ADVERTISEMENT

ಕೊಪ್ಪಳ ಜಿಲ್ಲೆಯಾದ್ಯಂತ ನೀಲಕಂಠನ ಸ್ಮರಣೆ

ಶಿವದೇವಾಲಯಗಳಲ್ಲಿ ವಿಶೇಷ ಪೂಜೆ, ಅಲ್ಪ ಉಪಾಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 10:57 IST
Last Updated 22 ಫೆಬ್ರುವರಿ 2020, 10:57 IST
ನೀಲಕಂಠೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಶಿವಲಿಂಗದ ದರ್ಶನಕ್ಕೆ ಆಗಮಿಸಿದ ಭಕ್ತರು (ಎಡಚಿತ್ರ) ಕೊಪ್ಪಳದ ಈಶ್ವರ ಪಾರ್ಕ್‌ನಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು
ನೀಲಕಂಠೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಶಿವಲಿಂಗದ ದರ್ಶನಕ್ಕೆ ಆಗಮಿಸಿದ ಭಕ್ತರು (ಎಡಚಿತ್ರ) ಕೊಪ್ಪಳದ ಈಶ್ವರ ಪಾರ್ಕ್‌ನಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು   

ಕೊಪ್ಪಳ: ಜಿಲ್ಲೆಯಾದ್ಯಂತ ವಿವಿಧ ಶಿವದೇವಾಲಯಗಳಲ್ಲಿ ಶಿವರಾತ್ರಿ ಮಹೋತ್ಸವವನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ತುಂಗಭದ್ರಾ ನದಿ ದಡದಲ್ಲಿರುವ ವಿವಿಧ ಶಿವದೇವಾಲಯಗಳಿಗೆ ಭಕ್ತರು ತೆರಳಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದು ಉಪವಾಸ ವ್ರತ ಮುಕ್ತಾಯಗೊಳಿಸಿದ್ದು ವಿಶೇಷವಾಗಿತ್ತು.

ಸತತ ಸಾಲು, ಸಾಲು ರಜೆಗಳು ಬಂದ ಕಾರಣಪ್ರಯುಕ್ತ ಹುಲಿಗಿ, ಗವಿಮಠದ ಗವಿಸಿದ್ಧೇಶ್ವರ ದೇವಸ್ಥಾನ, ಪಂಪಾಸರೋವರ, ಅಂಜನಾದ್ರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಿರುವುದು ಕಂಡು ಬಂತು. ನಗರದ ಈಶ್ವರ ದೇವಸ್ಥಾನದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ 84 ಜ್ಯೋತಿರ್ಲಿಂಗಗಳ ದರ್ಶನ ಮತ್ತು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಶಿವಲಿಂಗಗಳ ಪ್ರದರ್ಶನ ಮತ್ತು ಮೆರವಣಿಗೆ ಕೂಡಾ ನಡೆಯಿತು. ನಗರದ ಹೊರವಲಯದ ಮಳೆಮಲ್ಲೇಶ್ವರ ದೇವಸ್ಥಾನ, ಬನ್ನಿಕಟ್ಟಿಯ ಗೌರಿಶಂಕರ ದೇವಸ್ಥಾನ, ಗವಿಮಠದ ಗವಿಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ನಡೆಯಿತು. ಶಿವನಿಗೆ ಪ್ರಿಯವಾದ ಮುತ್ತುಗ, ಎಕ್ಕೆ, ಬಿಲ್ವಪತ್ರಿ, ಕಣಗಿಲೆ ಹೂವುಗಳನ್ನು ಸಮರ್ಪಿಸಿದರು.

ADVERTISEMENT

ಬೆಳಿಗ್ಗೆಯಿಂದ ಉಪವಾಸ ವ್ರತ ಮಾಡಿದವರು ಸಮೀಪದ ಈಶ್ವರ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ, ದರ್ಶನ ಪಡೆದ ನಂತರ ಹಣ್ಣು, ಹಾಲು ಸೇವಿಸಿ ಉಪವಾಸ ಮುಕ್ತಾಯಗೊಳಿಸಿದರು. ದ್ರಾಕ್ಷಿ, ಕರಬೂಜ, ದಾಳಿಂಬೆ, ಕಲ್ಲಂಗಡಿ, ಬಾಳೆಹಣ್ಣು, ಉತ್ತತ್ತಿ, ಶೇಂಗಾ ಉಂಡಿ, ಸಾಬುದಾನಿ ಪಾಯಸ, ಉಪ್ಪಿಟ್ಟು, ಉಂಡೆ, ಅರಳು ಈ ಉಪವಾಸ ವ್ರತದ ವಿಶೇಷ ಖ್ಯಾದ್ಯಗಳು ಎಲ್ಲರ ಮನೆಯಲ್ಲಿ ಇದ್ದವು. ಅಹೋರಾತ್ರಿ ಭಜನಾ ಕಾರ್ಯಕ್ರಮಗಳು ನಡೆದವು. ಮುನಿರಾಬಾದಿನ ಮಾರ್ಕೇಂಡೇಶ್ವರ, ಪಂಪಾಸರೋವರ, ಹನಮಸಾಗರದ ಚಂದಾಲಿಂಗ, ತಾವರಗೇರಾ ಸಮೀಪದ ಪುರ, ಅಳವಂಡಿ ಸಿದ್ಧೇಶ್ವರ ದೇವಸ್ಥಾನ, ಮಹಾಮಾಯೆ ಮಂದಿರಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿದ್ದು, ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.