ADVERTISEMENT

ಮೋದಿ ಹೊಸ ‘ದಾಳ’ ಸರ್ದಾರ್‌ ಪಟೇಲ್‌

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:12 IST
Last Updated 16 ಜೂನ್ 2018, 9:12 IST

ಕಾಲಗರ್ಭದಲ್ಲಿ ಹೂತು ಹೋಗಿರುವ ಇತಿಹಾಸ ಕೆದಕಿ, ವರ್ತಮಾನದಲ್ಲಿ ವಿವಾದ ಹುಟ್ಟುಹಾಕುವುದರಲ್ಲಿ ಸಂಘ–ಪರಿ ವಾರದ ನಾಯಕರದ್ದು ಪಳಗಿದ ಕೈ. ಅಯೋಧ್ಯೆ ರಾಮ ಜನ್ಮಸ್ಥಳವೆಂದು ಹೇಳಿ ಬಾಬ್ರಿ ಮಸೀದಿ ಕೆಡವಲಾಯಿತು. ಕಾಶಿ, ಮಥುರಾ ವಿಷಯದಲ್ಲೂ ಇಂತಹದೇ ತಕರಾರು ಎತ್ತಲಾಯಿತು. ಈಗ ಸರ್ದಾರ್‌ ವಲ್ಲಭ ಭಾಯ್‌ ಪಟೇಲರ ಹೆಸರನ್ನು ಬೀದಿಗೆಳೆದು ತರಲಾಗಿದೆ.

‘ಉಕ್ಕಿನ ಮನುಷ್ಯ’ ಪಟೇಲರ ಪ್ರತಿಮೆ ನಿರ್ಮಾಣಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮುಂದಾಗಿದ್ದಾರೆ. ರಾಷ್ಟ್ರಕ್ಕಾಗಿ ದುಡಿದ ನಾಯಕರ ಪ್ರತಿಮೆ ನಿರ್ಮಿಸುವುದು ಸತ್ಸಂಪ್ರ ದಾಯ. ಇದನ್ನು ವಿರೋಧಿಸುವ ಜನ ಕಡಿಮೆ. ಆದರೆ, ರಾಜಕೀಯ ಲಾಭಕ್ಕಾಗಿ ದೊಡ್ಡವರ ಹೆಸರು ಬಳಸಿಕೊಳ್ಳುವುದನ್ನು ಬಹುತೇಕರು ಇಷ್ಟಪಡುವುದಿಲ್ಲ.

ಮೋದಿ ಸದ್ದುಗದ್ದಲವಿಲ್ಲದೆ ಪಟೇಲರ ಪ್ರತಿಮೆ ನಿರ್ಮಿಸಬಹುದಿತ್ತು. ಇಷ್ಟೊಂದು ದೊಡ್ಡ ಪ್ರಚಾರ ಮಾಡಬೇಕಿರಲಿಲ್ಲ. ಆರು ದಶಕದ ಹಳೇ ಇತಿಹಾಸ ಕೆದಕಿ ವಿವಾದ ಸೃಷ್ಟಿಸುವುದರಲ್ಲಿ ಅರ್ಥವಿಲ್ಲ. ಯಾವುದೋ ಕಾಲಘಟ್ಟದಲ್ಲಿ ಅನ್ಯಾಯವಾಗಿದೆ ಎಂದು ಈಗ ಬೊಬ್ಬೆ ಹಾಕಿದರೆ ಪ್ರಯೋಜನವಿಲ್ಲ.

ADVERTISEMENT

‘ಪಟೇಲರು ಪ್ರಧಾನಿ ಆಗಿದ್ದರೆ ದೇಶದ ಚಿತ್ರಣ ಬದಲಾಗುತ್ತಿತ್ತು’ ಎಂದು ಮೋದಿ ಹೇಳಿದ್ದಾರೆ. ಸಂವಿಧಾನ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಅವರಿಗೆ ಈ ಮಾತುಗಳನ್ನು ಹೇಳುವ ಹಕ್ಕಿದೆ. ಆದರೆ, ಮಾತನಾಡಿದ ಸಮಯ, ಉದ್ದೇಶ ಮಾತ್ರ ಪ್ರಶ್ನಾರ್ಹ.
ಗುಜರಾತಿನ ಮುಖ್ಯಮಂತ್ರಿ ಆಗಿ ಮೋದಿ 13 ವರ್ಷಗಳಾಗಿವೆ. ಅವರದೇ ರಾಜ್ಯದ ನೇತಾರ ನೊಬ್ಬನಿಗೆ ಪ್ರಧಾನಿ ಹುದ್ದೆ ತಪ್ಪಿತು ಎನ್ನುವ ಸತ್ಯ ಬಹಳ ತಡವಾಗಿ ಅರಿವಿಗೆ ಬಂದಿದೆ. ಹಿಂದೆಯೇ ಈ ಮಾತು ಹೇಳಿದ್ದರೆ, ರಾಜಕೀಯ ಬಣ್ಣ ಬರುತ್ತಿರ ಲಿಲ್ಲ. ಇದು ಚುನಾವಣೆ ಕಾಲವಾದ್ದರಿಂದ ರಾಜ ಕಾರಣಿಗಳ ಪ್ರತೀ ಮಾತು ವಿಶೇಷ ಅರ್ಥ ಪಡೆದುಕೊಳ್ಳುತ್ತದೆ.

ಮೋದಿ ರಾಜಕಾರಣ ಕಾಂಗ್ರೆಸ್‌ಗೂ ದಿಗಿಲು ಹುಟ್ಟಿಸಿದೆ. ಅವರ ಪ್ರತೀ ಹೆಜ್ಜೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪಟೇಲರನ್ನು ಬಿಜೆಪಿಯಿಂದ ಕಸಿದುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದೆ. ಸರ್ದಾರ್‌ ಪಟೇಲರು ಜಾತ್ಯತೀತ ಮನೋಭಾವದ ಕಟ್ಟಾ ಕಾಂಗ್ರೆಸ್ಸಿಗ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇತಿಹಾಸ ಪುರುಷ ಬಿಜೆಪಿ, ಕಾಂಗ್ರೆಸ್‌ ನಡುವೆ ಸಿಕ್ಕಿಕೊಂಡಿದ್ದಾರೆ. ಅವರೇನಾದರೂ ಬದುಕಿದ್ದು ರಾಜಕೀಯ ದೊಂಬರಾಟ ನೋಡಿದ್ದರೆ ಎಷ್ಟೊಂದು ನೊಂದುಕೊಳ್ಳುತ್ತಿದ್ದರೋ!

ಪಟೇಲರ ಹೆಸರನ್ನು ಗುಜರಾತ್‌ ಮುಖ್ಯಮಂತ್ರಿ ಪ್ರಸ್ತಾಪ ಮಾಡಿರುವುದರ ಹಿಂದೆ ರಾಜಕೀಯ ಜಾಣ್ಮೆಯಿದೆ. ಸರ್ದಾರರು ಪ್ರಬಲ ಪಟೇಲ್‌ ಜಾತಿಗೆ ಸೇರಿದವರು. ಗಾಂಧಿ ಮತ್ತು ನೆಹರೂ ಅವರಿಗೆ ಸರಿಸಮನಾಗಿ ನಿಲ್ಲಬಲ್ಲವರಾಗಿದ್ದ ಪಟೇಲ ರನ್ನು ಕಡೆಗಣಿಸಲಾಗಿದೆ ಎಂದು ಮೋದಿ ಆರೋಪ ಮಾಡುತ್ತಿದ್ದಾರೆ.

ಗುಜರಾತಿನಲ್ಲಿ ತೇಲಿ ಸಣ್ಣ ಸಮುದಾಯ. ಈ ಸಮುದಾಯದ ನಾಯಕ ಮೋದಿ. ನಮ್ಮ ಕರ್ನಾಟಕದಲ್ಲಿ ಇವರನ್ನು ಗಾಣಿಗರೆಂದು ಕರೆಯ ಲಾಗುತ್ತದೆ. ಪಟೇಲರ ಪ್ರತಿಮೆ ನಿರ್ಮಿಸುವ ಮೋದಿ ಯೋಜನೆ ಪ್ರಬಲ ಸಮಾಜವನ್ನು ಓಲೈಸುವ ತಂತ್ರ. ಪ್ರತೀ ಹಳ್ಳಿ, ಪ್ರತೀ  ಮನೆಯಿಂದ ಚೂರು ಕಬ್ಬಿಣ ತರಬೇಕೆಂದು ಕರೆ ಕೊಟ್ಟಿರುವುದು ಇಡೀ ರೈತ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ.

ಸ್ವಾತಂತ್ರ್ಯ ಚಳವಳಿಯನ್ನು ಸಮಗ್ರವಾಗಿ ಗಮನಿಸಿದರೆ ಸರ್ದಾರ್‌ ಪಟೇಲರಿಗೆ ಮಾತ್ರ ಅನ್ಯಾಯವಾಗಿದೆ ಎನ್ನುವುದು ವಸ್ತುನಿಷ್ಠವಾದ ವಿಶ್ಲೇಷಣೆ ಅಲ್ಲ. ಪ್ರಧಾನಿ ಹುದ್ದೆಗೆ ಪರಿಗಣಿಸಬಹು ದಾಗಿದ್ದ ಇನ್ನೂ ಅನೇಕ ಹೆಸರುಗಳಿದ್ದವು. ಪ್ರತಿಭೆ ಹಾಗೂ ಸಾಮರ್ಥ್ಯದಲ್ಲಿ ಯಾರಿಗೂ ಕಡಿಮೆ ಇಲ್ಲದ ಡಾ. ಬಿ.ಆರ್‌ ಅಂಬೇಡ್ಕರ್‌ ಇದ್ದರು.  ಅವರಿಗೆ ಅನ್ಯಾಯವಾಯಿತೆಂಬ ಭಾವನೆ ದಲಿತ ಸಮುದಾಯದಲ್ಲಿ ಇನ್ನೂ ಇದೆ.
ಬ್ರಿಟಿಷರು ಅಧಿಕಾರ ಹಸ್ತಾಂತರಿಸುವ ವೇಳೆ ಯಲ್ಲಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದವರು ಮೌಲಾನ ಅಬ್ದುಲ್‌ ಕಲಾಂ ಆಜಾದ್‌. ಅವರಿಗೂ ಪ್ರಧಾನಿ ಆಗಬೇಕೆಂಬ ಆಸೆ ಇತ್ತು. ದೇಶ ಹೋಳು ಮಾಡಲು ಹಟ ಮಾಡಿದ ಮಹಮದ್‌ ಅಲಿ ಜಿನ್ನಾಗಿಂತ ಆಜಾದ್‌ ವಿಭಿನ್ನವಾಗಿ ಚಿಂತಿಸುತ್ತಿದ್ದ ವರು. ದೇಶ ವಿಭಜನೆ ಬೇಡ ಎಂದು ಅಂಗಲಾಚಿ ದವರು. ಅವರನ್ನು ಪಕ್ಕಕ್ಕೆ ಸರಿಸಲಾಯಿತು. ಇಂಥ ಇನ್ನೂ ಅನೇಕ ಮಹನೀಯರು ಇತಿಹಾಸ ಸೇರಿದ್ದಾರೆ. ಮೋದಿ ಅವರಿಗೆ ಅದ್ಯಾವ ಹೆಸರೂ ನೆನಪಿಗೆ ಬರಲಿಲ್ಲ.

ಬಿಜೆಪಿ ತನ್ನ ಹಿರಿಯ ನಾಯಕ ಅಡ್ವಾಣಿ ಅವರನ್ನು ನಿರ್ಲಕ್ಷಿಸಿತು. ಪಕ್ಷ ಕಟ್ಟಿದ ಅಡ್ವಾಣಿ ಅವರನ್ನು ಬದಿಗೊತ್ತಿ ವಾಜಪೇಯಿ ಅವರಿಗೆ ಪಟ್ಟ ಕಟ್ಟಲಾಯಿತು. ಈಗ ಮೋದಿ ಜನಪ್ರಿಯತೆಗೆ ಜೋತುಬಿದ್ದು ಹಿರಿಯ ನಾಯಕನನ್ನು ಮೂಲೆ ಗುಂಪು ಮಾಡಲಾಗಿದೆ. ಮೋದಿ ಅವರಿಗೆ ಇದೂ ಕಾಣಬೇಕಿತ್ತು. ಕೆಲವು ವರ್ಷಗಳ ಬಳಿಕ ಬೇರೆ ಯಾರಾದರೂ ಅಡ್ವಾಣಿ ಅವರಿಗೆ ಅನ್ಯಾಯ ಮಾಡಲಾಯಿತು ಎಂದು ಹೇಳಬಹುದು.

ಇತಿಹಾಸವನ್ನು ಒಮ್ಮೆ ಹಿಂತಿರುಗಿ ನೋಡಿದಾಗ ಯಾವುದೋ ತೀರ್ಮಾನ ಅಥವಾ ಘಟನೆ ತಪ್ಪಾಗಿ ಕಾಣಬಹುದು. ಆಗಿನ ರಾಜಕೀಯ, ಸಾಂದರ್ಭಿಕ ಮತ್ತು ಚಾರಿತ್ರಿಕ ಒತ್ತಡಗಳ ಹಿನ್ನೆಲೆಯಲ್ಲಿ ಅವು ಗಳನ್ನು ನೋಡಬೇಕಾಗುತ್ತದೆ. ಪಟೇಲರಿಗೆ ಅವ ಕಾಶ ತಪ್ಪಿಸಿ ಜವಾಹರಲಾಲ್‌ ನೆಹರೂ ಅವರಿಗೆ ಪ್ರಧಾನಿ ಪಟ್ಟ ಕಟ್ಟಲಾಯಿತು ಎನ್ನುವ ಭಾವನೆ ಮೇಲ್ನೋಟಕ್ಕೆ ಸರಿ ಎಂದೆನಿಸಬಹುದು. ಅದಕ್ಕಾಗಿ ಮಹಾತ್ಮ ಅವರನ್ನು ಟೀಕಿಸಬಹುದು. ಆದರೆ, ಗಾಂಧಿ ಅವರಿಗಿದ್ದ ವಿಭಿನ್ನ ಗ್ರಹಿಕೆಗಳಿಂದ ಈ ನಿರ್ಧಾರ ಮಾಡಿರಬಹುದಾದ ಸಾಧ್ಯತೆಯಿದೆ.

ಆರು ದಶಕಗಳ ಹಿಂದಿನ ಮಾತು. 1946ನೇ ಇಸವಿ. ಒಂದು ಶತಮಾನ ದೇಶವನ್ನು ಆಳಿದ ಬ್ರಿಟಿ ಷರು ಮಧ್ಯಂತರ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿ ಸುವುದು ಹೆಚ್ಚೂ ಕಡಿಮೆ ಖಚಿತವಾಗಿತ್ತು. ಅದೇ ವರ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆದ್ದಿತ್ತು. ಕಾಂಗ್ರೆಸ್‌ ಅಧ್ಯಕ್ಷರಾದವರು ಸಹಜವಾಗಿ ಪ್ರಧಾನಿ ಹುದ್ದೆಗೆ ಏರುತ್ತಿದ್ದರು. ಇದರಿಂದಾಗಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆಗ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದವರು ಮೌಲಾನ ಅಬ್ದುಲ್‌ ಕಲಾಂ ಆಜಾದ್‌. ಅವರಿಗೂ ಎರಡನೇ ಸಲ ಪಕ್ಷದ ಅಧ್ಯಕ್ಷರಾಗುವ ಮನಸಿತ್ತು.  ಅದಕ್ಕೆ ಗಾಂಧೀಜಿ ತಮ್ಮ ಸಮ್ಮತಿ ಇಲ್ಲ ಎಂದು ಹೇಳಿಬಿಟ್ಟರು.  ನೆಹರೂ ಕಾಂಗ್ರೆಸ್‌ ಅಧ್ಯಕ್ಷರಾಗ ಬೇಕೆಂದು ಗಾಂಧೀಜಿ ತೀರ್ಮಾನಿಸಿದ್ದರು.

ರಾಜ್ಯ ಸಮಿತಿಗಳು ಕಾಂಗ್ರೆಸ್‌ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿತ್ತು. 12 ರಾಜ್ಯಗಳು ಪಟೇಲ ರನ್ನು ಬೆಂಬಲಿಸಿದವು. ಮೂರು ರಾಜ್ಯಗಳು ತಟಸ್ಥ ವಾಗಿ ಉಳಿದವು. ಆದರೆ, ನೆಹರೂ ಹೆಸರನ್ನು ಯಾವುದೇ ರಾಜ್ಯ ಸೂಚಿಸಿರಲಿಲ್ಲ. ನೆಹರೂ ಅವ ರನ್ನು ಬಿಟ್ಟು ಬೇರೆಯವರಿಗೆ ಪಟ್ಟ ಕಟ್ಟಲು ಗಾಂಧೀಜಿಗೆ ಇಷ್ಟವಿರಲಿಲ್ಲ. ಗಾಂಧೀಜಿ ಸೂಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಯಲ್ಲಿ ನೆಹರೂ ಹೆಸರು ಅನುಮೋದಿಸಲಾಯಿತು.

ಗಾಂಧಿ ಮಾತು ಕೇಳಿ ಪಟೇಲರು ಸ್ಪರ್ಧೆಯಿಂದ ಹಿಂದೆ ಸರಿದರು. ನೆಹರೂ ಹಾದಿ ಸುಗಮವಾ ಯಿತು. ರಾಜ್ಯ ಸಮಿತಿಗಳು ತಮ್ಮ ಹೆಸರು ಸೂಚಿ ಸಿಲ್ಲ ಎಂಬುದು ನೆಹರೂ ಅವರಿಗೂ ಗೊತ್ತಾಯಿತು.

ಸರ್ದಾರ್‌ ಪಟೇಲರಿಗೆ ಅವಕಾಶ ಕೈ ತಪ್ಪಿದ್ದ ರಿಂದ ಹಲವು ಕಾಂಗ್ರೆಸ್‌ ನಾಯಕರು ನೊಂದು ಕೊಂಡರು. ನೆಹರೂ ಅವರ ಆಕರ್ಷಕ ವ್ಯಕ್ತಿತ್ವ, ಆಧುನಿಕ ದೃಷ್ಟಿಕೋನ ಮತ್ತು ನಾಜೂಕುತನ ಗಾಂಧಿ ಅವರಿಗೆ  ಮುಖ್ಯವಾಯಿತೆಂದು ಅನೇಕರು ಟೀಕಿಸಿದರು. ಉಕ್ಕಿನ ಮನುಷ್ಯ ಯಾವುದನ್ನೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಪಟೇಲರ ಜಾಗದಲ್ಲಿ ಬೇರೆ ಯಾರಿದ್ದರೂ ಪಕ್ಷ ಒಡೆಯುತ್ತಿದ್ದರು. ಅವರು ಹಾಗೆ ಮಾಡಲಿಲ್ಲ. ಗಾಂಧೀಜಿ ಹಾಕಿದ ಲಕ್ಷ್ಮಣ ರೇಖೆ ದಾಟಲಿಲ್ಲ.

ಗಾಂಧಿ ಅವರ ಕೈಯಲ್ಲೇ ಎಲ್ಲವೂ ಇತ್ತು. ಅವರೇ ನೆಹರೂ ಅವರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಿದರು ಎಂದು ಹೇಳಲಾಗದು. ಅದರಾಚೆಗೂ ಕಾಣದ ಕೈಗಳು ಕೆಲಸ ಮಾಡಿರಬಹುದು. ‘ಫ್ರೀಡಂ ಅಟ್‌ ಮಿಡ್‌ನೈಟ್‌’ ಕೃತಿಯಲ್ಲಿ ಡೊಮೆನಿಕ್‌ ಲೇಪಿ ಯರ್‌ ಹಾಗೂ ಲಾರಿ ಕಾಲಿನ್ಸ್‌ ಅವರು ನೆಹರೂ, ಮೌಂಟ್‌ ಬ್ಯಾಟನ್‌ ಸುಮಧುರ ಸಂಬಂಧ ಕುರಿತು ಉಲ್ಲೇಖಿಸಿದ್ದಾರೆ.

ನೆಹರೂ ಅವರನ್ನು ನೋಡಿದ ಮೌಂಟ್‌ ಬ್ಯಾಟನ್‌ ಒಂದು ದಿನ ಈ ವ್ಯಕ್ತಿ ಭಾರತದ ಪ್ರಧಾನಿ ಆಗುವುದು ಖಚಿತ ಎಂದು ಭವಿಷ್ಯ ಹೇಳಿದ್ದರು. ಅಷ್ಟೇ ಅಲ್ಲ, ನೆಹರೂ ಮಾತ್ರ ಬ್ರಿಟಿಷ್‌ ಮತ್ತು ನವ ಭಾರತದ ನಡುವಿನ ಸಂಬಂಧವನ್ನು  ಬೆಸೆಯುವ ಸಾಮರ್ಥ್ಯ ಹೊಂದಿದವರು ಎಂದು ಮೌಂಟ್‌ ಬ್ಯಾಟನ್‌ ಭಾವಿಸಿದ್ದರು.

ಒಂದು ಬಣದ ಇತಿಹಾಸ ತಜ್ಞರು ನೆಹರೂ ಅವರಲ್ಲಿ ತದ್ವಿರುದ್ಧ ಧೋರಣೆಗಳನ್ನು ಗುರುತಿಸು ತ್ತಾರೆ. ಇಬ್ಬರೂ ನಾಯಕರ ಸಾಂಸ್ಕೃತಿಕ ನೆಲೆಗಳನ್ನು ವಿಶ್ಲೇಷಿಸುತ್ತಾರೆ. ಈ ನಾಯಕರ ಸಾಂಸ್ಕೃತಿಕ ನೆಲೆಗಳು ಬೇರೆ ಬೇರೆ. ನೆಹರೂ ಶ್ರೀಮಂತ ಕಾಶ್ಮೀರಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಪಟೇಲರು ಕೃಷಿ ಹಿನ್ನೆಲೆಯಿಂದ ಬಂದವರು. ಬಹುಶಃ ಪಟೇಲರು ಪ್ರಧಾನಿ ಸ್ಥಾನದಿಂದ ವಂಚಿತರಾಗಲು ಇದೂ ಕಾರಣವಿರಬಹುದು. ಚೌಧರಿ ಚರಣ್‌ ಸಿಂಗ್‌ ಈ ಅತ್ಯುನ್ನತ ಸ್ಥಾನ ಅಲಂಕರಿಸಿದ ಬಳಿಕ ವಷ್ಟೇ ಬೇರೆ ಜಾತಿ, ಜನಾಂಗದ ನಾಯಕರಿಗೆ ಅದೃಷ್ಟ ಒಲಿದು ಬಂದಿದ್ದು.

ನೆಹರೂ ಮತ್ತು ಪಟೇಲರ ನಡುವೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಅಂತರ ರಾಷ್ಟ್ರೀಯ ಸಂಬಂಧ ಕುರಿತ ನೆಹರೂ ವಿಚಾರ ಗಳನ್ನು ಪಟೇಲರು ಒಪ್ಪುತ್ತಿರಲಿಲ್ಲ. ಚೀನಾ ಜತೆಗಿನ ಸಂಬಂಧ ಕುರಿತು ಬಹಿರಂಗ ಪತ್ರ ಬರೆದಿದ್ದರು. ಕಾಶ್ಮೀರದ ಬಗ್ಗೆ ಇಬ್ಬರಿಗೂ ವೈಚಾರಿಕವಾಗಿ ಸಹಮತ ಇರಲಿಲ್ಲ. ಅವರೆಂದೂ ಜಗಳವಾಡಲಿಲ್ಲ. ಪರಸ್ಪರ ಗೌರವದಿಂದ ನಡೆದುಕೊಂಡರು.

ದೇಶ ವಿಭಜನೆ ವಿಷಯದಲ್ಲಿ ಸರ್ದಾರ್‌ ಪಟೇಲ್‌ ಮತ್ತು ನೆಹರೂ ಮಧ್ಯೆ ವಿಭಿನ್ನ ಅಭಿ ಪ್ರಾಯಗಳಿದ್ದವು. ವಿಭಜನೆಯ ಬೀಜಕ್ಕೆ ಲಾರ್ಡ್‌ ಮೌಂಟ್ ಬ್ಯಾಟನ್‌ ನೀರು ಗೊಬ್ಬರ ಹಾಕಿದರು. ಪ್ರತ್ಯೇಕ ಪಾಕಿಸ್ತಾನದ ಬೇಡಿಕೆ ಹೆಮ್ಮರವಾಗಿ ಬೆಳೆ ದಾಗ ಪಟೇಲರು ಪ್ರತ್ಯೇಕ ಪಾಕಿಸ್ತಾನ ಕೊಡುವುದು ಸೂಕ್ತ ಎಂಬ ನಿಲುವಿಗೆ ಬಂದರು. ಒಲ್ಲದ ಮನಸಿನಲ್ಲಿದ್ದ ನೆಹರೂ ಅವರನ್ನು ಮನವೊಲಿಸಲು ಮೌಂಟ್‌ ಬ್ಯಾಟನ್‌, ಅವರಿಗೆ ಹತ್ತಿರವಾಗಿದ್ದ ಕೃಷ್ಣ ಮೆನನ್‌ ಅವರನ್ನು ಯಶಸ್ವಿಯಾಗಿ ಬಳಸಿದರು. ದೇಶ ಹೋಳಾಗುವುದಾದರೆ ನನ್ನ ಹೆಣದ ಮೇಲೆ ಎನ್ನುವ ಕಠಿಣ ನಿಲುವು ಹೊಂದಿದ್ದ ಗಾಂಧೀಜಿ ಅಸಹಾಯಕರಾಗಿ ಕುಳಿತರು. ಎಲ್ಲವೂ ಬಿಳಿಯರ ನಿರೀಕ್ಷೆಯಂತೆ ನಡೆಯಿತು. ಮೌಲಾನ ಅಬ್ದುಲ್‌ ಕಲಾಂ ದೇಶ ವಿಭಜನೆ ಆಗುವುದನ್ನು ಕಂಡು ಕೊರಗಿದರು. ಈ ಸಂಗತಿಯನ್ನು ಅವರೇ ‘ಇಂಡಿಯಾ ವಿನ್ಸ್‌ ಫ್ರೀಡಂ’ ಕೃತಿಯಲ್ಲಿ ಬರೆದುಕೊಂಡಿದ್ದಾರೆ.

ಭಾರತದಿಂದ ಪಾಕಿಸ್ತಾನ ಬೇರ್ಪಟ್ಟ ಬಳಿಕ ಭುಗಿಲೆದ್ದ ಮತೀಯ ಗಲಭೆಯನ್ನು ಗೃಹ ಸಚಿವ ರಾಗಿದ್ದ ಸರ್ದಾರ್‌ ಪಟೇಲರು ಸರಿಯಾಗಿ ನಿಭಾ ಯಿಸಲಿಲ್ಲ. ಅತ್ಯಂತ ಪಕ್ಷಪಾತಿಯಾಗಿ ನಡೆದು ಕೊಂಡರೆಂಬ ಆರೋಪವಿದೆ. ದೆಹಲಿಯಲ್ಲಿ ಅಲ್ಪ ಸಂಖ್ಯಾತ ಮುಸ್ಲಿಮರ ಮೇಲೆ ದಾಳಿ ನಡೆಯು ತ್ತಿದ್ದರೂ ಮೌನವಾದರು. ಈ ಸಂಗತಿಯನ್ನು ಗಾಂಧೀಜಿ, ಗೃಹ ಸಚಿವರ ಗಮನಕ್ಕೆ ತಂದರೂ ಅಗತ್ಯ ಕ್ರಮ ಕೈಗೊಳ್ಳಲಿಲ್ಲ ಎಂದು ಮೌಲಾನ ಆಜಾದ್‌ ಹೇಳಿದ್ದಾರೆ. ಹಿರಿಯ ಮುಸ್ಲಿಂ ನಾಯಕ ಮೃತಪಟ್ಟ ಮೂರು ದಶಕದ ಬಳಿಕ ಈ ಕೃತಿ ಪ್ರಕಟವಾಗಿದೆ.

ಇದಕ್ಕೆ ವಿರುದ್ಧವಾದ ಮತ್ತೊಂದು ಅಭಿಪ್ರಾಯ ವಿದೆ. ದೆಹಲಿ ಗಲಭೆ ನಿಯಂತ್ರಿಸಲು ಪಟೇಲರು ಸೇನೆ ಕಳುಹಿಸಿದ್ದರು. 10 ಸಾವಿರ ಮುಸ್ಲಿಂ ಸಂತ್ರಸ್ತ ರಿಗೆ ಕೆಂಪು ಕೋಟೆಯಲ್ಲಿ ಆಶ್ರಯ ನೀಡಿದ್ದರು ಎಂದು ಕೆಲವು ಇತಿಹಾಸಕಾರರು ಬರೆಯುತ್ತಾರೆ.

ಗಾಂಧಿ ಅವರಿಗೆ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರಿಂದ ಜೀವ ಬೆದರಿಕೆ ಇದ್ದರೂ ಪಟೇಲರು ಅಗತ್ಯ ಭದ್ರತೆ ಒದಗಿಸಲಿಲ್ಲ ಎಂಬ ದೊಡ್ಡ ಕಳಂಕವೂ ಅವರ ಮೇಲಿದೆ. ಗೃಹ ಸಚಿವರು ಭದ್ರತೆ ಕೊಡಲಿಲ್ಲವೋ ಅಥವಾ ಗಾಂಧೀಜಿ ಅವರೇ ಬೇಡವೆಂದರೋ ಎನ್ನುವುದು ನಿಗೂಢ. ನಾಥೂ ರಾಂ ಗೋಡ್ಸೆ ಗುಂಡಿಗೆ ಮಹಾತ್ಮ ಬಲಿಯಾದರು.

ಗುರುವಿನ ಸಾವು ಪಟೇಲರನ್ನು ಕಾಡ ಲಾರಂಭಿಸಿತು. ಅನಾರೋಗ್ಯಕ್ಕೆ ಒಳಗಾದರು. ಈ ಘಟನೆ ಬಳಿಕ ರಾಜೀನಾಮೆಗೂ ಮುಂದಾಗಿದ್ದರು. ಗಾಂಧಿ ಅವರ ಹತ್ಯೆಯನ್ನು ಕಟುವಾಗಿ ಖಂಡಿಸಿ ದರು. ಸಂಘ–ಪರಿವಾರದ ಸಂಘಟನೆಗಳನ್ನು ನಿಷೇಧಿಸಿದರು.

ಪಟೇಲರ ಮೈಮನಗಳಲ್ಲಿ  ಗಾಂಧೀಜಿ ತುಂಬಿಕೊಂಡಿದ್ದರು. ಈ ಕಾರಣಕ್ಕಾಗಿ ಅವರು ಪ್ರಧಾನಿ ಹುದ್ದೆಗೆ ಪಟ್ಟು ಹಿಡಿಯಲಿಲ್ಲ. ಇತಿಹಾಸ ಕೆದಕಿ ವಿವಾದ ಹುಟ್ಟು ಹಾಕುತ್ತಿರುವ ಬಿಜೆಪಿ ನಾಯಕರು ಮುಂದೊಂದು ದಿನ ಬಾಬ್ರಿ ಮಸೀದಿ ನೆಲಸಮ ಹಾಗೂ ಗುಜರಾತ್‌ ನರಮೇಧ ಎರಡೂ ದೊಡ್ಡ ಪ್ರಮಾದ ಎಂದು ಹೇಳಬಹುದೇನೋ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.