ ಎರಡು ತರಹದ ಕಾರ್ಯಗಳಿವೆ. ಒಂದು ಹೊಟ್ಟೆತುಂಬಿಸಿಕೊಳ್ಳಲು ಹಾಗೂ ಇನ್ನೊಂದು ಹೃದಯವನ್ನು ತುಂಬಿಸಿಕೊಳ್ಳಲು. ಹೊಟ್ಟೆತುಂಬಿಸಿಕೊಳ್ಳುವುದು ಬೇಡ ಎನ್ನುವುದು. ಅವ್ಯಾವಹಾರಿಕವಾಗುತ್ತದೆ. ಸಂಗೀತದಿಂದ ಹೊಟ್ಟೆ ತುಂಬಿಸಿಕೊಂಡರೆ ಸಂತೋಷ. ಆದರೆ ಅದು ಕೇವಲ ಹೊಟ್ಟೆ ತುಂಬಿಸುವುದಕ್ಕೆ ಮಾತ್ರವಾದರೆ ವ್ಯಾಪಾರವಾಗುತ್ತದೆ. ಸಂಗೀತ ಸಾಧನೆಯಲ್ಲಿ ಕೆಲಭಾಗ ಆತ್ಮತೃಪ್ತಿಗೆ, ಭಗವಂತನ ಪ್ರೀತಿಗೆ ಎಂದು ಯೋಜಿಸಿದರೆ ಸಾರ್ಥಕತೆ. ಅಂತೆಯೇ ಬೆಳದಿಂಗಳನ್ನು ಅಸ್ವಾದಿಸುತ್ತ ಕುಳಿತರೆ ಧಾನ್ಯದ ಕಣಜ, ಬೊಕ್ಕಸ ತುಂಬುತ್ತದೆಯೇ ಎಂದು ಕೇಳುತ್ತಾರೆ. ಕಣಜ ತುಂಬಿಸುವ ಕೆಲಸವೂ ನಡೆಯಲಿ ಆದರೆ ಅದರೊಂದಿಗೆ ಸೃಷ್ಟಿಯ ಅಸದೃಶ ಸುಂದರತೆಗೆ ಕಣ್ಣು ಮುಚ್ಚುವುದು ಮೂರ್ಖತನ. ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಒಳ್ಳೆಯ ಕಾರ್ಯಗಳನ್ನು ಮಾಡುವಾಗ ವ್ಯಾಪಾರೀ ಬುದ್ಧಿ ಬೇಡ. ಯಾಕೆಂದರೆ ಆ ಕಾರ್ಯಗಳನ್ನು ಮಾಡುವಾಗ ಉಕ್ಕುವ ಆತ್ಮತೃಪ್ತಿಯೇ ಪರಮ ಲಾಭ. ಅದೇ ಜೀವೋತ್ಕರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.