ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು|
ಗುರುತಿಸೊಳಿತಿರುವುದನು ಕೇಡುಗಳ ನಡುವೆ ||
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು |
ಹರುಷಕದೆ ದಾರಿಯೆಲೊ – ಮಂಕುತಿಮ್ಮ || 759||
ಪದ-ಅರ್ಥ: ಬರದಿಹುದರೆಣಿಕೆಯಲಿ=ಬರದೆ+ಇಹುದರ+ಎಣಿಕೆಯಲಿ, ಗುರುತಿಸೊಳಿತಿರುವುದನು=ಗುರುತಿಸು+ಒಳಿತು+ಇರುವುದನು, ಬಾರೆನೆಂಬುದನು=ಬಾರೆನು+ಎಂಬುದನು, ಹರುಷಕದೆ=ಹರುಷಕೆ+ಅದೆ.
ವಾಚ್ಯಾರ್ಥ: ಬರದೆ ಇರುವುದನ್ನು ಅಪೇಕ್ಷಿಸುತ್ತ, ಇರುವುದನ್ನು ಮರೆಯದಿರು. ಅನೇಕ ಕೇಡುಗಳ ಮಧ್ಯೆ ಕೆಲವು ಒಳಿತುಗಳೂ ಇರುವುದನ್ನು ಗುರುತಿಸು. ನಿನಗೆ ಇರುವ ಭಾಗ್ಯವನ್ನು ನೆನೆ, ಬರುವುದಿಲ್ಲ ಎಂಬುದನ್ನು ಬಿಡು. ಅದೇ ಹರುಷದ ದಾರಿ.
ವಿವರಣೆ: ನನ್ನ ಕಿರಿಯ ಸ್ನೇಹಿತನೊಬ್ಬ ಐ.ಟಿ. ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ಅವನಿಗೆ ಮದುವೆ ಯಾಯಿತು. ಹೆಂಡತಿ ಅಪರೂಪದ ಸುಂದರಿ. ಮನಶಾಸ್ತ್ರಜ್ಞೆ ಕೂಡ. ಅಮೇರಿಕೆ ಸೇರಿದ. ಪುಟ್ಟಮನೆ. ಮನೆ ತುಂಬ ಪ್ರೀತಿ. ನಾನು ಹೋದಾಗಲೆಲ್ಲ ಮನೆಗೆ ದಂಪತಿಗಳು ಕರೆದುಕೊಂಡು ಹೋಗುತ್ತಿದ್ದರು. ಮನೆಯೊಂದು ಪ್ರೀತಿಯ ಗಣಿ. ಸ್ವರ್ಗ. ಎರಡು ಹೆಣ್ಣುಮಕ್ಕಳಾದವು. ಗಂಡನಿಗೆ ಹಣದಾಸೆ ಬಂದಿತು. ಅದಕ್ಕಾಗಿ ಶೇರ್‌ಗಳಲ್ಲಿ, ಲಾಟರಿಗಳಲ್ಲಿ ಹಣ ಹಾಕತೊಡಗಿದ. ಮನೆಯ ಕಡೆಗೆ ಗಮನ ಕಡಿಮೆಯಾಯಿತು.
ಒಂದು ದಿನ ಅವನಿಗೆ ನೂರು ಮಿಲಿಯನ್ ಡಾಲರ್ ಬಂದಿತು. ಪುಟ್ಟ ಮನೆ ಅರಮನೆಯಾಯಿತು. ಸಕಲ ವೈಭೋಗ ಮಲೆತು ನಿಂತಿತು. ಆದರೆ ಅವನಿಗೆ ತೃಪ್ತಿ ಇಲ್ಲ. ಕಳೆದ ಬಾರಿ ಅಮೇರಿಕೆಗೆ ಹೋದಾಗ ನನ್ನನ್ನು ಮನೆಗೆ ಕರೆದೊಯ್ದ. ಅರಮನೆಯೊಳಗೆ ಭೂತದ ಹಾಗೆ ಒಬ್ಬನೇ ಕುಳಿತಿದ್ದಾನೆ. ಹೆಂಡತಿ ಮಕ್ಕಳು ತೊರೆದು ದೂರ ಹೋಗಿದ್ದಾರೆ. ಹಣ ಹರಿದು ಬಂತು. ಸುಖ, ಆನಂದ ಹರಿದು ಹೋಯಿತು. ತನಗಿದ್ದ ಸಂತೋಷವನ್ನು ಮರೆತು ಹಣಕೊಡಬಹುದೆಂದುಕೊಂಡಿದ್ದ ಹಣಕ್ಕೆ ಕೈಚಾಚಿ ಇದ್ದ ಸಂತೋಷವನ್ನು ಕಳೆದುಕೊಂಡಿದ್ದ.
ಇದನ್ನೇ ಕಗ್ಗ ತಿಳಿಸುವುದು. ಕೈಗೆಟುಕದ ಮಾಯಾಸುಖಕ್ಕೆ ಕೈಚಾಚಿ, ಜೊಲ್ಲು ಸುರಿಸುತ್ತ ಓಡುವುದರ ಬದಲು ನಿನಗೆ ಈ ದಕ್ಕಿರುವ ಸಂತೋಷವನ್ನು ಅನುಭವಿಸು. ಅದನ್ನು ಮರೆಯಬೇಡ. ಜಗತ್ತಿನಲ್ಲಿ ಒಳಿತುಗಳು ಎಷ್ಟಿವೆಯೋ ಅಷ್ಟೇ ಕೇಡುಗಳೂ ಇವೆ. ನಿನ್ನ ಬದುಕನ್ನು ಸಂತಸಮಯವಾಗಿಸಿಕೊಳ್ಳಲು ಒಳಿತುಗಳನ್ನೇ ಕಾಣಲು ಪ್ರಯತ್ನಿಸು. ಊರಲ್ಲಿ ಕಸದ ಗುಂಡಿಯೂ ಇದೆ, ಗುಲಾಬಿ ತೋಟವೂ ಇದೆ. ಯಾಕೆ ಕಸದ ಗುಂಡಿಯ ಪಕ್ಕ ನಿಂತು ಕೊಳಕುವಾಸನೆ ಎಂದು ಗೊಣಗುತ್ತೀ? ಎದ್ದು ಗುಲಾಬಿಯ ತೋಟಕ್ಕೆ ಹೋಗಿ ಸುವಾಸನೆ ಪಡೆ. ಎರಡೂ ನಿನಗೆ ಲಭ್ಯವಿವೆ. ಆಯ್ಕೆ ನಿನ್ನದು. ನಿನ್ನ ಭಾಗ್ಯ ನಿನ್ನ ಅದೃಷ್ಟ. ಅದಕ್ಕೆ ಸಂತೋಷಪಡು. ಬೇರೆಯವರನ್ನು ಕಂಡು ಅವರಿಗೆ ದೊರೆತ ಭಾಗ್ಯ ತನಗೆ ಸಿಗಲಿಲ್ಲವಲ್ಲ ಎಂಬ ಕೊರಗು ಬಾಳನ್ನು ನರಕಮಾಡುತ್ತದೆ. ಯಾವುದು ಬಂದಿಲ್ಲವೋ ಅದರ ಗೊಡವೆ ಬೇಡ. ಬಂದದ್ದರಲ್ಲಿ ಸಂತೃಪ್ತಿಪಡುವುದೇ ಹರುಷದ ದಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.