ADVERTISEMENT

ವೇದವ್ಯಾಸರ ಶಿವಪುರಾಣಸಾರ: ಹಿಮವಂತನ ಒಪ್ಪಿಸಿದ ನಾರದ

ಭಾಗ 202

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 17 ಆಗಸ್ಟ್ 2022, 21:45 IST
Last Updated 17 ಆಗಸ್ಟ್ 2022, 21:45 IST
   

‘ಎಲೈ ಪರ್ವತರಾಜ, ನಿನ್ನ ಮಗಳು ಪಾರ್ವತಿಯನ್ನು ವರಿಸುವ ಹರನು ಅರ್ಧನಾರೀಶ್ವರನಾಗುವನು. ಇವಳು ತಪಸ್ಸಿನಿಂದ ಪರಮೇಶ್ವರನನ್ನು ಸಂತೋಷಗೊಳಿಸಿ ಅವನ ಅರ್ಧಶರೀರವನ್ನು ಪಡೆಯುವಳು. ಪಾರ್ವತಿಯು ತನ್ನ ತಪಸ್ಸಿನಿಂದ ಶಂಕರನನ್ನು ಪ್ರಸನ್ನಗೊಳಿಸಿ, ಚಿನ್ನದ ವರ್ಣದಂತೆ, ವಿದ್ಯುತ್ತಿನ ಬೆಳಕಿನಂತೆ ಹೊಳೆಯುವಳು. ಆಗ ಇವಳಿಗೆ ಗೌರೀ ಎಂಬ ಹೆಸರು ಬರುವುದು. ಎಲ್ಲಾ ದೇವತೆಗಳಿಗೂ ಇವಳು ಪೂಜ್ಯಳಾಗುವಳು. ನಿನ್ನ ಪುತ್ರಿಯನ್ನು ಹರನಿಗೆ ಹೊರತು ಇನ್ನಾರಿಗೂ ಕೊಡಕೂಡದು. ಇದು ಅತಿ ರಹಸ್ಯವಾದ ವಿಷಯ’ ಎಂದು ನಾರದ ಎಚ್ಚರಿಸಿದ.

ನಾರದನ ಮಾತನ್ನು ಕೇಳಿದ ಹಿಮವಂತ ‘ನಾರದಮುನಿಯೆ, ಮಹಾದೇವನು ವಿರಕ್ತನಾಗಿ ತಪಸ್ಸನ್ನಾಚರಿಸುತ್ತಿದ್ದಾನೆ. ದೇವತೆಗಳಿಗೂ ಅವನು ಗೋಚರಿಸುತ್ತಿಲ್ಲ ಎಂದು ಕೇಳಿದ್ದೇನೆ. ಹೀಗಿರುವಾಗ ಶಿವನನ್ನು ಹೇಗೆ ಸಂಸಾರಮಾರ್ಗಕ್ಕೆ ತಿರುಗಿಸುವುದು? ಪರಬ್ರಹ್ಮ ವಸ್ತುವಿನಲ್ಲಿ ನೆಟ್ಟ ಮನಸ್ಸುಳ್ಳ ಶಿವನನ್ನು ಒಲಿಸಿಕೊಳ್ಳುವ ವಿಷಯದಲ್ಲಿ ನನಗೆ ತುಂಬಾ ಸಂಶಯವಿದೆ. ಬ್ರಹ್ಮವಸ್ತುವನ್ನೇ ಶಿವನು ಧ್ಯಾನಮಾರ್ಗದಲ್ಲಿ ಎಲ್ಲೆಲ್ಲಿಯೂ ನೋಡುವನು. ಹೊರಗಿನ ಮಿಕ್ಕ ಯಾವ ವಸ್ತುವನ್ನು ಸಹ ಅವನು ನೋಡುವುದಿಲ್ಲ. ಹೀಗೆಂದು ಕಿನ್ನರರಿಂದ ಕೇಳಿರುವೆ. ಇನ್ನೂ ಒಂದು ವಿಷಯವಿರುವುದು. ಶಿವನು ತನ್ನ ಮೇಲೆ ಆಣೆಯಿಟ್ಟುಕೊಂಡು ಸತಿದೇವಿಯ ಮುಂದೆ ‘ದಾಕ್ಷಾಯಣಿ, ನಿನ್ನ ಹೊರತು ಇನ್ನಾರನ್ನೂ ನಾನು ಮದುವೆಯಾಗುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದಾನೆ. ಹೀಗಾಗಿ ಸತೀದೇವಿಯು ದಕ್ಷಯಾಗದಲ್ಲಿ ಮೃತಳಾದ ಮೇಲೆ ಶಿವನು ಬೇರೆ ಸ್ತ್ರೀಯನ್ನು ಮದುವೆಯಾಗುವನೇನು?’ ಎಂದು ಪ್ರಶ್ನಿಸಿದ.

ಆಗ ನಾರದ ‘ಎಲೈ ಗಿರಿರಾಜ, ಈ ವಿಷಯದಲ್ಲಿ ನೀನು ಚಿಂತಿಸಬೇಕಾದುದಿಲ್ಲ‘ ನಿನ್ನ ಮಗಳು ಪಾರ್ವತಿಯೇ ಹಿಂದಿನ ಜನ್ಮದಲ್ಲಿ ದಕ್ಷಪುತ್ರಿಯಾದ ಸತೀದೇವೀ ಆಗಿದ್ದಳು. ಅವಳು ತಂದೆ ದಕ್ಷನಿಂದ ಯಜ್ಞದ ಸಂದರ್ಭದಲ್ಲಿ ಅವಮಾನವಾಗಿ, ಕೋಪದಿಂದ ಅಲ್ಲಿಯೇ ಶರೀರವನ್ನು ತ್ಯಜಿಸಿದಳು. ಆ ಸತೀದೇವಿಯೇ ಮತ್ತೆ ನಿಮ್ಮ ಮನೆಯಲ್ಲಿ ಪಾರ್ವತಿಯಾಗಿ ಜನಿಸಿದ್ದಾಳೆ. ಇವಳು ಶಿವನ ಮಡದಿಯಾಗುವಳು. ಇದರಲ್ಲಿ ಸಂಶಯವಿಲ್ಲ’ ಎಂದು ಹಿಮವಂತನಿಗೆ ಪಾರ್ವತಿಯ ಪೂರ್ವಜನ್ಮದ ಚರಿತ್ರೆಯನ್ನು ಹಿಮವಂತನಿಗೆ ವಿಸ್ತಾರವಾಗಿ ಹೇಳಿದ. ಪಾರ್ವತೀ ಪೂರ್ವ ವೃತ್ತಾಂತವನ್ನು ಕೇಳಿ ಹಿಮವಂತನಿಗೆ ಸಮಾಧಾನವಾಯಿತು. ಆಗ ಯಾವ ಸಂಶಯವೂ ಇಲ್ಲದೆ, ಮಗಳು ಪಾರ್ವತಿಯನ್ನು ಶಿವನಿಗೆ ವಿವಾಹ ಮಾಡಿಕೊಡಲು ಒಪ್ಪಿಕೊಂಡ.

ADVERTISEMENT

ತಂದೆ ಹಿಮವಂತ ಮತ್ತು ನಾರದರ ಸಂಭಾಷಣೆಯನ್ನು ಕೇಳಿಸಿಕೊಂಡ ಪಾರ್ವತಿಯು ಶಿವನನ್ನು ಪತಿಯಾಗಿ ಪಡೆಯುವ ತನ್ನ ಸೌಭಾಗ್ಯ ನೆನೆದು ಹರ್ಷಿತಳಾದಳು. ಜೊತೆಗೆ ಸ್ತ್ರೀಸಹಜ ಲಜ್ಜೆಯಿಂದ ತಲೆಬಗ್ಗಿಸಿ ನಿಂತಳು. ಮುಗ್ದಮುಗುಳು ನಗೆಯೊಂದಿಗೆ ನಿಂತಿದ್ದ ಪಾರ್ವತಿಯ ಮುಂದಲೆಯನ್ನು ನೇವರಿಸಿದ ಹಿಮವಂತ, ಪ್ರೀತಿಯಿಂದ ತನ್ನ ಸಿಂಹಾಸನದಲ್ಲಿ ಅವಳನ್ನು ಕುಳ್ಳಿರಿಸಿಕೊಂಡ. ಆಗ ನಾರದ ಪಾರ್ವತಿಯತ್ತ ಮಂದಹಾಸ ಬೀರಿ, ಮೇನಾದೇವಿ ಮತ್ತು ಹಿಮವಂತ ದಂಪತಿಗೆ ಹೇಳಿದ, ‘ಎಲೈ ಗಿರಿರಾಜ ದಂಪತಿಗಳೇ, ಈ ಸಿಂಹಾಸನದ ಅಪೇಕ್ಷೆಯು ಪಾರ್ವತಿಗಿಲ್ಲ’ ಎಂದ.

ನಾರದನ ಉದಾರವಾದ ಮಾತುಗಳನ್ನು ಕೇಳಿ ಹಿಮವಂತ ಮತ್ತು ಮೇನಾದೇವಿಗೆ ಬಹಳ ಸಂತೋಷವಾಯಿತು. ಅಲ್ಲಿಂದ ಬೀಳ್ಕೊಂಡ ನಾರದ ಸ್ವರ್ಗಕ್ಕೆ ತೆರಳಿದರೆ, ಹಿಮವಂತ ಸಕಲ ಸಂಪತ್ತಿನಿಂದ ಕೂಡಿರುವ ತನ್ನ ಅಂತರ್ಗೃಹಕ್ಕೆ ತೆರಳಿದ ಎಂಬಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಎರಡನೆಯದಾದ ರುದ್ರಸಂಹಿತೆಯ ಮೂರನೇ ಖಂಡವಾದ ಪಾರ್ವತೀಖಂಡದಲ್ಲಿ ಎಂಟನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.