ADVERTISEMENT

ಮಾತಾ ಕೈವಲ್ಯಮಯಿ ಬರಹ: ಮನಸ್ಸಿಗೆ ತುಕ್ಕು ಹಿಡಿಯದಿರಲಿ

ಮಾತಾ ಕೈವಲ್ಯಮಯಿ
Published 18 ನವೆಂಬರ್ 2022, 12:04 IST
Last Updated 18 ನವೆಂಬರ್ 2022, 12:04 IST
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ   

ನಮ್ಮ ಮನಸ್ಸು ಕಬ್ಬಿಣವಿದ್ದಂತೆ ಅದನ್ನು ವಿಷಯ ಸಂಗವೆಂಬ ತೇವದ ವಾತಾವರಣದಲ್ಲಿ ಇಟ್ಟರೆ ಅದಕ್ಕೆ ತುಕ್ಕು ಹಿಡಿಯುತ್ತದೆ. ಮನಸ್ಸಿಗೆ ತುಕ್ಕು ಹಿಡಿದು ಬಿಟ್ಟರೆ ಇಡೀ ವ್ಯಕ್ತಿತ್ವವೇ ದುರ್ಬಲವಾಗುತ್ತದೆ. ಮನಸ್ಸು ಇರುವುದೇ ವಿಚಾರ ಮಾಡುವುದಕ್ಕೆ. ವಿಚಾರ ಶಕ್ತಿಯು ಕುಂಠಿತವಾದರೆ ಜೀವನವನ್ನು ಸರಿಯಾಗಿ ನಿರ್ವಹಿಸಲಾಗುವುದಿಲ್ಲ. ದೇಶದಲ್ಲಿ ಕಾರ್ಯ ನೀತಿಯನ್ನು ರೂಪಿಸುವ ಸಂಸ್ಥೆಯೇ ದುರ್ಬಲವಾಗಿದ್ದರೆ ಆ ದೇಶ ಪ್ರಬಲವಾಗಿರಲು ಸಾಧ್ಯವೇ ಇಲ್ಲ. ಹಾಗೆಯೇ ನಮ್ಮ ವ್ಯಕ್ತಿತ್ವ. ಆದ್ದರಿಂದ ಮನಸ್ಸಿಗೆ ತುಕ್ಕು ಹಿಡಿಯುದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

ಕಬ್ಬಿಣವನ್ನು ಎಲ್ಲೇ ಇಟ್ಟರೂ ತುಕ್ಕು ಹಿಡಿಯದಿರಬೇಕಾದರೆ ಅದಕ್ಕೆ ಬೇರೆ ಲೋಹವನ್ನು ಸೇರಿಸಿ ಉಕ್ಕಾಗಿ ಪರಿವರ್ತಿಸಬೇಕು. ಹಾಗೆಯೇ ನಮ್ಮ ಮನಸ್ಸಿಗೆ ವೈರಾಗ್ಯ ಮನೋಭಾವವನ್ನು ಸೇರಿಸಿ ಅದರ ಸ್ವಭಾವವನ್ನೇ ಬದಲಾಯಿಸಬೇಕು. ಇದೇ ಶೀಲ ನಿರ್ಮಾಣ. ಆಗ ಕುಸಂಸ್ಕಾರಗಳ ತುಕ್ಕು ಅದಕ್ಕೆ ಹಿಡಿಯುವುದಿಲ್ಲ.

ಶ್ರೀ ರಾಮಕೃಷ್ಣರು ಹೇಳುವಂತೆ ಹಿತ್ತಾಳೆಯ ಪಾತ್ರಗೆ ಕಲೆ ಹಿಡಿಯುತ್ತದೆ, ಯಾವಾಗಲೂ ತೊಳೆಯುತ್ತಿರಬೇಕು.ಇದೇ ಚಿನ್ನದ ಪಾತ್ರೆಯಾದರೆ ಕಲೆ ಹಿಡಿಯುವುದಿಲ್ಲ. ಹಾಗೆಯೇ, ಮನಸ್ಸು ಚಿನ್ನದ ಪಾತ್ರೆಯಾಗಿ ಪರಿವರ್ತಿತವಾದರೆ ಆಗ ನಿತ್ಯ ಸಾಧನೆಯ ಅವಶ್ಯಕತೆ ಇರುವುದಿಲ್ಲ.

ADVERTISEMENT

ಕಬ್ಬಿಣದಂತಹ ಈ ಮನಸ್ಸಿನಲ್ಲಿರುವ ತುಕ್ಕನ್ನು ಕರ್ಮಯೋಗ ಸಾಧನೆಯ ಮೂಲಕ ಉಜ್ಜಿ ಉಜ್ಜಿ ತೆಗೆಯಬೇಕು. ಮತ್ತೆ ಅದಕ್ಕೆ ತುಕ್ಕು ಹಿಡಿಯುದಂತೆ ನೋಡಿಕೊಳ್ಳಬೇಕು. ಧ್ಯಾನ, ಜಪ, ಪ್ರಾರ್ಥನೆ ಮುಂತಾದ ಆಧ್ಯಾತ್ಮಿಕ ಸಾಧನೆಗಳ ಮೂಲಕ ಅದನ್ನು ಉಕ್ಕಾಗಿ ಪರಿವರ್ತಿಸಬೇಕು. ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಅದನ್ನು ಸುಂದರ ಚಿನ್ನದ ಪಾತ್ರೆಯಾಗಿ ಮಾರ್ಪಡಿಸಬೇಕು. ಆಗ ಅದರಲ್ಲಿ ಭಗವದ್ಭಾವ ಕೆಡದೆ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.