ADVERTISEMENT

ಚಾಂಡಾಲ ಬದುಕೊಂದರ ಪ್ರಚಂಡ ಪಾಟಿಸವಾಲು!

ಉಮಾಪತಿ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ಚಾಂಡಾಲ ಬದುಕೊಂದರ ಪ್ರಚಂಡ ಪಾಟಿಸವಾಲು!
ಚಾಂಡಾಲ ಬದುಕೊಂದರ ಪ್ರಚಂಡ ಪಾಟಿಸವಾಲು!   

ತುಳಿಸಿಕೊಂಡವರ ನೋವು, ನೆತ್ತರು, ಬೆವರು, ಕಣ್ಣೀರು, ಹಿಂಸೆ, ಹಸಿವು, ಅಪಮಾನ, ಪ್ರತಿಭಟನೆಗಳಿಗೆ ಸಿಡಿಮದ್ದಿನಂತಹ ಅಕ್ಷರ ರೂಪನೀಡಿದವರು ಬಂಗಾಳಿಯಲ್ಲಿ ಬರೆದ ಮಹಾಶ್ವೇತಾದೇವಿ. ಬರೀ ಬರೆಯಲಿಲ್ಲ, ಹೋರಾಡಿದರು ಕೂಡ. ಆದಿವಾಸಿಗಳು, ದಲಿತರ ಕಣ್ಣೀರು ತೊಡೆಯುವ ದೀದಿಯಾಗಿ ಆಕೆ ಇಂದಿಗೂ ಜೀವಂತ. ಮಹಾಶ್ವೇತಾ ‘ಮುಟ್ಟಿದ’ ಸೈಕಲ್ ರಿಕ್ಷಾ ತುಳಿವ ದಲಿತನೊಬ್ಬ ಬಂಗಾಳಿ ಸಾಹಿತ್ಯಲೋಕ ಎದ್ದು ಕುಳಿತು ಗಮನಿಸುವ ‘ಮನೋರಂಜನ್‌ ಬ್ಯಾಪಾರಿ’ಯಾದ ವಿದ್ಯಮಾನ ವಿಸ್ಮಯಕಾರಿ.

ಜೈಲಿನಲ್ಲಿ ಓದು ಬರೆಹ ಕಲಿತ ಪಾತಕಿಯೊಬ್ಬನಿಗೆ ಪುಸ್ತಕ ಓದುವ ನಶೆ ಏರುತ್ತದೆ. ಬರೆಯುವ ಆಸೆಯಾಗುತ್ತದೆ. ತನ್ನ ರಕ್ತವನ್ನೇ ಮಾರಿ ಪೆನ್ನು ಕಾಗದ ಕೊಳ್ಳುತ್ತಾನೆ.

ಮೂರು ವರ್ಷದ ಜೈಲುವಾಸದಿಂದ ಹೊರಬಿದ್ದ ಆತ ಹೊಟ್ಟೆ ಹೊರೆಯಲು ಜಾದವಪುರದಲ್ಲಿ ರಿಕ್ಷಾ ತುಳಿಯುತ್ತಾನೆ. ಒಂದು ದಿನ ಮಹಾಶ್ವೇತಾ ಆತನ ರಿಕ್ಷಾ ಏರುತ್ತಾರೆ. ಆಕೆ ಯಾರೆಂದು ಆತನಿಗೆ ತಿಳಿದಿರುವುದಿಲ್ಲ. ಬಲ್ಲವರಂತೆ ಕಂಡ ಆಕೆಯನ್ನು ‘ಜಿಜೀಭಿಷ’ ಪದದ ಅರ್ಥವೇನೆಂದು ಕೇಳುತ್ತಾನೆ. ಈ ಪ್ರಶ್ನೆ ಆತನ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ.

ADVERTISEMENT

ಅಂದಿನ ಚರಿತ್ರಾರ್ಹ ದಿನವನ್ನು ತನ್ನ ಆತ್ಮಚರಿತ್ರೆಯಲ್ಲಿ ಹೀಗೆ ದಾಖಲಿಸುತ್ತಾನೆ- ಜಾದವಪುರಕ್ಕೆ ಮತ್ತೆ ಮರಳಿದ್ದೆ. ಮೂದಲಿಕೆ, ಮುಖ ಭಂಗ ಬಿಟ್ಟರೆ ಈ ಶಹರ ಇನ್ನೇನನ್ನೂ ನನಗೆ ಕೊಟ್ಟಿರಲಿಲ್ಲ...

ಪುಸ್ತಕ ಓದುವ ನನ್ನ ದಾಹ ದೆವ್ವದಂತೆ ಮೈಮೇಲೆ ಏರಿತ್ತು. ಹುಚ್ಚನಾಗಿದ್ದೆ... ದುಡಿಯವ ಜನರೇ ಪುಸ್ತಕ ಕೈಗೆತ್ತಿಕೊಳ್ಳಿ, ಅವುಗಳೇ ನಿಮ್ಮ ಹತಾರುಗಳು ಎಂದುಯಾರು ಹೇಳಿದ್ದರೋ ನೆನಪಿಲ್ಲ... ಕುಡಿತ ಬಿಟ್ಟಿರಲಿಲ್ಲ. ಆಗಾಗ ಸ್ವಲ್ಪ ಸ್ವಲ್ಪ ಕುಡೀತಿದ್ದೆ. ಓದು ಬರೆಹ ಕಲಿತಿದ್ದೆ... ಸಾಹಿತ್ಯ ಓದುತ್ತಿದ್ದೆ. ಆದರೇನು, ಒಂದು ಕಾಲಕ್ಕೆ ಜೈಲುಹಕ್ಕಿಯಾಗಿದ್ದ ನಾನು ಕೇವಲ ಸೈಕಲ್ ರಿಕ್ಷಾ ತುಳಿಯುವವನೇ ಆಗಿದ್ದೆನಲ್ಲ. ಓದು ಬರೆಹದಿಂದ ನನಗೆ ಇನ್ನೊಂದು ಕೈ ಮತ್ತೊಂದು ಕಾಲೇನೂ ಇರಲಿಲ್ಲವಲ್ಲ.

ಸೈಕಲ್ ರಿಕ್ಷಾಗಳ ಸಾಲಿನಲ್ಲಿ ನನ್ನ ಸರದಿ ದೂರವಿತ್ತು. ಪುಸ್ತಕವೊಂದನ್ನು ತೆರೆದು ಓದತೊಡಗಿದೆ. ಹೆಸರು ‘ಅಗ್ನಿಗರ್ಭ’. ಬರೆದವರು ಮಹಾಶ್ವೇತಾದೇವಿ. ಮುಗಿಯಲು ಐದಾರು ಪುಟ ಬಾಕಿ ಇದ್ದಾಗ ನನ್ನ ಸರದಿ ಬಂದಿತ್ತು. ಗಂಭೀರ ಮುಖದ, ನೆರೆತ ತಲೆಗೂದಲ ಹಿರಿಯ ಮಹಿಳೆಯೊಬ್ಬರು ರಿಕ್ಷಾ ಏರಲು ಬಂದರು.ಜೊತೆಯಲ್ಲಿ ಇನ್ನೊಬ್ಬರು. ಇವರನ್ನು ಕರೆದೊಯ್ಯುವಂತೆ ನನ್ನ ಹಿಂದಿದ್ದ ರಿಕ್ಷಾ ಸಂಗಾತಿಗೆ ಹೇಳಿದೆ. ಆತ ಒಪ್ಪಲಿಲ್ಲ. ಒಲ್ಲದ ಮನಸಿನಿಂದ ಪುಸ್ತಕ ಮುಚ್ಚಿಟ್ಟು ಸವಾರಿಗಳನ್ನು ಕೂರಿಸಿಕೊಂಡು ಹೊರಟೆ. ಭಯಂಕರ ಧಗೆ. ಪುಸ್ತಕದಲ್ಲಿ ಓದಿದ್ದ ಜಜೀಭಿಷ ಪದದ ಅರ್ಥ ತಿಳಿಯದಾಗಿತ್ತು. ಅವರನ್ನು ಕೇಳಿದೆ. ಚಕಿತಗೊಂಡಂತೆ ತೋರಿದರು ಆಕೆ. ‘ಹಾಗೆಂದರೆ ಬದುಕುವ ಅದಮ್ಯ ಇಚ್ಛೆ. ಎಲ್ಲಿ ಸಿಕ್ಕಿತು ಈ ಪದ’ ಎಂದು ತಿರುಗಿ ಪ್ರಶ್ನಿಸಿದರು.

ಪುಸ್ತಕವೊಂದರಲ್ಲಿ ಎಂದೆ. ತುಸು ಹೊತ್ತು ಮಾತಿಲ್ಲದೆದಾರಿ ಸಾಗಿತು. ಮುಸ್ಸಂಜೆಯಲ್ಲಿ ಅವರ ಮುಖವನ್ನು ಗಮನಿಸಿರಲಿಲ್ಲ ನಾನು. ಹಿಂದೆ ತಿರುಗಿ ನೋಡುವುದೂ ಸಾಧ್ಯವಿರಲಿಲ್ಲ. ‘ಎಲ್ಲಿಯ ತನಕ ಓದಿದ್ದೀಯಾ’ ಎಂದು ಕೇಳಿದರು.

ಚೂರುಪಾರು ನಾನೇ ಕಲಿತಿದ್ದೇನೆ, ಶಾಲೆಗೆ ಹೋದವನಲ್ಲ ಎಂದೆ. ಚಕ್ರಗಳು ತಿರುಗಿದವು. ತಲುಪಬೇಕಾದ ಜಾಗ ಹತ್ತಿರ ಬಂದಿತ್ತು. ಆದರೆ ನಿಜವಾಗಲೂ ತಿರುಗಿದ ಚಕ್ರಗಳು ಯಾವುವು? ರಿಕ್ಷಾದ ಗಾಲಿಗಳೇ ಅಥವಾ ನನ್ನ ಅದೃಷ್ಟದ ಗಾಲಿಗಳೇ? ಮುಂದೆ ಸರಿದದ್ದು ಯಾರು? ನಾನೇ ಅಥವಾ ನನ್ನ ಸೈಕಲ್ ರಿಕ್ಷಾನೇ? ಹೆಸರಿಲ್ಲದ ಅಪಮಾನದ ಅಂಧಕಾರದ ಬದುಕಿನಿಂದ ಘನತೆ, ಮರ್ಯಾದೆಯ ಬದುಕಿನತ್ತ ಮುಂದೆ ಸರಿದದ್ದು ಯಾರು?

ಆಗ ಆಕೆ ಹೇಳಿದರು. ‘ನಿನ್ನಂತಹ ದುಡಿಯುವ ಜನರುಬರೆಯುವ ನಿಯತಕಾಲಿಕವೊಂದನ್ನು ನಾನು ಹೊರತರುತ್ತೇನೆ. ನೀನು ಬರೆಯುವೆಯಾ, ಬರೆದರೆ ಪ್ರಕಟಿಸುವೆ’ ಎಂದರು.

ನಂಬಲಾಗದೆ ಮತ್ತೆ ಮತ್ತೆ ಕೇಳಿದೆ. ಏನು ಬರೆಯಲಿ ಎಂದೆ. ‘ರಿಕ್ಷಾವಾಲಾ ಆಗಿ ನಿನ್ನ ಬದುಕಿನ ಕುರಿತು ಬರೆ’ ಎಂದರು. ಅವರು ಇಳಿಯುವ ಸ್ಥಳ ಬಂದಿತ್ತು. ಇಳಿದು ವಿಳಾಸ ಗೀಚಿದ ಚೀಟಿಯನ್ನು ನನ್ನ ಕೈಗಿತ್ತರು. ಬರೆದದ್ದು ಓದಿ ನನ್ನ ಜಗತ್ತು ಉಯ್ಯಾಲೆಯಾಡಿತು. ನೀವು!? ಎಂದೆ ಆಶ್ಚರ್ಯಚಕಿತನಾಗಿ. ನೀವು ನನಗೆ ಗೊತ್ತು ಓ ಮಹಾನ್ ಲೇಖಕರೇ! ನಿಮ್ಮ ಪುಸ್ತಕಗಳನ್ನು ಓದಿದ್ದೇನೆ. ನಿಮ್ಮ ‘ಅಗ್ನಿಗರ್ಭ’ ಇದೋ ಇಲ್ಲಿಯೇ ಇದೆ ಎಂದೆ.

ಪುಸ್ತಕವನ್ನು ಹೊರತೆಗೆದು ತೋರುತ್ತಿದ್ದಂತೆ ಆಕೆಯ ಮುಖದಲ್ಲಿ ತೃಪ್ತಿಯ ಭಾವವೊಂದು ಹಾದು ಹೋದಂತೆ ಅನಿಸಿತು. ನನ್ನ ಎದೆ ನಗಾರಿಯಂತೆ ಬಡಿಯತೊಡಗಿತ್ತು. ಭಾವೋದ್ವೇಗದಿಂದ ಮೈಯೆಲ್ಲ ಕಂಪಿಸತೊಡಗಿತ್ತು, ಮಿದುಳು ಕಂಪಿಸಿತ್ತು, ಬದುಕೇ ಕಂಪಿಸತೊಡಗಿತ್ತು.ಎರಡೂ ಕಾಲುಗಳ ಮೇಲೆ ನಿಲ್ಲುವುದೇ ದುಸ್ತರವಾಗಿತ್ತು. ಆಕೆಯ ಮುಂದೆ ಶಿರಬಾಗಿತ್ತು. ಸಾಷ್ಟಾಂಗ ನಮಸ್ಕಾರ ಮಾಡಿದೆ. ಬದುಕಿನಲ್ಲಿ ತಲೆಯೆತ್ತಿ ನಿಲ್ಲುವ ಬೇಕಾದಷ್ಟು ಅವಕಾಶಗಳು ಸಿಗುತ್ತವೆ. ಶಿರಬಾಗಿಸುವ ಅವಕಾಶಗಳೇ ವಿರಳ. ಸರಸ್ವತಿಯ ಮತ್ತೊಂದು ಹೆಸರೇ ಮಹಾಶ್ವೇತಾ ಅಲ್ಲವೇ? ಮರುದಿನ ಊಟಕ್ಕೆ ಬರುವಂತೆ ಆಹ್ವಾನಿಸಿದರು. ಮರು ಮುಂಜಾನೆ ಅವರ ಮನೆ ಹೊಸ್ತಿಲು ತುಳಿದಾಗ ಬದುಕಿನ ಶಿಖರವನ್ನೇ ಏರಿದಂತೆ ಎನಿಸಿತ್ತು. ಅಲ್ಲಿದ್ದ ಇನ್ನೂ ಹಲವರಿಗೆ ನನ್ನನ್ನು ಬರೆಹಗಾರನೆಂದೇ ಪರಿಚಯಿಸಿದರು ಮಹಾಶ್ವೇತಾ. ಅಲ್ಲಿಂದ ಶುರುವಾಯಿತು ನನ್ನ ಜೀವನದ ಕಡುಕಷ್ಟದ ಮಜಲು. ನಳಿಕೆಯ ಬಂದೂಕುಗಳು ಮತ್ತು ಬಾಂಬುಗಳನ್ನು ಹಿಡಿದು ಹೋರಾಡಿದ್ದಕ್ಕಿಂತ ಕಠಿಣ. ಬರೆಹ ಎಷ್ಟು ಕಷ್ಟ? ಹಲವು ದಿನ ಕೆಲಸಕ್ಕೇ ಹೋಗಲಿಲ್ಲ.ಲೀಟರುಗಟ್ಟಲೆ ಸೀಮೆಎಣ್ಣೆ ಸುಟ್ಟೆ. ರೀಮುಗಟ್ಟಲೆ ಬಿಳಿ ಕಾಗದ ಹರಿದೆಸೆದೆ. ‘ನಾನು ರಿಕ್ಷಾ ತುಳಿಯುತ್ತೇನೆ’ ಎಂಬ ಲೇಖನ ಕಡೆಗೂ ಒಡಮೂಡಿತು. ‘ಬರ್ತಿಕಾ’ದ 1981ರ ಜನವರಿ-ಮಾರ್ಚ್ ಸಂಚಿಕೆಯಲ್ಲಿ ಅಚ್ಚಾಯಿತು.

‘ಜುಗಾಂತರ’ ಪತ್ರಿಕೆಯ ವಿಮರ್ಶಕರೊಬ್ಬರು ನನ್ನ ಲೇಖನ ಮೆಚ್ಚಿ ಎರಡು ಸಾಲು ಬರೆದರು. ‘ಅಷ್ಟೊಂದು ಹತ್ತಿರ, ಆದರೂ ಎಷ್ಟೊಂದು ದೂರ’ ಎಂಬ ತಮ್ಮ ಸಾಪ್ತಾಹಿಕ ಅಂಕಣದಲ್ಲಿ ‘ಮನೋರಂಜನ್‌ ಬ್ಯಾಪಾರಿ ದೊಡ್ಡ ಮನುಷ್ಯ, ಅವನು ರಿಕ್ಷಾ ತುಳಿಯುತ್ತಾನೆ. ಬರೆಯುತ್ತಾನೆ...’ ಎಂದೆಲ್ಲ ಬರೆದರು ಮಹಾಶ್ವೇತಾ. ನನ್ನ ಹೆಸರು ಪರಿಚಿತವಾಯಿತು. ಹಲವು ನಿಯತಕಾಲಿಕಗಳು ನನ್ನ ಬರೆಹ ಕಳಿಸುವಂತೆ ಕೋರಿದವು. ರಿಕ್ಷಾವಾಲಾ ಬರೆಹಗಾರನೆಂದು ಪ್ರಸಿದ್ಧನಾದೆ. ನನ್ನ ಉತ್ಸಾಹ ಗರಿಗೆದರಿತು. ಆತ್ಮ ವಿಶ್ವಾಸ ತುಳುಕಿಸಿತು. ಹೌದು, ನಾನು ಬರೆಯಬಲ್ಲೆ ಎನಿಸಿತು.

* * *

2007ರಲ್ಲಿ ಪ್ರೊ.ಮೀನಾಕ್ಷಿ ಮುಖರ್ಜಿ ಅವರು ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ ಯಲ್ಲಿ ಬ್ಯಾಪಾರಿಯ ಬರೆಹಗಳ ಕುರಿತು ಸುದೀರ್ಘ ಲೇಖನ ಬರೆದು ಸತ್ವಶಾಲಿ ಲೇಖಕನ ಆಗಮನವನ್ನು ಸಾರಿದರು. ಬಂಗಾಳಿಯಲ್ಲಿ ಅಪರೂಪದ ದಲಿತ ಲೇಖಕನೊಬ್ಬ ಉದಯಿಸಿದ ವಾರ್ತೆಯಿಂದ ಸಾಹಿತ್ಯ ಲೋಕದ ಕಣ್ಣು ತೆರೆದಿತ್ತು. ಬ್ಯಾಪಾರಿಯವರ ನೂರಾರು ಸಣ್ಣ ಕತೆಗಳು, ಹತ್ತಕ್ಕೂ ಹೆಚ್ಚು ಕಾದಂಬರಿಗಳಲ್ಲಿ ಅಧೋಲೋಕದ ಯಾತನೆಗಳು ಅಕ್ಷರರೂಪ ಪಡೆದವು.

‘ನನ್ನ ಚಾಂಡಾಲ ಬದುಕು- ದಲಿತನೊಬ್ಬನ ಆತ್ಮಚರಿತ್ರೆ’ 2012ರಲ್ಲಿ ಬಂಗಾಳಿಯಲ್ಲಿ ಹೊರಬಂದಿತು.ಇಂಗ್ಲಿಷ್ ತರ್ಜುಮೆ ‘Interrogating My Chandal Life- An Autbiography of a Dalit’ ಮೊನ್ನೆ ಮೊನ್ನೆ ಪ್ರಕಟವಾಗಿದೆ.

ಎಪ್ಪತ್ತರ ದಶಕದಲ್ಲಿ ನಕ್ಸಲೀಯರ ಜೊತೆಗಿದ್ದಾನೆಂದು ಸಿಪಿಎಂ ಕಾರ್ಯಕರ್ತರು ಬ್ಯಾಪಾರಿಯ ಮೊಣಕಾಲು ಚಿಪ್ಪುಗಳಿಗೆ ಬಾರಿಸಿದ್ದರು. ವರ್ಷಗಟ್ಟಲೆ ರಿಕ್ಷಾ ತುಳಿದ ನೋವೂ ಅದರೊಂದಿಗೆ ಕಲೆಯಿತು. ಬ್ಯಾಪಾರಿಯ ಮೊಣಕಾಲು ನೋವು ಈಗಲೂ ದೂರವಾಗಿಲ್ಲ.

ಜನಿಸಿದ್ದು ಅಂದಿನ ಪೂರ್ವ ಬಂಗಾಳದ (ಇಂದಿನ ಬಾಂಗ್ಲಾದೇಶ) ಬಾರಿಶಾಲ್ ಜಿಲ್ಲೆಯಲ್ಲಿ.ದನ ಮೇಯಿಸಿದರು, ಕೂಲಿನಾಲಿ ಮಾಡಿದರು. ರಾತ್ರಿ ಕಾವಲು ಕೆಲಸ, ಕಸಗುಡಿಸುವ ಕೆಲಸ, ಸ್ಮಶಾನದಲ್ಲಿ ಹೆಣ ಸುಡುವ ಕೆಲಸ, ರಿಕ್ಷಾ ತುಳಿದರು. ಅಡುಗೆ ಕೆಲಸ ಮಾಡಿದರು. ಹಲವು ಪರಿಚಯಗಳು, ಅಸ್ಮಿತೆಗಳು. ಇಂದು ದಲಿತ ಬರೆಹಗಾರನೆಂದು ಪರಿಚಿತರು.

1947ರಲ್ಲಿ ಭಾರತ– ಪಾಕಿಸ್ತಾನ ವಿಭಜನೆಯ ಹೊತ್ತಿನಲ್ಲಿ ಮನೋರಂಜನ್ ಮೂರು ವರ್ಷದ ಬಾಲಕ. ತಾಯಿಯ ಬೆರಳು ಹಿಡಿದು ಗಡಿ ದಾಟಿ ಭಾರತದ ಪಶ್ಚಿಮ ಬಂಗಾಳ ಪ್ರವೇಶ. ಬಾಂಕುರದ ನಿರಾಶ್ರಿತರ ಶಿಬಿರವಾಸ. ಮಧ್ಯಪ್ರದೇಶದ ದಂಡಕಾರಣ್ಯ ಸೀಮೆಯಲ್ಲಿ ಕಲ್ಪಿಸಲಾದ ಮರುವಸತಿಗೆ ಹೋಗಲು ಬಯಸಲಿಲ್ಲ. ಅಂತಹ ಎಲ್ಲ ಕುಟುಂಬಗಳ ಹೆಸರುಗಳನ್ನು ಬಾಂಕುರ ಶಿಬಿರದ ಪಟ್ಟಿಯಿಂದ ಕೈಬಿಡಲಾಯಿತು. ಮತ್ತೊಂದು ಶಿಬಿರಕ್ಕೆ ಪಯಣ. ಕೋಳಿಗಳಿಗೆ ತಿನಿಸುವ ಉಣಿಸನ್ನು ತಂದೆ ಕೊಂಡು ತರುತ್ತಿದ್ದರು. ಅದೊಂದು ಬಗೆಯ ಪುಡಿ ಮಾಡಿದ ಧಾನ್ಯ. ದೂಳು, ಕಲ್ಲು, ಹರಳುಮಯ. ಅದನ್ನೇ ಕುದಿಸಿ ತಾಯಿ ತಯಾರಿಸುತ್ತಿದ್ದ ಗಂಜಿಯಂತಹ ಪೇಯದಿಂದ ಹಸಿವು ತಣಿಸಿಕೊಳ್ಳಬೇಕಿತ್ತು. ದಿನಗೂಲಿ ಸಿಗದ ದಿನ ಉಪವಾಸ. ಹಸಿವು ಎಂಬ ಕೆಲವೇ ಅಕ್ಷರಗಳ ಶಬ್ದ ಅದೆಷ್ಟು ಭಯಂಕರ ಮತ್ತು ಅದೆಷ್ಟು ಬಲಿಷ್ಠ... ದಿನಗಟ್ಟಲೆ ಉಪವಾಸವಿದ್ದು ಗೊತ್ತಿಲ್ಲದವರಿಗೆ ಈ ಶಬ್ದದ ಭೀಷಣತೆ ಅರ್ಥವಾಗುವುದಿಲ್ಲ. ಹಸಿವು ತಾಳದೆ ಅಳುವ ಅಣ್ಣ ತಮ್ಮ ಅಕ್ಕತಂಗಿಯರು. ಹಸಿವೇ ಹಸಿವು. ಮೈ ನಡುಗುತ್ತಿತ್ತು. ಮಾತುಗಳು ಕಿವಿಯಿಂದ ಹೊರಟಂತೆ... ಸುಟ್ಟ ಹೆಬ್ಬಾವಿನಂತೆ ಹೊಟ್ಟೆಯಲ್ಲಿ ಹೊರಳುವ ಕರುಳುಗಳು... ಬೀಭತ್ಸ ಹಸಿವು. ಉಪವಾಸ ತಾಳದೆ ಸೊರಗಿ ಒಣಗಿ ಪ್ರಾಣಬಿಟ್ಟಳು ಪುಟ್ಟ ತಂಗಿ. ಇನ್ನು ಸಹಿಸದಾದ ಬಾಲಕ ಮನೆಬಿಟ್ಟು ಓಡಿದ.

ಬ್ಯಾಪಾರಿ ತಾವೇ ಹೇಳುವಂತೆ ಅವರ ಪಾದಗಳ ಕೆಳಗೆ ಸಾಸಿವೆ ಕಾಳುಗಳನ್ನು ಹರವಿತ್ತು ಬದುಕು. ಯಾವ ಪಾತ್ರದಲ್ಲೂ ನೆಲೆ ನಿಲ್ಲಲಿಲ್ಲ. ‘ಹೀಗೆ ಜಾರಿದ, ಕೆಳಗೆ ಬಿದ್ದ ಬದುಕನ್ನೇ ನಿಮಗೆ ಬರೆದುಕೊಟ್ಟಿದ್ದೇನೆ. ನನ್ನ ಮುರಿದ ಡಮರುಗದ ಸದ್ದು ನಿಮ್ಮ ಕಿವಿಗೆ ಕರ್ಕಶವಾಗಿ ಕೇಳಿಸೀತು, ಲಯ ನಿಮಗೆ ಕಿರಿಕಿರಿ ಉಂಟು ಮಾಡೀತು. ಯಾಕೆಂದರೆ ನೀವು ಬದುಕಿರುವ ಇದೇ ಸಮಾಜದ ಇದೇ ಕಾಲಘಟ್ಟದ ಚಿತ್ರವನ್ನು ನಾನು ಬಿಡಿಸತೊಡಗಿದ್ದೇನೆ. ಯಾರು ಬಲ್ಲರು, ನನ್ನ ಆಪಾದನೆಯ ಬೆರಳು ಯಾವುದೋ ಹಂತದಲ್ಲಿ ನಿಮ್ಮೆಡೆಗೆ ತಿರುಗೀತು’ ಎನ್ನುತ್ತಾರೆ.

‘ಇಗೋ ಇಲ್ಲಿರುವೆ ನಾನು. ನಿಮ್ಮ ಪಾಲಿಗೆ ನಾನು ಸಂಪೂರ್ಣ ಅಪರಿಚಿತನೇನೂ ಅಲ್ಲ ಎಂಬುದನ್ನು ಬಲ್ಲೆ. ನೂರು ಬಾರಿ ನೂರು ಬಗೆಯಲ್ಲಿ ನನ್ನನ್ನು ಕಂಡಿರುವಿರಿ ನೀವು. ಆದರೂ ಪರಿಚಯ ಇಲ್ಲವೆಂದು ನೀವು ಹೇಳುವುದೇ ಆದರೆ ಕೇಳಿ ವಿವರವಾಗಿ ಹೇಳುವೆ. ನಿಮ್ಮ ಕಿಟಕಿಯಾಚೆಯ ಹಸಿರು ಮೈದಾನ ನೋಡಿರಿ. ದನಕರುಗಳ ಹಿಂದೆ ಕೋಲು ಹಿಡಿದು ಓಡುವ ಅರೆಬೆತ್ತಲೆಯ ಆಡುಕಾಯುವ ಹುಡುಗ ಕಾಣುತ್ತಾನೆ. ಈ ಪೋರನನ್ನು ಹಲವಾರು ಸಲ ನೋಡಿರುವಿರಿ ನೀವು. ಅದು ನಾನೇ.ನನ್ನ ಚಿಕ್ಕಂದಿನ ರೂಪ. ಮೇನ್ ರೋಡಿನಾಚೆ ಚಹಾ ಅಂಗಡಿಯಲ್ಲಿ ತಲೆಕೆದರಿದ, ಹರಿದ ಅಂಗಿ ತೊಟ್ಟ, ಗ್ಲಾಸು ಒಡೆದನೆಂದು, ಕೆಲಸ ಮಾಡುವುದಿಲ್ಲವೆಂದು ಮಾಲೀಕನಿಂದ ಏಟು ತಿಂದು ಕೈ ಕಾಲುಗಳಲ್ಲಿ ಹುಣ್ಣು ತುಂಬಿರುವ ಆ ಕೊಳಕು ಬಾಲಕ, ಅವನೇ ನಾನು. ಆಗ ಹುಡುಗನಾಗಿದ್ದೆ. ರೈಲ್ವೆ ನಿಲ್ದಾಣದಲ್ಲಿ ಮೂಟೆ ಭಾರ ಎತ್ತಿ ಇಳಿಸುವ, ಇಟ್ಟಿಗೆ ಸಿಮೆಂಟಿನ ಲೋಡು ಹೊತ್ತು ಗಳುವಿನ ಏಣಿ ಹತ್ತಿ ಮೂರು ನಾಲ್ಕನೆಯ ಅಂತಸ್ತಿಗೆ ಸಾಗುವ, ಸೈಕಲ್ ರಿಕ್ಷಾ ತುಳಿಯುವ, ರಾತ್ರಿ ಕಾವಲು ಕಾಯುವ, ರೈಲ್ವೆ ಪ್ಲಾಟ್‌ಫಾರ್ಮ್ ಗುಡಿಸುವ, ಸ್ಮಶಾನದಲ್ಲಿ ಹೆಣ ಸುಡುವ ಆ ಯುವಕ ನಾನೇ ರೀ... ನಾನೇ... ಅದು ನನ್ನ ಯೌವನ. ಎಪ್ಪತ್ತರ ತಳಮಳದ ದಶಕದಲ್ಲಿ ಕೈಯಲ್ಲಿ ಬಾಂಬುಗಳು, ಪೈಪ್ ಗನ್ ಹಿಡಿದು ಗಲ್ಲಿ ಗಲ್ಲಿಗಳಲ್ಲಿ ಓಡಿದವನು, ಪೊಲೀಸರಿಂದ ಬಡಿಸಿಕೊಂಡು ಕೈಗೆ ಕೋಳ ತೊಡಿಸಿಕೊಂಡು ವ್ಯಾನಿಗೆ ದಬ್ಬಿಸಿಕೊಂಡವನನ್ನೂ ನೀವು ನೋಡಿರಬಹುದು... ಅವನು ಕೂಡ ನಾನೇ’.

***

‘ಯಾರಾದರೂ ಹುಡುಕಿ ಹೊರತೆಗೆಯಲು ಕಾಯುತ್ತಿದ್ದವಿರಳ ಧಾತು ಅಥವಾ ಅವಿತ ಕಾರಂಜಿ ಎಂದು ಮನೋರಂಜನ್ ಬ್ಯಾಪಾರಿಯನ್ನು ಬಣ್ಣಿಸಬಹುದು. ಹೌದು, ಆತ ನನ್ನಶೋಧವೇ... ಅದನ್ನು ಪವಾಡವೆಂದೇನೂ ಕರೆಯಲಾರೆ. ತನಗೆ ಏನು ದಕ್ಕಿದೆಯೇ ಅದಕ್ಕೆ ಅವನು ನಿಜವಾಗಿಯೂ ಅರ್ಹ. ಅವನ ಬರೆಹಗಳು ಹೆಚ್ಚು ಹೆಚ್ಚು ಅಚ್ಚಾಗಿ ಓದುಗರ ಕೈ ಸೇರಬೇಕು. ಸಾಹಿತ್ಯ ಪ್ರಶಸ್ತಿ ಅವನಿಗೆ ಸಿಕ್ಕರೆ ಬಹಳ ಖುಷಿಯಾಗ್ತದೆ’ ಎಂದಿದ್ದರು ಮಹಾಶ್ವೇತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.