ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಬದುಕು ಒಂದು ತಪಸ್ಸು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 19 ನವೆಂಬರ್ 2021, 17:48 IST
Last Updated 19 ನವೆಂಬರ್ 2021, 17:48 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಯಶಸ್ವಿ ಜೀವನದ ಹಿಂದೆಒಂದುಶ್ರದ್ಧೆ ಇರುತ್ತೆ. ಶ್ರದ್ಧೆ ಹಿಂದೆಒಂದುಪರಿಶ್ರಮ ಇರುತ್ತೆ. ಶ್ರದ್ಧೆ ಮತ್ತು ಪರಿಶ್ರಮ ಇಲ್ಲದೆ ಯಾವ ಕೆಲಸವೂ ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಪರಿಶ್ರಮದಿಂದ ನಿಗದಿತ ಗುರಿಯತ್ತ ಪರಿಕ್ರಮಿಸುವುದು ಅಷ್ಟೊಂದು ಸುಲಭವಲ್ಲ. ಶ್ರದ್ಧೆ ಎಂದರೆ ತಪಸ್ಸಿನಂತೆ. ಶ್ರದ್ಧೆ ಮತ್ತುತಪಸ್ಸುಭಿನ್ನವಲ್ಲ. ಎರಡೂ ಮನಸ್ಸನ್ನು ಚಂಚಲಕ್ಕೆಡೆಕೊಡದೆ, ಏಕಾಗ್ರಚಿತ್ತದಿಂದ ಕಾರ್ಯ ಸಾಧಿಸುವ ಗುರಿ ಹೊಂದಿರುತ್ತದೆ. ಋಷಿಮುನಿಗಳು ಕಾಡುಮೇಡುಗಳಲ್ಲಿ ಕಾರ್ಯಸಿದ್ಧಿಗಾಗಿ ತಪಸ್ಸನ್ನಾಚರಿಸಿದರೆ, ಸಾಮಾನ್ಯ ಜನ ನಾಡಿನಲ್ಲಿ ಶ್ರದ್ಧಾ-ಭಕ್ತಿಯಿಂದ ಬದುಕಿನ ಸಿದ್ಧಿಗಾಗಿ ಕಾರ್ಯಮಗ್ನರಾಗಿರುತ್ತಾರೆ. ಒಬ್ಬ ಯಶಸ್ವಿ ತಪಸ್ವಿಗೆ ಇರುವ ಶುದ್ಧ ಮನಃಸ್ಥಿತಿಯೇ ಸಾಮಾನ್ಯ ಜನರಿಗೂ ಬೇಕು. ಬದುಕನ್ನು ತಪಸ್ಸಿನಂತೆ ನಿರ್ವಹಿಸಿದರೆ ಮಾತ್ರ ನಮ್ಮ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ.

ಸಾವಿರಾರು ವರ್ಷಗಳಿಂದ ಸಾವಿರಾರು ಕೋಟಿ ಜನ ಈ ಭೂಮಿಗೆ ಬಂದು ಹೋಗಿದ್ದಾರೆ. ಬಂದವರೆಲ್ಲಾ ಯಶಸ್ವಿ ಜೀವನ ನಡೆಸಿಲ್ಲ. ಕೆಲವೇ ಜನ ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಶೇ.99ರಷ್ಟು ಜನ ಯೋಜಿತ ರೀತಿಯಲ್ಲಿ ಜೀವನಪಥದಲ್ಲಿ ಸಾಗಲಾರದೆ ಮುಗ್ಗರಿಸಿದ್ದಾರೆ. ಇದಕ್ಕೆ ಕಾರಣ ಬದುಕನ್ನ ತಪಸ್ಸಿನಂತೆ ಸ್ವೀಕರಿಸದೆ, ಸ್ವೇಚ್ಛೆಯಾಗಿ ಬಳಸಿದ್ದು. ಭೂಮಿ ಮೇಲೆ ಯಾವುದೂ ಸುಲಭದಲ್ಲಿ ಸಿಗುವುದಿಲ್ಲ. ಕಷ್ಟಪಟ್ಟು ಬೆನ್ನತ್ತಿ ಹೋದರಷ್ಟೇ ಸಿಗುತ್ತದೆ. ಕ್ರೂರಪ್ರಾಣಿ ಸಹ ತನ್ನ ಆಹಾರಕ್ಕಾಗಿ ಸಾಧುಪ್ರಾಣಿಯ ಬೆನ್ನ ಬೀಳುತ್ತದೆ. ಆಹಾರಕ್ಕಾಗಿ ಬಡಪ್ರಾಣಿಗಳ ಅರಸುವ ಪ್ರಾಣಿಗಳು ತಾವೇ ಮತ್ತೊಂದು ದೊಡ್ಡ ಪ್ರಾಣಿಗೆ ಬಲಿಯಾಗುವ ಆತಂಕವೂ ಇರುತ್ತೆ. ಹಾಗಂತ, ಯಾವ ಪ್ರಾಣಿಯೂ ಹೆದರಿ ಆಹಾರ ಅರಸದೆ ಸುಮ್ಮನಿರುವುದಿಲ್ಲ. ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾ ತನ್ನ ಆಹಾರ ಮತ್ತು ಬದುಕನ್ನ ರಕ್ಷಿಸಿಕೊಳ್ಳುತ್ತದೆ.
ಮನುಷ್ಯ ಬುದ್ಧಿ ಇರುವ ಪ್ರಾಣಿ. ತಾನಿದ್ದೆಡೆಗೆ ಎಲ್ಲವನ್ನೂ ತಂದುಕೊಳ್ಳುವ ಜ್ಞಾನವಿದೆ. ಹೀಗಾಗಿ ತನ್ನವರನ್ನೇ ಆಳುಗಳಾಗಿ ಮಾಡಿಕೊಂಡುಬದುಕುಕಟ್ಟಿಕೊಂಡಿದ್ದಾನೆ. ಕಾಲಮಾನ ಬದಲಾದಂತೆ ಕೆಲಸ ಬೇರೆಯಾಗಿರಬಹುದು. ಆದರೆ ದುಡಿಯುವ ಊಳಿಗಮಾನದ ಅರ್ಥ ಒಂದೇ. ಅದು ಅಧಿಕಾರಿಯೇ ಆಗಿರಲಿ, ಕೂಲಿ ಕಾರ್ಮಿಕನೇ ಆಗಿರಲಿ, ಅವರೆಲ್ಲಾ ತನ್ನ ಮೇಲಿನವರ ಆದೇಶದಂತೆ ದುಡಿಮೆ ಮಾಡುತ್ತಿರುತ್ತಾರೆ. ಇಂಥ ಕಾಯಕಸಮಾಜ ನಮ್ಮ ಅಭಿವೃದ್ದಿಯ ಅಡಿಪಾಯ. ಇಂಥ ಕಾಯಕ ಒಕ್ಕೂಟವಿಲ್ಲದಿದ್ದರೆ, ಮಾನವಸಮಾಜ ಉದ್ಧಾರವಾಗುವುದಿಲ್ಲ. ಆದರೆ ವೃತ್ತಿಪರ ಬದುಕಿನಲ್ಲಿ ಮೇಲು-ಕೀಳೆಂಬ ಭೇದಭಾವ ಇರಬಾರದಷ್ಟೆ. ಭಾರತೀಯರು ವಿಶ್ವದಲ್ಲೆ ಅತ್ಯಂತ ಉಚ್ಛ್ರಾಯ ನಾಗರಿಕ ಸಮಾಜವನ್ನು ಹೊಂದಿತ್ತು. ಆದರೆ ಕಾಯಕಸಮಾಜದಲ್ಲಿ ಕಂಡ ತಾರತಮ್ಯ ಅದರ ಮೂಲ ಉದ್ದೇಶವನ್ನೇ ಹಾಳು ಗೆಡವಿತು. ಇಲ್ಲಿ ಬದುಕಿನೆಡೆಗಿನ ಶ್ರದ್ಧೆ-ಪ್ರೀತಿಗಿಂತ ಇನ್ನೊಬ್ಬರ ಶೋಷಿಸುವ ಕುಯುಕ್ತಿಯು ಒಳ್ಳೆ ಅಂಶಗಳನ್ನು ನಾಶ ಮಾಡಿತು.

ಮಾನವರೆಲ್ಲಾ ಬದುಕನ್ನು ತಪಸ್ಸಿನಂತೆ ಪರಿಶುದ್ಧ ಮನಸ್ಸಿನಿಂದ ನಿರ್ವಹಿಸದೆ ತಪ್ಪು ಮಾಡಿದರು. ಇದರಿಂದ ಸಮಾಜದ ಸರ್ವತೋಮುಖ ಅಭಿವೃದ್ದಿಗೆ ತೊಡಕಾಯಿತು. ಮಾನವರೊಳಗೆ ಹುಟ್ಟುವ ಲೋಭ-ಮೋಹಗಳು ಆಕಸ್ಮಿಕವಾಗಿ ಬರುವಂಥವಲ್ಲ. ಇವು ನಮ್ಮೊಳಗೆ ಜಾಗೃತವಾಗಿದ್ದು ಭುಗಿಲೇಳುವ ಪ್ರಳಯಮುಖಿಗಳು. ಇವುಗಳನ್ನು ನಿಗ್ರಹಿಸಿ ಪ್ರಾಂಜಲ ಮನಸ್ಸಿನಿಂದ ದುಡಿಯಬೇಕು. ಇದಕ್ಕಾಗಿ ನಮ್ಮನ್ನು ಕಾಡುವ ಕಾಮ-ಕ್ರೋಧ–ಮದ-ಮಾತ್ಸರ್ಯಗಳಂಥ ಅರಿಷಡ್ವರ್ಗಗಳನ್ನು ಋಷಿಗಳಂತೆ ನಿಗ್ರಹಿಸಬೇಕು. ಒಳ್ಳೆಯದ್ಯಾವುದು, ಕೆಟ್ಟದ್ಯಾವುದು ಅನ್ನೋ ವಿವೇಚಿಸುವ ಜ್ಞಾನ ಬೆಳೆಸಿಕೊಳ್ಳಬೇಕು. ಈ ಜಗತ್ತು ಮೋಸದ ಪರಿಧಿ. ಇದರಲ್ಲಿ ಸೋಗಿನ ಪರದೆ ತೂಗು ಹಾಕಲಾಗಿದೆ. ಈ ಮಾಯಾಜಾಲವನ್ನು ಅರಿಯದೆ ಎಡವಿಬಿದ್ದರೆ ಜೀವನದಲ್ಲಿ ಮತ್ತೇ ಮೇಳೇಳುವುದು ಕಷ್ಟ. ಆದ್ದರಿಂದ ಎಲ್ಲರೂ ಸಜ್ಜನರ ಸಹವಾಸ ಮಾಡಿ ‘ಸಚ್ಚಿದಾನಂದ’ದ ಶ್ರದ್ಧಾಬದುಕನ್ನು ರೂಪಿಸಿಕೊಳ್ಳಬೇಕು..

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.