ADVERTISEMENT

ಅಪಜಯವನ್ನು ಜಯದ ಸಂಕೇತವನ್ನಾಗಿ ಮಾಡಿದ ದಿನ ಗುಡ್‌ಫ್ರೈಡೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 5:07 IST
Last Updated 2 ಏಪ್ರಿಲ್ 2021, 5:07 IST
ಧರ್ಮಗುರು ಸ್ಟೀವನ್ ಡೇಸಾ
ಧರ್ಮಗುರು ಸ್ಟೀವನ್ ಡೇಸಾ   

ಕಳ್ಳರು, ಸುಳ್ಳರು, ಮೋಸಗಾರರು, ವಂಚಕರನ್ನು ಶಿಲುಬೆಗೆ ಏರಿಸಲಾಗುತ್ತಿತ್ತು. ಶಿಲುಬೆ ಅಪಜಯದ ಸಂಕೇತವಾಗಿತ್ತು. ಅವಮಾನದ, ನಾಚಿಕೆಯ ಸಂಕೇತವಾಗಿತ್ತು. ತನ್ನ ಜೀವವನ್ನು ನೀಡುವ ಮೂಲಕ ಅದನ್ನು ಜಯದ ಸಂಕೇತವನ್ನಾಗಿ ಪ್ರಭು ಏಸುಕ್ರಿಸ್ತರು ಮಾಡಿದ ದಿನವೇ ‘ಗುಡ್‌ಫ್ರೈಡೆ’.

ಪ್ರಭುವಿನ ಪಾಡು, ಯಾತನೆ, ಮರಣವನ್ನು ಧ್ಯಾನಿಸುವ ದಿನ. ಕಲ್ವಾರಿ ಬೆಟ್ಟದ ಮೇಲೆ ಅವರನ್ನು ಶಿಲುಬೆಗೆ ಏರಿಸಲಾಯಿತು. ಶುಕ್ರವಾರ ಶಿಲುಬೆಗೆ ಏರಿದರೂ ಭಾನುವಾರ ಪುನರುತ್ಥಾನಗೊಂಡು ಅದನ್ನು ವಿಜಯದ ಸಂಕೇತವನ್ನಾಗಿ ಪ್ರಭು ಯೇಸುಕ್ರಿಸ್ತರು ಮಾಡಿದರು. ಶಿಲುಬೆ ಇಲ್ಲದೇ ಪುನರುತ್ಥಾನ ಇಲ್ಲ ಅಂದರೆ ಕಷ್ಟ ಇಲ್ಲದೇ ಸುಖವಿಲ್ಲ. ಜಯದ ಸಂಕೇತ, ಶುಭದ ಸಂಕೇತವಾಗಿರುವುದಕ್ಕಾಗಿಯೇ ಅದನ್ನು ಶುಭ ಶುಕ್ರವಾರ ಎಂದು ಕರೆಯಲಾಗುತ್ತದೆ.

40 ದಿನಗಳ ಕಾಲ ಉಪವಾಸ ಮಾಡಲಾಗುತ್ತದೆ. ಕೆಲವರು ಒಂದೇ ಹೊತ್ತು ಊಟ ಮಾಡಿದರೆ, ಕೆಲವರು ಒಂದು ಹೊತ್ತು ಊಟ ತ್ಯಜಿಸಿ ಉಪವಾಸ ಮಾಡುತ್ತಾರೆ. ಶುಭ ಶುಕ್ರವಾರದ ದಿನ ಉಪವಾಸದ ಪರಾಕಾಷ್ಠೆ
ಯಾಗಿರುತ್ತದೆ. ಸೂರ್ಯೋದಯದಿಂದ ಸೂರ್ಯಾಸ್ತ ಆಗುವವರೆಗೆ ಯಾವುದೇ ಆಹಾರ ಸೇವಿಸುವುದಿಲ್ಲ. ಇದು ಆಹಾರ ಬಿಟ್ಟು ಇರುವ ಉಪವಾಸ ಮಾತ್ರವಲ್ಲ, ನಮ್ಮಲ್ಲಿರುವ ಕೆಟ್ಟ ಅಂಶಗಳನ್ನು ಬಿಡುವ ಉಪವಾಸ, ದ್ವೇಷ, ಹಗೆತನ, ಕೋಪ, ವಂಚನೆಗಳನ್ನು ತ್ಯಜಿಸುವ ಉಪವಾಸ. ದೇಶಕ್ಕಾಗಿ, ವಿಶ್ವಕ್ಕಾಗಿ, ಎಲ್ಲ ಜನರಿಗಾಗಿ, ಎಲ್ಲ ಜೀವಗಳಿಗಾಗಿ ವಿಶೇಷ ಪ್ರಾರ್ಥನೆ ಮಾಡಲಾಗುತ್ತದೆ.

ADVERTISEMENT

ಇದು ಸಂಭ್ರಮದ ಹಬ್ಬವಲ್ಲ. ಇದಾಗಿ ಮೂರನೇ ದಿನ ಪುನರುತ್ಥಾನ (ಈಸ್ಟರ್‌) ದಿನ ಸಂಭ್ರಮದ ದಿನ. ಶುಭ ಶುಕ್ರವಾರದ ದಿನ ಶಿಲುಬೆಯ ಹಾದಿಯನ್ನು ಪುನರಪಿ ತೋರಿಸುತ್ತೇವೆ. ಹಿಂದೆ ಮೈದಾನಗಳಲ್ಲಿ ಸಾರ್ವಜನಿಕವಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೆವು. ಈಗ ಕೊರೊನಾ ಕಾರಣದಿಂದಾಗಿ ಚರ್ಚ್‌ನಲ್ಲೇ ಮುಗಿಸುತ್ತಿದ್ದೇವೆ.

(ಲೇಖಕರು: ಸಂತ ಥೋಮಸರ ದೇವಾಲಯದ ಗುರುಗಳು)

ನಿರೂಪಣೆ: ಬಾಲಕೃಷ್ಣ ಪಿ.ಎಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.