ADVERTISEMENT

ಸರಸ್ವತೀಪೂಜೆ: ಸರಸ್ವತಿ ದೇವಿ ಶಕ್ತಿಯ ರೂಪ

ಎಸ್.ಸೂರ್ಯಪ್ರಕಾಶ ಪಂಡಿತ್
Published 1 ಅಕ್ಟೋಬರ್ 2022, 19:26 IST
Last Updated 1 ಅಕ್ಟೋಬರ್ 2022, 19:26 IST
   

ಈಗ ನವರಾತ್ರಿಯ ಸಂಭ್ರಮ; ಶಕ್ತಿಯ ಆರಾಧನೆ ನಡೆಯುತ್ತಿದೆ. ಇಡಿಯ ಸೃಷ್ಟಿಗೆ ಕಾರಣವಾಗಿರುವುದೇ ‘ಶಕ್ತಿ’ ಎಂಬುದು ನಮ್ಮ ಪರಂಪರೆಯ ಒಕ್ಕಣೆ. ಶಕ್ತಿ ಇಲ್ಲದಿದ್ದರೆ ತ್ರಿಮೂರ್ತಿಗಳು ಕೂಡ ಏನೂ ಮಾಡಲಾರರು. ಹೀಗಾಗಿ ಶಕ್ತಿಗೆ ಮನ್ನಣೆ ಸಹಜ.

ಹಾಗಾದರೆ ಶಕ್ತಿ ಎಂದರೆ ಏನು? ಶಕ್ತಿಯ ಸ್ವರೂಪಗಳು ಎಂಥವು? ಶಕ್ತಿಯ ಅನುಸಂಧಾನ ಹೇಗೆ? ಶಕ್ತಿಯ ಪ್ರಯೋಜನ ನಮಗೆ ಹೇಗೆ ಒದಗುತ್ತದೆ? ಇಂಥ ಹತ್ತಾರು ಪ್ರಶ್ನೆಗಳು ಏಳುತ್ತವೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರವೋ ಎಂಬಂತೆ ನವರಾತ್ರಿಯಲ್ಲಿ ಶಕ್ತಿಯ ಆರಾಧನೆಯ ವಿಧಿ–ವಿಧಾನಗಳು ರೂಪುಗೊಂಡಿವೆ. ನವರಾತ್ರಿಯ ಮೊದಲ ಮೂರು ದಿನಗಳನ್ನು ಲಕ್ಷ್ಮಿಯ ಪೂಜೆಗೂ, ಅನಂತರದ ಮೂರು ದಿನಗಳನ್ನು ಸರಸ್ವತಿಯ ಪೂಜೆಗೂ, ಕೊನೆಯ ಮೂರು ದಿನಗಳನ್ನು ದುರ್ಗೆಯ ಪೂಜೆಗೂ ವಿನಿಯೋಗಿ ಸಲಾಗುತ್ತದೆ. ಒಂಬತ್ತು ದಿನಗಳು ನಡೆಯುವುದು ಶಕ್ರಿದೇವತೆಯ ಆರಾಧನೆಯೇ ಹೌದು. ಆದರೆ ಅವಳನ್ನು ಮೂರು ಸ್ವರೂಪಗಳಲ್ಲಿ ಪೂಜಿಸಲಾಗುತ್ತದೆ. ಈ ಮೂರು ಸ್ವರೂಪಗಳು ವಸ್ತುತಃ ಶಕ್ತಿಯ ಪ್ರಮುಖ ಧಾರೆಗಳೇ ಆಗಿವೆ.

ಲಕ್ಷ್ಮಿ, ಸರಸ್ವತಿ ಮತ್ತು ದುರ್ಗೆ – ಇವು ಮೂರು ಶಕ್ತಿಯ ಪ್ರಮುಖ ತತ್ತ್ವಗಳ ವಿಗ್ರಹರೂಪಗಳು. ನಮಗೆ ಬೇಕಾದ ಶಕ್ತಿಯ ಎಲ್ಲ ಆಯಾಮಗಳನ್ನೂ ಇವು ಪ್ರತಿನಿಧಿಸುತ್ತವೆ. ಲಕ್ಷ್ಮಿಯು ನಮಗೆ ಬೇಕಾದ ಹೊರಗಿನ, ಎಂದರೆ ವಸ್ತುರೂಪದ ಶಕ್ತಿಗೆ ಸಂಕೇತ. ಸರಸ್ವತಿಯು ನಮಗೆ ಬೇಕಾದ ಒಳಗಿನ, ಎಂದರೆ ಬೌದ್ಧಿಕ ಸ್ವರೂಪದ ಶಕ್ತಿಗೆ ಸಂಕೇತ. ದುರ್ಗೆಯು ನಮಗೆ ಬೇಕಾದ ದೈಹಿಕ ಶಕ್ತಿಗೆ ಸಂಕೇತ. ನಮ್ಮ ಜೀವನದ ಸಮೃದ್ಧಿಗೆ ಬೇಕಾದ ಎಲ್ಲ ವಿಧದ ಶಕ್ತಿಗಳನ್ನೂ ವಿದ್ಯೆಗಳನ್ನೂ ವಸ್ತುಗಳನ್ನೂ ಈ ಶಕ್ತಿಗಳು ಸಂಕೇತಿಸುತ್ತವೆ.

ADVERTISEMENT

ಮೂರು ದಿನಗಳ ಲಕ್ಷ್ಮಿಯ ಪೂಜೆಯ ಬಳಿಕ ಬರುವುದೇ ಸರಸ್ವತಿ ಪೂಜೆ. ಇಂದು ಸರಸ್ವತಿ ಪೂಜೆಗೆಂದೇ ಮೀಸಲಾಗಿರುವ ದಿನ.

ಸರಸ್ವತಿಯ ಕಲ್ಪನೆಯ ಬಗ್ಗೆ ನಮಗೆ ತಿಳಿದೇ ಇದೆ. ವಿದ್ಯೆಗೆ ಆಧಿದೇವತೆ ಸರಸ್ವತಿ. ನಮ್ಮ ಪರಂಪರೆ ವಿದ್ಯೆಯನ್ನೂ ಶಕ್ತಿಯನ್ನಾಗಿಯೇ ಕಂಡಿರುವುದು ವಿಶೇಷ. ಅರಿವನ್ನು ಶಕ್ತಿ ಎಂದು ಸಮೀಕರಿಸುವುದು ಆಧುನಿಕವಾದುದು ಎಂದು ನಾವು ತಿಳಿದುಕೊಳ್ಳುತ್ತೇವೆ. ಆದರೆ ಅರಿವಿಗಿರುವ ಶಕ್ತಿಯನ್ನು ಗಮನಿಸಿ, ಗುರುತಿಸಿ ಅದನ್ನು ಸಾವಿರಾರು ವರ್ಷಗಳಿಂದಲೂ ನಮ್ಮ ಪರಂಪರೆ ಆರಾಧಿಸಿಕೊಂಡು ಬರುತ್ತಿದೆ.

ಇಂದು ಸರಸ್ವತಿಯನ್ನು, ಎಂದರೆ ವಿದ್ಯೆಯನ್ನು ಪುಸ್ತಕಗಳ ರೂಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಈಗ ಪುಸ್ತಕಗಳ ಸ್ಥಾನದಲ್ಲಿ ಕಂಪ್ಯೂಟರ್‌ಗಳು, ಟ್ಯಾಬ್‌ಗಳು, ಕಿಂಡಲ್‌ಗಳು ಪ್ರತಿಷ್ಠಾಪನೆಗೊಂಡರೂ ಅದೇನೂ ಅನೌಚಿತ್ಯವಾಗದು. ನಮಗೆ ವಿದ್ಯೆಯನ್ನು, ಶಿಕ್ಷಣವನ್ನು ಒದಗಿಸುವ ಎಲ್ಲ ವಸ್ತು–ಸಲಕರಣೆ–ಯಂತ್ರ–ವ್ಯಕ್ತಿಗಳೂ ಸರಸ್ವತಿಯ ಸ್ವರೂಪಗಳೇ ಹೌದು. ವಿದ್ಯೆ ಎಂಬುದು ನಮ್ಮಲ್ಲಿರುವ ಅಜ್ಞಾನವನ್ನು ದೂರಮಾಡುತ್ತದೆ. ಆ ವಿದ್ಯೆಯ ಉಪಯೋಗದ ವಿಧಾನವನ್ನು ತಿಳಿಸಿಕೊಡುವ ಅರಿವಿನ ಕ್ರಮವೇ ‘ಶಿಕ್ಷಣ’ ಎಂದಾಗುತ್ತದೆ.

ಆಧುನಿಕ ಮನುಷ್ಯನು ತನ್ನ ಸುತ್ತಮುತ್ತಲಿನ ಹಲವು ವಿವರಗಳನ್ನು ಜ್ಞಾನ ಎಂದು ತಿಳಿದುಕೊಂಡು, ಅವುಗಳನ್ನು ಆರಾಧಿಸುತ್ತಿದ್ದಾನೆ, ಪೋಷಿಸುತ್ತಿದ್ದಾನೆ. ಆದರೆ ಅವು ನಿಜವಾದ ಜ್ಞಾನ ಹೌದೋ ಅಲ್ಲವೋ ಎಂಬ ವಿವೇಕ ಅವನಲ್ಲಿ ಮೂಡಬೇಕಾಗಿದೆ. ಅಂಥದೊಂದು ವಿವೇಕ ನಮ್ಮಲ್ಲಿ ಮೂಡಲಿ – ಎಂಬ ಪ್ರಾರ್ಥನೆ ಯೊಂದಿಗೆ ಇಂದು ಸರಸ್ವತಿಯ ಆರಾಧನೆಯನ್ನು ನಾವೆಲ್ಲರೂ ಮಾಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.