ADVERTISEMENT

ಬೆರಗಿನ ಬೆಳಕು: ಬದುಕಿನ ಸ್ವಾರಸ್ಯ

ಡಾ. ಗುರುರಾಜ ಕರಜಗಿ
Published 20 ಜುಲೈ 2022, 15:20 IST
Last Updated 20 ಜುಲೈ 2022, 15:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ವಾರಸ್ಯವ ಮಿತಮಾರಿಗಮಿರದು ಜೀವನದಿ |
ಪಾರದಿರ್ಕೆಯ ನೆನೆದು ನಡೆಯಲದು ಸಫಲ ||
ಸಾರಂಗಳ್ ಎಲ್ಲಪಣ್ಗಳವುಮ್ ಒಂದರೊಳಿರವು |
ಆರೋಗಿಸಿರುವುದನು – ಮಂಕುತಿಮ್ಮ || 676 ||
ಪದ-ಅರ್ಥ: ಸ್ವಾರಸ್ಯವಮಿತಮಾರಿಗಮಿರದು=‌ ಸ್ವಾರಸ್ಯವು+ಅಮಿತಂ(ಮಿತಿಯಿಲ್ಲದ)
+ಆರಿಗು(ಯಾರಿಗೂ)+ಇರದು, ಪಾರದಿರ್ಕೆಯ=ಪಾರದ (ಮಿತಿಯ)+ಇರ್ಕೆಯ(ಇರುವಿಕೆಯನ್ನು), ಸಾರಂಗಳ್=ಸಾರಗಳು, ಎಲ್ಲಪಣ್ಗಳವುಮ್=ಎಲ್ಲ+ಪಣ್ಗಳವುಮ್(ಹಣ್ಣುಗಳ), ಒಂದರೊಳಿರವು=ಒಂದರೊಳು+ಇರವು, ಆರೋಗಿಸಿರುವುದನು=ಆರೋಗಿಸು(ಅನು
ಭವಿಸು)+ಇರುವುದನು.

ವಾಚ್ಯಾರ್ಥ: ಅಪರಿಮಿತವಾದ ಸ್ವಾರಸ್ಯ ಯಾರಿಗೂ ಜೀವನದಲ್ಲಿ ಇರುವುದಿಲ್ಲ. ಆ ಮಿತಿಯನ್ನು ತಿಳಿದು ನಡೆದರೆ ಸಫಲತೆ. ಎಲ್ಲ ಹಣ್ಣುಗಳ ರುಚಿ, ಸಾರ ಒಂದರಲ್ಲೇ ಇರಲಾರದು. ಇರುವುದನ್ನು ಸವಿ, ಅನುಭವಿಸು.

ವಿವರಣೆ: ಸ್ವಾರಸ್ಯವೆಂಬುದು ಬದುಕಿನ ಸೊಗಸು. ಅದು ಬದುಕಿನ ಬೇಗೆಯನ್ನು ತುಸು ಕಡಿಮೆ ಮಾಡಿ, ಭಾರವನ್ನು ಹಗುರಗೊಳಿಸುತ್ತದೆ. ಸ್ವಾರಸ್ಯ ಯಾವಾಗಲೂ ಇರುವುದಲ್ಲ. ಆಗಾಗ ಬೇಸಿಗೆಯ ತಂಗಾಳಿಯಂತೆ ಬರುವುದು. ಆದರೆ ಅದನ್ನು ಮನದಲ್ಲಿ ಹಿಡಿದಿಟ್ಟುಕೊಂಡು ಬಹುಕಾಲ ಆನಂದಿಸುವುದು ರಸಿಕತೆ. ಸ್ವಾರಸ್ಯಗಳನ್ನು ಯಾರೂ ತಟ್ಟೆಯಲ್ಲಿಟ್ಟು ಕೊಡುವುದಿಲ್ಲ. ನಮ್ಮ ಕಷ್ಟಗಳ ಕಾರ್ಮೋಡಗಳ ನಡುವೆ ತೂರಿ ಬರುವ ಸೂರ್ಯನ ಕಿರಣಗಳಂತಿರುವ ಸ್ವಾರಸ್ಯಗಳನ್ನು ಕಾಣುವ, ಅನುಭವಿಸುವ ಕಣ್ಣು ಬೇಕು. ಹಾಗೆ ಕಾಣುವ ಕಣ್ಣು ಇರದಿದ್ದರೆ ಸ್ವರ್ಗದಲ್ಲೂ ಸ್ವಾರಸ್ಯ ಇರಲಾರದು. ಡಿ.ವಿ.ಜಿ ಯವರು ತಮ್ಮ “ಕೇತಕೀವನ” ಕವನಸಂಕಲನದಲ್ಲಿ ಯಾರು ‘ಬಡವ’ರು ಎಂದು ತಿಳಿಸುತ್ತಾರೆ.

ಆಗಸದ ಬೆರಗಿಂದೆ ಮೈಮರೆಯದವ ಬಡವಲೋಗರ ಆಯಸದ ಅಳವರಿಯದವ ಬಡವ
ರಾಗರಸಗಳ ಹತಿಗೆ ಸೋಲದಾತನು ಬಡವರಾಗಿಯೊಳಗೆ ಅಮೃತವನು ಕಾಣದವ ಬಡವ
ಅರುಮೆಯೆಳೆತವೆ ಸೃಷ್ಟಿ ಮರ್ಮವೆನದವ ಬಡವ ದುರಿತವಂತರಿಗಾಗಿ ಮರುಗದವ ಬಡವ
ಸಿರಿಯ ಹೊರಗರಸಿ ತನ್ನೊಳು ಕಾಣದವ ಬಡವ ಸರಸತೆಯನುಳಿದು ಬಾಳ್ಪವನೆ ಕಡು ಬಡವ

ಬದುಕಿನುದ್ದಕ್ಕೂ ಹರಿದು ಬರದಿರುವ ಆದರೆ ಸುಸಂಸ್ಕೃತ ಕಣ್ಣಿಗೆ ತೋರಿಬರುವ ಸ್ವಾರಸ್ಯವನ್ನು ಅನುಭವಿಸುವ ಜೀವನ ಸಫಲ. ಎಲ್ಲರಿಗೂ ಒಂದೇ ಬಗೆಯ ಸ್ವಾರಸ್ಯ ದೊರೆಯಲಾರದು. ಹೇಗೆ ಪ್ರತಿಯೊಂದು ಹಣ್ಣಿಗೂ ಅದರದೇ ಆದ ಸಾರ ಮತ್ತು ರುಚಿ ಇರುವಂತೆ ಪ್ರತಿಯೊಂದು ಜೀವಿಗೂ ಜೀವನ ಸ್ವಾರಸ್ಯವೇ ಬೇರೆ. ಇರುವುದನ್ನು, ನಮಗೆ ದೊರಕಿರುವುದನ್ನು ಆಸ್ವಾದಿಸುವುದು ರಸಿಕತೆ. ಆ ರಸಿಕತೆಯನ್ನು ಆಸ್ವಾದಿಸುವುದಕ್ಕೆ ಶ್ರೀಮಂತಿಕೆ, ಅಧಿಕಾರ, ಜನಮನ್ನಣೆ ಬೇಕಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.