ADVERTISEMENT

ಕಷ್ಟದಲ್ಲಿ ಬೇಕಾದ ಶಾಂತಿ

ಡಾ. ಗುರುರಾಜ ಕರಜಗಿ
Published 10 ಡಿಸೆಂಬರ್ 2018, 20:16 IST
Last Updated 10 ಡಿಸೆಂಬರ್ 2018, 20:16 IST

ಸಾವಸ್ಥಿಯಲ್ಲಿ ಉತ್ತರ ಎಂಬ ಧನವಂತನಾದ ಶ್ರೇಷ್ಠಿ ಇದ್ದ. ಬಹಳ ವರ್ಷಗಳ ನಂತರ ಅವನಿಗೆ ಒಬ್ಬ ಪುತ್ರ ಜನಿಸಿದ. ಅವನು ಅತ್ಯಂತ ಪುಣ್ಯಶಾಲಿಯಾಗಿದ್ದವನು. ಹುಟ್ಟುವುದಕ್ಕಿಂತ ಮೊದಲು ಬ್ರಹ್ಮಲೋಕದಲ್ಲಿ ಇದ್ದವನು. ಅವನು ಬೆಳೆಯುತ್ತಿದ್ದಂತೆ ಥಳಥಳನೇ ಹೊಳೆಯುತ್ತ ಬ್ರಹ್ಮನಂತೆಯೇ ಇದ್ದ.

ಪ್ರತಿವರ್ಷ ಸಾವತ್ಥಿಯಲ್ಲಿ ಕಾರ್ತಿಕ ಮಹೋತ್ಸವ ಅತ್ಯಂತ ದೊಡ್ಡ ಹಬ್ಬ. ಅಂದು ನಗರದ ಜನವೆಲ್ಲ ಸಂಭ್ರಮದಿಂದ ಕುಣಿದಾಡುವ ದಿನ. ತರುಣರೆಲ್ಲ ಪೂಜೆ ಮಾಡಿ, ಕತ್ತಿನವರೆಗೂ ಮದಿರೆಯನ್ನು ಕುಡಿದು ಉನ್ಮತ್ತರಾಗಿದ್ದರು. ಉತ್ತರ ಶ್ರೇಷ್ಠಿಯ ಮಗನ ತರುಣ ಸ್ನೇಹಿತರೆಲ್ಲ ಮದುವೆಯಾದವರು. ಆದರೆ ಈತನಿಗೆ ಇನ್ನೂ ಮದುವೆಯಾಗಿರಲಿಲ್ಲ. ಇವನು ಬ್ರಹ್ಮಲೋಕದಲ್ಲಿ ಇದ್ದು ಬಂದವನಾದ್ದರಿಂದ ಅವನಿಗೆ ಕಾಮಭೋಗಗಳಲ್ಲಿ ಆಸಕ್ತಿ ಇರಲಿಲ್ಲ. ಆದರೆ ಇವನ ಸ್ನೇಹಿತರೆಲ್ಲ ಸೇರಿ ಅವನಿಗೆ ತಿಳಿಯದಂತೆ ವೇಶ್ಯೆಯೊಬ್ಬಳನ್ನು ಗೊತ್ತುಮಾಡಿ, ಆಕೆಯನ್ನು ಸಿಂಗರಿಸಿ, ಉತ್ತರಕುಮಾರನ ಮನೆಯ ಹತ್ತಿರ ಬಿಟ್ಟು, ಅವನನ್ನು ಸಂತೋಷಗೊಳಿಸಲು ಹೇಳಿ ಹೋದರು. ಆಕೆ ಅವನ ಶಯನಾಗಾರಕ್ಕೆ ಹೋದರೂ ಅವನು ತಲೆಎತ್ತಿ ನೋಡಲಿಲ್ಲ. ಆಕೆ ಏನೆಲ್ಲ ವಯ್ಯಾರಗಳನ್ನು ತೋರಿದರೂ ಆಸಕ್ತಿ ತೋರದೆ ಇದ್ದ. ಆಕೆ ಹತ್ತಿರಕ್ಕೆ ಬಂದಾಗ, ‘ನೋಡಮ್ಮ ನಿನಗೆ ಎಷ್ಟು ಹಣ ಮಾತನಾಡಿದ್ದಾರೋ ತಿಳಿಸು, ಕೊಟ್ಟು ಬಿಡುತ್ತೇನೆ’ ಎಂದು ದುಡ್ಡು ಕೊಟ್ಟು ಕಳುಹಿಸಿಬಿಟ್ಟ.

ಆಕೆ ಹೊರಗೆ ಬಂದ ಮೇಲೆ ಮತ್ತೊಬ್ಬ ಶ್ರೀಮಂತ ಅವಳಿಗೆ ಹಣಕೊಟ್ಟು ಮನೆಗೆ ಕರೆದುಕೊಂಡು ಹೋದ. ಉತ್ಸವ ಮುಗಿದ ಮೇಲೆ ವೇಶ್ಯೆಯ ತಾಯಿ ಮಗಳು ಮನೆಗೆ ಬಾರದಿದ್ದಾಗ ಶ್ರೇಷ್ಠಿಯ ಮನೆಗೆ ಬಂದು ತಗಾದೆ ತೆಗೆದಳು. ಉತ್ತರಕುಮಾರ ತಾನು ದುಡ್ಡು ಕೊಟ್ಟು ಕಳುಹಿಸಿದ್ದನ್ನು ಹೇಳಿದರೂ ‘ನನ್ನ ಮಗಳನ್ನು ತಂದುಕೊಡು’ ಎಂದು ಜೋರಾಗಿ ಅಳುತ್ತ ರಾಜನ ಬಳಿಗೆ ಹೋದಳು. ರಾಜ ಎಲ್ಲವನ್ನೂ ಪರೀಕ್ಷಿಸಿ ಉತ್ತರಕುಮಾರನ ಬಳಿಗೆ ಹೋದ. ನಂತರ ಆಕೆಯನ್ನು ಯಾರೂ ನೋಡಿಲ್ಲವಾದ್ದರಿಂದ ಇವನೇ ಅಪರಾಧಿ, ಅವನಿಗೆ ಘೋರ ಶಿಕ್ಷೆ ವಿಧಿಸಬೇಕೆಂದು ಆಜ್ಞೆ ಮಾಡಿದ. ರಾಜದೂತರು ಅವನ ಕೈಗಳನ್ನು ಕಟ್ಟಿ ಊರಿನಲ್ಲಿ ಮೆರವಣಿಗೆ ಹೊರಡಿಸಿದರು. ಉತ್ತರಕುಮಾರ ಬೇಜಾರುಮಾಡಿಕೊಳ್ಳಲಿಲ್ಲ. ತಾನು ತಪ್ಪು ಮಾಡಿಲ್ಲವೆಂದ ಮೇಲೆ ಭಯಪಡುವ ಕಾರಣವಿಲ್ಲ, ಶಾಂತವಾಗಿ ಯೋಚಿಸಿದರೆ ಪರಿಹಾರ ದೊರೆತೀತು ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡ.

ADVERTISEMENT

ದಾರಿಯಲ್ಲಿ ಮೆರವಣಿಗೆಯ ಗದ್ದಲವನ್ನು ಕೇಳಿ ಶ್ರೀಮಂತನ ಮನೆಯಲ್ಲಿದ್ದ ವೇಶ್ಯೆ ಹೊರಗೆ ಬಂದು ಉತ್ತರಕುಮಾರನನ್ನು ಕಂಡು ಮಾತನಾಡಲು ಸೈನಿಕರು ಆಕೆಯನ್ನು ತಾಯಿಗೆ ಒಪ್ಪಿಸಿ ಕುಮಾರನನ್ನು ಬಿಡುಗಡೆ ಮಾಡಿದರು. ಉತ್ತರಕುಮಾರ ನೇರವಾಗಿ ನದಿಗೆ ಹೋಗಿ ಸ್ನಾನಮಾಡಿ ತಂದೆ-ತಾಯಿಯರ ಅಪ್ಪಣೆ ಪಡೆದು ಬುದ್ಧನ ಕಡೆಗೆ ಹೋಗಿ ಪಬ್ಬಜಿತನಾದ. ಮುಂದೆ ಕೆಲವೇ ದಿನಗಳಲ್ಲಿ ಅರ್ಹತನಾಗಿ ಜಗದ್ಪಂದ್ಯನಾದ.

ಬುದ್ಧ ಹೇಳಿದ, ‘ಸಮಸ್ಯೆಗಳು ಯಾರನ್ನೂ ಬಿಡುವುದಿಲ್ಲ. ಕೆಲವು ಸಮಸ್ಯೆಗಳು ನಮ್ಮ ತಪ್ಪುಗಳಿಂದ ಆದರೆ, ಮತ್ತೆ ಕೆಲವು ನಮಗೆ ತಿಳಿಯದಂತೆ, ನಮ್ಮ ತಪ್ಪೇ ಇಲ್ಲದೆ ಮುಂದೆ ಬಂದು ನಿಲ್ಲುತ್ತವೆ. ಆಗ ಆತಂಕಮಾಡಿಕೊಳ್ಳದೆ, ಶಾಂತಿಯಿಂದ ಯೋಚಿಸಿದರೆ ಪರಿಹಾರ ದೊರೆಯುತ್ತದೆ. ಬರೀ ಆತಂಕ ಮಾಡಿಕೊಂಡರೆ ಕಣ್ಣಮುಂದಿದ್ದ ಪರಿಹಾರವೂ ದೂರವಾಗುತ್ತದೆ. ಕಷ್ಟದ ಸಮಯದಲ್ಲಿ ಸಂಯಮ, ಶಾಂತಿ ಬಹಳ ಮುಖ್ಯ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.