ADVERTISEMENT

ದಿನದ ಸೂಕ್ತಿ: ಎಚ್ಚರದ ಬುದ್ಧಿಯೇ ಮದ್ದು

ಎಸ್.ಸೂರ್ಯಪ್ರಕಾಶ ಪಂಡಿತ್
Published 12 ನವೆಂಬರ್ 2020, 18:48 IST
Last Updated 12 ನವೆಂಬರ್ 2020, 18:48 IST
ಎಚ್ಚರದ ಬುದ್ಧಿಯೇ ಮದ್ದು
ಎಚ್ಚರದ ಬುದ್ಧಿಯೇ ಮದ್ದು   

ಅನಾಗತವಿಧಾತಾ ಚ ಪ್ರತ್ಯುತ್ಪನ್ನಮತಿಸ್ತಥಾ ।

ದ್ವಾವೇತೌ ಸುಖಮೇಧೇತೇ ಯದ್ಭವಿಷ್ಯೋ ವಿನಶ್ಯತಿ ।।

ಇದರ ತಾತ್ಪರ್ಯ ಹೀಗೆ:

ADVERTISEMENT

’ವಿಪತ್ತು ಬರುವ ಮೊದಲೇ ಪ್ರತಿಕ್ರಿಯೆ ಮಾಡುವವನು ಹಾಗೂ ಸಮಯಕ್ಕೆ ತಕ್ಕಂತೆ ಬುದ್ಧಿಯನ್ನು ಬಳಸುವವನು – ಇವರಿಬ್ಬರೂ ಸುಖವನ್ನು ಪಡೆಯುತ್ತಾರೆ. ಆಗುವುದು ಆಗಲಿ – ಎಂದು ಮುಂದುವರೆಯುವವನು ನಾಶವನ್ನೇ ಹೊಂದುತ್ತಾನೆ.‘

ನಮ್ಮ ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿಯೇ ಈ ಸುಭಾಷಿತವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.

ಕೋವಿಡ್ -19 ಮೊದಲಿಗೆ ಚೀನಾದೇಶದಲ್ಲಿ ಕಾಣಿಸಿಕೊಂಡಿತಷ್ಟೆ. ಈ ವ್ಯಾಧಿ ಇಡಿಯ ಜಗತ್ತನ್ನು ವ್ಯಾಪಿಸಿಕೊಳ್ಳುವುದು ಸ್ವಾಭಾವಿಕವೇ ಆಗಿತ್ತು ಕೂಡ. ಈ ವಿಪತ್ತನ್ನು ಮನಗಂಡು ಮೊದಲೇ ಯಾವುದಾದರು ದೇಶ ಎಚ್ಚೆತ್ತುಕೊಂಡಿದಿದ್ದರೆ ಆ ದೇಶಕ್ಕೆ ಇದರಿಂದ ಹೆಚ್ಚಿನ ತೊಂದರೆಗಳು ಉಂಟಾಗುತ್ತಲೇ ಇರಲಿಲ್ಲ. ಆದರೆ ಯಾವುದೇ ದೇಶ ಬಹುಶಃ ವಿಪತ್ತನ್ನು ಮೊದಲೇ ನಿರೀಕ್ಷಿಸಿ, ಅದಕ್ಕೆ ತಕ್ಕಂಥ ಪ್ರತಿಕ್ರಿಯೆಯನ್ನು ತೋರಲಿಲ್ಲ ಎನ್ನುವುದು ವಾಸ್ತವ.

ಇನ್ನು ಕೆಲವು ದೇಶಗಳು ಸಮಸ್ಯೆ ಎದುರಾದಮೇಲೆ ಅದನ್ನು ಎದುರಿಸಲು ಆವಶ್ಯಕವಾದ ಸಿದ್ಧತೆಗಳನ್ನು ವಿವೇಕದಿಂದ ಮಾಡಿಕೊಂಡಿತು. ಹೀಗಾಗಿ ಆ ದೇಶಗಳಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸಲಿಲ್ಲ. ಸಮಸ್ಯೆ ಕಾಣಿಸಿಕೊಂಡಮೇಲೂ ಯಾರು ಅದನ್ನು ಬುದ್ಧಿಯನ್ನು ಉಪಯೋಗಿಸಿ, ಸಮರ್ಥವಾಗಿ ಎದುರಿಸಲಿಲ್ಲವೋ ಆ ದೇಶಗಳು ಸಹಜವಾಗಿಯೇ ಕಷ್ಟಗಳಿಗೆ ಒಳಗಾದವು.

ಮೇಲೆ ಹೇಳಿದ ಎರಡು ವಿಧದ ವರ್ತನೆಗಳು ದೇಶಗಳಿಗೆ ಮಾತ್ರವಲ್ಲ, ಜನರಿಗೂ ಅನ್ವಯವಾಗುತ್ತದೆ. ಯಾರು ಅಪಾಯವನ್ನು ಮೊದಲೇ ಕಂಡುಕೊಂಡು ಎಚ್ಚರಿಕೆಯಿಂದ ಇದ್ದಾರೋ ಅವರು ತೊಂದರೆಗೆ ಸಿಲುಕಿಲ್ಲ. ಅಪಾಯ ಬಂದಮೇಲಾದರೂ ಎಚ್ಚರಿಕೆಯನ್ನು ತೆಗೆದುಕೊಂಡವರು ಕೂಡ ಕಷ್ಟದಿಂದ ಪಾರಾಗಿದ್ದಾರೆ. ಆದರೆ ಈ ಎರಡು ವರ್ಗಗಳಲ್ಲದೆ ಮೂರನೇ ಗುಂಪೊಂದು ಇದೆ; ಈ ಗುಂಪಿನ ಧೋರಣೆ ಹೇಗಿರುತ್ತದೆ ಎಂದರೆ, ’ಅಯ್ಯೋ! ಕೋವಿಡ್ಡೂ ಇಲ್ಲ, ಪಾವಿಡ್ಡೂ ಇಲ್ಲ. ಇಷ್ಟಕ್ಕೂ ಇದ್ದರೂ ತಾನೆ ನಾವೇನು ಮಾಡೋಕ್ಕೆ ಸಾಧ್ಯ? ಆಗೋದನ್ನು ಯಾರು ತಪ್ಪಿಸಲಾಗುತ್ತದೆ? ಹೀಗಾಗಿ ಸುಮ್ಮನೆ ಹೆದರಿಕೊಂಡು ಇರೋದಕ್ಕಿಂತಲೂ ಬಂದದ್ದು ಬರಲಿ ಎಂದು ಮುಂದೆ ಓಡಬೇಕು ಅಷ್ಟೆ’ ಎಂದು ಉಡಾಫೆಯಿಂದ ನಡೆದುಕೊಳ್ಳುವವರು. ಇಂಥವರು ಬರಮಾಡಿಕೊಳ್ಳುವ ಕಷ್ಟಗಳನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.

ವಿಪತ್ತುಗಳಿಗೆ ಹೇಗೆ ಸ್ಪಂದಿಸಬೇಕೆಂದು ಸುಭಾಷಿತ ಹೇಳುತ್ತಿರುವುದು ಕೇವಲ ಕೋವಿಡ್‌ನ ನಿರ್ವಹಣೆಗೆ ಮಾತ್ರವೇ ಒದಗುವಂಥದ್ದಲ್ಲ; ಜೀವನದಲ್ಲಿ ಎದುರಾಗಬಹುದಾದ ಎಲ್ಲ ರೀತಿಯ ವಿಪತ್ತು–ಆಪತ್ತುಗಳಿಗೂ ಸಲ್ಲುತ್ತದೆ.

ಈಗ ನಮ್ಮ ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಸುದ್ದಿ ಇದೆ; ಇದು ಸಂತೋಷದಾಯಕವೇ ಹೌದು. ಆದರೆ ಜನರು ಎಚ್ಚರಿಕೆಯಿಂದ ಇರದಿದ್ದರೆ ಇನ್ನೊಂದು ಅಲೆ ಕಾಣಿಸಿಕೊಂಡು ಹೆಚ್ಚಿನ ಅಪಾಯವನ್ನು ತಂದೊಡ್ಡಬಹುದು ಎಂಬ ಊಹೆಯನ್ನೂ ತಜ್ಞರು ಮಾಡುತ್ತಿದ್ದಾರೆ. ಈ ಸಲವಾದರೂ ನಾವು, ಎಂದರೆ ಜನರೂ ಸರ್ಕಾರವೂ, ಈ ಹಿಂದೆ ಮಾಡಿದಂಥ ತಪ್ಪುಗಳನ್ನು ಮತ್ತೊಮ್ಮೆ ಮಾಡದಿರೋಣ. ವಿಪತ್ತನ್ನು ಮೊದಲೇ ಗ್ರಹಿಸಿ, ಅದರಿಂದ ಪಾರಾಗಲು ಹೇಗೆ ಬುದ್ಧಿವಂತಿಕೆಯಿಂದ ನಡೆದುಕೊಳ್ಳಬೇಕೋ ಹಾಗೆಯೇ ನಡೆದುಕೊಳ್ಳೋಣ; ಆಪತ್ತಿನಿಂದ ಪಾರಾಗಿ ಸುಖವಾದ ಜೀವನವನ್ನು ನಡೆಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.