ADVERTISEMENT

ಅಲ್ಪಜ್ಞರಿಂದಲೆ ಜಗತ್ತಿಗೆ ಅಪಾಯ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 11 ಸೆಪ್ಟೆಂಬರ್ 2020, 19:45 IST
Last Updated 11 ಸೆಪ್ಟೆಂಬರ್ 2020, 19:45 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಅಲ್ಪಬುದ್ಧಿ ಮಹಾ ಅಪಾಯಕಾರಿ – ಎಂಬ ಗಾದೆ ಪ್ರಸ್ತುತ ಕಾಲಕ್ಕೆ ಹೆಚ್ಚು ಅನ್ವಯವಾಗುತ್ತದೆ. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಮೂಲಕಾರಣ ಮಾನವನ ಅಲ್ಪಬುದ್ಧಿ. ಅಲ್ಪಜ್ಞರಿಗೆ ಸ್ವಾರ್ಥಬುದ್ಧಿ ವಿಪರೀತ. ವಿಶಾಲಬುದ್ಧಿ ಇಲ್ಲದ ಸಂಕುಚಿತ ಮನಸ್ಸಿನ ಜನ ಎಲ್ಲಾ ಕಾಲದಲ್ಲೂ ಎಲ್ಲಾ ಕ್ಷೇತ್ರಗಳಲ್ಲೂ ಆವರಿಸುತ್ತಾ ಬಂದಿದ್ದಾರೆ. ಇದರಿಂದ ಸಾವಿರಾರು ವರ್ಷ ಕಳೆದರೂ ಜಗತ್ತಿನ ಸಮಸ್ಯೆಗಳೆಲ್ಲ ಪರಿಹಾರ ಕಾಣದೆ ಮತ್ತಷ್ಟು ಉಲ್ಬಣಗೊಳ್ಳುತ್ತಲೇ ಸಾಗಿದೆ.

ಕಾಡಿನಲ್ಲಿ ತನ್ನ ಪಾಡಿಗೆ ತಾನು ಹುಲ್ಲುಕಡ್ಡಿ ತಿಂದುಕೊಂಡು ಬದುಕುವ ಸಾಧುಪ್ರಾಣಿಗಳನ್ನು ಬೆನ್ನತ್ತಿಹೋಗಿ ಭಕ್ಷಣೆ ಮಾಡುವ ಕ್ರೂರ ಪ್ರಾಣಿಗಳಂತೆಯೇ, ನಾಡಿನಲ್ಲಿ ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿ ಹಣ್ಣು-ಹಂಪಲು ತಿಂದುಕೊಂಡು ಬದುಕುವ ಸಜ್ಜನರನ್ನು ದುಷ್ಟಬುದ್ಧಿಯ ದುರ್ಜನರು ಬೆನ್ನತ್ತಿ ಬಂದು ಶೋಷಣೆ ಮಾಡುತ್ತಿದ್ದಾರೆ. ಪ್ರಾಣಿಗಳದ್ದು ಜೈವಿಕ ಭಕ್ಷಣೆಯಾದರೆ ಮಾನವರದ್ದು ಜೈವಿಕ ಶೋಷಣೆ. ‘ನಾವು ಬದುಕಬೇಕು, ನಮ್ಮ ಸುತ್ತಲಿನವರು ನಮ್ಮಂತೆ ಬದುಕಲು ಬಿಡಬೇಕು’ ಎಂಬ ಮಾನವತೆ ಮಾಯವಾಗಿ, ಸ್ವಾರ್ಥಬುದ್ಧಿಯ ಜನರ ‘ನಾನು ನನ್ನದು’ ಎಂಬ ಸ್ವಾರ್ಥ ಮನೋಭಾವದಿಂದ ಈ ಭೂಮಿ ಹದಗೆಡುತ್ತಿದೆ.

ಗ್ರಾಹಕರನ್ನು ಹಿಡಿಯಲು ಮೋಸದ ಮಾರ್ಗ ಅನುಸರಿಸುವ ಸ್ವಾರ್ಥ ವ್ಯಾಪಾರಿಯಂತೆಯೇ, ಒಬ್ಬ ರಾಜಕಾರಣಿ, ಅಧಿಕಾರಿ, ಕೆಲಸಗಾರರು ಎಲ್ಲರೂ ಹಣ ಮಾಡುವ ಕುಯುಕ್ತಿಯಲ್ಲಿ ತೊಡಗಿದ್ದಾರೆ. ಇವರೆಲ್ಲಾ ನಾಲ್ಕು ಜನರಿಗೆ ಹಿತವಾಗುವಂತೆ, ಗುಣಾತ್ಮಕವಾಗಿ ಬದುಕುವುದನ್ನು ಮರೆಯುತ್ತಿದ್ದಾರೆ. ಇವತ್ತಿದ್ದು, ನಾಳೆ ಸಾಯುವ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಏನೆಲ್ಲಾ ಆಟಾಟೋಪ ಮಾಡುತ್ತಿದ್ದಾನೆ. ತನ್ನ ಜೀವವೇ ಶಾಶ್ವತವಿಲ್ಲದ ಸತ್ಯ ಗೊತ್ತಿದ್ದೂ, ಮತ್ತೊಬ್ಬರ ಜೀವನವನ್ನು ಅಳಿಸಿ, ತನ್ನ ಜೀವನ ಕಟ್ಟಿಕೊಳ್ಳಲು ವಿಕೃತ ಕೃತ್ಯಗಳನ್ನು ಎಸಗುತ್ತಿದ್ದಾನೆ.

ADVERTISEMENT

ಸ್ವಾರ್ಥಬುದ್ಧಿಯ ಜನರಿಂದಲೆ ಭಾರತದಂಥ ಬಡದೇಶಗಳು ಅಭಿವೃದ್ಧಿಯ ಬೆಳಕು ಕಾಣದೆ ಕತ್ತಲಕೂಪದಲ್ಲಿ ನರಳುತ್ತಿವೆ. ಒಂದು ದೇಶದ ಅಭಿವೃದ್ಧಿ ಎಂದರೆ, ಒಂದು ಮನೆಯ ಅಭಿವೃದ್ಧಿಯಲ್ಲ; ಅಥವಾ ಒಂದು ರಾಜ್ಯ, ಒಂದು ಊರಿನ ಪ್ರಗತಿಯಲ್ಲ. ಪ್ರತಿಯೊಂದು ಕುಟುಂಬದ ಸಮಗ್ರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಮೇಲೆತ್ತುವ ಪ್ರಕ್ರಿಯೆ ಆಗಿಂದಾಗ್ಗೆ ನಡೆಯದಿದ್ದರೆ, ಹಿಂದುಳಿದವರು ಹಿಂದುಳಿಯುತ್ತಲೇ ಇರುತ್ತಾರೆ. ಅಭಿವೃದ್ದಿ ಕಾಣದ ಜನ ಎಲ್ಲಿ ಎಡವಿದ್ದಾರೆಂಬುದನ್ನು ಗುರುತಿಸಿ, ಅವರನ್ನು ಮೇಲೆತ್ತುವ ಕೆಲಸ ನಿರಂತರವಾಗಿ ಮಾಡಬೇಕು. ಇದಕ್ಕೆ ಸರ್ಕಾರದ ನೆರವು-ಆಣತಿಗಿಂತ ಸುತ್ತಲಿನ ಜನ ಆದ್ಯತೆಯಾಗಿ ಪರಿಗಣಿಸಿ, ಬಡವರ ಜೀವನವನ್ನು ಉತ್ತಮೀಕರಿಸಲು ಪ್ರಯತ್ನಿಸಬೇಕು. ಪಕ್ಕದ ಮನೆಯವರು ಹಸಿವಿನಲ್ಲಿ ಬಳಲುವಾಗ, ತಾವು ಮೃಷ್ಟಾನ್ನ ಭೋಜನ ಮಾಡುವುದು ಹೆಣದ ಮುಂದೆ ಅನ್ನ ತಿಂದಂತೆ. ಯಾರ ನೋವಲ್ಲೂ ನಮ್ಮ ಸಂತೋಷ ಅರಳಬಾರದು.

ಭಗವಂತ ಸೃಷ್ಟಿಸಿದ ಮಾನವರಲ್ಲಿ ಯಾರೂ ಮೇಲೂ ಅಲ್ಲ, ಯಾರೂ ಕೀಳೂ ಅಲ್ಲ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ನಿಸರ್ಗದ ತಂದೆಯಾದ ಆ ದೇವರು ಸಮನಾಗಿ ಆಸ್ತಿ ಹಂಚಿದ್ದಾನೆ. ಈ ಸ್ವತ್ತು ತನಗಷ್ಟೆ ಸೇರಿದ್ದು ಎಂದು ಅಂದುಕೊಳ್ಳುವುದು ಶತಮೂರ್ಖತನ. ತನ್ನ ಪಾಲಿನದಿಷ್ಟು, ಉಳಿದದ್ದು ಪರರದ್ದು ಅಂತ ಪ್ರತಿಯೊಬ್ಬರೂ ಮಾನವಕಲ್ಯಾಣ ಕಾರ್ಯಕ್ಕೆ ದುಡಿದರೆ ಸ್ವರ್ಗ ಮೇಲಿರುವುದಿಲ್ಲ, ಭೂಲೋಕದಲ್ಲಿರುತ್ತೆ. ಮಾನವರಲ್ಲಿ ಸ್ವಾರ್ಥಬುದ್ಧಿ ಅಳಿದು, ಸದ್ಬುದ್ಧಿ ಮೂಡಿದರೆ ಅದೇ ‘ಸಚ್ಚಿದಾನಂದ’ಜಗತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.