ADVERTISEMENT

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–13

ಡಾ.ಬಸವರಾಜ ಸಾದರ
Published 12 ಅಕ್ಟೋಬರ್ 2020, 3:49 IST
Last Updated 12 ಅಕ್ಟೋಬರ್ 2020, 3:49 IST
   

ಗಾಂಧರ್ವಕ್ಕೆ ರಾಗವ ಹೆಸರಿಟ್ಟಂತೆ
ಸ್ವರವೊಂದು, ಸಂಚಾರದ ಪರಿ ಬಣ್ಣ ಬೇರಾದಂತೆ,
ಗೋವರ್ಣ ಹಲವು, ಕ್ಷೀರ ಏಕವರ್ಣವಾದಂತೆ,
ಕಾಯಕ ಹಲವಾದಲ್ಲಿ ಮಾಡುವ ಮಾಟ, ಶರಣರೊಳಗಾಟ,
ಲಿಂಗವ ಕೂಟ ಕೂಡುವ ಏಕವಾಗಿರಬೇಕು.
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ.

- ಬೊಕ್ಕಸದ ಚಿಕ್ಕಣ್ಣ

ಶರಣಕ್ರಾಂತಿ ವಿಶ್ವದ ಆರ್ಥಿಕ ಕ್ಷೇತ್ರಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ ‘ಕಾಯಕ’. ಪ್ರತಿಯೊಬ್ಬ ವ್ಯಕ್ತಿ ತನ್ನ ಶರೀರವನ್ನು ಶ್ರಮಕ್ಕೊಳಪಡಿಸಿ ದುಡಿಯಲೇಬೇಕೆಂಬ ನೀತಿಯನ್ನೊಳಗೊಂಡಿದೆ ಕಾಯಕ ಸಿದ್ಧಾಂತ. ಅದು ಬರೀ ಶರೀರಶ್ರಮ ಮಾತ್ರವಲ್ಲ; ಶ್ರಮವನ್ನು ಪವಿತ್ರ ಮತ್ತು ಗೌರವದ ಸ್ಥಾನಕ್ಕೇರಿಸುವ ಹಾಗೂ ಅನುಭಾವ ಸಾಧನೆಯ ಕ್ರಿಯಾಪಥವೂ ಹೌದು. ಇಂಥ ‘ಕಾಯಕ’ವು ಸಮಾಜೋ-ಆರ್ಥಿಕ ಸಿದ್ಧಾಂತವಾಗಿದ್ದಂತೆ, ಸಾಮಾಜಿಕ ತರ-ತಮಗಳನ್ನು ಹೊಡೆದೋಡಿಸುವ ಅಸ್ತ್ರವೂಹೌದು.

ADVERTISEMENT

ಮನುಷ್ಯರಷ್ಟೇ ಅಲ್ಲ; ದೇವರುಗಳೂ ದುಡಿಯಲೇಬೇಕೆಂಬ ಕಟ್ಟುಪಾಡಿನ ‘ಕಾಯಕ’ ಸಿದ್ಧಾಂತವು, ಶ್ರಮವನ್ನು ಕುರಿತ ಎಲ್ಲಾ ತಾತ್ವಿಕತೆಗಳ ಗುರು. ಇಂಥ ‘ಕಾಯಕ’ದ ಅನನ್ಯತೆಯನ್ನೇ ತರ್ಕಬದ್ಧವಾಗಿ ಎತ್ತಿ ತೋರಿಸುತ್ತದೆ ಬೊಕ್ಕಸದ ಚಿಕ್ಕಣ್ಣನ ಈ ವಚನ.

ವ್ಯಕ್ತಿ ಮಾಡುವ ಕರ್ಮದ ಆಧಾರದಿಂದ ಅವನ ವರ್ಣವನ್ನು ನಿರ್ಧರಿಸುವ ಚಾತುರ್ವರ್ಣ ಪದ್ಧತಿ ನಮ್ಮಲ್ಲಿತ್ತು. ಮನುಷ್ಯನ ಹೊಟ್ಟೆಯ ಹಸಿವು ನೀಗಿಸುವ ಮತ್ತು ಸಮಾಜದ ಆರ್ಥಿಕ ಅಗತ್ಯಗಳನ್ನು ಪೂರೈಸುವ ಕೆಲಸವನ್ನೇ ಕರ್ಮವೆಂದು ಕರೆದು, ಅದರ ಆಧಾರದಿಂದ ಮನುಷ್ಯನ ವರ್ಣ ಮತ್ತು ಜಾತಿಯನ್ನು ನಿರ್ಧರಿಸಿದ್ದ ಈ ನಡೆ ನಿಜಕ್ಕೂ ಅಮಾನುಷವಾದದ್ದು. ಶರಣರು ಇದನ್ನೇ ಉಗ್ರವಾಗಿ ಪ್ರತಿಭಟಿಸಿ, ಆ ಕರ್ಮದ ಜಾಗೆಯಲ್ಲಿ ತಂದ ಪರ್ಯಾಯವೇ ‘ಕಾಯಕ’ ಸಿದ್ಧಾಂತ. ಇಂಥ ಕಾಯಕಗಳು ಅಸಂಖ್ಯ ಬಗೆಯವಾದರೂ ಅವುಗಳ ಉದ್ದೇಶ ಮತ್ತು ಗುರಿ ಒಂದೆ. ಚಾತುರ್ವರ್ಣ ವ್ಯವಸ್ಥೆಯನ್ನು ನಿರ್ಮಿಸಿದ್ದ ತರ-ತಮದ ಪರಂಪರೆಗೆ ಇದನ್ನು ತಿಳಿಸುವ ಉದ್ದೇಶದಿಂದಲೇ ಶರಣರು ಕಾಯಕಗಳಲ್ಲಿರುವ ವೈವಿಧ್ಯತೆಯನ್ನು ಎತ್ತಿ ತೋರಿಸಿ, ಅವು ಕಾಯಕಗಳೇ ಹೊರತು, ಜಾತಿಗಳಲ್ಲ ಎಂದು ಸಾರಿದರು. ಬೊಕ್ಕಸದ ಚಿಕ್ಕಣ್ಣ ಈ ವಚನದಲ್ಲಿ ಮಾಡಿದ್ದು ಅದನ್ನೆ. ಎರಡು ದೃಷ್ಟಾಂತಗಳ ಮೂಲಕ ಆತ ಈ ಕೆಲಸವನ್ನು ಮಾಡಿದ್ದು, ಅದರಲ್ಲಿ ಒಂದು ಸಂಗೀತ ಕ್ಷೇತ್ರದ್ದು ಮತ್ತೊಂದು ಆಕಳ ಹಾಲಿನದು.

ಗಾಂಧರ್ವ ವಿದ್ಯೆಯಾದ ಸಂಗೀತದಲ್ಲಿ ಅಸಂಖ್ಯ ರಾಗಗಳಿದ್ದರೂ ಅವೆಲ್ಲಕ್ಕೂ ಆಧಾರವಾಗಿರುವ ಸ್ವರಗಳು ಒಂದೇ ಬಗೆಯವು. ಸ್ವರ ಸಂಚಾರದ ಮೂಲಕ ಅವು ಭಿನ್ನ ರಾಗಗಳ ಅನುಭವ ಕೊಡುತ್ತವೆಯಷ್ಟೆ.ಅದೇ ರೀತಿ ಹಸುಗಳ ಬಣ್ಣ ಹಲವು ತೆರೆನಾದುದಾಗಿದ್ದರೂ, ಅವೆಲ್ಲ ಕೊಡುವ ಹಾಲಿನ ಬಣ್ಣ ಮಾತ್ರ ಬಿಳಿಯದು. ಕಾಯಕದ ಉದ್ದೇಶವೂ ಅದೇ ರೀತಿಯದು ಎನ್ನುತ್ತಾನೆ ಚಿಕ್ಕಣ್ಣ. ಕಾಯಕಗಳು ಅಸಂಖ್ಯ ನಿಜ, ಆದರೆ, ಅವು ದೇಹಶ್ರಮದ ಭಿನ್ನ ರೀತಿಗಳು, ಶರಣರ ಕ್ರಿಯೆಯಾಟ-ಕೂಟದ ತಾಣಗಳು ಮತ್ತು ಲಿಂಗದರಿವು ಸಾಧಿಸುವ ಮಾರ್ಗಗಳು. ಅವೆಲ್ಲವೂ ಏಕಮುಖಿ ಗುರಿಯವೇ ಎನ್ನುತ್ತಾನೆ ಚಿಕ್ಕಣ್ಣ.

ಹಲವು ರಾಗ ಹುಟ್ಟಿಸುವ ಸಂಗೀತದ ಸ್ವರಗಳಂತೆ, ವಿಭಿನ್ನ ಬಣ್ಣದ ಹಸುಗಳು ಕೊಡುವ ಹಾಲಿನಂತೆ, ಕಾಯಕಗಳು ಹಲವಿದ್ದರೂ ಅವುಗಳ ಗುರಿ-ಉದ್ದೇಶ ಒಂದೇ. ಈ ಸತ್ಯವನ್ನು ಬೊಕ್ಕಸದ ಚಿಕ್ಕಣ್ಣ ಚಾತುರ್ವರ್ಣ ವ್ಯವಸ್ಥೆ ಗೌರವಿಸುವ ಉದಾಹರಣೆಗಳ ಮೂಲಕವೇ ಈ ವಚನದಲ್ಲಿ ಎತ್ತಿತೋರಿಸಿದ್ದಾನೆ. ಅವನ ಈ ಕ್ರಮ, ಸಕ್ರಮವಾದದ್ದೇ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.