ADVERTISEMENT

ಮನವನಾಳುವ ಚಂದಿರನೇ ನೂರ್ಕಾಲ ಬಾಳು

ರಶ್ಮಿ ಕಾಸರಗೋಡು
Published 17 ಅಕ್ಟೋಬರ್ 2019, 15:58 IST
Last Updated 17 ಅಕ್ಟೋಬರ್ 2019, 15:58 IST
   

ಇಡೀ ದಿನ ಉಪವಾಸ ವ್ರತ ಕೈಗೊಂಡು ಕೈಗೆ ಮದರಂಗಿ ಹಚ್ಚಿ ಒಪ್ಪವಾಗಿ ಶೃಂಗರಿಸಿ ಆರತಿ ತಟ್ಟೆಯೊಂದಿಗೆ ಚಂದ್ರನ ಬರವಿಗಾಗಿ ಕಾಯುವ ಪತ್ನಿ. ಚಂದಿರ ಮೂಡಿ ಬರುತ್ತಿದ್ದಂತೆ ಜರಡಿಯಲ್ಲಿ ಚಂದಿರನನ್ನು ನೋಡಿ ಆಮೇಲೆ ಪತಿಯ ಮುಖ ನೋಡುತ್ತಾಳೆ. ಚಂದ್ರ ದರ್ಶನ ಆದ ನಂತರ ಪತಿಯ ಕೈಯಿಂದಲೇ ನೀರು ಸೇವಿಸಿ ವ್ರತ ಕೊನೆಗೊಳಿಸುತ್ತಾಳೆ. ಗಂಡನ ದೀರ್ಘಾಯುಷ್ಯಕ್ಕಾಗಿ ಉತ್ತರ ಭಾರತದಲ್ಲಿ ಆಚರಣೆ ಮಾಡುವ ಹಬ್ಬವೇ ಕರ್ವಾ ಚೌಥ್.

ಉತ್ತರ ಭಾರತದಲ್ಲಿಇಂದುಕರ್ವಾ ಚೌಥ್ ಆಚರಿಸಲ್ಪಡುತ್ತಿದ್ದು, ಇದುದಕ್ಷಿಣ ಭಾರತದಲ್ಲಿಯೂ ಜನಪ್ರಿಯತೆ ಪಡೆದುಕೊಂಡಿದೆ.

ಏನಿದರ ವಿಶೇಷ?

ADVERTISEMENT

ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಚಂದ್ರಸೌರ ಪಂಚಾಂಗದ ಪ್ರಕಾರ ಇಂದು ಕಾರ್ತಿಕ ಮಾಸ ಕೃಷ್ಣ ಪಕ್ಷದ ಚತುರ್ಥಿ. ಅಂದರೆ ಹುಣ್ಣಿಮೆಯ ನಂತರದ ನಾಲ್ಕನೇ ದಿನ ಕರ್ವಾಚೌಥ್. ಕರ್ವಾ ಎಂದರೆ ಮಣ್ಣಿನ ಪಾತ್ರೆ. ಚೌಥ್ ಅಂದರೆ ಹಿಂದಿಯಲ್ಲಿ ನಾಲ್ಕನೆಯದ್ದು.ಗೋಧಿ ಬೆಳೆ ಕೊಯ್ಯುವ ಕಾಲದಲ್ಲಿ ಹಿಂದೂಗಳು ಆಚರಿಸುವ ಹಬ್ಬ ಇದಾಗಿದೆ. ಮಣ್ಣಿನ ಪಾತ್ರೆಯಲ್ಲಿ ಗೋಧಿಯನ್ನು ತುಂಬಿಸಿಡಲಾಗುತ್ತಿದ್ದು, ಗೋಧಿ ಬೆಳೆಯುವ ಪ್ರದೇಶಗಳಲ್ಲಿ ಉತ್ತಮ ಬೆಳೆ ಸಿಗಲಿ ಎಂದು ಪ್ರಾರ್ಥಿಸುವ ದಿನವೂ ಇದಾಗಿದೆ.

ಮಹಿಳೆಯರ ನಡುವಿನ ಗೆಳೆತನದ ಪ್ರತೀತಿಯೂ ಈ ಹಬ್ಬಕ್ಕೆ ಇದೆ. ಹೊಸತಾಗಿ ಮದುವೆಯಾದ ಹುಡುಗಿಗೆ ಗಂಡನ ಊರು ಕೂಡಾ ಹೊಸತು. ಹೀಗಿರುವಾಗ ಅದೇ ಊರಿನ ಇನ್ನೊಂದು ಮಹಿಳೆಗ ಈ ಹುಡುಗಿ ಜತೆ ಸ್ನೇಹ ಬೆಳೆಸಲು ಈ ಹಬ್ಬ ಸಹಾಯ ಮಾಡುತ್ತದೆ. ಹೀಗೆ ಸ್ನೇಹ ಬೆಳೆಸುವುದನ್ನು ಕಂಗನ್ ಸಹೇಲಿ ಅಂತಾರೆ. (ಕಂಗನ್ - ಬಳೆ, ಸಹೇಲಿ- ಸ್ನೇಹಿತೆ), ಸಾಮಾನ್ಯವಾಗಿ ಸಮಾನ ವಯಸ್ಸಿನ ಹೆಣ್ಣು ಮಕ್ಕಳು ಈ ರೀತಿ ಕಂಗನ್ ಸಹೇಲಿಯಾಗಿ ಸ್ನೇಹ ಬೆಳೆಸುತ್ತಾರೆ. ಕರ್ವಾ ಚೌಥ್‌ಗೆ ಮುನ್ನ ಈ ಮಹಿಳೆಯರು ಮಣ್ಣಿನ ಚಿಕ್ಕ ಪಾತ್ರೆಗಳನ್ನು ಖರೀದಿಸಿ ಅದರ ಮೇಲೆ ಪೇಟಿಂಗ್ ಮಾಡುತ್ತಾರೆ. ಆ ಪಾತ್ರೆಯೊಳಗೆ ಬಳೆ, ರಿಬ್ಬನ್, ಸಿಹಿ ತಿಂಡಿ, ಮೇಕಪ್ ವಸ್ತುಗಳು ಮತ್ತು ಬಟ್ಟೆಯನ್ನು ಇಡುತ್ತಾರೆ. ಹಬ್ಬದ ದಿನ ಗೆಳತಿಯ ಮನೆಗೆ ಹೋಗಿ ಈ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಆಚರಣೆ ಹೀಗಿರುತ್ತದೆ
ಮುಂಜಾನೆಯಿಂದಲೇ ಉಪವಾಸ ಆರಂಭವಾಗುತ್ತದೆ. ಉಪವಾಸ ಮಾಡುವ ಹೆಂಗೆಳೆಯರು ಕೈಗೆ ಮದರಂಗಿ ಹಚ್ಚಿ ಸಾಂಪ್ರದಾಯಿಕ ಉಡುಗೆ ಅಥವಾ ಲೆಹೆಂಗಾ ತೊಟ್ಟು ಶೃಂಗರಿಸಿಕೊಂಡಿರುತ್ತಾರೆ. ಸಾಮಾನ್ಯವಾಗಿ ಇವರು ಈ ದಿನ ಮನೆ ಕೆಲಸ ಮಾಡುವುದಿಲ್ಲ. ಸಂಜೆ ಹೊತ್ತಿಗೆ ಎಲ್ಲ ಮಹಿಳೆಯರು ಒಂದೆಡೆ ಸೇರಿ ಕರ್ವಾ ಚೌಥ್‌ನ ತಾಲಿ (ಪೂಜೆಯ ಬಟ್ಟಲು) ಇಟ್ಟು ಕರ್ವಾ ಚೌಥ್ ಸಂಬಂಧಿಸಿದ ಪುರಾಣ ಕತೆಗಳನ್ನು ಆಲಿಸುತ್ತಾರೆ. ಹಿರಿಯ ಮಹಿಳೆಯೊಬ್ಬರು ಈ ಕತೆಗಳನ್ನು ಹೇಳುತ್ತಾರೆ. ಕರ್ವಾ ಚೌಥ್ ಹಾಡುಗಳನ್ನು ಹಾಡುತ್ತಾ ಇವರು ಪೂಜೆ ಬಟ್ಟಲಿನ ವಿನಿಮಯ ಮಾಡುತ್ತಾರೆ. ಈ ರೀತಿಯ ಆಚರಣೆಗಳು ಬೇರೆಬೇರೆ ಪ್ರದೇಶಗಳಲ್ಲಿ ಭಿನ್ನವಾಗಿರುತ್ತವೆ.



ಆಚರಣೆಗೆ ರೊಮ್ಯಾಂಟಿಕ್ ಟಚ್

ಕಾಲ ಬದಲಾಗುತ್ತಿದ್ದಂತೆ ಆಚರಣೆಯ ರೀತಿಗಳೂ ಬದಲಾದವು. ಭಾರತದ ವಾಯವ್ಯ ರಾಜ್ಯಗಳಲ್ಲಿ ಕರ್ವಾ ಚೌಥ್ ಗಂಡ-ಹೆಂಡತಿಯ ಪ್ರೀತಿಯನ್ನು ಸಾರುವ ಹಬ್ಬವಾಗಿದೆ. ಗಂಡನ ಶ್ರೇಯಸ್ಸಿಗಾಗಿ ಪತ್ನಿ ದಿನವಿಡೀ ಉಪವಾಸ ಆಚರಿಸುತ್ತಾಳೆ. ರಾತ್ರಿ ಚಂದ್ರನನ್ನು ಜರಡಿ ಮೂಲಕ ನೋಡಿದ ನಂತರ ಗಂಡನ ಮುಖ ನೋಡುತ್ತಾಳೆ. ಆಮೇಲೆ ಗಂಡ ನೀರು ಕುಡಿಸುವ ಮೂಲಕ ಉಪವಾಸ ಮುಗಿಯುತ್ತದೆ.

ಈಗ ಮುತ್ತೈದೆಯರು ಮಾತ್ರವಲ್ಲ ಮದುವೆಯಾಗದ ಹೆಣ್ಣು ಮಕ್ಕಳು ಪ್ರಿಯಕರನಿಗೆ ಅಥವಾ ಮದುವೆಯಾಗಲಿರುವ ಹುಡುಗನಿಗಾಗಿ ವ್ರತ ಆಚರಿಸುತ್ತಾರೆ. ಬಾಲಿವುಡ್ ಸಿನಿಮಾಗಳು ಕರ್ವಾ ಚೌಥ್ ವ್ರತಕ್ಕೆ ರೊಮ್ಯಾಂಟಿಕ್ ಟಚ್ ನೀಡಿದ್ದಾಗಿನಿಂದ ಈ ವ್ರತ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿತು.

ನಂಬಿಕೆಯೊಂದಿಗೆ ನಂಟು

ವೀರಾವತಿಯ ಕತೆ: ವೀರಾವತಿಯೆಂಬ ರಾಣಿಗೆ ಏಳು ಜನ ಸಹೋದರರು. ಮದುವೆಯಾಗಿ ಗಂಡನ ಮನೆಗೆ ಹೋದ ವೀರಾವತಿ ಅಲ್ಲಿ ಕರ್ವಾ ಚೌಥ್ ವ್ರತ ಕೈಗೊಂಡಿದ್ದಳು. ಇಡೀ ದಿನ ಆಕೆ ಉಪವಾಸವಿದ್ದು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ತೀರಾ ಅಸ್ವಸ್ಥಳಾಗಿ ಬಿಟ್ಟಳು. ಸಹೋದರಿಯ ಪರಿಸ್ಥಿತಿಯನ್ನು ನೋಡಿ ಮರುಗಿದ ಸಹೋದರರು ಆಲದ ಮರದನಡುವೆ ಕನ್ನಡಿ ಇಟ್ಟು ಚಂದ್ರ ಮೂಡಿ ಬಂದಂತೆ ಮಾಡಿದರು. ಚಂದ್ರನನ್ನು ನೋಡಿದೆ ಎಂದು ವೀರಾವತಿ ನನ್ನ ಉಪವಾಸ ಮುಕ್ತಾಯಗೊಳಿಸಿದಳು.

ಮೊದಲ ತುತ್ತು ಬಾಯಿಗಿಡುತ್ತಿದ್ದಂತೆ ಆಕೆಗೆ ಸೀನು ಬಂತು. ಎರಡನೇ ತುತ್ತಿನಲ್ಲಿ ಕೂದಲು ಸಿಕ್ಕಿತು. ಮೂರನೇ ತುತ್ತು ಉಣ್ಣುವ ಹೊತ್ತಿಗೆ ಪತಿ ಮಹಾರಾಜ ಸಾವಿನ ಸುದ್ದಿ ಬಂತು.

ಗಂಡನನ್ನು ಕಳೆದುಕೊಂಡ ವೀರಾವತಿ ಇಡೀ ರಾತ್ರಿ ಅಳುತ್ತಿದ್ದಾಗ ಶಕ್ತಿ ದೇವತೆ ಪ್ರತ್ಯಕ್ಷಳಾದಳು. ವೀರಾವತಿ ತನ್ನ ಗಂಡನನ್ನು ಕಳೆದುಕೊಂಡ ದುಃಖವನ್ನು ಹೇಳಿದಾಗ ದೇವತೆ ನಿನ್ನ ಸಹೋದರರು ಮೋಸ ಮಾಡಿದ್ದಾರೆ. ಹಾಗಾಗಿ ಇನ್ನೊಂದು ಬಾರಿ ನಿಷ್ಠೆಯಿಂದ ವ್ರತಾಚರಣೆ ಮಾಡುವಂತೆ ಹೇಳುತ್ತಾಳೆ. ವೀರಾವತಿ ಮತ್ತೊಂದು ಬಾರಿ ಕರ್ವಾ ಚೌಥ್ ವ್ರತಾಚರಣೆ ಮಾಡಿದಾಗ ಗಂಡ ಮತ್ತೆ ಬದುಕಿಬರುತ್ತಾನೆ.

ಮಹಾಭಾರತ: ಒಂದಿನ ಅರ್ಜುನ ದ್ರೌಪದಿಯನ್ನು ಬಿಟ್ಟು ನೀಲಗಿರಿ ಪರ್ವತಕ್ಕೆ ಹೋಗಿದ್ದನು. ಅರ್ಜುನನ ಅನುಪಸ್ಥಿತಿಯಲ್ಲಿ ಪಾಂಡವರಿಗೆ ಹಲವಾರು ಕಷ್ಟಗಳು ಎದುರಾದವು. ಆಗ ದ್ರೌಪದಿಯು ಕೃಷ್ಣ ಮೊರೆ ಹೋದಾಗ ಕರ್ವಾ ಚೌಥ್ ವ್ರತಾಚರಣೆ ಮಾಡುವಂತೆ ಕೃಷ್ಣ ಸಲಹೆ ನೀಡುತ್ತಾನೆ. ದ್ರೌಪದಿಕರ್ವಾ ಚೌಥ್ ವ್ರತ ಕೈಗೊಂಡಾಗ ಪಾಂಡವರ ಸಮಸ್ಯೆಗಳೂ ಬಗೆಹರಿಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.