ADVERTISEMENT

ಬಡವನ ಪ್ರಾಮಾಣಿಕತೆ

ಡಾ. ಗುರುರಾಜ ಕರಜಗಿ
Published 30 ನವೆಂಬರ್ 2018, 20:15 IST
Last Updated 30 ನವೆಂಬರ್ 2018, 20:15 IST
   

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ವೃಕ್ಷದೇವತೆಯಾಗಿದ್ದ. ಅವನು ಒಂದು ಔಡಲಗಿಡಕ್ಕೆ ದೇವತೆ. ಆ ಕಾಲದಲ್ಲಿ ಹಳ್ಳಿಯ ಜನರಿಗೆ ದೇವತೆಗಳಲ್ಲಿ ತುಂಬ ನಂಬಿಕೆ. ಬಹಳ ಶ್ರದ್ಧೆಯಿಂದ ಪೂಜೆ ಮಾಡುತ್ತಿದ್ದರು. ಪ್ರತಿವರ್ಷ ಎಲ್ಲ ಊರುಗಳಲ್ಲಿ ವೃಕ್ಷದೇವತೆಯ ಹಬ್ಬವನ್ನು ಆಚರಿಸುತ್ತಿದ್ದರು.

ಅಂದು ಪ್ರತಿಯೊಬ್ಬರೂ ತಾವು ಆಯ್ದುಕೊಂಡಿದ್ದ ವೃಕ್ಷದೇವತೆಯ ಹತ್ತಿರ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ದೇವತೆಗಳಿಗೆ ತರತರಹದ ಹೂವಿನ ಮಾಲೆಗಳು, ಗಂಧ, ಲೇಪನಗಳನ್ನು ಹಾಕಿ ಆರತಿ ಮಾಡಿ, ನಂತರ ತಾವು ತಂದಿದ್ದ ವಿಶೇಷವಾದ ಆಹಾರ ಪದಾರ್ಥಗಳನ್ನು ನೈವೇದ್ಯ ಮಾಡುತ್ತಿದ್ದರು.

ಆ ಊರಿನಲ್ಲಿ ಒಬ್ಬ ಅತ್ಯಂತ ನಿರ್ಧನನಾದ ವ್ಯಕ್ತಿ ಇದ್ದ. ಅವನ ಮೇಲೆ ಹಣದ ದೇವತೆ ಮುನಿಸಿಕೊಂಡಿದ್ದಳು ಎನ್ನುವ ಮಟ್ಟಿಗೆ ಆತ ದರಿದ್ರನಾಗಿದ್ದ. ಆದರೆ ಅವನಿಗೂ ವೃಕ್ಷದೇವತೆಯ ಪೂಜೆಮಾಡುವುದು ಇಷ್ಟ. ಆತ ಬೋಧಿಸತ್ವನ ಔಡಲಗಿಡವನ್ನು ವೃಕ್ಷದೇವತೆಯಾಗಿ ಆರಿಸಿಕೊಂಡು ನಿತ್ಯವೂ ಸೇವೆ ಮಾಡುತ್ತಿದ್ದ. ಸರಿಯಾಗಿ ನೀರು ಹಾಕಿ, ಗೊಬ್ಬರ ಬೆರಸಿ ಅದೊಂದು ದೊಡ್ಡ ಮರವಾಗುವಂತೆ ನೋಡಿಕೊಂಡಿದ್ದ. ವೃಕ್ಷದೇವತೆಯ ಹಬ್ಬ ಬಂದಾಗ ತಾನೂ ಕೈಲಾದಮಟ್ಟಿಗೆ ಸಂಭ್ರಮದಿಂದ ತಯಾರಿಮಾಡಿಕೊಂಡಿದ್ದ.

ADVERTISEMENT

ಇವನ ಹತ್ತಿರ ಧನವಿಲ್ಲದ್ದರಿಂದ ಉಳಿದವರಂತೆ ಅತ್ಯಂತ ಶ್ರೀಮಂತಿಕೆಯ ಆಹಾರ ಪದಾರ್ಥಗಳನ್ನು, ಕಜ್ಜಾಯ ಮಾಡುವುದು ಸಾಧ್ಯವಿರಲಿಲ್ಲ. ಪಾಪ! ಹೇಗೋ ಯಾರಿಂದಲೊ ಹಣವನ್ನು ಸಾಲವಾಗಿ ತಂದು ಅಕ್ಕಿಯ ಹಿಟ್ಟಿನ ಕಜ್ಜಾಯವನ್ನು ಮಾಡಿಕೊಂಡು ಹೊರಟ. ತನ್ನೊಂದಿಗೆ ಒಂದು ಮಡಕೆ ನೀರನ್ನು ತೆಗೆದುಕೊಂಡ.

ಬೇರೆಯವರು ಸಂಭ್ರಮದಿಂದ ಮಾಡುವ ಪೂಜೆಗಳನ್ನು ನೋಡಿ ಅವನ ಮನಸ್ಸಿಗೆ ಬಹಳ ನೋವಾಯಿತು. ತನ್ನ ಮರದ ಹತ್ತಿರ ಬಂದು ನಿಂತು ಯೋಚಿಸಿದ, ‘ವೃಕ್ಷದೇವತೆಗಳು ಅತ್ಯಂತ ಶ್ರೀಮಂತವಾದ ದಿವ್ಯ ಭೋಜನವನ್ನು ಮಾಡುತ್ತಾರೆ. ನನ್ನ ಈ ಒಣ ಹಿಟ್ಟಿನ ಕಜ್ಜಾಯವನ್ನು ವೃಕ್ಷದೇವತೆ ಸ್ವೀಕರಿಸೀತೇ? ಆದ್ದರಿಂದ ಇದನ್ನು ಮರದ ಕೆಳಗಿಟ್ಟು ವ್ಯರ್ಥ ಮಾಡುವುದಕ್ಕಿಂತ ನಾನೇ ತಿಂದುಬಿಟ್ಟರೆ ಒಂದು ಹೊತ್ತಿನ ಊಟದ ಚಿಂತೆಯಾದರೂ ಇರುವುದಿಲ್ಲ ಎಂದುಕೊಂಡು ತಾನೇ ತಿನ್ನಲು ಸಿದ್ಧನಾದ.

ಮರದ ಮೇಲಿದ್ದ ವೃಕ್ಷದೇವತೆಯಾದ ಬೋಧಿಸತ್ವ ಇದನ್ನು ಗಮನಿಸಿ, ‘ಅಯ್ಯಾ, ನೀನು ಬೇಜಾರುಪಟ್ಟುಕೊಳ್ಳಬೇಡ. ನೀನು ಶ್ರೀಮಂತನಾಗಿದ್ದರೆ ಅತ್ಯಂತ ಒಳ್ಳೆಯ, ರುಚಿಯಾದ ಕಜ್ಜಾಯವನ್ನೇ ತರುತ್ತಿದ್ದೆ. ನೀನು ಬಡವನಾದ್ದರಿಂದ ನಿನ್ನಿಂದ ಏನು ಸಾಧ್ಯವೋ ಅದನ್ನೇ ತಂದಿದ್ದೀಯಾ. ನೀನು ಏನು ತಂದರೂ ಅದು ನನಗೆ ಪ್ರಿಯವಾದದ್ದು. ಅದನ್ನೇ ನೀಡಿಬಿಡು’ ಎಂದ.

ಬಡವ ನೈವೇದ್ಯವನ್ನು ಸಮರ್ಪಿಸಿ ಕೈ ಮುಗಿದ. ಆಗ ವೃಕ್ಷದೇವತೆ ಕೇಳಿತು, ‘ಅಯ್ಯಾ, ನೀನು ನನ್ನನ್ನು ಪೂಜೆ ಮಾಡುವುದು ಏಕೆ?’ ಆತ ಹೇಳಿದ, ‘ನಾನು ತುಂಬ ದರಿದ್ರ. ಈ ದಾರಿದ್ರ್ಯದಿಂದ ನನ್ನನ್ನು ಪಾರುಮಾಡು ಎಂದು ಬೇಡುತ್ತೇನೆ’ ದೇವತೆ ಹೇಳಿತು, ‘ಇಂದು ರಾತ್ರಿ ನನ್ನ ಕಾಂಡದ ಸುತ್ತಲೂ ಖಾಲಿ ಮಡಕೆಗಳನ್ನಿಟ್ಟು ಹೋಗು. ಬೆಳಿಗ್ಗೆ ಬರುವಾಗ ನಿನಗೆ ಐಶ್ವರ್ಯ ದೊರಕುತ್ತದೆ” ಎಂದಿತು.

ಬಡವ ಹಾಗೆಯೆ ಮಾಡಿದ ಮರುದಿನ ಬಂದು ನೋಡಿದರೆ ಪ್ರತಿಯೊಂದು ಮಡಕೆಯ ತುಂಬ ಚಿನ್ನದ ನಾಣ್ಯಗಳು! ಆತ ಬಡವನಾದರೂ ಪ್ರಾಮಾಣಿಕ. ರಾಜನಿಗೆ ಹೋಗಿ ಮಡಕೆಗಳನ್ನು ತೋರಿಸಿ ಅವು ದೇವತೆ ಕೊಟ್ಟಿದ್ದು, ತಮಗೇ ಸೇರಬೇಕಾದದ್ದು ಎಂದ. ರಾಜ ಅವನ ಪ್ರಾಮಾಣಿಕತೆಯನ್ನು ಮೆಚ್ಚು ಅವನನ್ನು ಶ್ರೇಷ್ಠಿಯನ್ನಾಗಿ ಮಾಡಿ ಗೌರವಿಸಿದ. ಮುಂದೆ ಈ ಮನೆತನ ತಲೆತಲಾಂತರದಲ್ಲಿ ಶ್ರೀಮಂತವಾಯಿತು.

ಬುದ್ಧ ಹೇಳಿದ, ‘ಬಡತನ ಕೆಟ್ಟದ್ದಲ್ಲ. ಪ್ರಾಮಾಣಿಕತೆ ದೊಡ್ಡದು. ಅದನ್ನು ದೇವತೆಗಳು ಮೆಚ್ಚುವುದು ಮಾತ್ರವಲ್ಲ, ದೀರ್ಘಾವಧಿಯಲ್ಲಿ ಬದುಕಿನಲ್ಲೂ ಜನಮನ್ನಣೆ ದೊರೆಯುತ್ತದೆ. ಅಪ್ರಾಮಾಣಿಕತೆಯಿಂದ ಬಂದ ಹಣ, ಜನಮನ್ನಣೆ ಬಹುಕಾಲ ಬಾಳದೆ ಶಾಪವಾಗುತ್ತದೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.