ADVERTISEMENT

ವಚನಾಮೃತ: ಸ್ತ್ರೀ ಸಮಾನತೆಯ ಹರಿಕಾರ ಬಸವಣ್ಣ    

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 11:30 IST
Last Updated 2 ಅಕ್ಟೋಬರ್ 2020, 11:30 IST
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ   

‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ತಾಯಿ ಮತ್ತು ‌ಜನ್ಮಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ. ‘ಗೃಹಿಣಿ ಗೃಹಮುಚ್ಯತೆ’ ಅಂದರೆ, ಗೃಹಿಣಿಯಿಂದಲೇ ಗೃಹವು ಅರ್ಥ ಪಡೆದಿದೆ. ‘ಗೃಹಿಣಿ ಇಲ್ಲದ ಮನೆ ಅರಣ್ಯಕ್ಕಿಂತಲೂ ಘೋರ’ ಎಂಬುದಾಗಿ ಸಂಸ್ಕೃತ ಸೂಕ್ತಿಯಿದೆ.

ಧರ್ಮ ರಕ್ಷಕಳು ಸಂಸ್ಕೃತಿ ವಾಹಕಳು ಗೃಹಲಕ್ಷ್ಮಿಯೆಂದೆನಿಸಿರುವ ಸ್ತ್ರೀಗೆ ಸಮಾನತೆ ಕಲ್ಪಿಸಿದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂಬುದನ್ನು ಕಾಲಾಂತರದಲ್ಲಿ ಮನಗಂಡ ಸಮಾಜ ಸುಧಾರಕರು ಅದರಲ್ಲೂ ವಿಶೇಷವಾಗಿ 12ನೇ ಶತಮಾನದ ಬಸವಾದಿ ಶಿವಶರಣರು ಹೆಣ್ಣನ್ನು ಆತ್ಮಿಕ ನೆಲೆಯಲ್ಲಿ ಗುರುತಿಸಿ ಸಾಕ್ಷಾತ್ ದೇವತೆ ಎಂದು ಗೌರವಿಸಿದರು.

‘ಹೆಣ್ಣು ಹೆಣ್ಣಲ್ಲ ಎಂಬುದಕ್ಕೆ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಕಾರ್ಜನ’ ಎಂಬ ಈ ವಚನವೇ ಸಾಕ್ಷಿ. ಹೀಗಾಗಿ 12ನೇ ಶತಮಾನ ಮಹಿಳೆಯರ ಉಚ್ಛ್ರಾಯದ ಕಾಲವೆಂದು ಹೇಳಬಹುದು.

ADVERTISEMENT

ಪತಿಯೇ ಪರದೈವ ಎಂದು ಸಾರುವ ಮೂಲಕ ಸತಿಯಾದವಳು ತನ್ನ ಪತಿಯ ಸೇವೆಯ ಮೂಲಕವೇ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಬೇಕಾಗುತ್ತಿತ್ತು. ಸ್ತ್ರೀಯು ಋತುಮತಿಯಾಗುವಳೆಂಬ ಒಂದೇ ಕಾರಣಕ್ಕೆ ಆಕೆಗೆ ಧಾರ್ಮಿಕ ಕಾರ್ಯಗಳಲ್ಲಿ ಅವಕಾಶವಿರುತ್ತಿರಲಿಲ್ಲ. ಹಾಗೆಯೇ, ಶೂದ್ರರಿಗೂ ಕೂಡ ಗರ್ಭಗುಡಿಯಲ್ಲಿ ಪ್ರವೇಶ ನಿಷಿದ್ಧವಾಗಿತ್ತು. ಆದರೆ, ಬಸವಾದಿ ಶಿವಶರಣರು ಮಹಿಳೆಯನ್ನು ಶಾರೀರಿಕ ರಚನೆಯಿಂದ ಮೇಲು ಕೀಳು ಎಂಬ ಭಾವದಿಂದ ಪುರುಷ ಶ್ರೇಷ್ಠತೆಯನ್ನು ಪರಿಗಣಿಸುವುದನ್ನು ಬದಿಗಿರಿಸಿ ಸ್ತ್ರೀಯನ್ನು ಆತ್ಮಿಕ ನೆಲೆಯಲ್ಲಿ ಪರಿಗಣಿಸಿ ಹೆಣ್ಣು ಗಂಡು ಎಂಬ ಭೇದವನ್ನು ತೊಡೆದು ಎಲ್ಲ ರೀತಿಯ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಕಾರಣ ಬಸವಣ್ಣನವರನ್ನೂ ಸಮಾನತೆಯ ಹರಿಕಾರ ಎಂದೇ ಕರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.