ADVERTISEMENT

ಗೋವಿನ ಹಾಡಿಗೆ ಕಂಬನಿ ಮಿಡಿದ ಪ್ರೇಕ್ಷಕ ವೃಂದ

ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದ ಅರಮನೆ ಆವರಣ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 19:01 IST
Last Updated 15 ಅಕ್ಟೋಬರ್ 2018, 19:01 IST
.
.   

ಮೈಸೂರು: ವೇದಿಕೆ ಮೇಲೆ ಕರುವಿನ ಪಾತ್ರಧಾರಿಯಾದ ಬಾಲಕಿ ‘ಅಮ್ಮ ನೀನು ಸಾಯಲೇಕೆ ನನ್ನ ತಬ್ಬಲಿ ಮಾಡಲೇಕೆ’ ಎಂದು ತಾಯಿ ಪುಣ್ಯಕೋಟಿ ಗೋವನ್ನು ಪ್ರಶ್ನಿಸುತ್ತಿದ್ದರೆ ಇದನ್ನು ನೋಡುತ್ತ ಕುಳಿತ ಪ್ರೇಕ್ಷಕ ವರ್ಗದ ಬಹುತೇಕ ಮಂದಿಯ ಕಣ್ಣಾಲಿಗಳು ತೇವಗೊಂಡವು.

‘ತಬ್ಬಲಿಯು ನೀನಾದೆ ಮಗನೆ, ಹೆಬ್ಬುಲಿಯ ಬಾಯನ್ನು ಹೊಗುವೆನು, ಇಬ್ಬರಾ ಋಣ ತೀರಿತೆಂದು, ತಬ್ಬಿಕೊಂಡಿತು ಕಂದನ’ ಎಂಬ ಸಾಲುಗಳು ಮಾರ್ದನಿಸುತ್ತಿದ್ದಂತೆ ಕೆಲವರು ಕಣ್ಣೀರಾದರು.

ಇಂತಹದ್ದೊಂದು ಭಾವಾನಾತ್ಮಕ ಕ್ಷಣಕ್ಕೆ ಸೋಮವಾರ ಸಂಜೆ ಅರಮನೆ ಆವರಣದಲ್ಲಿ ನಡೆದ ಬೆಂಗಳೂರಿನ ಸೂರ್ಯ ಕಲಾವಿದರ ತಂಡದವರು ಪ್ರಸ್ತುತಪಡಿಸಿದ ‘ಕರ್ನಾಟಕ ದರ್ಶನ’ ನೃತ್ಯರೂಪಕ ಕಾರಣವಾಯಿತು.

ADVERTISEMENT

ಇದರ ಜತೆಗೆ, ಇವರು ಸಾದರಪಡಿಸಿದ ಅಮೋಘವರ್ಷ ನೃಪತುಂಗ ಚಕ್ರವರ್ತಿಯ ಪ್ರಸಂಗವಂತೂ ಮತ್ತಷ್ಟು ಭಾವನಾಲೋಕಕ್ಕೆ ಸೆಳೆಯಿತು. ದೊರೆ ನೃಪತುಂಗ ತನ್ನ ಪುತ್ರ ಕೃಷ್ಣನನ್ನು ರಾಜದ್ರೋಹ ಆಪಾದನೆಗೆ ಮರಣದಂಡನೆ ಶಿಕ್ಷೆ ನೀಡಿದ ರೂಪಕವೂ ಪ್ರೇಕ್ಷಕರನ್ನು ಕುರ್ಚಿಯಲ್ಲೇ ಕಟ್ಟಿ ಹಾಕಿತು.‌

‘ತುಂಬಿದುದು ತುಳುಕದು ನೋಡಾ. ನಂಬಿದುದು ಸಂದೇಹಿಸದು ನೋಡಾ’ ಎಂಬ ಅಕ್ಕಮಹಾದೇವಿಯ ವಚನದ ರೂಪಕ ಒಂದೈದು ನಿಮಿಷವಾದರೂ ನೋಡುಗರ ಮನಗೆದ್ದಿತು. ಆದರೆ, ಇವರ ‘ಬಾರಿಸು ಕನ್ನಡ ಡಿಂಡಿಮವ’ ಹಾಡಿನ ನೃತ್ಯವನ್ನು ಆಯೋಜಕರು ಅರ್ಧಕ್ಕೆ ಮೊಟಕುಗೊಳಿಸಿದುದು ‘ಕಡುಬು ಗಂಟಲಲ್ಲಿ ಸಿಕ್ಕಂತಾಯಿತು’

ನಂತರ, ನಡೆದ ವಿದ್ಯಾಭೂಷಣ ಅವರ ಹರಿದಾಸ ಕೀರ್ತನೆಗಳ ಗಾಯನ ‘ರಾಗತಾಳಮೇಳ’ ಭಕ್ತಿರಸವನ್ನು ಉಕ್ಕೇರಿಸಿತು. ಇವರು ಕನಕದಾಸರ ಕೀರ್ತನೆಯೊಂದಿಗೆ ಹಾಡಲು ಶುರುವಿಟ್ಟರು. ‘ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ, ಕಮ್ಮಗೋಲನ ವೈರಿಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ’ ಎಂಬ ಹಾಡು ಮನಸೂರೆಗೊಂಡಿತು. ‘ಲೇಸಾಗಿ ಸುಜನರ ಸಲಹುವ ನೆಲೆಯಾದಿ ಕೇಶವನ ದಾಸ ಕಾಣೆ ಅಮ್ಮಯ್ಯ’ ಎಂಬ ಅಂತಿಮ ಸಾಲೂ ಮನಗೆದ್ದಿತು. ಇವರು ಹಾಡಿದ ‘ಮುರಳಿಯ ನಾದವ ಕೇಳಿ ಬನ್ನಿ, ಮಧುರನಾಥನು ಮುರಳಿಯನೂದಲು, ಸುರಿವುದಾನಂದ ಜಲ...’ ಹಾಡೂ ಮನಸೂರೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.