ADVERTISEMENT

PV Web Exclusive: ಕ್ರಿಸ್‌ಮಸ್‌- ಆಡಂಬರವಿಲ್ಲ, ಆರಾಧನೆ ಅಷ್ಟೆ

ಶರತ್‌ ಹೆಗ್ಡೆ
Published 16 ಡಿಸೆಂಬರ್ 2020, 9:24 IST
Last Updated 16 ಡಿಸೆಂಬರ್ 2020, 9:24 IST
ಕ್ರಿಸ್‌ಮಸ್‌ ಆಚರಣೆಯಲ್ಲಿ ಕುಟುಂಬ–ಸಾಂದರ್ಭಿಕ ಚಿತ್ರ
ಕ್ರಿಸ್‌ಮಸ್‌ ಆಚರಣೆಯಲ್ಲಿ ಕುಟುಂಬ–ಸಾಂದರ್ಭಿಕ ಚಿತ್ರ   

ಕೋವಿಡ್‌–19 ಹಿನ್ನೆಲೆಯಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಸಂಬಂಧಿಸಿ ಸಾಕಷ್ಟು ಪೂರ್ವಸಿದ್ಧತೆಯನ್ನು ನಡೆಸಿರುವ ಸಮುದಾಯವು ಸುರಕ್ಷಿತ ನಿಯಮಾವಳಿಗಳನ್ನು ಪಾಲಿಸಲು ಮುಂದಾಗಿದೆ. ಕೊರೊನಾ ಕಾರಣದಿಂದ ಈ ವರ್ಷ ವಿವಿಧ ಸಮುದಾಯಗಳ ಹಬ್ಬಗಳ ಆಚರಣೆ ಸರಳವಾಗಿ ನಡೆಯಿತು. ಸಂಪ್ರದಾಯಕ್ಕೆ ಒತ್ತು ಕೊಟ್ಟು, ಸಾರ್ವಜನಿಕ ಆಚರಣೆಯನ್ನು ಮಿತಿಗೊಳಿಸಲಾಯಿತು. ಅದೇ ರೀತಿ ವರ್ಷಾಂತ್ಯಕ್ಕೆ ಕ್ರಿಸ್‌ಮಸ್‌ ಆಚರಣೆಯಲ್ಲೂ ಸಡಗರ, ಸಂಭ್ರಮ ಇದ್ದರೂ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

'ಹಬ್ಬ ಆಚರಿಸಿ. ಭಕ್ತಿ, ಆರಾಧನೆ ಮಾತ್ರ ಇರಲಿ; ಆಡಂಬರವಲ್ಲ. ಸೋಂಕು ಹರಡಲು ನಮ್ಮ ಆಚರಣೆಗಳು ಕಾರಣವಾಗದಿರಲಿ... '

- ಇದು ರೋಮನ್‌ ಕ್ಯಾಥೊಲಿಕ್‌ ಸಮುದಾಯದ ಆಯಾ ಧರ್ಮ ಪ್ರಾಂತ್ಯಗಳು ತಮ್ಮ ವ್ಯಾಪ್ತಿಯ ಚರ್ಚ್‌ಗಳಿಗೆ ಸ್ಪಷ್ಟಪಡಿಸಿದ ಸಂದೇಶ.

ADVERTISEMENT

ಕೊರೊನಾ ಕಾರಣದಿಂದ ಈ ವರ್ಷ ವಿವಿಧ ಸಮುದಾಯಗಳ ಹಬ್ಬಗಳ ಆಚರಣೆ ಸರಳವಾಗಿ ನಡೆಯಿತು. ಸಂಪ್ರದಾಯಕ್ಕೆ ಒತ್ತು ಕೊಟ್ಟು, ಸಾರ್ವಜನಿಕ ಆಚರಣೆಯನ್ನು ಮಿತಿಗೊಳಿಸಲಾಯಿತು. ಅದೇ ರೀತಿ ವರ್ಷಾಂತ್ಯಕ್ಕೆ ಕ್ರಿಸ್‌ಮಸ್‌ ಆಚರಣೆಯಲ್ಲೂ ಸಡಗರ, ಸಂಭ್ರಮ ಇದ್ದರೂ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೋವಿಡ್‌ ಅನ್‌ಲಾಕ್‌ ಆರಂಭವಾಗುತ್ತಿದ್ದಂತೆಯೇ ಪ್ರಾರ್ಥನಾ ಸಭೆಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿದ್ದ ಚರ್ಚ್‌ಗಳು, ಕ್ರಿಸ್‌ಮಸ್‌ ಆಚರಣೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಕಾಳಜಿ ವಹಿಸಿವೆ. ಕೇವಲ ರೋಮನ್‌ ಕ್ಯಾಥೊಲಿಕ್‌ ಅಷ್ಟೇ ಅಲ್ಲ, ಕ್ರೈಸ್ತರ ಇತರ ಪಂಗಡಗಳೂ ಇದೇ ಮಾರ್ಗಸೂಚಿಯನ್ನು ಪಾಲನೆ ಮಾಡಲು ಒಲವು ತೋರಿವೆ.

‘ಅಂತರ ಪಾಲನೆ. ಚರ್ಚ್‌ ಪ್ರವೇಶದ್ವಾರದಲ್ಲಿದೇಹದ ತಾಪಮಾನ ತಪಾಸಣೆ, ಸ್ಯಾನಿಟೈಸರ್‌ ಬಳಕೆ ಇತ್ಯಾದಿ ಈಗಾಗಲೇ ಇವೆ. ಕ್ರಿಸ್‌ಮಸ್‌ ವೇಳೆಯಲ್ಲಿ ಇದೇ ನಿಯಮಗಳನ್ನು ಪಾಲಿಸಲಾಗುವುದು. ಕೆಲವು ವಿಶೇಷ ಕಾಳಜಿಯನ್ನೂ ವಹಿಸುತ್ತಿದ್ದೇವೆ’ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾದರ್‌ ಚೇತನ್‌ ಲೋಬೋ ಹೇಳುತ್ತಾರೆ.

‘ಹೆಚ್ಚು ಕಡಿಮೆ ಎಲ್ಲ ಧರ್ಮ ಪ್ರಾಂತ್ಯಗಳೂ ಇದೇ ಮಾರ್ಗಸೂಚಿಯನ್ನು ಅನುಸರಿಸುತ್ತಿವೆ. ಸಮಾಜದ ಸ್ವಾಸ್ಥ್ಯ ಮತ್ತು ಸುರಕ್ಷತೆಯ ಕಾಳಜಿ ವಹಿಸುವುದು ಎಲ್ಲರ ಜವಾಬ್ದಾರಿಯೂ ಹೌದು’ ಎನ್ನುತ್ತಾರೆ ಅವರು.

ಕಾಳಜಿಗೆ ಕಾರಣವೇನು?

‘ಕೋವಿಡ್‌- 19ಹರಡುವಿಕೆಯ ಎರಡನೇ ಅಲೆಯ ಸಾಧ್ಯತೆಯ ಬಗ್ಗೆ ತಜ್ಞರು ನೀಡಿದ ವರದಿಯನ್ನು ಅವಲೋಕಿಸಿರುವ ಸಮುದಾಯದವರು ಅದರ ತೀವ್ರತೆಯನ್ನು ಕಡಿಮೆ ಮಾಡಲು ಮುಂಜಾಗ್ರತಾ ಕ್ರಮ ವಹಿಸುತ್ತಿದ್ದಾರೆ. ಬೆಂಗಳೂರು ಧರ್ಮ ಪ್ರಾಂತ್ಯದ ವ್ಯಾಪ್ತಿಯಲ್ಲಂತೂ ಸಂಜೆಯ ಸಾಮೂಹಿಕ ಪ್ರಾರ್ಥನೆಗಳನ್ನೇ ರದ್ದು ಮಾಡಿದ ಬಗ್ಗೆ ವರದಿಗಳಿವೆʼ ಎಂದು ಫಾ.ಚೇತನ್‌ ಹೇಳುತ್ತಾರೆ.

‘ಡಿ. 20ರ ಬಳಿಕ ಕೋವಿಡ್‌ ಎರಡನೇ ಅಲೆಯ ಸಾಧ್ಯತೆ ಬಗ್ಗೆಸ್ಥಳೀಯ ಆಡಳಿತಗಳು ಮುನ್ನೆಚ್ಚರಿಕೆ ನೀಡಿವೆ. ಅಂದಿನ ಸಂದರ್ಭವನ್ನು ನೋಡಿಕೊಂಡು ಹಬ್ಬ ಆಚರಿಸಿ ಎಂದೂ ಹೇಳಿವೆ. ಎರಡನೇ ಅಲೆ ಇರಲಿ, ಬಿಡಲಿ. ಯಾವುದೇ ರಿಸ್ಕ್‌ ತೆಗೆದುಕೊಳ್ಳುವುದು ಬೇಡ ಎಂದು ಹಬ್ಬ ಆಚರಣೆ ಸಂಬಂಧಿಸಿ ನಾವೇ ನಿರ್ಬಂಧ ವಿಧಿಸಿಕೊಂಡಿದ್ದೇವೆ’ ಎಂದು ಅವರು ವಿವರಿಸುತ್ತಾರೆ.

ಏನೇನು ಬದಲಾವಣೆ?

* ಪ್ರಾರ್ಥನೆ, ಕ್ರಿಸ್‌ಮಸ್‌ನ ಪ್ರಧಾನ ಸಂಪ್ರದಾಯ ಆಚರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

* ಡಿ.24ರ ರಾತ್ರಿಯ ಸಾಮೂಹಿಕ ಪ್ರಾರ್ಥನೆಯಲ್ಲಿ ಶೇ 50ಕ್ಕೂ ಕಡಿಮೆ ಜನರಿಗೆ ಮಾತ್ರ ಅವಕಾಶ. ಸಾಧ್ಯವಾದಷ್ಟು ಹೊರಾಂಗಣದಲ್ಲಿ (ಅವಕಾಶ ಇದ್ದರೆ) ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸುವುದು.

* 24ರಂದು ಪ್ರಾರ್ಥನೆಗೆ ಬಾರದವರು ಮರುದಿನ ಬೆಳಗಿನ ಪ್ರಾರ್ಥನೆಗೆ ಬರಬೇಕು.

* 10 ವರ್ಷಕ್ಕಿಂತ ಕಡಿಮೆ ವಯೋಮಾನದದವರು, 65 ವರ್ಷಕ್ಕಿಂತ ಮೇಲ್ಪಟ್ಟವರು ಚರ್ಚ್‌ಗೆ ಬರುವಂತಿಲ್ಲ.

* ಪಾಪನಿವೇದನೆಯಂಥ ಕಾರ್ಯಕ್ರಮವನ್ನೂ ಸಾಕಷ್ಟು ಕಡಿಮೆ ಸಂಖ್ಯೆಯಲ್ಲಿ ನಡೆಸುವುದು

* ಚರ್ಚ್‌ ಆವರಣದಲ್ಲಿ ಮನರಂಜನಾ ಆಟಗಳು, ಕೇಕ್‌ ಹರಾಜು, ಸಿಹಿತಿಂಡಿ ಮಾರಾಟ/ ವಿತರಣೆ ರದ್ದು

* ಪ್ರಾರ್ಥನೆ ಮುಗಿದ ಒಂದೆರಡು ನಿಮಿಷಗಳಲ್ಲಿ ಸಭಾಂಗಣದಿಂದ ನಿರ್ಗಮಿಸಬೇಕು

* ಮನೆಮನೆಗೆ ಹೋಗಿ ಕ್ರಿಸ್‌ಮಸ್‌ ಗೀತೆ ಹಾಡುವ ಕ್ರಿಸ್‌ಮಸ್‌ ಕ್ಯಾರೋಲ್‌ ರದ್ದು

* ಪ್ರಾರ್ಥನೆಗಳ ಆನ್‌ಲೈನ್‌ ಪ್ರಸಾರ. ಫೇಸ್‌ಬುಕ್‌, ಯೂಟ್ಯೂಬ್‌, ಕ್ರೈಸ್ತರ ಅಧ್ಯಾತ್ಮ ಟಿವಿ ವಾಹಿನಿಗಳು, ಸ್ಥಳೀಯ ಕೇಬಲ್‌ ಟಿವಿ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುವುದು. ಮನೆಯಿಂದಲೇ ಪ್ರಾರ್ಥನೆ ವೀಕ್ಷಿಸುತ್ತಾ ಪಾಲ್ಗೊಳ್ಳಬಹುದು. ಆಯಾ ಚರ್ಚ್‌ಗಳು ಸ್ಥಳೀಯ ಮಟ್ಟದಲ್ಲಿ ಇಂಥ ವ್ಯವಸ್ಥೆ ಮಾಡಿಕೊಳ್ಳಬಹುದು. ‌

* ವೈಯಕ್ತಿಕ ಮಟ್ಟದಲ್ಲಿಮನೆಯಲ್ಲಿ ಆಚರಣೆ ಸಂಬಂಧಿಸಿ ಯಾವುದೇ ನಿರ್ಬಂಧ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.