ADVERTISEMENT

ಭಾಗ್ಯದ ಲಕ್ಷ್ಮೀ ಬಾರಮ್ಮ...

ಎಸ್.ಸೂರ್ಯಪ್ರಕಾಶ ಪಂಡಿತ್
Published 30 ಜುಲೈ 2020, 20:39 IST
Last Updated 30 ಜುಲೈ 2020, 20:39 IST
ವರಮಹಾಲಕ್ಷ್ಮಿ
ವರಮಹಾಲಕ್ಷ್ಮಿ   

ಸಾಮಾನ್ಯವಾಗಿ ನಾವು ‘ಲಕ್ಷ್ಮೀ’ ಎಂದರೆ ಹಣ–ಐಶ್ವರ್ಯಗಳಿಗೆಮಾತ್ರ ಸೀಮಿತಮಾಡಿಕೊಳ್ಳುತ್ತೇವೆ. ಅದರೆ ಲಕ್ಷ್ಮೀ ಎಂದರೆ ಕೇವಲ ಅಷ್ಟೇ ಅಲ್ಲ, ಅವಳು ಎಲ್ಲ ಸಂಪತ್ತುಗಳಿಗೂ ಒಡತಿ; ವಿದ್ಯೆ, ಆರೋಗ್ಯ, ಧಾನ್ಯ, ಸಂತಾನ, ಸೌಂದರ್ಯ, ಧೈರ್ಯ – ಎಲ್ಲದಕ್ಕೂ ಅವಳೇ ಅಧಿಪತಿ. ಇಂದು ನಾವು ಏನೆಲ್ಲ ಬಯಸುತ್ತಿದ್ದೇವೋ ಅವೆಲ್ಲವೂ ಅವಳ ಅಧೀನ. ಹೀಗಾಗಿ ನಮ್ಮ ಸದ್ಯದ ಎಲ್ಲ ಕೊರತೆಗಳನ್ನು ನೀಗಿಸಿ, ನಮ್ಮ ಕಷ್ಟಗಳನ್ನು ಪರಿಹರಿಸಬಲ್ಲವಳು ಶ್ರೀಲಕ್ಷ್ಮೀ.

ಲೋಕಕ್ಕೆ ಅಮೃತದ ಆವಶ್ಯಕತೆಯಿದ್ದಾಗ ದೇವತೆಗಳೂ ರಾಕ್ಷಸರೂ ಸೇರಿ ಸಮುದ್ರಮಥನವನ್ನು ಮಾಡಿದರು. ಆಗ ಹುಟ್ಟಿಕೊಂಡವಳೇ ಶ್ರೀಲಕ್ಷ್ಮೀ. ಈಗಲೂ ಜಗತ್ತಿಗೆ ಅಮೃತವೊಂದು ಬೇಕಿದೆ; ನಮಗೆ ಎದುರಾಗಿರುವ ಕಷ್ಟಪರಂಪರೆಗಳಿಂದ ಕಾಪಾಡಬಲ್ಲ ಅಮೃತಸದೃಶವಾದ ಶಕ್ತಿಯೊಂದು ನಮಗೆ ಬೇಕಿದೆ. ಇದಕ್ಕಾಗಿ ನಾವು ಆಶ್ರಯಿಸಬೇಕಾದ್ದು ಲಕ್ಷ್ಮಿಯನ್ನೇ. ಈ ಸಲದ ವರಮಹಾಲಕ್ಷ್ಮೀ ವ್ರತದ ಸಂಕಲ್ಪ–ಆಚರಣೆಗಳು ಇಂಥದೊಂದು ಬಲಕ್ಕಾಗಿಯೂ ವಿವೇಕಕ್ಕಾಗಿಯೂ ನಡೆಯಬೇಕಾಗಿದೆ.

ಇಲ್ಲೊಂದು ಸ್ವಾರಸ್ಯವುಂಟು. ಸಮುದ್ರಮಥನದಲ್ಲಿ ಹುಟ್ಟಿದವಳು ಲಕ್ಷ್ಮೀ ಎಂಬುದನ್ನು ನೋಡಿದೆವು. ಅವಳಿಗಿಂತಲೂ ಮೊದಲು ಆ ಮಥನದಲ್ಲಿ ಹುಟ್ಟಿದವಳು ಜ್ಯೇಷ್ಠಾ; ಇವಳು ಲಕ್ಷ್ಮಿಯ ಅಕ್ಕ. ಆದರೆ ಗುಣದಲ್ಲಿ ಇವಳು ಲಕ್ಷ್ಮಿಗೆ ವಿರುದ್ಧ; ಇವಳು ಹುಟ್ಟಿದ್ದೇ ಘೋರರೂಪದಲ್ಲಿ; ಭಯಂಕರಸ್ವರೂಪದಲ್ಲಿ; ಕುರೂಪಿಯಾಗಿ. ಇವಳು ಹುಟ್ಟುತ್ತಲೇ, ತಾನು ಎಲ್ಲಿರಬೇಕೆಂದು ದೇವತೆಗಳನ್ನು ಕೇಳಿದಳಂತೆ. ಆಗ ದೇವತೆಗಳು ‘ಯಾವ ಮನೆಯಲ್ಲಿ ಕೆಟ್ಟತನ, ಜಗಳ, ಕೊಳಕುಗಳು ತುಂಬಿರುತ್ತವೆಯೋ ಅಲ್ಲಿ ನೆಲಸು’ ಎಂದು ಸೂಚಿಸಿದರಂತೆ. ಎಂದರೆ ನಮ್ಮ ಜೀವನಸೌಂದರ್ಯಕ್ಕೆ ಮಾರಕವಾಗಬಲ್ಲ ಎಡೆಗಳಲ್ಲಿ ಜ್ಯೇಷ್ಠಾ ಲಕ್ಷ್ಮಿಯ ವಾಸ.

ADVERTISEMENT

ನಮಗೆ ಇಲ್ಲೊಂದು ಸಂದೇಶವಿದೆ. ಎಲ್ಲಿ ಜಗಳ, ಮನಸ್ತಾಪ, ಕೊಳಕು, ಕಲ್ಮಶ, ಕೆಟ್ಟತನಗಳು ತುಂಬಿರುತ್ತವೆಯೋ ಅಲ್ಲಿ ಜ್ಯೇಷ್ಠಾಲಕ್ಷ್ಮೀ ಇರುತ್ತಾಳೆ; ಎಂದರೆ ಸಂತೋಷ, ಸಂಭ್ರಮ, ಆರೋಗ್ಯ, ಐಶ್ವರ್ಯ, ವಿದ್ಯೆ ಅಲ್ಲಿ ಇರುವುದಿಲ್ಲ; ಏಕೆಂದರೆ ಅವಳು ಅ–ಲಕ್ಷ್ಮೀ. ನಮ್ಮ ಸುಖ–ಸಮೃದ್ಧಿಗೆ ಅಡ್ಡಿಯಾಗಬಲ್ಲ ನಮ್ಮಲ್ಲಿಯೇ ಇರುವ ದೋಷ–ದೌರ್ಬಲ್ಯಗಳನ್ನು ಕಳೆದುಕೊಳ್ಳುವುದು ಎಂದರೆ ನಮ್ಮಲ್ಲಿಯೇ ನೆಲೆಸಿರುವ ಜ್ಯೇಷ್ಠಾಲಕ್ಷ್ಮಿಯನ್ನು ಓಡಿಸಿದಂತೆಯೇ ಅಗುತ್ತದೆ. ಜ್ಯೇಷ್ಠಾ ಲಕ್ಷ್ಮೀ ಎಲ್ಲಿರುವುದಿಲ್ಲವೋ ಅಲ್ಲಿ ಮಾತ್ರವೇ ಲಕ್ಷ್ಮಿಯು ನೆಲೆಸುತ್ತಾಳೆ; ಅಕ್ಕ–ತಂಗಿಯರು ಏಕಕಾಲದಲ್ಲಿ ಒಂದೆಡೆ ಇರಲಾರರು. ಇದರ ತಾತ್ಪರ್ಯ ಏನೆಂದರೆ, ನಮ್ಮ ಕಷ್ಟಗಳಿಗೆ ಕಾರಣವಾಗುವ ಅನಾರೋಗ್ಯ, ಕಲಹ, ಅವಿದ್ಯೆ, ಅಧೈರ್ಯ, ಬಡತನ – ಇವೆಲ್ಲಕ್ಕೂ ಮೂಲಕಾರಣ ನಮ್ಮ ವ್ಯಕ್ತಿತ್ವದ ಭಾಗವೇ ಆಗಿರುವಜಗಳ, ಮನಸ್ತಾಪ, ಕೊಳಕು, ಕಲ್ಮಶ, ಕೆಟ್ಟತನಗಳು. ಇವುಗಳಿಂದ ಬಿಡುಗಡೆಯನ್ನು ಬಯಸಿಮಾಡುವ ಪೂಜೆಯ ದಿಟವಾದ ವರಮಹಾಲಕ್ಷ್ಮೀವ್ರತ ಎಂದಾಗುತ್ತದೆ. ನಮ್ಮಲ್ಲಿ ನೆಲೆ ನಿಂತ ವಿದ್ಯೆ, ವಿವೇಕ, ಸೌಹಾರ್ದ, ಆರೋಗ್ಯ, ಬಲ, ಒಳ್ಳೆಯತನಗಳೇ ಶ್ರೀಲಕ್ಷ್ಮಿಯ ಮಹಾತತ್ತ್ವಗಳು.

ನಮ್ಮಲ್ಲಿರುವ ಶ್ರೀಮಹಾಲಕ್ಷ್ಮೀ ತತ್ತ್ವದ ಅನುಸಂಧಾನದಲ್ಲಿಯೇ ಈಗ ನಮಗೆ ಎದುರಾಗಿರುವ ಮಹಾಪೀಡೆಯ ದಿಟವಾದ ಪರಿಹಾರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.