ADVERTISEMENT

ಪಾರಂಪರಿಕ ನಡಿಗೆ, ರಂಗೋಲಿ ರಂಗು

ನವರಾತ್ರಿಯ ಎರಡನೇ ದಿನದಂದು ಪಾರಂಪರಿಕ ನಡಿಗೆ, ರಂಗೋಲಿ ಸ್ಪರ್ಧೆ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 9:58 IST
Last Updated 12 ಅಕ್ಟೋಬರ್ 2018, 9:58 IST
ಮೈಸೂರು ಅರಮನೆ ಎದುರು ಗುರುವಾರ ನಡೆದ ದಸರಾ ರಂಗೋಲಿ ಸ್ಪರ್ಧೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಉದ್ಘಾಟಿಸಿದರು
ಮೈಸೂರು ಅರಮನೆ ಎದುರು ಗುರುವಾರ ನಡೆದ ದಸರಾ ರಂಗೋಲಿ ಸ್ಪರ್ಧೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಉದ್ಘಾಟಿಸಿದರು   

ಮೈಸೂರು: ನಾಡಹಬ್ಬ ದಸರೆಯ ಎರಡನೇ ದಿನ ಬೆಳ್ಳಂಬೆಳಿಗ್ಗೆಯೇ ನಗರದಲ್ಲಿ ಪರಂಪರೆ ಹಾಗೂ ಕಲೆಯ ಸಮಾಗಮವಾಗಿತ್ತು. ಪಾರಂಪರಿಕ ಉಡುಗೆ ತೊಟ್ಟು ನಡಿಗೆ ಹೊರಟವರು ಒಂದೆಡೆಯಾದರೆ, ನೂರಾರು ವರ್ಣರಂಜಿತ ರಂಗೋಲಿ ಬಿಡಿಸಿದ ಮಹಿಳೆಯರು ಅರಮನೆಯನ್ನು ಬಣ್ಣದ ಲೋಕದಲ್ಲಿ ತೇಲಿಸಿದರು.

ಸೂರ್ಯನ ಎಳೆಕಿರಣಗಳು ಪುರಭವನದ ಮೇಲೆ ಬೀಳುತ್ತಿದ್ದಂತೆಯೇ, ಹಿರಿಯ ಜತೆಗೆ ಯುವಜನತೆ ಸಾಂಪ್ರದಾಯಿಕ ಉಡುಗೆ ತೊಟ್ಟು ಪಾರಂಪರಿಕ ನಡಿಗೆ ನಡೆಯಲು ಸಿದ್ಧರಾಗಿಬಿಟ್ಟಿದ್ದರು. ಯುವಕರು ಕಚ್ಚೆ– ಝರಿ ಪಂಚೆ ತೊಟ್ಟು ಸಂಭ್ರಮಿಸಿದರೆ, ಯುವತಿಯರು ಸೀರೆ ತೊಟ್ಟು ಬಿನ್ನಾಣ ತೋರಿದರು. ಹಿರಿಯ ನಾಗರಿಕರು ಬಿಳಿ ಪಂಚೆ, ಕುರ್ತಾ ತೊಟ್ಟು ದಾರಿ ತೋರಿದರು.

ದಸರಾ ಮಹೋತ್ಸವ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಜನ ಸಾಮಾನ್ಯರು ಹಾಗೂ ಪ್ರವಾಸಿಗರಿಗೆ ಪಾರಂಪರಿಕ ಉಡುಗೆ ಮತ್ತು ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡಲು ‘ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಂಸ್ಕೃತಿ ಮೆರೆದರು.

ADVERTISEMENT

ಪುರಭವನದಿಂದ ಹೊರಟ ಮೆರವಣಿಗೆಯು ಸ್ವಿಲ್ವರ್ ಜೂಬ್ಲಿ ಕ್ಲಾಕ್ ಟವರ್, ಫ್ರಿ ಮೇಸನ್ಸ್ ಕ್ಲಬ್, ಚಾಮರಾಜ ಒಡೆಯರ್ ವೃತ್ತ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೃಷ್ಣರಾಜ ಆಸ್ಪತ್ರೆ, ಚಾಮರಾಜೇಂದ್ರ ತಾಂತ್ರಿಕ ವಿದ್ಯಾಸಂಸ್ಥೆ, ಸರ್ಕಾರಿ ಆಯುರ್ವೇದ ಕಾಲೇಜು ವೃತ್ತದಿಂದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಬಳಿ ಕೊನೆಗೊಂಡಿತು.

ಇತಿಹಾಸ ಹಾಗೂ ಪುರಾತತ್ವ ತಜ್ಞ ಡಾ.ಎನ್.ಎಸ್.ರಂಗರಾಜು ಹಾಗೂ ಪತ್ರಕರ್ತ ಈಚನೂರು ಕುಮಾರ್ ಮಾರ್ಗಮಧ್ಯೆ ಸಿಕ್ಕ 12ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದರು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕ ಎಲ್.ನಾಗೇಂದ್ರ, ನಗರಪಾಲಿಕೆ ಸದಸ್ಯ ನಾಗರಾಜ್, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉಪನಿರ್ದೇಶಕ ನಿರ್ಮಲಾ ಮಠಮತಿ ಭಾಗವಹಿಸಿದ್ದರು.

ಮೈಸೂರಿನಲ್ಲೇ ಆಯುಕ್ತರ ಕಚೇರಿ

ಮೈಸೂರಿನಲ್ಲಿರುವ ಪುರಾತತ್ವ ಇಲಾಖೆ ಆಯುಕ್ತರ ಕಚೇರಿಯನ್ನು ಸ್ಥಳಾಂತರ ಮಾಡದಂತೆ ಕ್ರಮ ವಹಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.

ನಡಿಗೆಗೆ ಚಾಲನೆ ನೀಡಿ ಮಾತನಾಡಿ, ‘ಬೆಂಗಳೂರಿನಲ್ಲಿರುವ ಪುರಾತತ್ವ ಇಲಾಖೆ ಆಯುಕ್ತರ ಕಚೇರಿಯನ್ನು ಹೊಸಪೇಟೆಗೆ ಸ್ಥಳಾಂತರಿಸಿ ಮೈಸೂರಿನ ಕಚೇರಿಯನ್ನು ಇಲ್ಲೇ ಉಳಿಸಿಕೊಳ್ಳಲಾಗುವುದು. ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದೆ. ಸಂಶೋಧಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲಾಗುವುದು’ ಎಂದು ಹೇಳಿದರು.

ಹೆಜ್ಜೆ ಹಾಕಿದ ವಿದ್ಯಾರ್ಥಿ– ಶಿಕ್ಷಕರು

ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುನೀತಾ ಅವರು ಸಾಂಪ್ರದಾಯಿಕ ಉಡುಗೆ ತೊಟ್ಟು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನೂ ಕರೆತಂದು ಗಮನೆಸೆಳೆದರು.

ರಂಗಾಯಣ, ಶಾರದಾ ವಿಲಾಸ ಬಿ.ಇಡಿ ಕಾಲೇಜು ವಿದ್ಯಾರ್ಥಿಗಳೂ ಹೆಜ್ಜೆ ಹಾಕಿದರು. ಇವರೆಲ್ಲರಿಗೂ ಮಾರ್ಗದರ್ಶನ ಮಾಡುವಂತೆ 80 ವರ್ಷದ ಇಬ್ಬರು ಅಜ್ಜಂದಿರು ಹೆಜ್ಜೆ ಹಾಕಿ ಗೌರವ ಸ್ವೀಕರಿಸಿದರು.

ಬಣ್ಣದ ಲೋಕ ಸೃಷ್ಟಿಸಿದ ರಂಗೋಲಿ

ಮೈಸೂರು: ಅರಮನೆಯ ಆವರಣ ಬಣ್ಣದ ಲೋಕದಲ್ಲಿ ಮಿಂದಂತಿತ್ತು. ತಿಳಿಬಿಸಿಲ ತೊಟ್ಟಿಲಲ್ಲಿ ನೀರೆಯರು ಬಿಡಿಸಿದ ರಂಗೋಲಿಗಳು ಚಿತ್ತಾಕರ್ಷಕವಾಗಿ ಮಿನುಗಿದವು.

ಮಹಿಳಾ ದಸರಾ ಉಪಸಮಿತಿ ವತಿಯಿಂದ ಅರಮನೆ ಎದುರು ಆಯೋಜಿಸಿದ್ದ ‘ರಂಗೋಲಿ ಸ್ಪರ್ಧೆ’ಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ವಿಶಾಲವಾದ ಅಂಗಳದಲ್ಲಿ ನಾನಾ ಬಗೆಯ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಿ ಪ್ರವಾಸಿಗರ ಅಚ್ಚರಿಯ ಕಣ್ಣುಗಳನ್ನು ಸೆಳೆಯುವಲ್ಲಿ ಯಶಸ್ವಿಯಾದರು.

ತರಾವರಿ ರಂಗೋಲಿ:

ಅರಮನೆಗೆ ಅಂಟಿಕೊಂಡಂತೆ 15 ಅಡಿಗಳ ಅಗಲದ ವೃತ್ತಕಾರಾದಲ್ಲಿ ‘ವೈಭವ ದಸರಾ ಸ್ವಾಗತ’ ಎಂಬ ಅಕ್ಷರಗಳಲ್ಲಿ ಬರೆದ ರಂಗೋಲಿಯು ಆಕರ್ಷಣೆಯ ಕೇಂದ್ರವಾಗಿತ್ತು. ನೇರಳೆ, ಹಸಿರು, ಕೆಂಪು ವೃತ್ತಗಳಲ್ಲಿ ರಂಗೋಲಿ ಪುಡಿಯಿಂದ ಸಿಂಗರಿಸಿದ ಈ ವೃತ್ತವು ಕಣ್ಮನ ಸೆಳೆಯಿತು.

ಇದರ ಜತೆಗೆ ‘ಐ ಲವ್ ಮೈ ಇಂಡಿಯಾ’ ಎಂಬ ‘ಗಂಡಭೇರುಂಡ’ ರಂಗೋಲಿ ಅತ್ಯುತ್ತಮವಾಗಿತ್ತು. ಮಹಿಳಾ ಸಬಲೀಕರಣ ಕಟ್ಟಿಕೊಡುವ ರಂಗೋಲಿ, ಭಾರತದ ರಾಷ್ಟ್ರಧ್ವಜ ಹಾಗೂ ಏಕತೆ ಸೇರಿದಂತೆ ಇತರೆ ಬಣ್ಣ ಬಣ್ಣದ ರಂಗೋಲಿಗಳು ಪ್ರವಾಸಿಗರನ್ನು ಸೆಳೆದವು.

ಅಂಗವಿಕಲ ಮಕ್ಕಳಾದ ವರ್ಷ ಮತ್ತು ವಂದನಾ ರಂಗೋಲಿ ಬಿಡಿಸಿ ಗಮನಸೆಳೆದರು. ದಾವಣಗೆರೆಯಿಂದ ಬಂದಿದ್ದ ನೀಲಾ ಮತ್ತು ನಾಗರಾಜು ಅವರ ಮಕ್ಕಳು ತಮ್ಮ ಪೋಷಕರಿಂದಲೇ ರಂಗೋಲಿ ಬಿಡಿಸುವುದನ್ನು ಕಲಿತುಕೊಂಡು ರಂಗೋಲಿ ಬಿಡಿಸಿ ಸಂತಸಪಟ್ಟರು.

ವಿಜೇತರು:

ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಹಿರಿಯರ ವಿಭಾಗ (ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು): ರಾಮಕೃಷ್ಣನಗರದ ಸಾವಿತ್ರಿ, ಶ್ರೀರಾಮಪುರದ ಕೆ.ಎಸ್‌.ಶ್ರೀಮತಿ, ಸರಸ್ವತಿಪುರಂನ ರೂಪಶ್ರೀ. ಕಿರಿಯರ ವಿಭಾಗ: ಅಶೋಕಪುರಂ ಹರ್ಷಿತಾ, ಯಾದವಗಿರಿ ಜಯಲಕ್ಷ್ಮಿ, ಗಂಗೋತ್ರಿ ಬಡಾವಣೆ ವಂದನಾ ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.