ADVERTISEMENT

ಸಂಬಂಧಗಳು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 16:51 IST
Last Updated 24 ಸೆಪ್ಟೆಂಬರ್ 2019, 16:51 IST
   

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಬ್ರಾಹ್ಮಣ ವಂಶದಲ್ಲಿ ಹುಟ್ಟಿದ್ದ. ಅವನು ದೊಡ್ಡವನಾದ ಮೇಲೆ ಪಾಠ ಹೇಳುತ್ತ ಜೀವನ ಸಾಗಿಸುತ್ತಿದ್ದ. ಅವನ ತಾಯಿ ತೀರಿಕೊಂಡ ಮೇಲೆ ಅವನ ಬದುಕಿನಲ್ಲಿ ಒಂದು ಬದಲಾವಣೆ ಬಂದಿತು.

ತಾಯಿಯ ಸಂಸ್ಕಾರಗಳೆಲ್ಲ ಮುಗಿದ ಮೇಲೆ ತನ್ನ ತಂದೆ ಮತ್ತು ತಮ್ಮನನ್ನು ಕರೆದುಕೊಂಡು ಹಿಮಾಲಯ ಪ್ರದೇಶಕ್ಕೆ ಬಂದ. ಅಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ವಾಸಿಸತೊಡಗಿದ. ತಾನು ವಲ್ಕಲ, ಚೀವರಗಳನ್ನು ಧರಿಸಿ ಪ್ರವೃಜ್ಯವನ್ನು ಪಡೆದುಕೊಂಡ. ಕಾಡಿನಲ್ಲಿ ತಿರುಗಾಡಿ ಗೆಡ್ಡೆ, ಹಣ್ಣು, ಹಂಪಲುಗಳನ್ನು ತಂದು ತಂದೆ, ತಮ್ಮನನ್ನು ಸಾಕುತ್ತಿದ್ದ. ಮಳೆಗಾಲದಲ್ಲಿ ಮಾತ್ರ ಬಹಳ ಕಷ್ಟವಾಗುತ್ತಿತ್ತು. ನಾಲ್ಕು ತಿಂಗಳು ಒಂದೇ ಸಮನೆ ಮಳೆ ಸುರಿಯುವುದರಿಂದ ಗೆಡ್ಡೆ ಗೆಣಸುಗಳನ್ನು ಅಗಿಯುವುದಾಗಲಿ. ಹಣ್ಣುಗಳನ್ನು ಕೀಳುವುದಾಗಲಿ ಸಾಧ್ಯವಾಗುತ್ತಿರಲಿಲ್ಲ.

ಮುಂದೆ ಚಳಿಗಾಲ ಬಂದಾಗ ಅಲ್ಲಿರುವುದೇ ಕಷ್ಟವಾಗುತ್ತಿತ್ತು. ಆಗ ಸಾಮಾನ್ಯವಾಗಿ ಪರ್ವತಶ್ರೇಣಿಯಲ್ಲಿದ್ದವರು ಕೆಳಗಿಳಿದು ತಪ್ಪಲು ಪ್ರದೇಶಕ್ಕೆ ಬರುತ್ತಾರೆ. ಅಂತೆಯೇ ಬೋಧಿಸತ್ವ ತಂದೆ ಮತ್ತು ತಮ್ಮನನ್ನು ಕರೆದುಕೊಂಡು ಪರ್ವತಪ್ರದೇಶದಿಂದ ಕೆಳಗೆ ತಪ್ಪಲಿಗೆ ಬಂದ. ಅಲ್ಲಿ ಅವರಿಗೆ ಇರಲು ಅನುಕೂಲಮಾಡಿದ. ನಂತರ ವಸಂತ ಮಾಸ ಬಂದಾಗ, ಗಿಡ ಮರಗಳಲ್ಲಿ ಚಿಗುರು ಮೂಡಿದಾಗ ಮತ್ತೆ ಅವರನ್ನು ಕರೆದುಕೊಂಡು ಪರ್ವತ ಶ್ರೇಣಿಯಲ್ಲಿದ್ದ ತನ್ನ ಗುಡಿಸಲಿಗೆ ನಡೆದ. ತಂದೆಗೆ ನಡೆಯುವುದು ನಿಧಾನವಾಗುತ್ತದೆಂದು ತಿಳಿದು, ತಮ್ಮನಿಗೆ, ‘ತಂದೆಯನ್ನು ನಿಧಾನವಾಗಿ ಕರೆದುಕೊಂಡು ಬಾ, ನಾನು ಮುಂದೆ ಹೋಗಿ ಗುಡಿಸಲನ್ನು ಸ್ವಚ್ಛಮಾಡಿರುತ್ತೇನೆ’, ಎಂದು ಹೇಳಿ ಬೇಗನೆ ಹೊರಟ.

ADVERTISEMENT

ತಂದೆಯನ್ನು ಕರೆದುಕೊಂಡ ತಮ್ಮ ತುಂಬ ದುಡುಕಿನ ಮನುಷ್ಯ. ವಯಸ್ಸಾದ ತಂದೆಗೆ ನಡೆಯುವುದು ಕಷ್ಟವೆಂಬುದು ಗೊತ್ತಿದ್ದೂ ತುಂಬ ಅವಸರ ಮಾಡುತ್ತಿದ್ದ. ತಂದೆಯ ಪಕ್ಕೆಗೆ ಕೋಲಿನಿಂದ ತಿವಿಯುತ್ತ ಬೇಗ ನಡೆ, ಬೇಗ ನಡೆ ಎಂದು ಒತ್ತಾಯಿಸುತ್ತಿದ್ದ. ಆಗ ವೃದ್ಧ ತಂದೆಗೆ ಬೇಜಾರಾಗಿ, ಮಗ ತಿವಿದಾಗಲೊಮ್ಮೆ ಆತ ಮರಳಿ ಮೊದಲಿನ ಸ್ಥಾನಕ್ಕೇ ಬಂದು ನಡೆಯುತ್ತಿದ್ದ. ಹೀಗಾಗಿ ಮೂರು-ನಾಲ್ಕು ತಾಸಾದರೂ ಇವರು ಮುಂದುವರಿದೇ ಇರಲಿಲ್ಲ.

ರಾತ್ರಿಯಾಯಿತು. ಬೋಧಿಸತ್ವ ಕುಟೀರವನ್ನು ಶುದ್ಧಮಾಡಿ, ನೀರು ತುಂಬಿಟ್ಟು ಇವರಿಗಾಗಿ ಕಾದ. ಇವರು ಬರದಿದ್ದಾಗ ಪಂಜನ್ನುಹಿಡಿದುಕೊಂಡು ಆ ಬೆಳಕಿನಲ್ಲಿ ಇವರನ್ನು ಹುಡುಕಿಕೊಂಡು ಹೊರಟು ಬಂದ. ಅವರಿನ್ನೂ ಪ್ರಾರಂಭದ ಸ್ಥಳದಲ್ಲಿ ಇದ್ದುದನ್ನು ಕಂಡು ಯಾಕೆ ಇಷ್ಟು ಹೊತ್ತಾಯಿತು ಎಂದು ಕೇಳಿದ. ತಮ್ಮ ವಿಷಯವನ್ನು ಹೇಳಿದಾಗ, ತಂದೆಯನ್ನು ಸಮಾಧಾನ ಮಾಡಿ ಕುಟೀರಕ್ಕೆ ಕರೆತಂದ. ತುಂಬ ಸುಸ್ತಾಗಿದ್ದ ತಂದೆಗೆ ಎಣ್ಣೆಯನ್ನು ಹಚ್ಚಿ ಮಾಲೀಶು ಮಾಡಿದ, ಬಿಸಿನೀರಿನಲ್ಲಿ ಸ್ನಾನ ಮಾಡಿಸಿ ತಂಪಾಗಿದ್ದ ಗುಡಿಸಲಿನಲ್ಲಿ ಅಗ್ಗಿಷ್ಟಿಕೆಯನ್ನು ಹಾಕಿ ಬೆಚ್ಚಗಾಗಿಸಿದ. ನಂತರ ತಂದೆ ಮತ್ತು ತಮ್ಮನನ್ನು ಮುಂದೆ ಕೂರಿಸಿಕೊಂಡು ಹೇಳಿದ, ‘ಅಪ್ಪ, ನೀವು ಹಿರಿಯರು, ಸಣ್ಣವರ ತಪ್ಪುಗಳನ್ನು ಕ್ಷಮಿಸಿಬಿಡಬೇಕು. ಕಿರಿಯರಾದವರು, ಹಿರಿಯರಲ್ಲಿ ದೋಷಗಳನ್ನು ಕಾಣದೆ, ಗೌರವದಿಂದ ನೋಡಿಕೊಳ್ಳಬೇಕು. ಈ ಸಂಬಂಧಗಳು ಮಣ್ಣಿನ ಪಾತ್ರೆಗಳಿದ್ದಂತೆ. ಅವುಗಳನ್ನು ಬುದ್ಧಿವಂತರು ಅತ್ಯಂತ ಜವಾಬ್ದಾರಿಯಿಂದ ನೋಡಿಕೊಂಡು ಬಳಸುತ್ತಾರೆ, ಮೂರ್ಖರು ಒಡೆದು ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ’. ಅಪ್ಪ, ಮಗ ಪರಸ್ಪರ ಅರ್ಥ ಮಾಡಿಕೊಂಡು ಬದುಕಿದರು.

ನಮ್ಮ ಮಣ್ಣಿನ ಮಡಕೆಗಳ ರಕ್ಷಣೆ ನಮ್ಮ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.