ADVERTISEMENT

ಕ್ವಾಂಟಮ್ ಫಿಸಿಕ್ಸಿಗೆ ಮುಗ್ಧರ ಅಡ್ಡಗಾಲು

ನಾಗೇಶ ಹೆಗಡೆ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST
ಕ್ವಾಂಟಮ್ ಫಿಸಿಕ್ಸಿಗೆ ಮುಗ್ಧರ ಅಡ್ಡಗಾಲು
ಕ್ವಾಂಟಮ್ ಫಿಸಿಕ್ಸಿಗೆ ಮುಗ್ಧರ ಅಡ್ಡಗಾಲು   

ಟಿಕೆಟ್ಟು-ಕ್ರಿಕೆಟ್ಟುಗಳ ನಡುವೆ ಗಣತಂತ್ರದ ಕೊಪ್ಪರಿಗೆ ಕುದಿಯತೊಡಗಿದೆ. ಆಕ್ರೋಶ, ಹತಾಶೆ, ಅಡ್ಡ ಜಿಗಿತ, ಖುಷಿಯ ಆವೇಶ, ಅಭಿಮಾನಿಗಳ ದೊಂಬಿ, ಬೆಂಕಿ, ಆತ್ಮಾಹುತಿಯ ಬೆದರಿಕೆ ಎಲ್ಲವೂ ಎದ್ದೆದ್ದು ಕುಣಿಯತೊಡಗಿವೆ. ಇವೆಲ್ಲ ಗಲಾಟೆಯಿಂದ ಬೇಸತ್ತು ಪಕ್ಕದ ತಮಿಳುನಾಡಿನತ್ತ ಕಣ್ಣು ಹಾಯಿಸಿದರೆ ಅಲ್ಲಿ ಚುನಾವಣೆ ಇಲ್ಲದಿದ್ದರೂ ಅಂಥದ್ದೇ ಗಲಾಟೆ, ಪ್ರತಿಭಟನೆ, ದೊಂಬಿ. ಕಾವೇರಿ ನೀರಿಗಾಗಿ ಕೇಂದ್ರದ ವಿರುದ್ಧ, ತೂತ್ತುಕುಡಿಯ ಸ್ಟರ್ಲೈಟ್ ಮಾಲಿನ್ಯದ ವಿರುದ್ಧ, ನೆಡುವಾಸಲ್‌ನ ಪೆಟ್ರೋಲ್ ಕೊಳವೆ ಬಾವಿಗಳ ವಿರುದ್ಧ, ನ್ಯೂಟ್ರಿನೊ ಸುರಂಗದ ವಿರುದ್ಧ ಯುದ್ಧ. ಕಾವೇರಿ ವಿಷಯದಲ್ಲಿ ನ್ಯಾಯ ಸಿಗಬೇಕೆಂದು ಕಳೆದ ವಾರ ಎಮ್‌ಡಿಎಮ್‌ಕೆ ನಾಯಕ ವೈಕೊ ವೇದಿಕೆ ಏರಿ ಭಾಷಣ ಮಾಡುತ್ತಿದ್ದಾಗ ಆತನ ಅಳಿಯ ಸರವಣ ಸುರೇಶ ಎಂಬಾತ ನೀರಿಗಾಗಿ ಘೋಷಣೆ ಕೂಗುತ್ತ ಅಲ್ಲೇ ಬೆಂಕಿ ಹಚ್ಚಿಕೊಂಡ. ಮೊನ್ನೆ ತೀರಿಕೊಂಡ.

ಆತ್ಮಾಹುತಿಗೂ ಆತ್ಮಹತ್ಯೆಗೂ ಪರಸ್ಪರ ವಿರುದ್ಧದ ಮನಸ್ಥಿತಿ ಇರುತ್ತದೆ. ಆತ್ಮಹತ್ಯೆ ಎಂದರೆ ಅಪ್ಪಟ ಖಾಸಗಿ ವಿಚಾರ. ಯಾರೊಂದಿಗೂ ಚರ್ಚಿಸದೆ ತನ್ನೊಳಗೇ ನೊಂದು ಬೆಂದು ಜೀವತ್ಯಾಗದ ಯತ್ನ ಅಲ್ಲಿ ನಡೆಯುತ್ತದೆ. ಅದು ಒಳಗುದಿ. ಆತ್ಮಾಹುತಿ ಹಾಗಲ್ಲ. ಅದು ಹೊರಗುದಿ. ಬಾಜಾ ಬಹಿರಂಗ ಉದ್ಘೋಷ ಇದ್ದಂತೆ. ತಾನೇನೋ ಹೇಳಬೇಕು, ಜಗತ್ತು ಅದನ್ನು ಗಮನಿಸಬೇಕು ಎಂಬ ಮನೋಭಾವ ಅದರಲ್ಲಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಅಂಥ ಆತ್ಮಾಹುತಿಯ ಸಾಹಸಗಳೆಲ್ಲ ಪ್ರಭುತ್ವದ ವಿರುದ್ಧವೇ ಇರುವುದರಿಂದ ಮನೋವಿಜ್ಞಾನಿಗಳು ಅದನ್ನು ‘ಪೊಲಿಟಿಕಲ್ ಸೈಕಾಲಜಿ’ ಎಂತಲೇ ವರ್ಗೀಕರಿಸಿ ಇಟ್ಟಿದ್ದಾರೆ. ತಮಿಳುನಾಡಿನ ಈ ವೈಕೊ ಭಾಷಣದಲ್ಲಿ ಅದೆಂಥ ಬೆಂಕಿ ಇರುತ್ತದೊ, ಎರಡು ಆಹುತಿಗಳಾದವು. ಥೇನಿ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ ನ್ಯೂಟ್ರಿನೊ ಪ್ರಯೋಗಶಾಲೆಯ ವಿರುದ್ಧ ಎರಡು ವಾರಗಳ ಹಿಂದೆ ಭಾಷಣ ಮಾಡುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ನಿಂತಿದ್ದ ರವಿ ಎಂಬಾತ ಮೈಗೆ ಪೆಟ್ರೋಲ್ ಸುರಿದುಕೊಂಡು ಘೋಷಣೆ ಕೂಗುತ್ತ ಆತ್ಮಾಹುತಿ ಮಾಡಿಕೊಂಡ.

ನ್ಯೂಟ್ರಿನೊ ಎಂದರೆ ಅದೆಂಥದೊ ಶಕ್ತಿವರ್ಧಕ ಪೇಯದ ಪುಡಿಯೊ, ಔಷಧವೊ ಎಂದುಕೊಳ್ಳಬೇಡಿ. ಅದು ಕ್ವಾಂಟಮ್ ಫಿಸಿಕ್ಸ್‌ನಲ್ಲಿ ಬರುವ ಸೂಕ್ಷ್ಮಾತಿಸೂಕ್ಷ್ಮ ಕಣ. ಪರಮಾಣುವಿನ ಕೇಂದ್ರದಲ್ಲಿನ ನ್ಯೂಕ್ಲಿಯಸ್ ಎಂಬ ಬೀಜಾಣುವಿನಲ್ಲಿ ಹುದುಗಿರುವ ಪ್ರೋಟಾನ್ ಎಂಬ ಮೂಲಕಣವನ್ನು ಒಡೆದಾಗ ಸಿಗುವ ಅಗೋಚರ ಕಣ. ಅದರ ಗುಣವಿಶೇಷಗಳನ್ನು ಅರ್ಥ ಮಾಡಿಕೊಳ್ಳಲೆಂದು ಭಾರತ ಸರ್ಕಾರ ಥೇಣಿ ಜಿಲ್ಲೆಯ ಎತ್ತರದ ಬೋದಿ ಗುಡ್ಡದ ತಳದಲ್ಲಿ ಸುರಂಗ ತೋಡಲು ಸಿದ್ಧತೆ ನಡೆಸುತ್ತಿದೆ. ಅದು ನಮ್ಮ ದೇಶದ ಅತಿ ದೊಡ್ಡ, ಅತ್ಯಂತ ವೆಚ್ಚದ ಮೂಲವಿಜ್ಞಾನ ಸಂಶೋಧನ ಕೇಂದ್ರವಾಗಲಿದೆ. ಭಯಭೀತ ಗ್ರಾಮಸ್ಥರು ಅದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಹೈಕೋರ್ಟಿಗೆ ಹೋಗಿದ್ದರು. ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆದ ವಿನಾ ಇಲ್ಲೇನೂ ಕಾಮಗಾರಿ ನಡೆಸಬಾರದೆಂದು ಹೈಕೋರ್ಟ್ ಆಜ್ಞೆ ಮಾಡಿತ್ತು. ಅಧ್ಯಯನ ನಡೆಯಿತು. ಅಲ್ಲೇನೂ ಗಿಡಮರ ಇಲ್ಲ. ಯಾರ ಆಸ್ತಿಗೂ ನಷ್ಟ ಆಗುವುದಿಲ್ಲ; ಯಾರನ್ನೂ ಎತ್ತಂಗಡಿ ಮಾಡುವ ಪ್ರಮೇಯವಿಲ್ಲ, ಯಾರಿಗೂ ಅಪಾಯವಿಲ್ಲ ಎಂದು ಪರಿಸರ ಇಲಾಖೆ ಈ ಯೋಜನೆಗೆ ಈಚೆಗೆ ಅನುಮತಿ ನೀಡಿದೆ. ಆದರೆ ಜನರಿಗೆ ನಂಬಿಕೆ ಇಲ್ಲ. ಬೇರೇನೂ ದಾರಿ ಕಾಣದೆ ಗ್ರಾಮಸ್ಥರು ರಾಜಕಾರಣಿಗಳನ್ನು ಹಿಡಿದಿದ್ದಾರೆ. ಸ್ಟಾಲಿನ್ ಮತ್ತು ವೈಕೊ ಇದೀಗ ಹತ್ತು ದಿನಗಳ ಪ್ರತಿರೋಧದ ಪಾದಯಾತ್ರೆ ನಡೆಸುತ್ತಿದ್ದಾರೆ. ಆ ಪಾದಯಾತ್ರೆಯ ಆರಂಭದ ದಿನವೇ ಅಗ್ನಿ ದುರಂತ ಸಂಭವಿಸಿದೆ. ವಿಜ್ಞಾನದ ಹಾದಿಯಲ್ಲಿ ಮೂಢ ನಂಬಿಕೆಯ ಮುಖಾಮುಖಿಯಾಗಿ ಮುಗ್ಧನೊಬ್ಬನ ಆತ್ಮಾಹುತಿ ಪಡೆದ ವಿಲಕ್ಷಣ ಉದಾಹರಣೆ ಇದು.

ADVERTISEMENT

ಈ ನ್ಯೂಟ್ರಿನೊ ಕಣಗಳನ್ನು ಹಿಡಿದು ಪರೀಕ್ಷಿಸಲೆಂದು ಜಗತ್ತಿನ ಹತ್ತಾರು ರಾಷ್ಟ್ರಗಳಲ್ಲಿ ಭಾರೀ ವೆಚ್ಚದ ಸಂಶೋಧನೆಗಳು ನಡೆಯುತ್ತಿವೆ. ಅದರಿಂದ ಮನುಕುಲಕ್ಕೆ ಯಾವ ನೇರ ಪ್ರಯೋಜನವೂ ಇಲ್ಲ. ವಿಜ್ಞಾನವೆಂದರೆ ಹಾಗೇ ತಾನೆ? ಕಾಣದ ಜಗತ್ತನ್ನು ಶೋಧಿಸುತ್ತ ಹೋಗುವುದು. ನಾವು ಉಫ್ ಎಂದಾಗ ಅದೆಷ್ಟೊ ಕೋಟಿ ಕಾರ್ಬನ್, ನೈಟ್ರೊಜನ್, ಹೈಡ್ರೊಜನ್ ಅಣುಗಳು ನಮ್ಮ ಶರೀರದಿಂದ ಹೊರಕ್ಕೆ ಹೋಗುತ್ತವಲ್ಲ. ಆ ಒಂದೊಂದು ಅಣುವಿನಲ್ಲೂ ಹತ್ತಿಪ್ಪತ್ತು ಪ್ರೋಟಾನ್ ಇರುತ್ತವೆ. ಒಂದನ್ನು ಒಡೆದರೆ ಅದರೊಳಕ್ಕೆ ಅದೆಷ್ಟೊ ಸಂಖ್ಯೆಯ ನ್ಯೂಟ್ರಿನೊ, ಮ್ಯೂವಾನ್, ಟಾವೊ ಕಣಗಳು ಇರುತ್ತವೆ. ಅವು ಬ್ರಹ್ಮಾಂಡದ ಉಗಮವಾದ ಲಾಗಾಯ್ತೂ ನ್ಯೂಟ್ರಿನೊ ಕಣಗಳು ಚಿಮ್ಮುತ್ತಲೇ ಇವೆ. ನಕ್ಷತ್ರ ಲೋಕದಿಂದ ಸದಾ ಹೊಮ್ಮುವ ಇವು ಕೋಟಿ ಕೋಟಿ ಸಂಖ್ಯೆಯಲ್ಲಿ ಗ್ರಾನೈಟ್ ಬಂಡೆ, ಉಕ್ಕಿನ ಭಿತ್ತಿಯಿದ್ದರೂ ದಾಟಿ, ಇಡೀ ಭೂಮಿಯ ಮೂಲಕ ಸಾಗಿ ಹೋಗುತ್ತಿರುತ್ತವೆ. ಸೂರ್ಯನಿಂದಲೂ ಚಿಮ್ಮುತ್ತವೆ, ಪೃಥ್ವಿಯ ಗರ್ಭದಿಂದಲೂ ಚಿಮ್ಮುತ್ತವೆ. ಅಪರೂಪಕ್ಕೆ ಸೌತೆಕಾಯಿಯಿಂದಲೂ ನೀರಿನ ಚೊಂಬಿನಿಂದಲೂ ಚಿಮ್ಮುತ್ತ ಯಾರನ್ನೂ ತಟ್ಟದೆ, ಯಾರಿಂದಲೂ ತಟ್ಟಿಸಿಕೊಳ್ಳದೆ, ತೀರ ನಾಚಿಕೊಳ್ಳುತ್ತ ಬೆಳಕಿನ ವೇಗದಲ್ಲಿ ದೌಡಾಯಿಸುತ್ತವೆ.

ಅವನ್ನು ಸೆರೆ ಹಿಡಿಯಲು ಎಲ್ಲ ಸುಧಾರಿತ ದೇಶಗಳಲ್ಲೂ ಯತ್ನಗಳು ನಡೆಯುತ್ತಿವೆ, ಅದೆಷ್ಟು ಬಗೆಯ ಎಂಜಿನಿಯರ್‌ಗಳು, ಅದೆಷ್ಟು ಬಗೆಯ ವಿಜ್ಞಾನಿಗಳು, ಅದೆಷ್ಟು ಬಗೆಯ ಲಾಬಿಕೋರರು (ಭಾರೀ ಮೊತ್ತದ ಹಣವಿರುವ ಕಾರಣ ಅದರ ನಿರ್ಮಾಣ ಗುತ್ತಿಗೆಗಾಗಿ ಲಾಬಿ ಮಾಡುವವರು) ಅದೆಷ್ಟು ಸಂಶೋಧನ ಕೇಂದ್ರಗಳು, ವಿಶ್ವವಿದ್ಯಾಲಯಗಳು ಅದರಲ್ಲಿ ತೊಡಗಿಕೊಂಡಿವೆ. ನ್ಯೂಟ್ರಿನೊ ಪತ್ತೆಗೆಂದು ಹೂಡಲಾದ ಭೂಗತ ಸಾಧನಗಳಲ್ಲೂ ಎಷ್ಟೊಂದು ವೈವಿಧ್ಯವಿದೆ: ಕೆನಡಾದ ಸಡ್‌ಬರಿ ಎಂಬಲ್ಲಿ ಭೂಮಿಯ ಎರಡು ಕಿ.ಮೀ. ಆಳದ ಸುರಂಗದಲ್ಲಿ ಮನೆಗಾತ್ರದ ಪಾತ್ರೆ ಇಳಿಸಿ ಅದರಲ್ಲಿ ಸಾವಿರ ಟನ್ ಭಾರಜಲವನ್ನು ತುಂಬಿ, ಅದರ ನಡುವಣ ಗೋಲದಲ್ಲಿ 9600 ಫೊಟೊ ಮಲ್ಟಿಪ್ಲಯರ್ ಕೊಳವೆಗಳನ್ನು ಇಟ್ಟು ವಿಜ್ಞಾನಿಗಳು ಕೂತಿದ್ದಾರೆ. ಇನ್ನೊಂದಿಷ್ಟು ವಿಜ್ಞಾನಿಗಳು ಭೂಮಿಯ ಉಲ್ಟಾನೆತ್ತಿಯ ಮೇಲೆ (ಅಂಟಾರ್ಕ್ಟಿಕಾ) ಹಿಮದಾಳದ ಒಂದು ಘನ ಕಿಲೊಮೀಟರ್ ಜಾಗದಲ್ಲಿ 86 ರಂಧ್ರಗಳನ್ನು ಕೊರೆದು ಒಂದೊಂದರಲ್ಲೂ ಎರಡು- ಎರಡೂವರೆ ಕಿಲೊಮೀಟರ್ ಆಳದ ದಾರದ ತುದಿಗೆ ಡಿಓಎಮ್ ಗೋಲಿಗಳನ್ನು ಇಟ್ಟು ಕಂಪ್ಯೂಟರ್ ಮೂಲಕ ವೀಕ್ಷಣೆ ಮಾಡುತ್ತಿದ್ದಾರೆ. ಜಪಾನೀಯರು ಐಕಿನೊ ಗುಡ್ಡದ ತಳದಲ್ಲಿ ಒಂದು ಕಿ.ಮೀ. ಆಳದ ಸುರಂಗದಲ್ಲಿ 50 ಸಾವಿರ ಟನ್ ತೀವ್ರಶುದ್ಧ ನೀರನ್ನು ತುಂಬಿ 13 ಸಾವಿರ ಶೋಧದಂಡಗಳನ್ನು ಮುಳುಗಿಸಿ ನೋಡುತ್ತಿದ್ದಾರೆ. ಇನ್ನು ಸ್ವಿತ್ವರ್ಲೆಂಡ್ ಮತ್ತು ಫ್ರಾನ್ಸ್ ಗಡಿಯಲ್ಲಿ 27 ಕಿ.ಮೀ. ಉದ್ದದ ಬಳೆಯಾಕಾರದ, ಬಿಗ್‌ಬ್ಯಾಂಗ್ ಖ್ಯಾತಿಯ ಸರ್ನ್ ಸುರಂಗ ಗೊತ್ತೇ ಇದೆ. ಅದಕ್ಕಿಂತ ತುಸು ದೂರದ ಇಟಲಿಯಲ್ಲಿ ಗ್ರಾನ್ ಸಾಸ್ಸೊ ಗುಡ್ಡದ ತಳದಲ್ಲಿ ಜಗತ್ತಿನ ಅತಿ ದೊಡ್ಡ ವೇಧಶಾಲೆಯಲ್ಲಿ ಇದೇ ನ್ಯೂಟ್ರಿನೊಗಳನ್ನು ಬಂಧಿಸುವ ಯತ್ನ ನಡೆದಿದೆ. ಭೂಮಿಯ ಆಳದಲ್ಲೇ ಈ ಪ್ರಯೋಗ ನಡೆಸಲು ಕಾರಣವಿಷ್ಟೆ: ಆಕಾಶದಿಂದ ಸದಾ ಸುರಿಯುವ ವಿಶ್ವಕಿರಣಗಳನ್ನು ಸೋಸಿದ ನಂತರವೇನ್ಯೂಟ್ರಿನೊಗಳನ್ನು ಹಿಡಿಯಬೇಕು.

ಭಾರತದಲ್ಲೂ 1980ರಲ್ಲೇ ಕೋಲಾರದ ಚಿನ್ನದ ಗಣಿಯ ಆಳದಲ್ಲಿ ಪ್ರೋಟಾನ್ ಡಿಕೇ ಪ್ರಯೋಗ ಮಾಡಲೆಂದು ಐದು ಸಾವಿರ ಟನ್ ತೂಕದ ಕಬ್ಬಿಣದ ತೊಲೆಗಳನ್ನು ಇಳಿಸಿ ಏಳೆಂಟು ವರ್ಷ ಅಧ್ಯಯನ ಮಾಡಲಾಗಿತ್ತು. ಅದನ್ನು ನೋಡಲೆಂದು ಪಾಕಿಸ್ತಾನದ ಏಕೈಕ ನೊಬೆಲ್ ವಿಜ್ಞಾನಿ ಅಬ್ದುಸ್ ಸಮದ್ ಬಂದಿದ್ದರು. ಅಲ್ಲಿ ಸಿಕ್ಕ ಫಲಿತಾಂಶಗಳಿಂದ ಉತ್ತೇಜಿತರಾದ ಭೌತವಿಜ್ಞಾನಿಗಳು ಇನ್ನೂ ವಿಸ್ತೃತ ವೇಧಶಾಲೆಯ ನಿರ್ಮಾಣಕ್ಕೆ ನೀಲನಕ್ಷೆ ಹಾಕಿದರು.

ಭಾರತದ ಈ ಯೋಜನೆಗೆ ‘ಐಎನ್‌ಓ’ (ಇಂಡಿಯಾ ಬೇಸ್ಡ್ ನ್ಯೂಟ್ರಿನೊ ಒಬ್ಸರ್ವೇಟರಿ- INO) ಎಂಬ ಹೆಸರಿಟ್ಟು ಅದಕ್ಕೆಂತಲೇ 1500 ಕೋಟಿ ರೂಪಾಯಿ ತೆಗೆದಿಟ್ಟಿದೆ. ಇದನ್ನು ಮೊದಲು ಕರ್ನಾಟಕದ ಗಡಿಯಲ್ಲಿ ನೀಲಗಿರಿ ಬೆಟ್ಟದಲ್ಲಿ ಮುದುಮಲೈ ರಾಷ್ಟ್ರೀಯ ವನ್ಯಧಾಮದ ಅಂಚಿಗೆ ಮಾಸಿನಗುಡಿ ಎಂಬಲ್ಲಿ ಆರಂಭಿಸಲು ಸಿದ್ಧತೆ ನಡೆದಿತ್ತು. ಅದಕ್ಕೆ ವನ್ಯತಜ್ಞರ ತೀವ್ರ ವಿರೋಧ ಬಂದಿದ್ದರಿಂದ ಸರ್ಕಾರವೇ ಇಡೀ ಯೋಜನೆಯನ್ನು ಥೇಣಿಗೆ ವರ್ಗಾಯಿಸಿದೆ.

ಅಲ್ಲಿ ಬೋದಿಗುಡ್ಡದ ತಳದಲ್ಲಿ ಎರಡು ಕಿ.ಮೀ. ಉದ್ದದ ಸುರಂಗ ಕೊರೆಯಲಾಗುತ್ತದೆ. ಅದರ ಮೇಲೆ 1300 ಮೀಟರ್ ದಪ್ಪದ ಗುಡ್ಡ ಇರುವುದರಿಂದ ವಿಶ್ವ ಕಿರಣಗಳು ತಾವಾಗಿ ಸೋಸಿ ಕೇವಲ ನ್ಯೂಟ್ರಿನೊ ಕಣಗಳು ಸೂಸುತ್ತವೆ. ಅವುಗಳನ್ನು ಹಿಡಿಯಲು ಯತ್ನಿಸುತ್ತಲೇ ಆ ಮಹಾನ್ ಗುಹೆಯಲ್ಲಿ ಕ್ವಾಂಟಮ್ ಫಿಸಿಕ್ಸ್, ಭೂವಿಜ್ಞಾನ, ಜೀವವಿಜ್ಞಾನ, ಜಲವಿಜ್ಞಾನದ ಅಧ್ಯಯನವನ್ನೂ ಮಾಡಬಹುದು. ಅದೊಂದು ವಿಶ್ವವಿದ್ಯಾಲಯವೇ ಆಗುತ್ತದೆ. ಆದರೆ ಸುರಂಗ ಕೊರೆಯಲೆಂದು ಗುಡ್ಡದ ಬುಡದಲ್ಲಿ 22 ಹೆಕ್ಟೇರ್ ಭೂಮಿಗೆ ಬೇಲಿಕಟ್ಟಿ ಫಲಕ ಹಾಕಿದ್ದೇ ತಡ, ಸುತ್ತಲಿನ ಹಳ್ಳಿಗಳಲ್ಲಿ ಸಂಶಯದ ಹೊಗೆ ಎದ್ದು ಭೀತಭೂತವಾಗಿ ಇಡೀ ಯೋಜನೆಗೆ ಅಡ್ಡಗಾಲು ಹಾಕಿ ಕೂತಿದೆ. ವಿಜ್ಞಾನಿಗಳು ಮನಸ್ಸು ಮಾಡಿದ್ದರೆ ಈ ಮೂರು ವರ್ಷಗಳಲ್ಲಿ ಸುತ್ತಲಿನ ಏಳೆಂಟು ಹಳ್ಳಿಗಳ ಮನೆಮನೆಗೂ ಹೋಗಿ ಯೋಜನೆಯ ವಿವರಗಳನ್ನು ತಿಳಿಸಬಹುದಿತ್ತು. ದೇಶದ ಹದಿನೈದು ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳು, ಹತ್ತಾರು ವಿಶ್ವವಿದ್ಯಾಲಯಗಳು ಇದರಲ್ಲಿ ಭಾಗಿಯಾಗಲು ಟೊಂಕ ಕಟ್ಟಿವೆ. ಇಲ್ಲಿಗಾಗಿ ಯುವ ಸಂಶೋಧಕರನ್ನು ತಯಾರು ಮಾಡಲೆಂದೇ ದೇಶದ ಅನೇಕ ಕಡೆ ವಿಶೇಷ ಫಿಸಿಕ್ಸ್ ಪಿ.ಜಿ ಕೋರ್ಸ್‌ಗಳು, ಅಧ್ಯಯನ ಫೆಲೊಶಿಪ್‌ಗಳು ಆರಂಭವಾಗಿವೆ. ನ್ಯೂಟ್ರಿನೊ ಕಣಗಳನ್ನು ಛೇದಿಸಿ ನೊಬೆಲ್ ಪದಕ ಪಡೆದವರ ಉದಾಹರಣೆಗಳನ್ನು ದೂರದ ವಿ.ವಿ ಮಟ್ಟದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ನೀಡಲಾಗುತ್ತಿದೆ. ‘ಐಎನ್ನೋ’ ಹೆಸರಿನಲ್ಲಿ ಹಿರಿಯ ವಿಜ್ಞಾನಿಗಳು ಜಗತ್ತಿನ ಇತರ ಅಂಥದೇ ಭೂಗತ ವೇಧಶಾಲೆಗಳಿಗೆ ಭೇಟಿ ಕೊಡುತ್ತಿದ್ದಾರೆ. ಗುಡ್ಡ ಅಗೆಯಲು ಪ್ರಭುತ್ವದ ಸರ್ವೋನ್ನತ ಸ್ತರದಿಂದ ಅನುಮತಿ ತರಲಾಗಿದೆ. ಆದರೆ ಯಾರಿಗೂ ಬೋದಿಗುಡ್ಡದ ಸುತ್ತಲಿನ ಮುಗ್ಧರ ಬಳಿ ಹೋಗಿ ಅವರ ಅನುಮತಿ ಪಡೆಯಬೇಕೆಂಬುದು ಹೊಳೆದಿಲ್ಲ.

ಈ ನಡುವೆ ಯೋಜನೆ ಕುರಿತು ಅಂತೆಕಂತೆಗಳ ವಿಷವಾರ್ತೆ ಹರಡುತ್ತಿದೆ. ಇದು ಪರಮಾಣು ಸಂಶೋಧನೆಯಂತೆ (ಸುಳ್ಳು). ಅದರಿಂದ ವಿಕಿರಣಸೂಸುತ್ತದಂತೆ (ಸುಳ್ಳು); ಇದಕ್ಕೆಂದೇ 50ಸಾವಿರ ಟನ್ ಡೈನಮೈಟ್ ಬಳಸುತ್ತಾರಂತೆ (ನಿಜ, ಆದರೆ ಒಮ್ಮೆಗೇ ಸ್ಫೋಟಿಸುವುದಿಲ್ಲ, ಚಿಕ್ಕಚಿಕ್ಕ ಬಂಡೆಗಳನ್ನು ಕೊರೆಯುತ್ತಾರೆ, ಕೊರೆದ ತ್ಯಾಜ್ಯವನ್ನು ರಸ್ತೆಗೆ ಬಳಸುತ್ತಾರೆ). ಸ್ಫೋಟದಿಂದ ಇಡುಕ್ಕಿ, ಮುಲ್ಲಪೆರಿಯಾರ್ ಅಣೆಕಟ್ಟಿಗಳಿಗೆ ಧಕ್ಕೆ ಬರುತ್ತದಂತೆ (ಸುಳ್ಳು). ಭೂಕುಸಿತ ಆಗುತ್ತದಂತೆ (ಸುಳ್ಳು). ಇದರೊಳಕ್ಕೆ ಹೂಡುವ 50 ಸಾವಿರ ಟನ್ ಕಬ್ಬಿಣದ ಜಂತಿಗಳನ್ನು ಪೇರಿಸಿದಾಗ ಜಗತ್ತಿನ ಅತಿದೊಡ್ಡ ಅಯಸ್ಕಾಂತ ಅಲ್ಲಿ ಸೃಷ್ಟಿಯಾಗುತ್ತದಂತೆ (ನಿಜ); ಅದು ರೈತರ ಹಾರೆ-ಪಿಕಾಸಿಗಳನ್ನು ಸೆಳೆಯುತ್ತದಂತೆ (ಸುಳ್ಳು); ಆ ಜಂತಿಗಳನ್ನು ತಂಪು ಮಾಡಲೆಂದು ದಿನಕ್ಕೆ ಮೂರು ಲಕ್ಷ ಲೀಟರ್ ನೀರು ಬೇಕಂತೆ (ನಿಜ, ಆದರೆ ಅದನ್ನು ಮರುಬಳಕೆ ಮಾಡಬಹುದು). ಇಂಥವೆಲ್ಲ ಬುರುಡೆ ಭೀತಿಯಿಂದಾಗಿ ಎದ್ದ ಜನಾಕ್ರೋಶವನ್ನು ತಣಿಸಲು ಯತ್ನಿಸುವ ಬದಲು ರಾಜಕೀಯದವರು ವಾಗ್ಝರಿಯಲ್ಲಿ ಪೆಟ್ರೋಲು ಸುರಿಯುತ್ತಾರೆ. ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಬೇಕಿದ್ದ ನ್ಯೂಟ್ರಿನೊ ಯೋಜನೆಯ ವಿರುದ್ಧ ರಾಜಕಾರಣಿಗಳೇ ದನಿಯೆತ್ತುತ್ತಿದ್ದಾರೆ. ಆಧುನಿಕ ಮೂಢನಂಬಿಕೆಗಳ ಎದುರು ವಿಜ್ಞಾನ ಹಿಂದಡಿ ಇಡಬೇಕಾಗಿ ಬಂದಿದೆ.

ಜನರ ಮತ್ತು ವಿಜ್ಞಾನದ ನಡುವಣ ಅಂತರವನ್ನು ಕಮ್ಮಿ ಮಾಡಲೆಂದೇ ಮೊನ್ನೆ ಏಪ್ರಿಲ್ 14ರಂದು ಜಾಗತಿಕ ‘ವಿಜ್ಞಾನ ನಡಿಗೆ’ಯನ್ನು ಆಯೋಜಿಸಲಾಗಿತ್ತು. ಬೆಂಗಳೂರು ಸೇರಿದಂತೆ ನಮ್ಮ ಎಂಟು ಮಹಾನಗರಗಳಲ್ಲಿ ಜನಪರ ವಿಜ್ಞಾನಿಗಳು, ವಿಜ್ಞಾನ ಅಭಿಮಾನಿಗಳು, ವಿದ್ಯಾರ್ಥಿಗಳು ರಸ್ತೆ ಪ್ರದರ್ಶನ ನಡೆಸಿದರು. ಚುನಾವಣೆಯ ಚಿಂಗಾರಿಗಳ ನಡುವೆ ಅದು ಗೊತ್ತಾಗಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.