ADVERTISEMENT

ನೈತಿಕ ನಿಷ್ಠೆ, ಸಾಮಾಜಿಕ ಕಳಕಳಿ ಅತ್ಯಗತ್ಯ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 11:04 IST
Last Updated 26 ಆಗಸ್ಟ್ 2022, 11:04 IST
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ   

ನಮ್ಮ ವರ್ತನೆಯಲ್ಲಿ ಶಿಸ್ತು, ನಿಯಮಗಳು ಇರಬೇಕಾಗುತ್ತದೆ. ಹಾಗಿಲ್ಲದಿದ್ದರೆ ನಾವು ವಿಶ್ವಾಸಕ್ಕೆ ಅನರ್ಹರಾಗುತ್ತೇವೆ. ನಮ್ಮ ಮೇಲಿನ ಶ್ರದ್ಧೆಯನ್ನೂ ಕಳೆದುಕೊಳ್ಳುತ್ತೇವೆ. ಪರಸ್ಪರ ಶ್ರದ್ಧೆ ವಿಶ್ವಾಸಗಳು ಹೊರಟು ಹೋಯಿತೆಂದರೆ ಸಾಮಾಜಿಕ ಜೀವನವೇ ಅಸ್ಥಿರವಾಗುತ್ತದೆ. ಎಲ್ಲರ ಜೀವನವೂ ದುಃಖಮಯವಾಗುತ್ತದೆ. ಈ ರೀತಿ ನಮ್ಮ ಜೀವನವನ್ನು ನಿಯಮಬದ್ಧವನ್ನಾಗಿಸುವುದೇ, ಶಿಸ್ತುಗೊಳಿಸುವುದೇ ನೈತಿಕತೆ, ಪ್ರಾಮಾಣಿಕವಾಗಿರುವುದು, ಸತ್ಯವನ್ನೇ ನುಡಿಯುವುದು, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು, ಇತರರ ಆಸ್ತಿಯನ್ನು ನೇರವಾಗಿಯೋ, ಪರೋಕ್ಷವಾಗಿಯೋ ಕದಿಯದಿರುವುದು, ಇತರರನ್ನು ಯಾವುದೇ ರೀತಿಯಲ್ಲಿಯೂ ಹಿಂಸಿಸದಿರುವುದು, ಇಂದ್ರಿಯನಿಗ್ರಹ...ಇತ್ಯಾದಿ ನೈತಿಕ ಗುಣಗಳೆಲ್ಲವೂ ನಾವು ಸಮಾಜದಲ್ಲಿ ಶಾಂತಿಯಿಂದ, ನೆಮ್ಮದಿಯಿಂದ ಸಹಬಾಳ್ವೆ ನಡೆಸುವುದಕ್ಕೆ ಅತ್ಯಂತ ಅವಶ್ಯಕ ಎಂಬುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ.

ನೈತಿಕತೆ ಕೇವಲ ಬಾಹ್ಯ ಆಚರಣೆಯಾದರೆ ಪ್ರಯೋಜನವಿಲ್ಲ, ಅದು ಆಂತರಿಕ ಭಾಗವಾಗಬೇಕು. ನಾವು ನೈತಿಕವಾಗಿ ನಡೆಯುವುದು ಮಾತ್ರವಲ್ಲ ನೈತಿಕವಾಗಿರಬೇಕು. ಇತರರನ್ನು ಹಿಂಸಿಸಲು ಇರುವುದಕ್ಕಿಂತ ಇತರನ್ನು ದ್ವೇಷಿಸದಿರುವುದೇ ಮುಖ್ಯ. ಸುಳ್ಳು ಹೇಳದೇ ಇರುವುದಕ್ಕಿಂತ ಆಂತರಿಕ ಸತ್ಯನಿಷ್ಠೆ ಮುಖ್ಯ. ಇನ್ನೊಬ್ಬರ ವಸ್ತುವನ್ನು ಕದಿಯದಿರುವುದಕ್ಕಿಂತ ಆ ವಸ್ತುವಿಗಾಗಿ ಆಸೆ ಪಡೆದಿರುವುದು ಮುಖ್ಯ. ಮೋಸ ವಂಚನೆ ಇತ್ಯಾದಿಗಳಲ್ಲಿ ತೊಡಗದೇ ಇರುವುದಕ್ಕಿಂತ ಇತರರನ್ನು ಪ್ರೀತಿಸುವುದು, ಅವರಿಗೆ ಸಹಾನುಭೂತಿ ತೋರಿಸುವುದು ಅತ್ಯಂತ ಮುಖ್ಯ. ಆದ್ದರಿಂದ ನೈತಿಕ ನಿಷ್ಠೆಯೂ ಬೇಕು ಹಾಗೂ ಸಾಮಾಜಿಕ ಕಳಕಳಿಯೂ ಇರಬೇಕು. ನೈತಿಕತೆಯು ಕೇವಲ ಸ್ವಕೇಂದ್ರಿತವಾಗಿರದೆ ಪರಕೇಂದ್ರಿತವಾಗಿರಬೇಕಾದರೆ ಸಾಮಾಜಿಕ ಹಿತಾಸಕ್ತಿ ಅತ್ಯಂತ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT