ADVERTISEMENT

ಧೈರ್ಯಂ ಸರ್ವತ್ರ ಸಾಧನಮ್

ಮಹೇಶ್ ಭಟ್ಟ ಆರ್.ಹಾರ್ಯಾಡಿ
Published 1 ಏಪ್ರಿಲ್ 2020, 20:30 IST
Last Updated 1 ಏಪ್ರಿಲ್ 2020, 20:30 IST
ಸೀತೆ ಆಂಜನೇಯ
ಸೀತೆ ಆಂಜನೇಯ   

ನಾಳೆ ಯಾರಿಗೆ ಏನಾಗುವುದು ಎಂದು ಯಾರಿಗೂ ತಿಳಿದಿಲ್ಲ. ಆದರೆ ಪ್ರತಿಯೊಬ್ಬನೂ ನಾಳೆ ಒಳಿತಾಗುತ್ತದೆಂಬ ವಿಶ್ವಾಸದಲ್ಲಿ ಬದುಕುತ್ತಿರುತ್ತಾನೆ. ಆ ತೆರನಾದ ಒಂದು ವಿಶ್ವಾಸವೇ ಮುಂದಿನ ಬದುಕಿಗೆ ಜೀವಾತು. ಒಳಿತು–ಕೆಡುಕುಗಳು ಎರಡೂ ಬಾಳಿನಲ್ಲಿ ಬಂದೇ ಬರುತ್ತವೆ. ಕಾಳಿದಾಸನ ಮೇಘದೂತದಲ್ಲಿ ಯಕ್ಷನು ಮೋಡದ ಮೂಲಕ ಯಕ್ಷಿಗೆ ಕಳುಹಿಸುವ ಸಂದೇಶದಲ್ಲಿ ‘ಕಸ್ಯಾತ್ಯಂತಂ ಸುಖಮುಪನತಂ ದುಃಖಮೇಕಾಂತತೋ ವಾ ನೀಚೈರ್ಗಚ್ಛತ್ಯುಪರಿ ಚ ದಶಾ ಚಕ್ರನೇಮಿಕ್ರಮೇಣ’ ಎಂಬ ಮಾರ್ಮಿಕವಾದ ಮಾತನ್ನು ಹೇಳುತ್ತಾನೆ. ಯಾರಿಗೆ ತಾನೇ ಅತ್ಯಂತ ಸುಖವಾಗಲಿ, ಅತ್ಯಂತ ದುಃಖವಾಗಲಿ ಉಂಟಾಗುತ್ತದೆ? ಅವುಗಳು ಚಕ್ರದ ಪಟ್ಟಿಯಂತೆ ತಿರುಗುತ್ತಲೇ ಇರುತ್ತವೆ. ಒಮ್ಮೆ ದುಃಖವಾದರೆ ಇನ್ನೊಮ್ಮೆ ಸುಖ. ಆದ್ದರಿಂದ ಸಮಾಧಾನವಾಗಿರು, ನೋಡುತ್ತಿದ್ದಂತೆ ದುಃಖದ ಕಾಲ ಕಳೆದುಬಿಡುತ್ತದೆ ಎಂದು ಅದರ ತಾತ್ಪರ್ಯ. ಧೀರರಾದವರು ಎಂತಹ ಆಪತ್ತು ಒದಗಿದಾಗಲೂ ವಿಚಲಿತರಾಗುವುದಿಲ್ಲ. ಇದನ್ನೇ ಸುಭಾಷಿತರತ್ನಭಾಂಡಾಗಾರದಲ್ಲಿ ಬರುವ ಶ್ಲೋಕವು ವಿಶದಪಡಿಸುತ್ತದೆ:

ಸ ಏವ ಧನ್ಯೋ ವಿಪದಿ ಸ್ವರೂಪಂ ಯೋ ನ ಮುಂಚತಿ |

ತ್ಯಜತ್ಯರ್ಕಕರೈಸ್ತಪ್ತಂ ಹಿಮಂ ದೇಹಂ ನ ಶೀತತಾಮ್ ||

ADVERTISEMENT

ಯಾವಾತನು ಆಪತ್ತಿನಲ್ಲಿ ತನ್ನ ಸ್ವರೂಪವನ್ನು ಬಿಡುವುದಿಲ್ಲವೋ ಅವನೇ ಧನ್ಯ. ಸೂರ್ಯನ ಕಿರಣಗಳಿಂದ ಮಂಜುಗಡ್ಡೆಯು ಕರಗಿ ತನ್ನ ಸ್ವರೂಪವನ್ನು ಕಳೆದುಕೊಳ್ಳಬಹುದು, ಆದರೆ ತನ್ನ ಶೈತ್ಯವನ್ನು ಬಿಡುವುದಿಲ್ಲ. ಹಾಗೆಯೇ ಪ್ರತಿಯೊಬ್ಬನೂ ಆಪತ್ತಿನಿಂದ ಸ್ವಲ್ಪ ವಿಚಲಿತನಾದರೂ ಪೂರ್ತಿಯಾಗಿ ಧೈರ್ಯಗುಂದದೆ ಅದರಿಂದ ಪಾರಾಗುವ ಚಿಂತನೆಯನ್ನು ನಡೆಸಬೇಕು. ಇದಕ್ಕೆ ಮೇರುಕಾವ್ಯಗಳಾದ ರಾಮಾಯಣ-ಮಹಾಭಾರತಗಳಲ್ಲಿ ಬರುವ ಪ್ರಧಾನ ಘಟನೆಗಳೇ ನಿದರ್ಶನಗಳಾಗಿವೆ. ರಾಮನಾಗಲಿ, ಪಾಂಡವರಾಗಲಿ ಬಂದೆರಗಿದ ಆಪತ್ತನ್ನು ಎದುರಿಸುತ್ತಲೇ ವಿವೇಕದಿಂದ ಯೋಚಿಸಿ ಕಾರ್ಯಪ್ರವೃತ್ತರಾಗಿ ಅದರಿಂದ ಪಾರಾದರು. ಸುಖದುಃಖಗಳಿಂದ ಕದಲದ ಮನಃಸ್ಥಿತಿಯೆನಿಸಿದ ಇಂತಹ ಧೈರ್ಯವೊಂದೇ ಎಲ್ಲ ಒಳಿತಿಗೂ ಸಾಧಕವಾಗುತ್ತದೆ.

ರಾಮಾಯಣದ ಸುಂದರಕಾಂಡದಲ್ಲಿ ಬರುವ ಘಟನೆಯೊಂದನ್ನು ನೋಡೋಣ. ಸೀತಾನ್ವೇಷಣಕ್ಕಾಗಿ ಲಂಕೆಗೆ ಆಗಮಿಸಿದ ಹನುಮಂತನು ಅಶೋಕವನಕ್ಕೆ ಬರುತ್ತಾನೆ. ಅಲ್ಲಿ ಕ್ರೂರಸ್ವಭಾವದ ರಾಕ್ಷಸಿಯರಿಂದ ಸುತ್ತುವರಿಯಲ್ಪಟ್ಟ ಸೀತಾಮಾತೆಯನ್ನು ನೋಡುತ್ತಾನೆ. ಆ ಹೊತ್ತಿಗೆ ಅಲ್ಲಿಗೆ ಬಂದ ರಾವಣನು ತನ್ನನ್ನು ವರಿಸುವಂತೆ ಆಕೆಯನ್ನು ಅನುನಯಿಸುತ್ತಾನೆ. ಆದರೆ ಅವಳು ರಾವಣನನ್ನು ನೋಡದೆ ಮಧ್ಯದಲ್ಲಿ ಒಂದು ಹುಲ್ಲುಕಡ್ಡಿಯನ್ನಿಟ್ಟುಕೊಂಡು ಮಾತನಾಡಿ ಅವನ ಇಚ್ಛೆಯನ್ನು ಮತ್ತು ಅವನನ್ನು ತಿರಸ್ಕರಿಸುತ್ತಾಳೆ. ಇದರಿಂದ ಕ್ರುದ್ಧನಾದ ರಾವಣನು ಎರಡು ತಿಂಗಳ ಗಡುವನ್ನು ನೀಡಿ, ಅಷ್ಟರಲ್ಲಿಯೂ ಒಪ್ಪದಿದ್ದರೆ ನನ್ನ ಬೆಳಗಿನ ಆಹಾರಕ್ಕಾಗಿ ಅಡುಗೆಮನೆಯಲ್ಲಿ ನಿನ್ನನ್ನು ತುಂಡರಿಸಲಾಗುತ್ತದೆ ಎಂದು ಬೆದರಿಸಿ ಹೋಗುತ್ತಾನೆ. ಅವನು ಹೊರಟುಹೋದ ಮೇಲೆ ರಾಕ್ಷಸಿಯರು ಬಗೆಬಗೆಯಾಗಿ ಅವಳನ್ನು ಒತ್ತಾಯಿಸುತ್ತಾರೆ. ಇದೆಲ್ಲದರಿಂದ ರೋಸಿ ಹೋದ ಸೀತೆಯು ಶ್ರೀರಾಮನ ಬರುವಿಕೆಯನ್ನು ಇನ್ನೂ ಕಾಣದೆ ಕಂಗಾಲಾಗಿ ಆತನನ್ನೇ ನೆನೆಯುತ್ತಾ ತನ್ನ ಜಡೆಯಿಂದ ಅಲ್ಲೇ ಇದ್ದ ಶಿಂಶಪಾವೃಕ್ಷಕ್ಕೆ ಕುತ್ತಿಗೆಯನ್ನು ಸುತ್ತಿಕೊಂಡು ಪ್ರಾಣವನ್ನು ಕಳೆದುಕೊಳ್ಳಲು ಮುಂದಾಗುತ್ತಾಳೆ. ಆ ಹೊತ್ತಿಗೆ ಶುಭಶಕುನಗಳು ಉಂಟಾಗುತ್ತವೆ. ಇದೆಲ್ಲವನ್ನು ನೋಡುತ್ತಿದ್ದ ಹನುಮಂತನು ಸೀತೆಯ ಮುಂದೆ ಬಂದು ರಾಮನ ವೃತ್ತಾಂತವನ್ನು ಹೇಳಿ ಸಾಯಲು ಹೊರಟಿದ್ದ ಅವಳನ್ನು ಹೀಗೆ ಸಮಾಧಾನಪಡಿಸುತ್ತಾನೆ:

ಕಲ್ಯಾಣೀ ಬತ ಗಾಥೇಯಂ ಲೌಕಿಕೀ ಪ್ರತಿಭಾತಿ ಮೇ |

ಏತಿ ಜೀವಂತಮಾನಂದೋ ನರಂ ವರ್ಷಶತಾದಪಿ ||

ಬದುಕಿರುವ ಮನುಷ್ಯನನ್ನು ನೂರು ವರ್ಷಗಳು ಕಳೆದ ಮೇಲಾದರೂ ಆನಂದವು ಸಮೀಪಿಸುತ್ತದೆ ಎಂಬ ಮಾತು ಸತ್ಯವಾಗಿ ಕಾಣುತ್ತದೆ ಎಂದು ಇದರರ್ಥ.

ಆದ್ದರಿಂದ ದುಃಖ ಬಂದೊಡನೆ ಆತ್ಮಹತ್ಯೆಯಂತಹ ಕ್ಷುದ್ರವಾದ ಯೋಚನೆಯನ್ನು ಮಾಡದೆ, ಕಷ್ಟಗಳಿಂದ ಜೀವಕ್ಕೊಂದು ಸಂಸ್ಕಾರವೊದಗಿ ಪಕ್ವತೆಯೊದಗುತ್ತದೆ ಎಂಬ ಚಿಂತನೆಯೊಂದಿಗೆ ಬದುಕನ್ನು ಸಾಗಿಸುವಂತಾಗಬೇಕು. ಇಂತಹ ಚಿಂತನೆಯು ರಾಮಾಯಣ-ಮಹಾಭಾರತಗಳಂತಹ ಆರ್ಷಕಾವ್ಯಗಳ ಅಧ್ಯಯನದಿಂದ ಉಂಟಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.