ADVERTISEMENT

ಅಹಿಂಸೆಯ ಜೀವನಪಥ

ನವೀನ ಗಂಗೋತ್ರಿ
Published 29 ನವೆಂಬರ್ 2019, 19:30 IST
Last Updated 29 ನವೆಂಬರ್ 2019, 19:30 IST
   

ಭಾರತದ ನೆಲದಲ್ಲಿ ಉದಿಸಿ ಬೆಳೆದು ಹೊಳೆದ ಪರಂಪರೆಗಳಲ್ಲಿ ಸನಾತನ, ಜೈನ, ಬೌದ್ಧ ಮತ್ತು ಸಿಖ್ ಪರಂಪರೆಗಳು ಮುಖ್ಯವಾದವುಗಳು. ಇಲ್ಲಿನ ಜನಜೀವನವನ್ನು, ಮಾನವ ಬದುಕಿನ ಬೇರೆ ಬೇರೆ ಮಜಲುಗಳನ್ನು, ಸಾಹಿತ್ಯ ಶಿಲ್ಪಕಲೆ ಮತ್ತು ವಾಸ್ತುಶಾಸ್ತ್ರಗಳನ್ನು ಈ ಪರಂಪರೆಗಳು ಪೊರೆದವು. ತಮ್ಮ ಸಿದ್ಧಾಂತದ ಸ್ಥಾಪನೆಗಾಗಿ ಈ ಪರಂಪರೆಗಳು ಪ್ರಮಾಣವಾಗಿ ಸ್ವೀಕರಿಸಿದ ಅಂಶಗಳು ಬೇರೆಬೇರೆಯಾಗಿದ್ದಾಗಲೂ ಅವು ಉತ್ತರ ಕಂಡುಕೊಳ್ಳಲು ಹೊರಟ ಪ್ರಶ್ನೆಗಳು ಮತ್ತು ಕೊನೆಯಲ್ಲಿ ಬಂದು ಸೇರುವ ತಾರ್ಕಿಕ ನೆಲೆಗಳು ಒಂದೇ ಆಗಿವೆ.

ಜಗತ್ತಿನಲ್ಲಿ ವಿಚಾರಶೀಲವಾದ ಎಲ್ಲ ನಾಗರಿಕತೆಗಳೂ ಮಾನವನ ಬದುಕಿನ ಉದ್ದೇಶ ಮತ್ತು ಅರ್ಥಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿವೆ. ಭಾರತದ ಸಂದರ್ಭದಲ್ಲಿ ನೋಡುವಾಗ ಇಲ್ಲಿ ಆ ಪ್ರಯತ್ನ ವ್ಯಾಪಕವಾಗಿ ಮತ್ತು ಸರ್ವತೋಮುಖವಾಗಿ ನಡೆಯಿತೆನ್ನಬಹುದು. ಇವುಗಳ ಪೈಕಿ ಶೈವ, ಗಾಣಪತ್ಯ, ಶಾಕ್ತ, ವೈಷ್ಣವ, ದ್ವೈತಾದ್ವೈತವಿಶಿಷ್ಟಾದ್ವೈತ ಇತ್ಯಾದಿ ಎಲ್ಲ ಪಂಥಗಳೂ ವೇದಗಳನ್ನು ಪರಮಪ್ರಮಾಣವಾಗಿ ಒಪ್ಪಿ ನಡೆಯುತ್ತವಾದ್ದರಿಂದ ಅವನ್ನು ಸನಾತನವೆಂಬ ಒಂದೇ ಹೆಸರಿನಿಂದ ಗುರುತಿಸುತ್ತೇವೆ. ಜೈನ ಮತ್ತು ಬೌದ್ಧ ಮಾರ್ಗಗಳು ವೇದಗಳನ್ನು ಪ್ರಮಾಣವಾಗಿ ಒಪ್ಪದೆಯೂ ಮಾನವ ಜೀವನದ ಪರಮೋಚ್ಚ ಗುರಿಯಾದ ಬಿಡುಗಡೆಯನ್ನು (ಮೋಕ್ಷ) ತಮ್ಮದೇ ರೀತಿಯಲ್ಲಿ ಪ್ರತಿಪಾದಿಸಿಕೊಂಡು ಬಂದಿದ್ದಲ್ಲದೆ, ಈ ನೆಲದ ಮಾನವ ಜೀವನವನ್ನು ತಮ್ಮದೇ ರೀತಿಯಲ್ಲಿ ಪ್ರಭಾವಿಸಿದವು. ಈ ಪೈಕಿ ಜೈನಧರ್ಮವು ಬೌದ್ಧಕ್ಕಿಂತಲೂ ಪ್ರಾಚೀನತಮವಾದುದು.

ಸನಾತನ ಪರಂಪರೆಯ ಆರಂಭವನ್ನು ಹೇಗೆ ಇದಮಿತ್ಥಂ ಎಂದು ಗುರುತಿಸಲಾಗದೋ ಹಾಗೇನೆ ಜೈನ ಪರಂಪರೆಯ ಆದಿಯನ್ನೂ ಗುರುತಿಸುವುದು ಕಷ್ಟ. ಜೈನರ ಇಪ್ಪತ್ನಾಲ್ಕನೆಯ ಮತ್ತು ಕೊನೆಯ ತೀರ್ಥಂಕರರಾದ ಭಗವಾನ್ ಮಹಾವೀರರು ಇಂದಿಗೆ ಎರಡೂವರೆ ಸಾವಿರ ವರ್ಷಗಳ ಹಿಂದೆ ಬುದ್ಧನ ಸಮಕಾಲದಲ್ಲಿ ಬದುಕಿದ್ದರು. ಅಂದರೆ ಜೈನಸಂಸ್ಕೃತಿಯು ಅದಕ್ಕಿಂತಲೂ ಬಹಳವೇ ಹಿಂದಿನ ಕಾಲಕ್ಕೆ ಚಾಚಿಕೊಂಡಿರುವುದು ಸುವೇದ್ಯ. ಋಷಭನಾಥ (ಇವನನ್ನೇ ಆದಿನಾಥ ಎಂದೂ ಕರೆಯಲಾಗಿದೆ) ಈ ತೀರ್ಥಂಕರರಲ್ಲಿ ಮೊದಲನೆಯವರು ಎಂಬುದಾಗಿ ಪರಂಪರೆಯು ಹೇಳುತ್ತದೆ. ಕಾಲದ ವಿಚಾರವೇನೇ ಇದ್ದರೂ ಈ ಪರಂಪರೆಯಲ್ಲಿ ಬಂದ ಮಹಾತ್ಮರು ಭಾರತೀಯ ಸಾಹಿತ್ಯ ಮತ್ತು ಸಾಹಿತ್ಯೇತರ ಜ್ಞಾನಶಾಖೆಗಳಿಗೆ ಕೊಡಮಾಡಿದ ಕೊಡುಗೆ ಅನುಪಮವಾದ್ದು. ಸಂಸ್ಕೃತ, ಪ್ರಾಕ್ಕೃತ, ತಮಿಳು, ಕನ್ನಡ, ತುಳು, ಮಲಯಾಳ, ಮರಾಠಿ ಇತ್ಯಾದಿ ಭಾರತೀಯವಾದ ಬಹುತೇಕ ಎಲ್ಲ ಭಾಷೆಗಳಲ್ಲೂ ಜೈನ ವಿದ್ವಾಂಸರು ಕೃಷಿ ಮಾಡಿದ್ದಾರೆ. ಸಂಸ್ಕೃತದಲ್ಲಂತೂ ವ್ಯಾಕರಣಾದಿಯಾಗಿ ಸಾಹಿತ್ಯಕೃತಿಗಳವರೆಗೆ ಜೈನ ಪ್ರಭಾವವು ಗಾಢವಾಗಿಯೇ ಇದೆ. ಇವತ್ತಿಗೆ ಕನ್ನಡದಲ್ಲಿ ಲಭ್ಯವಿರುವ ಮೊದಲ ಸಾಹಿತ್ಯಕೃತಿಯಾದ ಕವಿರಾಜಮಾರ್ಗವೂ, ಲಭ್ಯವಿರುವ ಮೊದಲ ಕನ್ನಡ ವ್ಯಾಕರಣ ಗ್ರಂಥವೂ ಜೈನ ವಿದ್ವಾಂಸರಿಂದಲೇ ರಚಿವಾದವು ಅನ್ನುವುದನ್ನು ಗಮನಿಸಬೇಕು. ತಮಿಳರ ಸಾಹಿತ್ಯದ ಉತ್ತುಂಗ ಕಾಲವೂ ಜೈನರ ಕೃತಿಶ್ರೇಣಿಯಿಂದಾಗಿಯೇ ಸಾಧ್ಯವಾಯಿತು ಅನ್ನುವ ವಾದವಿದೆ.

ADVERTISEMENT

ಶ್ವೇತಾಂಬರರು ಮತ್ತು ದಿಗಂಬರರೆಂದು ಗುರುತಿಸಿಕೊಳ್ಳುವ ಜೈನರ ಎರಡು ಕವಲುಗಳಿಗೂ ಅಹಿಂಸೆಯೇ ಪರಮಾದರ್ಶ. ಜಗತ್ತಿನ ಎಲ್ಲ ಮತಗಳು ಮತ್ತು ಪರಂಪರೆಯ ಜನರು ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಾಗ್ಯೂ ಜೈನರು ಮಾತ್ರ ಅಹಿಂಸೆಯ ವಿಚಾರದಲ್ಲಿ ಬಹುತೇಕ ರಾಜಿಯಾಗದೇ ಬದುಕುವುದನ್ನು ಇವತ್ತಿಗೂ ಕಾಣುತ್ತೇವೆ. ಆರನೇ ಶತಮಾನದ ಕಾಲದಿಂದ ಲಭ್ಯವಾಗುವ ಜೈನ ಕೃತಿಗಳಲ್ಲಿ ಬಹುತೇಕ ಅಹಿಂಸೆ ಮತ್ತು ಕರ್ಮಕ್ಕೆ ಸಂಬಂಧಿಸಿದ ಕಥಾವಸ್ತುವನ್ನು ನೋಡಬಹುದು. ಜನ್ನನ ಯಶೋಧರ ಚರಿತೆಯಲ್ಲಿ ಹಿಂಸೆಯಷ್ಟೇ ಅಲ್ಲ, ಹಿಂಸೆಯ ಸಂಕಲ್ಪವೂ ಮಹಾಪಾಪ ಅನ್ನುವ ಸಂದೇಶವಿದೆ. ಅಹಿಂಸೆಯೆಂಬ ಪರಮಾದರ್ಶವು ಜೈನರ ಬದುಕಿನಲ್ಲಿ ಅದೆಷ್ಟು ಆಳಕ್ಕೆ ಇಳಿದಿದೆಯೆಂದರೆ ಅದು ಅವರ ಆಹಾರಶೈಲಿ ಮತ್ತು ಆಹಾರದ ಸಮಯವನ್ನೂ ನಿಯಂತ್ರಿಸಿದೆ. ಪುನರ್ಜನ್ಮದ ಕಲ್ಪನೆ ಭಾರತೀಯವಾದ ಎಲ್ಲ ಪರಂಪರೆಗಳಲ್ಲೂ ಸಾಮಾನ್ಯವಾಗಿ ಕಂಡುಬರುವ ಅಂಶ. ಜೈನರಲ್ಲಿ ಇದು ಇನ್ನಷ್ಟು ಪ್ರಗಾಢವಾಗಿ ಬೇರೂರಿದೆ. ಹಿಂಸಾಚರಣೆಯ ಕಾರಣಕ್ಕೆ ಅದೆಷ್ಟು ಜನ್ಮಗಳನ್ನು ಯಾವ್ಯಾವ ರೀತಿಯಲ್ಲಿ ಅನುಭವಿಸಬೇಕಾಗುತ್ತದೆ ಅನ್ನುವುದನ್ನೂ ಜೈನ ಕೃತಿಗಳು ಚಿತ್ರಿಸುತ್ತವೆ. ಹೀಗೆ ಅಹಿಂಸೆ, ಕರ್ಮ ಮತ್ತು ಅದರ ಫಲವಾದ ಜನ್ಮಗಳು ಮತ್ತು ಜನ್ಮಗಳ ಬಂಧನದಿಂದ ಮುಕ್ತಿ - ಇವು ಜೈನ ಪರಂಪರೆಯ ಕೇಂದ್ರತತ್ತ್ವಗಳು. ಕರ್ಮಗಳನ್ನು ನಿರಂತರವಾಗಿ ತೇಯ್ದು ಕೊನೆಯಲ್ಲಿ ಯಾವುದೇ ಕರ್ಮ ಉಳಿಯದೇ ನಿಶ್ಶೇಷವಾಗುವುದೇ ಜೈನರ ಮೋಕ್ಷದ ಕಲ್ಪನೆ. ಇದರ ಸಾಧನೆಗಾಗಿ ಸಮ್ಯಗ್ ಜ್ಞಾನ, ಸಮ್ಯಗ್ ದರ್ಶನ, ಸಮ್ಯಕ್ ಚಾರಿತ್ರ್ಯದ ಆಚರಣೆಯ ಕಟ್ಟುಗಳನ್ನು ವಿಧಿಸಲಾಗಿದೆ.

ಈ ಪರಂಪರೆಯು ಭಾರತೀಯ ಸಮುದಾಯಗಳೊಂದಿಗೆ ಶಾಂತಿ ನೆಮ್ಮದಿಯಿಂದ ಬದುಕುತ್ತ, ತೀವ್ರವಾದಕ್ಕೆ ಎಂದೂ ಎಡೆಗೊಡದೆ ಸಾವಿರಾರು ವರ್ಷಗಳನ್ನು ಬಾಳಿದೆ. ಒಂದು ಕಾಲಕ್ಕೆ ರಾಜಧರ್ಮವಾಗಿ ಹಬ್ಬಿದ್ದ ಜೈನ ತತ್ತ್ವಗಳನ್ನು ಇವತ್ತಿಗೆ ಆಚರಿಸುತ್ತಿರುವುದು ಭಾರತೀಯ ಜನಸಂಖ್ಯೆಯ ಅತಿ ಸಣ್ಣದಾದ ಒಂದು ಭಾಗ ಮಾತ್ರ. ಇದರೊಂದಿಗೆ ಪ್ರಸ್ತುತ ಕಾಲಘಟ್ಟದಲ್ಲಿ ಜೈನ ಆಚರಣೆಗಳು ಎದುರುಗೊಳ್ಳುತ್ತಿರುವ ಸಮಸ್ಯೆಗಳೂ ಸಾಕಷ್ಟಿವೆ. ಸಲ್ಲೇಖನವ್ರತದಂತಹ ಜೈನ ಆಚರಣೆಗಳು ಇವತ್ತಿನ ನಮ್ಮ ನ್ಯಾಯವ್ಯವಸ್ಥೆಯಲ್ಲಿ ಪ್ರಶ್ನಾರ್ಹವಾಗಿ ನಿಲ್ಲುತ್ತವೆ. ಹಾಗಿದ್ದೂ ಸಾವಿರಾರು ವರ್ಷಗಳ ಬದುಕಿನ ಗಟ್ಟಿತನವಿರುವುದರಿಂದ ಜೈನಪಂಥವು ಎಲ್ಲ ಪ್ರಶ್ನೆಗಳನ್ನು ಪರಿಹರಿಸಿಕೊಂಡು ಉಳಿಯುತ್ತದೆಂಬುದು ನಿಸ್ಸಂಶಯ. ಒಟ್ಟಿನಲ್ಲಿ ಭಾರತೀಯ ಜೀವನವನ್ನು ಶ್ರೀಮಂತಗೊಳಿಸಿದ ಮಹಾನ್ ಪರಂಪರೆಗಳ ಪಟ್ಟಿಯಲ್ಲಿ ಜಿನಪಂಥದ ಹೆಸರು ಅಜರಾಮರವಾದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.