ಯಲ್ಲಮ್ಮ ದೇವಸ್ಥಾನದ ಬಳಿ ಇರುವ ಕುಂಕುಮ–ಭಂಡಾರ ಮಾರಾಟದ ಅಂಗಡಿಗಳು
ಚಿತ್ರಗಳು: ಇಮಾಮ್‌ಹುಸೇನ್ ಗೂಡುನವರ
ಯಲ್ಲಮ್ಮನಗುಡ್ಡದಲ್ಲಿ ಬನದ ಹುಣ್ಣಿಮೆಯಂದು(ಜ.13ರಂದು) ಆರಂಭವಾದ ಜಾತ್ರೆ ಮಹಾಶಿವರಾತ್ರಿ ಅಮಾವಾಸ್ಯೆಯವರೆಗೂ (ಫೆ.26ರವರೆಗೂ) ನಡೆಯುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಯಲ್ಲಮ್ಮನ ಸನ್ನಿಧಾನಕ್ಕೆ ಆಗಮಿಸುತ್ತಾರೆ.
ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ಯಲ್ಲಮ್ಮ ದೇವಿಗೆ ಜನರು ಚಿನ್ನ, ಬೆಳ್ಳಿ ಆಭರಣ, ಸೀರೆ, ಖಣ, ಬಳೆಗಳೊಂದಿಗೆ, ಕುಂಕುಮ–ಭಂಡಾರವನ್ನೂ ಅರ್ಪಿಸಿ ಭಕ್ತಿ ಮೆರೆಯುತ್ತಾರೆ. ಕೆಲವರು ‘ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ...’ ಎಂದು ಜಯಘೋಷ ಮೊಳಗಿಸುತ್ತ ದೇಗುಲದ ಮೇಲೆ ಭಂಡಾರ ಎರಚುತ್ತಾರೆ. ಇನ್ನೂ ಕೆಲವರು ಸಂಗೀತ ಹಚ್ಚಿ ಕುಣಿಯುತ್ತ ಭಂಡಾರದ ಓಕುಳಿಯಲ್ಲಿ ಮಿಂದೇಳುತ್ತಾರೆ. ಗುಡ್ಡಕ್ಕೆ ಬರುವ ಭಕ್ತರ ಹಣೆಗೆ ಭಂಡಾರ ಹಚ್ಚುತ್ತ, ದೇವಿ ನಾಮಸ್ಮರಣೆ ಮಾಡುತ್ತ ಜೋಗತಿಯರು ಸಂಭ್ರಮಿಸುತ್ತಾರೆ.
ಒಂದೂವರೆ ತಿಂಗಳಲ್ಲೇ ಗುಡ್ಡದಲ್ಲಿ ಸುಮಾರು 400 ಟನ್‌ಗಿಂತಲೂ ಅಧಿಕ ಪ್ರಮಾಣದ ಕುಂಕುಮ–ಭಂಡಾರ ಮಾರಾಟವಾಗುತ್ತದೆ. ಮಲಪ್ರಭೆ ತಟದಲ್ಲಿ ಭಂಡಾರದ ಹೊಳೆಯೇ ಹರಿಯುತ್ತದೆ. ಇಡೀ ಗುಡ್ಡದ ಪರಿಸರ ಹೊಂಬಣ್ಣಕ್ಕೆ ತಿರುಗಿರುತ್ತದೆ.
ರಾಯಬಾಗ ತಾಲ್ಲೂಕಿನ ಚಿಂಚಲಿಯ ಮಾಯಕ್ಕದೇವಿ, ಕೊಕಟನೂರಿನ ಯಲ್ಲಮ್ಮ ದೇವಿ, ರಾಮದುರ್ಗ ತಾಲ್ಲೂಕಿನ ಗೊಡಚಿಯ ವೀರಭದ್ರೇಶ್ವರ, ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿ ಮೊದಲಾದ ದೇವಸ್ಥಾನಗಳ ಅಂಗಳದಲ್ಲೂ ಕುಂಕುಮ–ಭಂಡಾರ ಮಾರಾಟವಾಗುತ್ತದೆ. ಆದರೆ, ಸವದತ್ತಿಯಲ್ಲೇ ಭಂಡಾರದ ಮಾರಾಟದ ಭರಾಟೆ ಬಲು ಜೋರು.
ಗುಡ್ಡವನ್ನು ಸುತ್ತು ಹಾಕಿದರೆ ಸಾಕು, ಸಾಲು ಸಾಲಾಗಿ ಕುಂಕುಮ–ಭಂಡಾರ ಮಾರಾಟದ ಅಂಗಡಿಗಳು ಕಣ್ಣಿಗೆ ಬೀಳುತ್ತವೆ. ಟೇಬಲ್‌ಗಳ ಮೇಲೆ ಒಪ್ಪವಾಗಿ ಕುಂಕುಮ–ಭಂಡಾರ ಪೇರಿಸಿ ಇಟ್ಟಿರುತ್ತಾರೆ. ನೂರಕ್ಕೂ ಅಧಿಕ ಅಂಗಡಿಯವರಿಗೆ ವರ್ಷವಿಡೀ ಕುಂಕುಮ ಭಂಡಾರ ಮಾರಾಟವೇ ಕಾಯಕ. ಉಳಿದವರು ಇವೆರಡು ಹುಣ್ಣಿಮೆಗಳಲ್ಲಷ್ಟೇ ಗುಡ್ಡಕ್ಕೆ ಬಂದು ಕುಂಕುಮ–ಭಂಡಾರ ಮಾರುತ್ತಾರೆ. ₹20 ಪ್ಯಾಕೆಟ್‌ನಿಂದ ಹಿಡಿದು ಕೆ.ಜಿ.ಗಟ್ಟಲೇ ಕುಂಕುಮ ಭಂಡಾರ ಮಾರಾಟವಾಗುವುದು ಇಲ್ಲಿನ ವೈಶಿಷ್ಟ್ಯ. ಈ ಕಾಯಕದಲ್ಲೇ ಬದುಕು ಕಟ್ಟಿಕೊಂಡವರಲ್ಲಿ ಹಿಂದೂಗಳಲ್ಲಷ್ಟೇ ಅಲ್ಲದೆ ಮುಸ್ಲಿಮರೂ ಇದ್ದಾರೆ.
‘ಐತಿಹಾಸಿಕ, ಧಾರ್ಮಿಕ ಮತ್ತು ಪೌರಾಣಿಕ ಇತಿಹಾಸವುಳ್ಳ ಯಲ್ಲಮ್ಮ ದೇವಿಗೆ ಎಲ್ಲ ಸಮುದಾಯಗಳ ಭಕ್ತರಿದ್ದಾರೆ. ಅವರು ವಿಶೇಷ ಪೂಜೆಯೊಂದಿಗೆ ಪರಡಿ ತುಂಬಿ ನೈವೇದ್ಯ ಸಮರ್ಪಿಸುತ್ತಾರೆ. ಉಡಿ ತುಂಬುತ್ತಾರೆ. ‘ಕುಂಕುಮ–ಭಂಡಾರ ಅರ್ಪಿಸಿದರೆ ದೇವಿ ಪ್ರತ್ಯಕ್ಷವಾಗಿ ಆಶೀರ್ವದಿಸುತ್ತಾಳೆ’ ಎಂಬ ನಂಬಿಕೆ ಹಲವು ದಶಕಗಳಿಂದಲೂ ಇದೆ. ಹಾಗಾಗಿ ಭಕ್ತರು ತಪ್ಪದೆ ಇದನ್ನು ಅರ್ಪಿಸುತ್ತಾರೆ’ ಎಂದು ಯಲ್ಲಮ್ಮ ದೇವಸ್ಥಾನದ ಅರ್ಚಕ ಪಿ. ರಾಜಶೇಖರಯ್ಯ ಹೇಳುತ್ತಾರೆ.
ವರ್ಷವಿಡೀ ಬಳಕೆ
‘ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ಕೇಮ್ ಎನ್ನುವ ಊರಿದೆ. ಅಲ್ಲಿ ಕುಂಕುಮ–ಭಂಡಾರ ತಯಾರಿಸುವ ದೊಡ್ಡ ದೊಡ್ಡ ಕಾರ್ಖಾನೆಗಳೇ ಇವೆ. ಅಲ್ಲಿಂದ ಪ್ರತಿವರ್ಷ ಕುಂಕುಮ–ಭಂಡಾರ ತರಿಸಿ ಮಾರುತ್ತೇವೆ. ಹಿಂದಿನಿಂದಲೂ ಇದೇ ಕೆಲಸ ಅವಲಂಬಿಸಿ ಬದುಕಿನ ಬಂಡಿ ದೂಡುತ್ತಿದ್ದೇವೆ’ ಎನ್ನುತ್ತ ಭಕ್ತರ ಕೈಚೀಲದಲ್ಲಿ ಭಂಡಾರದ ಪ್ಯಾಕೆಟ್‌ಗಳನ್ನು ಹಾಕಿದರು ವ್ಯಾಪಾರಿ ಸಂತೋಷ ಕುಂಕುಮಗಾರ.
ಗುಣಮಟ್ಟದ ಕುಂಕುಮ–ಭಂಡಾರದ ದರ ಕೆ.ಜಿ.ಗೆ ₹200 ಇದ್ದರೆ, ಸಾಮಾನ್ಯ ದರ್ಜೆಯ ಉತ್ಪನ್ನಗಳ ದರ ಕೆ.ಜಿ.ಗೆ ₹100 ಇದೆ. ಇಲ್ಲಿ ಖರೀದಿಸಿದ ಭಂಡಾರವನ್ನು ಸ್ಥಳೀಯವಾಗಿಯೂ ಧಾರ್ಮಿಕ ಕಾರ್ಯಕ್ಕೆ ಬಳಸುತ್ತಾರೆ. ನಂತರ ದೇವಸ್ಥಾನದಲ್ಲಿ ಪೂಜಿಸಿ ತಮ್ಮೂರಿಗೆ ಒಯ್ದು, ವರ್ಷವಿಡೀ ನಿತ್ಯ ಬಳಕೆ ಮಾಡುತ್ತಾರೆ. ಎರಡೂ ಹುಣ್ಣಿಮೆಯಲ್ಲಷ್ಟೇ 400 ಟನ್‌ಗಳಷ್ಟು ಕುಂಕುಮ–ಭಂಡಾರ ಗುಡ್ಡಕ್ಕೆ ಬರುತ್ತದೆ.
‘ಗುಡ್ಡದಲ್ಲಿ ವರ್ಷದ ಹನ್ನೆರಡು ಹುಣ್ಣಿಮೆಗಳಂದು ಜಾತ್ರೆ ನಡೆಯುತ್ತದೆ. ಪ್ರತೀ ದಿನ ತಪ್ಪದೇ ಭಕ್ತರು ಬರುತ್ತಾರೆ. ಹಾಗಾಗಿ ವರ್ಷವಿಡೀ ವ್ಯಾಪಾರವಿರುತ್ತದೆ. ಆದರೆ, ಈ 45 ದಿನಗಳಲ್ಲಿ ಸ್ವಲ್ಪ ಹೆಚ್ಚು’ ಎನ್ನುತ್ತಾರೆ ಮತ್ತೊಬ್ಬ ವ್ಯಾಪಾರಿ ವಿನಾಯಕ ಕುಂಕುಮಗಾರ.
ಕುಂಕುಮಕ್ಕೆ ಹೋಲಿಸಿದರೆ, ಭಂಡಾರದ ವ್ಯಾಪಾರವೇ ಹೆಚ್ಚು. ಶೇ 20ರಷ್ಟು ಕುಂಕುಮ ಮಾರಿದರೆ, ಶೇ 80ರಷ್ಟು ಭಂಡಾರ ಮಾರಾಟವಾಗುತ್ತದೆ. ಕೆಲವರು ಅಂಗಡಿಗಳಲ್ಲೇ ಇವುಗಳನ್ನು ಮಾರಿದರೆ, ಕೆಲವರು ರಸ್ತೆಬದಿಯೇ ಕುಳಿತು ವ್ಯಾಪಾರ ಮಾಡುತ್ತಾರೆ.
‘ನಮ್ಮ ಬದುಕಿಗೆ ಯಲ್ಲಮ್ಮನ ಗುಡ್ಡವೇ ಆಸರೆ. ಕುಂಕುಮ–ಭಂಡಾರ ಮಾರಾಟದಿಂದ ಬರುವ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದೇವೆ’ ಎನ್ನುತ್ತಾರೆ ವ್ಯಾಪಾರಿ ಮಂಜುನಾಥ ಮರಡ್ಡಿ.
ಯಲ್ಲಮ್ಮನಿಗೆ ಇಷ್ಟವಾದ ವಸ್ತುಗಳಲ್ಲಿ ಕುಂಕುಮ–ಭಂಡಾರವೂ ಒಂದು. ಕುಂಕುಮ ಮುತ್ತೈದೆತನದ ಸಂಕೇತವೂ ಹೌದು. ಹಾಗಾಗಿ ಗುಡ್ಡಕ್ಕೆ ಬಂದಾಗ ಅಮ್ಮನನ್ನು ಪೂಜಿಸಿ, ಊರಿಗೆ ಹೋಗುವಾಗ ಕುಂಕುಮ–ಭಂಡಾರ ಒಯ್ಯುತ್ತೇವೆ ಎನ್ನುವುದು ಮಹಿಳೆಯರ ಅಭಿಪ್ರಾಯ.
ಜನರಲ್ಲಿರುವ ಇಂಥ ನಂಬಿಕೆಯೇ ಯಲ್ಲಮ್ಮನ ಜಾತ್ರೆಯನ್ನು ಕುಂಕುಮ–ಭಂಡಾರದ ಜಾತ್ರೆ ಎನ್ನುವಂತೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.