
ಭಾರತದ ಗಣತಂತ್ರ ವ್ಯವಸ್ಥೆಯು ಒಕ್ಕೂಟ ಸರ್ಕಾರದ ಮಹತ್ವವನ್ನು ಹೇಳುವುದರ ಜೊತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಅನನ್ಯ ಸಂಬಂಧವನ್ನೂ ಮನಗಾಣಿಸುತ್ತದೆ. ಮಹತ್ವಾಕಾಂಕ್ಷೆಯ ಈ ಗಣತಂತ್ರ ವ್ಯವಸ್ಥೆ ವರ್ತಮಾನದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ನಾಗರಿಕರ ನಿರೀಕ್ಷೆ ಮತ್ತು ಆತಂಕಗಳಿಗೆ ಸ್ಪಂದಿಸಬೇಕಾಗಿದೆ.
ಭಾರತವು ಗಣರಾಜ್ಯವಾಗಿ ಪರಿವರ್ತನೆ ಕಂಡ 77ನೇ ವರ್ಷದ ಆಚರಣೆಯನ್ನು ನಾವು ಆಚರಿಸುತ್ತಿರುವ ಈ ಹೊತ್ತು, ನಮ್ಮ ಯಶಸ್ಸುಗಳನ್ನು ಮೆಲುಕು ಹಾಕಲು ಹಾಗೂ ಮುಂದಿನ ದಿನಗಳಲ್ಲಿ ಎದುರಾಗಲಿರುವ ಸವಾಲುಗಳನ್ನು ಗಮನಿಸಲು ಸೂಕ್ತ ಸಮಯವೂ ಹೌದು. ದೇಶದಲ್ಲಿ ಈಗ ಇರುವವರ ಪೈಕಿ ಶೇ 2–3ರಷ್ಟು ಜನ ಮಾತ್ರ ನಾವು ಗಣರಾಜ್ಯವಾಗುವುದಕ್ಕಿಂತ ಹಿಂದಿನ ದಿನಗಳನ್ನು ಕಂಡವರು. 77 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಭಾರತದ ಇಂದಿನ ಜನಸಮೂಹದಲ್ಲಿ ಬಹುಸಂಖ್ಯಾತರು. ಇವರೆಲ್ಲ ನಾವು ಗಣರಾಜ್ಯವಾಗಿ ಬದಲಾದ ನಂತರದಲ್ಲಿ ಜನಿಸಿದರು. ದೇಶದ ಪ್ರಜೆಗಳಲ್ಲಿ ಅರ್ಧದಷ್ಟು ಮಂದಿ ನಾವು ಗಣರಾಜ್ಯವಾಗಿ ಬದಲಾದ ಐವತ್ತು ವರ್ಷಗಳ ನಂತರ ಜನಿಸಿದವರು.
1950ನೇ ಇಸವಿಯ ಜನವರಿ 26ರ ಮಹತ್ವವನ್ನು ನಾವು ನೆನಪು ಮಾಡಿಕೊಳ್ಳುವ ಈ ಸಂದರ್ಭದಲ್ಲಿ ಇಂಥ ಕಿರುಮಾಹಿತಿಗಳು ಮುಖ್ಯವಾಗುತ್ತವೆ. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಾನವೊಂದನ್ನು ಹೊಂದಿರುವ ನನಗೆ, ಗಣರಾಜ್ಯವಾಗಿರುವುದರ ಮಹತ್ವದ ಬಗ್ಗೆ ಹಲವು ಬಾರಿ ಪ್ರಶ್ನೆಗಳು ಎದುರಾಗಿವೆ. ಇದಕ್ಕೆ ನಾನು ಪರಸ್ಪರ ಸಂಬಂಧವಿರುವ ಎರಡು ರೀತಿಗಳಲ್ಲಿ ಉತ್ತರಿಸುತ್ತೇನೆ. ಮೊದಲನೆಯದು, ನಮ್ಮ ಪ್ರಜಾತಂತ್ರದ ಪಯಣದಲ್ಲಿ ಗಣರಾಜ್ಯವಾಗಿ ಪರಿವರ್ತನೆ ಕಂಡಿದ್ದುದು ಮುಖ್ಯವಾದ ಹಂತ. ಏಕೆಂದರೆ, ಈ ಮೂಲಕ ನಾವು ದೇಶದ ಮೊದಲ ಪ್ರಜೆಯಾಗಿ ಚುನಾಯಿತ ವ್ಯಕ್ತಿಯನ್ನು ಹೊಂದಿದೆವು; ವಂಶಪಾರಂಪರ್ಯವಾಗಿ ಅಥವಾ ನಾಮನಿರ್ದೇಶನದ ಮೂಲಕ ಆ ಸ್ಥಾನ ಯಾರಿಗೂ ಸಿಗುವುದಿಲ್ಲ. ನಮ್ಮನ್ನು ನಾವು ಗಣತಂತ್ರವೆಂದು ಘೋಷಿಸಿಕೊಳ್ಳುವ ಮೂಲಕ ಗವರ್ನರ್ ಜನರಲ್ ಹುದ್ದೆಯನ್ನು ರದ್ದುಗೊಳಿಸಿದೆವು. ನಮಗೆ ಸ್ವಾತಂತ್ರ್ಯ ದೊರೆತ ನಂತರದಲ್ಲಿ ಈ ಹುದ್ದೆಗೆ ಬ್ರಿಟನ್ನಿನ ರಾಣಿಯಿಂದ ನೇಮಕ ನಡೆಯುತ್ತಿತ್ತು.
ನಾವು ಗಣರಾಜ್ಯವಾಗಿ ಬದಲಾಗುವ ಒಂದು ವರ್ಷ ಮೊದಲು ‘ಬ್ರಿಟಿಷ್ ಕಾಮನ್‌ವೆಲ್ತ್ ಆಫ್ ನೇಷನ್ಸ್’ ಎಂಬ ಹೆಸರನ್ನು ‘ಕಾಮನ್‌ವೆಲ್ತ್ ಆಫ್ ನೇಷನ್ಸ್’ ಎಂದು ಬದಲಾಯಿಸಲಾಯಿತು (1949ರ ಏಪ್ರಿಲ್‌ನಲ್ಲಿ) ಎಂಬುದು ಇಲ್ಲಿ ಉಲ್ಲೇಖಾರ್ಹ.
ಎರಡನೆಯದು, ನಿರ್ದಿಷ್ಟವಾಗಿ ಭಾರತದ ಸಂದರ್ಭದಲ್ಲಿ ಹೇಳುವುದಾದರೆ, ಸ್ವತಂತ್ರ ಭಾರತಕ್ಕೆ ಒಂದು ಸಂವಿಧಾನವನ್ನು ಅಳವಡಿಸಿಕೊಳ್ಳುವ ಕೆಲಸವೂ ಗಣರಾಜ್ಯದ ಘೋಷಣೆಯ ಮೂಲಕ ನಡೆಯಿತು. ಗಣರಾಜ್ಯದ ಚೌಕಟ್ಟಿನಲ್ಲಿ ನಾವು ಸಂಸದೀಯ ಆಡಳಿತ ವ್ಯವಸ್ಥೆಯನ್ನು ನಡೆಸಿಕೊಂಡು ಬಂದಿದ್ದೇವೆ. ರಾಷ್ಟ್ರಪತಿಯವರು ಪ್ರಭುತ್ವದ ಮುಖ್ಯಸ್ಥರಾಗಿರುತ್ತಾರೆ, ಪ್ರಧಾನಿ ನೇತೃತ್ವದ ಮಂತ್ರಿಪರಿಷತ್ತು ಕಾರ್ಯಾಂಗದ ನಾಯಕನ ಸ್ಥಾನದಲ್ಲಿರುತ್ತದೆ. ಇದು ಸಂಸತ್ತಿನ ಕೆಳಮನೆಗೆ ಉತ್ತರದಾಯಿ ಆಗಿರುತ್ತದೆ. ನಮ್ಮ ಆಡಳಿತ ವ್ಯವಸ್ಥೆಯ ಮುಖ್ಯ ಅಂಶ ಇದು.
ರಾಷ್ಟ್ರಪತಿಯವರ ಹುದ್ದೆಯು ತುರ್ತು ಸಂದರ್ಭದಲ್ಲಿ ಬಳಕೆಗೆ ಬರುವ ದೀಪ ಎಂದು ಬಣ್ಣಿಸುವ ಮೂಲಕ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ಈ ಹುದ್ದೆಯನ್ನು ಬಹಳ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ಬಳಕೆಯಾಗುವ ದೀಪವು ಯಾವಾಗಲೂ ದೊಡ್ಡದಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಅದು ವಿಶೇಷವಾದ ಸಂದರ್ಭಗಳಲ್ಲಿ ಮುಖ್ಯವಾಗುತ್ತದೆ. ಇಂತಹ ಸಂದರ್ಭಗಳು 1980ರ ದಶಕದ ಕೊನೆಯಲ್ಲಿ, 1990ರ ದಶಕದಲ್ಲಿ ಮತ್ತೆ ಮತ್ತೆ ಎದುರಾಗುತ್ತಿದ್ದವು. ಆಗ ಯಾವ ಪಕ್ಷಕ್ಕೆ ಅಥವಾ ಯಾವ ಮೈತ್ರಿಕೂಟಕ್ಕೆ ಲೋಕಸಭೆಯಲ್ಲಿ ನಿಜವಾಗಿಯೂ ಬಹುಮತ ಇದೆ ಎಂಬುದು ಸ್ಪಷ್ಟವಾಗುತ್ತಿರಲಿಲ್ಲ. ಆಗೆಲ್ಲ, ರಾಷ್ಟ್ರಪತಿಯವರು ತಮ್ಮ ವಿವೇಚನಾ ಅಧಿಕಾರ ಬಳಸಿ ಸರ್ಕಾರ ರಚಿಸಲು ಯಾರಿಗೆ ಆಹ್ವಾನ ನೀಡಬೇಕು ಎಂಬುದನ್ನು ನಿರ್ಧರಿಸಬೇಕಿತ್ತು. ವೆಂಕಟರಾಮನ್, ಶಂಕರ್ ದಯಾಳ್ ಶರ್ಮಾ ಮತ್ತು ಕೆ.ಆರ್. ನಾರಾಯಣನ್ ಅವರು ತಮ್ಮ ವಿವೇಚನಾ ಅಧಿಕಾರವನ್ನು ಭಿನ್ನ ಬಗೆಗಳಲ್ಲಿ ಬಳಸಿಕೊಂಡರು. ಪಕ್ಷ ಅಥವಾ ಮೈತ್ರಿಕೂಟ ಸ್ಪಷ್ಟವಾದ ಬಹುಮತ ಪಡೆದಾಗ ಪ್ರಧಾನಿ ನೇತೃತ್ವದ ಮಂತ್ರಿಪರಿಷತ್ತು ದೇಶದ ಸಮಾಜ–ರಾಜಕಾರಣವನ್ನು ಮುಂದಕ್ಕೆ ಒಯ್ಯುವ ಕೆಲಸ ಮಾಡಿದೆ.
ನಮ್ಮದು 28 ರಾಜ್ಯಗಳು ಹಾಗೂ ಎಂಟು ಕೇಂದ್ರಾಡಳಿತ ಪ್ರದೇಶಗಳು ಇರುವ ಒಕ್ಕೂಟ ವ್ಯವಸ್ಥೆ ಎಂಬುದು ಗಣತಂತ್ರದ ಚೌಕಟ್ಟಿನಲ್ಲಿ ಮಹತ್ವ ಪಡೆದುಕೊಳ್ಳುವ ಇನ್ನೊಂದು ಅಂಶ. ಗಣತಂತ್ರವಾಗಿ ಪರಿವರ್ತನೆ ಕಂಡ ನಂತರದಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಈ ಅಂಶಕ್ಕೆ ಮಹತ್ವ ಹೆಚ್ಚಾಗಿದೆ. ಇಲ್ಲಿ ಒಂದಕ್ಕೊಂದು ಸಂಬಂಧವಿರುವ ಮೂರು ಬೆಳವಣಿಗೆಗಳನ್ನು ವಿವರಿಸಬೇಕಾಗುತ್ತದೆ. ಆಡಳಿತಾತ್ಮಕ ಸಹಕಾರದ ಗತಿ, ಸರ್ಕಾರಗಳ ನಡುವಿನ ಪರಸ್ಪರ ಸಹಕಾರದ ವಾಸ್ತವಗಳು, ರಾಜಕೀಯ ಸ್ಪರ್ಧೆಯ ಒತ್ತಡಗಳು, ಆ ಮೂರು ಅಂಶಗಳು. ಭಾರತವೆಂಬ ಗಣರಾಜ್ಯದ ಮುಂದಿನ ಹಾದಿಯನ್ನು ಈ ಮೂರು ಪ್ರಮುಖ ತಂತುಗಳು ರೂಪಿಸುವಂತೆ ಕಾಣುತ್ತಿವೆ.
ಮೊದಲನೆಯದು, ಸರ್ಕಾರಗಳ ನಡುವಿನ ಸಹಕಾರಕ್ಕೆ ಸಂಬಂಧಿಸಿದ್ದು. 24X7 ಮಾಧ್ಯಮಗಳ ದೃಷ್ಟಿಯಿಂದ ದೂರದಲ್ಲಿ, ರಾಜ್ಯ ಹಾಗೂ ಕೇಂದ್ರದ ಸಚಿವಾಲಯಗಳ ಗೋಡೆಗಳ ನಡುವಿನಲ್ಲಿ ಎರಡು ಅಖಿಲ ಭಾರತ ಸೇವೆಗಳು– ಐಎಎಸ್ ಮತ್ತು ಐಪಿಎಸ್– ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿವೆ. ತಮ್ಮ ಸಂಪರ್ಕಜಾಲದ ಮೂಲಕ ಅವು ಸರ್ಕಾರಗಳ ನಡುವೆ ಸಹಕಾರವನ್ನು ಖಾತರಿಪಡಿಸಿವೆ. ಜಿಎಸ್‌ಟಿ ವ್ಯವಸ್ಥೆಗೆ ಸಂಬಂಧಿಸಿದ ಹಲವು ಬಿಕ್ಕಟ್ಟುಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಂತಗಳಲ್ಲಿ ಅಧಿಕಾರಿಗಳ ನಡುವಿನ ಮಾತುಕತೆ ಮೂಲಕ ಬಗೆಹರಿಸಲಾಯಿತು ಎಂದು ಹೇಳಲಾಗಿದೆ. ರಾಜಕೀಯದ ಲೆಕ್ಕಾಚಾರದ ತೋರುಗಾಣಿಕೆಯ ಮಾತುಗಳು ಒಂದೆಡೆ ನಡೆದರೂ, ಕೇಂದ್ರ ಹಾಗೂ ರಾಜ್ಯಗಳ ಮಟ್ಟದ ರಾಜಕೀಯ ನಾಯಕತ್ವವು ಭಿನ್ನಾಭಿಪ್ರಾಯಗಳನ್ನು ಸದ್ದುಗದ್ದಲ ಇಲ್ಲದೆ ಬಗೆಹರಿಸಿಕೊಳ್ಳಲು ಅಧಿಕಾರಿಶಾಹಿ ವ್ಯವಸ್ಥೆಯನ್ನು ನೆಚ್ಚಿಕೊಂಡಿದೆ ಎಂಬ ವರದಿಗಳು ಇವೆ.
ಎರಡನೆಯದಾಗಿ, ಕೋವಿಡ್ ಸಾಂಕ್ರಾಮಿಕದ ಸಂದರ್ಭ ಹಾಗೂ ಕೋವಿಡ್ ನಂತರದ ಅವಧಿಯಲ್ಲಿ ಸರ್ಕಾರಗಳ ನಡುವಿನ ಸಹಕಾರವು ಗೋಚರಿಸುವುದು ಹೆಚ್ಚಾಗಿದೆ. ಇಂದು ಸರ್ಕಾರಗಳ ಬಹುತೇಕ ಕೆಲಸಗಳು ವಿವಿಧ ಹಂತಗಳ ನಡುವಿನ ಸಂಕೀರ್ಣ ಸಮನ್ವಯವನ್ನು ಬಯಸುತ್ತವೆ. ದೇಶದಲ್ಲಿ ಲಾಕ್‌ಡೌನ್ ಜಾರಿಯಾದ ನಂತರದಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ನಡುವೆ ಆಗಾಗ ನಡೆಯುತ್ತಿದ್ದ ವಿಡಿಯೊ ಮಾತುಕತೆಗಳು ಸರ್ಕಾರಗಳ ನಡುವಿನ ನಿರಂತರ ಸಂವಹನವನ್ನು ಸೂಚಿಸುತ್ತಿದ್ದವು ಎಂಬುದನ್ನು ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕದ ಅವಧಿಯ ಆಡಳಿತದ ಕುರಿತ ಅಧ್ಯಯನಗಳು ಹೇಳಿವೆ. ಸರ್ಕಾರದ ಬೇರೆ ಬೇರೆ ಹಂತಗಳ ನಡುವೆ ಸಹಕಾರ ಮತ್ತು ಸಮನ್ವಯ ಇಲ್ಲದೆ ಸಾಂಕ್ರಾಮಿಕವನ್ನು ತಡೆಯುವುದು ಕಷ್ಟವಾಗುತ್ತಿತ್ತು ಎಂದು ಪ್ರಧಾನಿಯವರು ಅಧಿಕೃತವಾಗಿ ಹೇಳಿದ್ದಾರೆ. ಪ್ರಧಾನಿಯವರು ಲಿಂಕ್ಡ್‌ಇನ್‌ನಲ್ಲಿ ಬರೆದ ಒಂದು ಬರಹದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಭಾಗೀದಾರಿಕೆಯ ಬಗ್ಗೆ ಉಲ್ಲೇಖಿಸಿರುವುದು, ಸರ್ಕಾರಗಳ ನಡುವಿನ ಸಹಕಾರದ ಅನಿವಾರ್ಯತೆಯನ್ನು ಸೂಚಿಸುತ್ತದೆ.
ಮೂರನೆಯದಾಗಿ, ಭಾರತದ ಗಣರಾಜ್ಯ ವ್ಯವಸ್ಥೆಯು ತನ್ನ ಹಾದಿಯಲ್ಲಿ ಮುಂದಕ್ಕೆ ಸಾಗಿದಂತೆಲ್ಲ, ರಾಜಕೀಯದ ಸ್ಪರ್ಧೆಗಳು ಸೃಷ್ಟಿಸುವ ಅನಿವಾರ್ಯತೆಯನ್ನು ಉಲ್ಲೇಖಿಸಲೇಬೇಕಾಗುತ್ತದೆ. ಇದು ಸಾಮಾನ್ಯವಾಗಿ ಮಾಧ್ಯಮಗಳ ಗಮನವನ್ನು ಸೆಳೆಯುತ್ತದೆ. ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧವು ಸ್ಪರ್ಧಾತ್ಮಕ ರಾಜಕಾರಣ ಸೃಷ್ಟಿಸಿದ ಗೊಂದಲದಲ್ಲಿ ಸಿಲುಕಿದೆ. ಇಲ್ಲಿ ಮೂರು ಬೆಳವಣಿಗೆಗಳನ್ನು ಉಲ್ಲೇಖಿಸಬೇಕು. ಮೊದಲನೆಯದು: ಭಾರತದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಚುನಾವಣೆಯು ಒಂದೇ ಬಾರಿಗೆ ನಡೆಯುವುದಿಲ್ಲವಾದ ಕಾರಣದಿಂದಾಗಿ, ದೇಶವು ಯಾವಾಗಲೂ ಒಂದಲ್ಲ ಒಂದು ಕಡೆ ಚುನಾವಣೆಯನ್ನು ಕಾಣುತ್ತಿರುತ್ತದೆ. 2025ನೆಯ ಇಸವಿ ಮುಗಿಯುವ ಹೊತ್ತಿಗೆ ಬಿಹಾರ ವಿಧಾನಸಭೆಗೆ ಚುನಾವಣೆ ಮುಗಿದಿತ್ತು. 2026ನೆಯ ಇಸವಿ ಶುರುವಾಗಿರುವ ಹೊತ್ತಿನಲ್ಲಿ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭೆಗೆ ನಡೆಯುವ ಚುನಾವಣೆಯ ಬಗ್ಗೆ ಮತ್ತೆ ಮತ್ತೆ ಪ್ರಸ್ತಾಪ ಕೇಳಿಬರುತ್ತಿದೆ. ಈ ಚುನಾವಣೆ ಘೋಷಣೆ ಆಗುವುದಕ್ಕೆ ಇನ್ನೂ ಸಮಯ ಇದೆಯಾದರೂ, ಅನಧಿಕೃತ ಪ್ರಚಾರಕಾರ್ಯ ಶುರುವಾಗಿದೆ. ಶಬ್ದಾಡಂಬರದ ಮಾತುಗಳು ಸಾಮಾನ್ಯವಾಗಿ ವಾಸ್ತವವನ್ನು ಮರೆಮಾಚುತ್ತವೆ. ಆರೋಪ ಹಾಗೂ ಪ್ರತ್ಯಾರೋಪಗಳು ನಿತ್ಯದ ಸಂಗತಿಯಾಗುತ್ತವೆ. ಎರಡನೆಯದು: ರಾಜ್ಯ ಹಾಗೂ ಕೇಂದ್ರದಲ್ಲಿನ ಸರ್ಕಾರಗಳ ನಡುವಿನ ಅತಿಯಾದ ಸ್ಪರ್ಧೆಯು (ಅದರಲ್ಲೂ ಮುಖ್ಯವಾಗಿ, ಈ ಎರಡು ಸರ್ಕಾರಗಳ ನೇತೃತ್ವ ವಹಿಸಿದವರು ಬೇರೆ ಬೇರೆ ಪಕ್ಷಗಳಿಗೆ ಸೇರಿದವರಾಗಿದ್ದರೆ) ಪರಿಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ಇನ್ನಷ್ಟು ಹಾಳುಮಾಡಿದೆ. ರಾಜ್ಯಪಾಲ ಹುದ್ದೆಯು ಹೆಚ್ಚಿನ ಸಂದರ್ಭಗಳಲ್ಲಿ ರಾಜಕೀಯ ತಿಕ್ಕಾಟದ ನಡುವೆ ಸಿಲುಕಿಕೊಂಡಿರುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಾಯಕತ್ವದ ನಡುವೆ ಮತ್ತೆ ಮತ್ತೆ ಸಂಘರ್ಷ ಉಂಟಾಗುತ್ತಿರುತ್ತದೆ.
ಮೂರನೆಯದು: ರಾಜಕೀಯದ ಸ್ಪರ್ಧೆಯ ಅನಿವಾರ್ಯಗಳು, ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಬಗ್ಗೆ ಪಕ್ಷಪಾತಿತನದ ಆರೋಪವನ್ನು ಹೊರಿಸುತ್ತಿರುವುದರಲ್ಲಿಯೂ ಕಾಣುತ್ತಿವೆ. ಅದರಲ್ಲೂ ಮುಖ್ಯವಾಗಿ, ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಪಕ್ಷವೇ ರಾಜ್ಯದಲ್ಲಿಯೂ ಅಧಿಕಾರ ಹಿಡಿದಿದ್ದರೆ ಅಥವಾ ಆ ಪಕ್ಷದ ಮಿತ್ರಪಕ್ಷವು ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದರೆ ಈ ರೀತಿ ಆರೋಪ ಎದುರಾಗುತ್ತಿದೆ. ಭಾರತದ ಗಣರಾಜ್ಯವು 2026ನೆಯ ಇಸವಿಯನ್ನು ಹಾದುಹೋಗುವ ಸಂದರ್ಭದಲ್ಲಿ ಇಲ್ಲಿ ಚರ್ಚಿಸಲಾದ ವಿಷಯಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.
ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನ 21ನೆಯ ಶತಮಾನದಲ್ಲಿ ಜನಿಸಿದವರು ಎಂಬ ಉಲ್ಲೇಖದೊಂದಿಗೆ ಈ ಲೇಖನ ಆರಂಭವಾಯಿತು. ಇಂದು ಮಹತ್ವಾಕಾಂಕ್ಷೆಯ ಭಾರತ ಗಣರಾಜ್ಯವು ಜನರ ನಿರೀಕ್ಷೆಗಳಿಗೆ, ಆತಂಕಗಳಿಗೆ ಮತ್ತು ಆದ್ಯತೆಗಳಿಗೆ ಸ್ಪಂದಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.