ADVERTISEMENT

ನೇಣಿಗೇರಿದ ಖಾದರ್ ಮುಲ್ಲಾ: ಕವಲು ದಾರಿಯಲ್ಲಿ ಬಾಂಗ್ಲಾ ರಾಜಕಾರಣ

ಪಾಕ್ ಪಡೆಗಳ ಜೊತೆ ಸೇರಿ 344 ಹತ್ಯೆ ಮಾಡಿದ್ದ

ಹೊನಕೆರೆ ನಂಜುಂಡೇಗೌಡ
Published 16 ಡಿಸೆಂಬರ್ 2019, 8:34 IST
Last Updated 16 ಡಿಸೆಂಬರ್ 2019, 8:34 IST
ಅಬ್ದುಲ್ ಖಾದರ್ ಮುಲ್ಲಾ
ಅಬ್ದುಲ್ ಖಾದರ್ ಮುಲ್ಲಾ   

1971ರ ಬಾಂಗ್ಲಾ ವಿಮೋಚನಾ ಚಳವಳಿಯಲ್ಲಿ ಪಾಕ್‌ ಪಡೆಗಳ ಜೊತೆಗೂಡಿ 344 ಜನರನ್ನು ಹತ್ಯೆ ಮಾಡಿದ್ದ. ಅನೇಕ ಮಹಿಳೆಯರ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಬ್ದುಲ್ ಖಾದರ್ ಮುಲ್ಲಾನನ್ನು ಬಾಂಗ್ಲಾ ಸರ್ಕಾರ ಡಿ.12, 2013ರಂದು ನೇಣಿಗೇರಿಸಿತು. ಈ ಮೂಲಕ ಬಾಂಗ್ಲಾ ರಾಜಕಾರಣದಲ್ಲಿ ಮತ್ತೊಂದು ಪರ್ವ ಆರಂಭವಾಯಿತು. ಬಾಂಗ್ಲಾ ಇತಿಹಾಸ ಮತ್ತು ವರ್ತಮಾನದ ಬೆಳವಣಿಗೆಗಳನ್ನು ವಿಶ್ಲೇಷಿಸುವ ಈ ಲೇಖನ ಡಿಸೆಂಬರ್ 30, 2013ರಂದು ಪ್ರಕಟವಾಗಿತ್ತು.

---

ಡಿಸೆಂಬರ್‌ 12ರಂದು ಬಾಂಗ್ಲಾ ದೇಶದಲ್ಲಿ ಪ್ರಮುಖ ಬೆಳವಣಿಗೆ­ಯೊಂದು ನಡೆಯಿತು. ದೆಹಲಿಯ ಬಿರುಸಿನ ರಾಜಕಾರಣ­ದಿಂದಾಗಿ ಅದಕ್ಕೆ ಸಿಗಬೇಕಾದ ಮಹತ್ವ ಸಿಗಲಿಲ್ಲ. ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾ­ವಣೆಯಲ್ಲಿ ಹೀನಾ­ಯವಾಗಿ ಸೋತ ಕಾಂಗ್ರೆಸ್‌ ‘ಶಾಕ್‌’­ನಿಂದ ಇನ್ನು ಹೊರಬಂದಿರ­ಲಿಲ್ಲ. ದೆಹಲಿ ವಿಜಯ­­ದಿಂದ ಸಂಭ್ರಮಿಸಿದ ಬಿಜೆಪಿ, ‘ಆಮ್‌ ಆದ್ಮಿ ಪಕ್ಷ’ ಗದ್ದುಗೆ ಹಿಡಿ­ಯಲು ತೆರೆಮರೆ­ಯಲ್ಲಿ ಪ್ರಯತ್ನ ನಡೆಸಿದ್ದವು. ಅದೇ ವೇಳೆಯಲ್ಲಿ ಚಳಿ­ಗಾಲದ ಅಧಿವೇಶನಕ್ಕೆ ಸಾಕ್ಷಿಯಾದ ಸಂಸತ್ತು ಬಹಳಷ್ಟು ಗದ್ದಲಗಳಲ್ಲಿ ಸಿಕ್ಕಿ­ಕೊಂಡಿತ್ತು. ಹೀಗಾಗಿ ಆ ಘಟನೆ ಹೆಚ್ಚು ಪ್ರಚಾರಕ್ಕೆ ಬರದೇಹೋಯಿತು.

ADVERTISEMENT

ನಾಲ್ಕು ದಶಕಗಳ ಹಿಂದಿನ ‘ಬಾಂಗ್ಲಾದೇಶ ವಿಮೋಚನೆ ಹೋರಾಟ’ಕ್ಕೆ ವಿರುದ್ಧವಾಗಿ ಪಾಕಿಸ್ತಾನದ ಸೈನಿಕರ ಜತೆ ನಿಂತು, ನಾಗರಿಕ ಸಮಾಜ ತಲೆ ತಗ್ಗಿಸುವಂಥ ಕೆಲಸಗಳನ್ನು ಮಾಡಿ, ಮನುಕುಲಕ್ಕೆ ಮಸಿ ಬಳಿದ ಬಾಂಗ್ಲಾ­ದೇಶದ ಜಮಾತ್‌–ಎ–ಇಸ್ಲಾಮಿ ನಾಯಕ ಅಬ್ದುಲ್‌ ಖಾದರ್‌ ಮುಲ್ಲಾನನ್ನು ಡಿಸೆಂಬರ್‌ 12ರಂದು ನೇಣಿಗೇರಿಸಲಾಯಿತು. ಮಾನವ ಹಕ್ಕು ಸಂಘಟನೆಗಳು, ವಿಶ್ವಸಂಸ್ಥೆ ಹಾಗೂ ಅನೇಕ ದೇಶಗಳು ಇದನ್ನು ಪ್ರತಿಭಟಿಸಿದವು.

‘ಅಲ್‌– ಬದರ್‌’ ಸಂಘಟನೆಯ ಸದಸ್ಯ­ನಾಗಿದ್ದ ಅಬ್ದುಲ್‌ ಖಾದರ್‌ ಮುಲ್ಲಾ 1971ರ ಬಾಂಗ್ಲಾ ವಿಮೋಚನಾ ಚಳವಳಿಯಲ್ಲಿ ಪಾಕ್‌ ಪಡೆಗಳ ಜೊತೆಗೂಡಿ 344 ಜನರನ್ನು ಹತ್ಯೆ ಮಾಡಿದ್ದ. ಅನೇಕ ಮಹಿಳೆಯರ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅಪರಾಧ­ಗಳನ್ನು ಕುರಿತು ವಿಚಾರಣೆ ನಡೆಸಿದ ‘ಅಂತರ­ರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ’ (ಐಸಿಟಿ) ಫೆಬ್ರುವರಿಯಲ್ಲಿ ಜೀವಾವಧಿ ಶಿಕ್ಷೆ ನೀಡಿತು. ಈ ಶಿಕ್ಷೆ ಸಾಲದು. ಆತನನ್ನು ಗಲ್ಲಿಗೇರಿಸಬೇಕೆಂದು ಬಲವಾದ ಕೂಗೆದ್ದಿತು. ಇದು ದೊಡ್ಡ ಚಳವಳಿಯಾಗಿ ಮಾರ್ಪಟ್ಟಿತು.

ಉದಾರವಾದಿಗಳು, ಜಾತ್ಯತೀತರು, ವಿದ್ಯಾರ್ಥಿ­ಗಳು ಪ್ರಜ್ಞಾವಂತರು ಮತ್ತು ವಿಚಾರವಾದಿಗಳು ಬೀದಿಗಿಳಿದರು. ದೊಡ್ಡ ಪ್ರತಿಭಟನೆ ನಡೆಸಿದರು. ಚಳವಳಿ ದೇಶದಾದ್ಯಂತ ಹರಡಿತು. ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿ­ಲೇರಿತು. ಕೋರ್ಟ್‌ ಗಲ್ಲು ಶಿಕ್ಷೆ ಪ್ರಕಟಿಸಿತು. ಖಾದರ್‌ ಮುಲ್ಲಾ ಕೊನೆಗೂ ನೇಣು­ಗಂಬ­ವೇರಿದ. ಇವನಂತೆ ಎಲ್ಲ ಯುದ್ಧ ಕೈದಿಗಳನ್ನು ನೇಣಿಗೆ ಏರಿಸಬೇಕೆಂಬ ಬಲವಾದ ಬೇಡಿಕೆ ಇದೆ. ಇನ್ನೊಂದೆಡೆ ಜಮಾತ್‌–ಎ–ಇಸ್ಲಾಮಿ ಸೇರಿದಂತೆ ಇಸ್ಲಾಮಿಕ್ ಸಂಘಟನೆಗಳು ಗಲ್ಲು ಶಿಕ್ಷೆ ವಿರೋಧಿಸಿ ಹಿಂಸಾಚಾರಕ್ಕೆ ಇಳಿದಿವೆ.

1947ರ ಭಾರತ– ಪಾಕಿಸ್ತಾನ ವಿಭಜನೆ­ಯನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ 71ರ ಬಾಂಗ್ಲಾ ವಿಮೋಚನಾ ಚಳವಳಿ ಅಚ್ಚರಿಯಾಗಿ ಕಾಣುವುದಿಲ್ಲ. ಅಧಿಕಾರ ರಾಜಕಾರಣ ಮತ್ತು ಧರ್ಮ ರಾಜಕಾರಣ ಪಾಕಿಸ್ತಾನ ಹುಟ್ಟಿಗೆ ಕಾರಣವಾಯಿತು ಎನ್ನುವುದು ಇತಿಹಾಸ. ಪಾಕಿ­ಸ್ತಾನ ಪರ ಕೈ ಎತ್ತಿದವರು, ಅತ್ತ ಕಡೆ ಹೋದ­ವರೆಲ್ಲ ಅಧಿಕಾರ ದಾಹಿಗಳಲ್ಲ. ಮತಾಂಧರೂ ಅಲ್ಲ. ಬಹುಶಃ ಚಾರಿತ್ರಿಕವಾದ ಕಾರಣಗಳು ಹಾಗೂ ಒತ್ತಡಗಳಿಂದಾಗಿ ಹೋಗಿರಬಹುದು.

ನಾಲ್ಕು ದಶಕಗಳ ಹಿಂದೆ ಪಾಕಿಸ್ತಾನದಿಂದ ಪ್ರತ್ಯೇಕಗೊಂಡ ಬಾಂಗ್ಲಾ ಕಥೆ ಇದಕ್ಕಿಂತ ಬೇರೆ­ಯಲ್ಲ. ಇವೆರಡೂ ದೇಶಗಳು ಭಾಷಿಕವಾಗಿ– ಸಾಂಸ್ಕೃತಿಕವಾಗಿ ಎಂದೂ ಒಂದಾಗಿರಲಿಲ್ಲ. ಬಾಂಗ್ಲಾ ಮೇಲೆ ಯಾವಾಗಲೂ ಪಾಕಿಸ್ತಾನ ಸರ್ಕಾರ, ಮಿಲಿಟರಿ ಮತ್ತು ಜನ ಸವಾರಿ ಮಾಡುತ್ತಿದ್ದರು. ರಾಜಕೀಯವಾಗಿ ಆ ಭಾಗ­ವನ್ನು ಕಡೆಗಣಿಸುತ್ತಿದ್ದರು. ಆರ್ಥಿಕವಾಗಿ ಶೋಷಿ­ಸುತ್ತಿದ್ದರು. ಭಾಷೆಗೂ ಮಾನ್ಯತೆ ಕೊಡುತ್ತಿರ­ಲಿಲ್ಲ. ‘ಹಿರಿಯಣ್ಣನ ಧೋರಣೆ’ಯಿಂದಲೇ ನಡೆ­ದುಕೊಳ್ಳುತ್ತಿದ್ದರು.

ಹಲವು ವರ್ಷ ಇವೆಲ್ಲವನ್ನು ಸಹಿಸಿಕೊಂಡು ಬಂದ ಬಾಂಗ್ಲಾದ ಜನರ ಸಹನೆ ಮಿತಿ ಮೀರಿದಾಗ ಪ್ರತ್ಯೇಕವಾಗುವ ತೀರ್ಮಾನ ಅನಿವಾರ್ಯವಾಯಿತು. ಅದಕ್ಕಾಗಿ ಹೋರಾ­ಟ­ಕ್ಕಿಳಿದರು. ಅದೊಂದು ಜಾತ್ಯತೀತ, ಸಾಂಸ್ಕೃತಿಕ ಮತ್ತು ಭಾಷೆಯ ಅಸ್ತಿತ್ವಕ್ಕಾಗಿ ನಡೆದ ವಿಮೋಚನಾ ಚಳವಳಿ. ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಹೋರಾಟ.

ಸುಮಾರು ಒಂಬತ್ತು ತಿಂಗಳ ಹೋರಾಟ­ದಲ್ಲಿ ಅಸಂಖ್ಯಾತ ಬಂಗಾಲಿಗಳು ಮೃತಪಟ್ಟರು. ಕೋಟಿಗೂ ಹೆಚ್ಚು ಜನ ಭಾರತಕ್ಕೆ ವಲಸೆ ಬಂದರು. 350 ಮಂದಿ ವಿಚಾರವಂತರನ್ನು ಪಾಕಿ­ಸ್ತಾನ ಕೊಂದು ಹಾಕಿತು. ಭಾರತ– ಪಾಕಿಸ್ತಾನ ವಿಭಜನೆ ಸಮಯದಲ್ಲಿ ಮೆರೆದ ಕ್ರೌರ್ಯವೇ ಬಾಂಗ್ಲಾ– ಪಾಕಿಸ್ತಾನ ಯುದ್ಧ­ದಲ್ಲಿ ಮರುಕಳಿಸಿತ್ತು. ಬಾಂಗ್ಲಾದ ಜನರ ಹೃದಯಗಳ ಮೇಲೆ ಈ ಯುದ್ಧ ಮಾಡಿದ ಗಾಯ ಬಹುತೇಕರು ಮರೆತಿಲ್ಲ. ಯುದ್ಧ ಕೈದಿಗಳ ವಿರುದ್ಧ ವಿಷ ಕಾರುವುದಕ್ಕೂ ಇದೇ ಮೂಲ ಕಾರಣವೆಂದರೆ ತಪ್ಪಲ್ಲ.

ಆಗ ಬಾಂಗ್ಲಾ ಹೋರಾಟದಲ್ಲಿ ಭಾರತ ಕೈಜೋಡಿಸದಿದ್ದರೆ ಜನರ ಹೋರಾಟ ಯಶಸ್ಸು ಕಾಣುತ್ತಿರಲಿಲ್ಲವೇನೋ. 2008ರಲ್ಲಿ ಭಾರಿ ಬಹುಮತದಿಂದ ಅಧಿಕಾರಕ್ಕೆ ಬಂದ ‘ಅವಾಮಿ ಲೀಗ್‌’ (ಎಎಲ್) ಪಕ್ಷದ ನಾಯಕಿ, ಶೇಖ್‌ ಹಸೀನಾ ಯುದ್ಧ ಕೈದಿಗಳನ್ನು ವಿಚಾರಣೆಗೊಳ­ಪಡಿಸುವ ಭರವಸೆ ನೀಡಿದ್ದರು. ಅದಕ್ಕಾಗಿ ಟ್ರಿಬ್ಯುನಲ್‌ ಸ್ಥಾಪಿಸಿದರು. ಎಲ್ಲ ಯುದ್ಧ ಕೈದಿಗಳ ವಿಚಾರಣೆ ನಡೆಯುತ್ತಿದೆ.ಮತ್ತೆ ಬಾಂಗ್ಲಾ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗಿದೆ. ಜನವರಿ 5ಕ್ಕೆ ಚುನಾವಣೆ ನಡೆಯಲಿದೆ.

ಖಾದರ್‌ ಮುಲ್ಲಾ ಗಲ್ಲು ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಖಲೀದಾ ಜಿಯಾ ಅವರ ಬಾಂಗ್ಲಾ ನ್ಯಾಷನಲ್‌ ಪಾರ್ಟಿ (ಬಿಎನ್‌ಪಿ) ಮತ್ತು ಅದರ ಮಿತ್ರ ಪಕ್ಷ ಜಮಾತ್‌–ಎ–ಇಸ್ಲಾಮಿ ಪ್ರಯತ್ನಿಸಿವೆ. ಜಮಾತೆ ಇಸ್ಲಾಮಿ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಕ್ಕೆ ಒಳಗಾಗಿದೆ. ಜಮಾತ್‌– ಎ– ಇಸ್ಲಾಮಿ ನೆರಳಿ­ನಲ್ಲಿ ಮುನ್ನಡೆದಿರುವ ಬಿಎನ್‌ಪಿ ಚುನಾವಣೆ ಬಹಿಷ್ಕರಿಸಿದೆ. ಚುನಾವಣೆ ಏನಿದ್ದರೂ ನೆಪ ಮಾತ್ರಕ್ಕೆ. ಇದೊಂದು ಏಕಪಕ್ಷೀಯ ಚುನಾ­ವಣೆ.

ಪ್ರಬಲವಾದ ಪ್ರತಿಸ್ಪರ್ಧಿಗಳು ಇಲ್ಲ­ದಿರುವು­ದರಿಂದ ಅವಾಮಿ ಲೀಗ್‌ ಮತ್ತೆ ಅಧಿ­ಕಾರಕ್ಕೆ ಬರಲಿದೆ. ಆದರೆ, ಶೇಖ್‌ ಹಸೀನಾ ಅವರಿಗೆ ವಿರೋಧಿಗಳು ಎಷ್ಟು ದಿನ ಅಧಿಕಾರ ನಡೆಸಲು ಅವಕಾಶ ಕೊಡುತ್ತಾರೆ ಎನ್ನುವುದು ಪ್ರಶ್ನೆ.ಬಾಂಗ್ಲಾ ಮಹಿಳೆಯರಿಬ್ಬರ ನಡುವೆ ಸಿಕ್ಕಿಕೊಂಡು ಒದ್ದಾಡುತ್ತಿದೆ. ಇಬ್ಬರ ನಡುವೆ ಒಪ್ಪಂದವೇರ್ಪಡಿಸಲು ವಿಶ್ವಸಂಸ್ಥೆ ಮತ್ತಿತರ ಅಂತರರಾಷ್ಟ್ರೀಯ ಸಮುದಾಯ ನಡೆಸಿದ ಕಸರತ್ತು ವ್ಯರ್ಥವಾಗಿದೆ. ತಟಸ್ಥ ಸರ್ಕಾರದ ನೇತೃತ್ವದಲ್ಲಿ ಚುನಾವಣೆ ನಡೆಯುವುದಾದರೆ ಸ್ಪರ್ಧೆ ಮಾಡಲು ಸಿದ್ಧ ಎಂದು ಖಲೀದಾ ಜಿಯಾ ನಿಲುವು ತಳೆದಿದ್ದಾರೆ. ಅಲ್ಲಿಯವರೆಗೂ ಚುನಾವಣೆ ಮುಂದೂಡಬೇಕು ಎಂದು ಹಟ ಹಿಡಿದಿದ್ದಾರೆ. ಈಗ ಇವೆಲ್ಲ ಹಂತಗಳು ದಾಟಿ ಮುಂದೆ ಹೋಗಿದೆ. ಚುನಾವಣೆ ಮುಂದಕ್ಕೆ ಹೋಗುವುದು ಇನ್ನು ಅಸಾಧ್ಯದ ಮಾತು.

ಖಲೀದಾ ಬೇಡಿಕೆಗೆ ಹಸೀನಾ ‘ನೋ’ ಎಂದಿದ್ದಾರೆ. ಮಿತ್ರ ಪಕ್ಷಗಳನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡ ಪ್ರಧಾನಿ, ವಿರೋಧ ಪಕ್ಷದ ನಾಯಕಿಗೂ ಮಧ್ಯಂತರ ಸರ್ಕಾರದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿ ಸೋತಿ­ದ್ದಾರೆ. ಮಿತ್ರ ಪಕ್ಷವಾದ ಜಮಾತ್‌–ಎ– ಇಸ್ಲಾಮಿ ಹಿಂಸಾಚಾರಕ್ಕೆ ಇಳಿದಿದೆ. ಬಸ್ಸು– ರೈಲುಗಳಿಗೆ ಬೆಂಕಿ ಹಚ್ಚುವ ದುಷ್ಕೃತ್ಯದಲ್ಲಿ ನಿರತವಾಗಿದೆ. ಅಮಾಯಕ ಜನ ಈಗಾಗಲೇ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಇದೇ ಪರಿಸ್ಥಿತಿ ಮುಂದು­ವರಿದರೆ ಬಾಂಗ್ಲಾದೇಶ ‘ಆಂತರಿಕ ಯುದ್ಧ’ಕ್ಕೆ ಮುನ್ನುಡಿ ಬರೆಯ­ಬಹುದು ಎನ್ನುವುದು ಹಿರಿಯ ಪತ್ರಕರ್ತ ಸುಬೀರ್‌ ಭೌಮಿಕ್‌ ಅವರ ಅಭಿಪ್ರಾಯ. ಬಾಂಗ್ಲಾದೇಶದ ವಿದ್ಯಮಾನ­ಗಳನ್ನು ಸುಬೀರ್‌ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾರೆ.

ಶೇಖ್‌ ಹಸೀನಾ ಭಾರತದ ತಾಳಕ್ಕೆ ಕುಣಿಯುತ್ತಿದ್ದಾರೆಂದು ಖಲೀದಾ ಜಿಯಾ ಆರೋಪ ಮಾಡುತ್ತಿದ್ದಾರೆ. ಖಾದರ್‌ ಮುಲ್ಲಾ ಅವರನ್ನು ನೇಣಿಗೇರಿಸಿರುವುದರ ಹಿಂದೆ ನೆರೆಯ ದೇಶದ ಚಿತಾವಣೆ ಇದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

ರಾಜಕೀಯ ಕಾರಣಗಳಿಗಾಗಿ ಶೇಖ್‌ ಹಸೀನಾ ಭಾರತಕ್ಕೆ ಹತ್ತಿರವಾಗಿರುವುದು ಜಗತ್ತಿಗೆ ಗೊತ್ತಿರುವ ಸತ್ಯ. ಒಂದು ಕಾಲಕ್ಕೆ ಬಾಂಗ್ಲಾ ಪ್ರಧಾನಿಗೆ ರಾಜಕೀಯ ಆಶ್ರಯ ನೀಡಿದ್ದು ಭಾರತ. ‘ಆಯಕಟ್ಟಿನ ಪಾಲುದಾರಿಕೆ’ ಉದ್ದೇಶದಿಂದ ಭಾರತಕ್ಕೂ ಬಾಂಗ್ಲಾದಲ್ಲಿ ಮಿತ್ರಪಕ್ಷದ ಸರ್ಕಾರ ಇರುವುದು ಬೇಕಾಗಿದೆ.

ಅಕಸ್ಮಾತ್‌ ಪಾಕಿಸ್ತಾನಕ್ಕೆ ಹತ್ತಿರವಾಗಿರುವ ಜಮಾತೆ ಇಸ್ಲಾಮಿ ಪಕ್ಷದ ಬೆಂಬಲದಿಂದ ಬಲಪಂಥದ ಧೋರಣೆ ಹೊಂದಿರುವ ಖಲೀದಾ ಜಿಯಾ ಅವರ ಬಿಎನ್‌ಪಿ ಅಧಿಕಾರಕ್ಕೆ ಬಂದರೆ ನೆರೆಯ ದೇಶದಲ್ಲೂ ಪಾಕಿಸ್ತಾನದಂತೆ ಇಸ್ಲಾ­ಮಿಕ್‌ ಉಗ್ರರು ತಲೆ ಎತ್ತಬಹುದು. ಈಶಾನ್ಯ ರಾಜ್ಯಗಳಲ್ಲಿ ಸ್ಥಗಿತಗೊಂಡಿರುವ ಉಗ್ರರ ಚಟುವಟಿಕೆಗಳು ಮತ್ತೆ ಆರಂಭವಾಗಬಹುದು ಎನ್ನುವ ಆತಂಕ ಭಾರತಕ್ಕಿದೆ.

ಇವೆಲ್ಲವನ್ನು ಮೀರಿದ ಮತ್ತೊಂದು ಭಯ ಕಾಡುತ್ತಿದೆ. ಅವಾಮಿ ಲೀಗ್‌ ರಾಜಕೀಯವಾಗಿ ಮೂಲೆ ಗುಂಪಾದರೆ ಚಿತ್ತಗಾಂಗ್‌ನಲ್ಲಿ ಬಂದರು ನಿರ್ಮಿಸುವ ಚೀನಾದ ಆಸಕ್ತಿ ಮತ್ತೆ ಎಲ್ಲಿ ಗರಿಗೆದರುವುದೋ ಎಂಬ ಅಳಕು. ಈ ಕಾರಣಕ್ಕೆ ಭಾರತ ಅದರಲ್ಲೂ ಯುಪಿಎ ಸರ್ಕಾರ ಶೇಖ್‌ ಹಸೀನಾ ಅವರಿಗೆ ಬೆಂಬಲ­ವಾಗಿ ನಿಂತಿರುವುದು. ಬಾಂಗ್ಲಾ ಸರ್ಕಾರಕ್ಕೆ ಸಹಾಯ– ಸಹಕಾರ ನೀಡುತ್ತಿರುವುದು.

ಬಾಂಗ್ಲಾ ಚುನಾವಣೆ ಮುಗಿದ ಬೆನ್ನಲ್ಲೇ ಭಾರತದಲ್ಲೂ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಯುಪಿಎ ಅಧಿಕಾರ ಕಳೆದು­ಕೊಂಡು ವಿರೋಧ ಪಕ್ಷ ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ ಮತ್ತು ಬಾಂಗ್ಲಾ ಸಂಬಂಧ­ದಲ್ಲಿ ಏರುಪೇರುಗಳು ಆಗಬಹುದು ಎನ್ನುತ್ತಾರೆ ಸುಬೀರ್‌ ಭೌಮಿಕ್‌.

ಬಾಂಗ್ಲಾ ರಾಜಕಾರಣ ಕವಲು ದಾರಿಯಲ್ಲಿ ಇರುವುದು ಇದೇ ಮೊದಲಲ್ಲ. ಹಿಂದೆ ಅನೇಕ ಸಲ ಇಂತಹದೇ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಿಕೊಂಡು ಬಂದಿದೆ. ಪ್ರಜಾಪ್ರಭುತ್ವ ಸರ್ಕಾರಗಳನ್ನು ಬದಿಗೊತ್ತಿ ಮಿಲಿಟರಿ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಹೋರಾಟಗಳು ನಡೆದಿವೆ. ಮಿಲಿಟರಿ ಆಡಳಿತದ ವಿರುದ್ಧ ಒಂದಾಗಿ ಅಲ್ಲದಿದ್ದರೂ ಪ್ರತ್ಯೇಕವಾಗಿ ಇಬ್ಬರೂ ಮಹಿಳೆಯರು ಬೀದಿಗಿಳಿದಿದ್ದಾರೆ.

ಶೇಖ್‌ ಹಸೀನಾ ಮತ್ತು ಖಲೀದಾ ಮುಖಾಮುಖಿ ಆಗಿದ್ದಾರೆ. ರಾಜಕೀಯವಾಗಿ ಮಾತ್ರವಲ್ಲ. ಸೈದ್ಧಾಂತಿಕವಾಗಿಯೂ ಇಬ್ಬರದೂ ತದ್ವಿರುದ್ಧ ದಿಕ್ಕು. ಹಸೀನಾರಿಗೆ ಉದಾರವಾದಿ, ಜಾತ್ಯತೀತ ಶಕ್ತಿಗಳ ಬೆಂಬಲವಿದೆ. ಖಲೀದಾ ಅವರಿಗೆ ಇಸ್ಲಾಮಿಕ್‌ ಸಂಘಟನೆಗಳು ಸಾಥ್‌ ನೀಡುತ್ತಿವೆ.

ನಿರೀಕ್ಷೆಯಂತೆ ಶೇಖ್‌ ಹಸೀನಾ ಅಧಿಕಾರ ಹಿಡಿದರೂ ಅದನ್ನು ಅರಗಿಸಿಕೊಳ್ಳುವುದು ಅವರಿಗೆ ಕಷ್ಟ. ರಾಜಕೀಯ ವಿರೋಧಿಗಳು ಅವರನ್ನು ನಿದ್ದೆ ಮಾಡಲು ಬಿಡದೆ ನೆಮ್ಮದಿ ಹಾಳುಮಾಡುವುದು ಖಚಿತ. ಚುನಾವಣೆ ಬಳಿಕವೂ ಹೋರಾಟ ಮುಂದುವರಿಸುವ ಸೂಚನೆಯನ್ನು ಅವಾಮಿ ಲೀಗ್‌ ಪಕ್ಷದ ಎದುರಾಳಿಗಳು ಈಗಾಗಲೇ ನೀಡಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಹೊರಗಿನ ಶಕ್ತಿಗಳು ಶೇಖ್‌ ಹಸೀನಾ ಅವರ ಕಾಲೆಳೆಯುವ ಸಂದರ್ಭವೂ ಬರಬಹುದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.