ADVERTISEMENT

ವೇದವ್ಯಾಸರ ಶಿವಪುರಾಣಸಾರ: ದೇವತೆಗಳ ಮೊರೆ ಮನ್ನಿಸಿದ ಶಿವ

ಬಾಗ 245

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 9 ಅಕ್ಟೋಬರ್ 2022, 19:30 IST
Last Updated 9 ಅಕ್ಟೋಬರ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಶಿವನಿಂದನೆಯನ್ನು ಶಿವನ ಮೂಲಕವೇ ಪರ್ವತರಾಜನಿಗೆ ಕೇಳಿಸುವಂತೆ ಬ್ರಹ್ಮ ಕೊಟ್ಟ ಸಲಹೆಯಂತೆ ದೇವತೆಗಳು ಕೈಲಾಸಕ್ಕೆ ಹೋದರು. ಶಿವನಿಗೆ ನಮಸ್ಕರಿಸಿ, ಸ್ತುತಿಸಿ, ‘ಹಿಮವಂತನನ್ನು ಪರೀಕ್ಷಿಸಲು ಮಾರುವೇಷದಲ್ಲಿ ಹೋಗಿ ನಿನ್ನ ನೀನು ನಿಂದನೆ ಮಾಡು. ಅಂಥವನಿಗೆ ಮಗಳು ಪಾರ್ವತಿಯನ್ನು ಕೊಡದಿರುವಂತೆ ಎಚ್ಚರಿಸು. ಹಿಮವಂತ ನಿಜವಾಗಿಯೂ ನಿನ್ನ ಮೇಲೆ ನಂಬಿಕೆ ಇದ್ದರೆ, ನಿನ್ನ ಮಾತು ಧಿಕ್ಕರಿಸುತ್ತಾನೆ. ನಂಬಿಕೆಗೆ ಅನರ್ಹನಾಗಿದ್ದರೆ, ನಿನ್ನ ಮಾತನ್ನು ನಂಬುತ್ತಾನೆ’ ಎಂದು ಹೇಳುತ್ತಾರೆ.

ದೇವತೆಗಳ ಮಾತನ್ನು ಕೇಳಿ ಶಿವ ನಗುತ್ತಾನೆ. ದೇವತೆಗಳ ಕುಟಿಲೋಪಾಯ ತಿಳಿದಿದ್ದರೂ, ಹಾಗೆಯೇ ಆಗಲೆಂದು ಅವರ ಮಾತನ್ನು ಅಂಗೀಕರಿಸುತ್ತಾನೆ. ಶಿವ ಬ್ರಾಹ್ಮಣನ ವೇಷ ಧರಿಸಿ ಹಿಮವಂತನಲ್ಲಿಗೆ ಹೋದ. ತೇಜಸ್ವಿಯಂತೆ ಕಂಗೊಳಿಸುತ್ತಿದ್ದ ಅತಿಥಿಗೆ ಹಿಮವಂತ ನಮಸ್ಕರಿಸಿದ. ವಿಪ್ರರೂಪ ಧರಿಸಿ ಬಂದಿರುವುದು ತನ್ನ ಪ್ರಾಣಕಾಂತನೆಂಬುದು ಪಾರ್ವತಿಯ ದಿವ್ಯದೃಷ್ಟಿಗೆ ಗೋಚರಿಸಿ, ಸಂತೋಷಪಟ್ಟಳು. ಹಿಮವಂತ ಆದರದಿಂದ ಮಧುಪರ್ಕ ಮುಂತಾದುವನ್ನು ಆ ಬ್ರಾಹ್ಮಣನಿಗೆ ಅರ್ಪಿಸಿ, ವಿಧಿವತ್ತಾಗಿ ಪೂಜಿಸಿದ. ನಂತರ ‘ಎಲೈ ವಿಪ್ರನೇ, ನೀನು ಯಾರು? ಇಲ್ಲಿಗೆ ಬಂದ ಕಾರ್ಯವೇನು?’ ಎಂದು ಕುಶಲಪ್ರಶ್ನೆ ಮಾಡಿದ. ಇದಕ್ಕೆ ಬ್ರಾಹ್ಮಣವೇಷಧಾರಿ ಶಿವ, ‘ಎಲೈ ಪರ್ವತರಾಜನೆ, ನಾನು ವೈಷ್ಣವಬ್ರಾಹ್ಮಣ. ಗುರುಗಳ ಅನುಗ್ರಹದಿಂದ ನಾನು ಯಾವ ಕಡೆಗೆ ಬೇಕೆಂದರೆ ಆ ಕಡೆಗೆ ಹೋಗಬಲ್ಲ ಶಕ್ತಿಯುಳ್ಳವನಾಗಿದ್ದೇನೆ. ಎಲ್ಲವನ್ನೂ ತಿಳಿಯಬಲ್ಲ ಶಕ್ತಿಯು ನನಗಿದೆ. ನನ್ನ ಜ್ಞಾನದೃಷ್ಟಿಗೆ ತಿಳಿದಂತೆ ನಿನ್ನ ಪುತ್ರಿಯನ್ನು ಶಿವನಿಗೆ ಮದುವೆ ಮಾಡಿಕೊಡಲು ಇಚ್ಛಿಸಿದ್ದೀಯ. ಆದರೆ ಇದು ಸರಿಯಲ್ಲ.

ನಯನಮನೋಹರಿಯಾದ ಪಾರ್ವತಿಯನ್ನು ಶಿವನಂಥ ನಿರಾಶ್ರಿತನಿಗೆ ಕೊಡುವುದು ಸೂಕ್ತ ಅನ್ನಿಸುವುದಿಲ್ಲ. ಸದಾ ಶ್ಮಶಾನದಲ್ಲಿ ವಾಸಿಸುತ್ತಾ, ಹಾವುಗಳನ್ನು ಧರಿಸಿ ಸುತ್ತಾಡುವವನಿಗೆ ಸುಕೋಮಲೆಯಾದ ಮಗಳನ್ನು ಕೊಡುವುದು ಉತ್ತಮವೆನಿಸುವುದಿಲ್ಲ. ಸಂಸಾರದಲ್ಲಿ ಆಸಕ್ತಿಯಿಲ್ಲದ, ದಿಗಂಬರನಾದ ಶಿವನಿಗೆ ಹೆಣ್ಣು ಕೊಡುವುದೆಂದರೆ ಹೆತ್ತ ಮಗಳನ್ನು ಹಾಳುಬಾವಿಗೆ ತಳ್ಳಿದಂತಾಗುತ್ತೆ.

ADVERTISEMENT

‘ಸದಾ ಮೈಗೆ ಬೂದಿಯನ್ನು ಬಳಿದುಕೊಳ್ಳುವ, ಬಹು ಕೋಪಿಷ್ಠ, ಅವಿವೇಕಿಯು ಆದ ಶಿವನಿಗೆ ವಯಸ್ಸೇ ತಿಳಿಯದು. ಹೊಲಸಾದ ಜಟೆಯೊಂದಿಗೆ ಬಿಡುಬೀಸಾಗಿ ಊರು ತುಂಬ ಅಲೆಯುವ ಅವನಿಗೆ ಸರ್ಪವೇ ಹಾರ. ವಿಷವೇ ಆಹಾರ. ಮಹಾಜ್ಞಾನಿಯಾದ ನೀನೇ ಯೋಚನೆಮಾಡು. ಪಾರ್ವತಿಯನ್ನು ಪರಿಗ್ರಹಿಸಲು ಆ ಶಿವನು ಯೋಗ್ಯನೇ ಎಂದು?

‘ಓ ಗಿರಿರಾಜ, ಆ ಶಿವನಿಗೆ ಒಬ್ಬನೂ ಬಂಧುವಿಲ್ಲ. ಧನವಿಲ್ಲದ ದರಿದ್ರ. ನೀನಾದರೋ ಅಸಂಖ್ಯ ಬಂಧು–ಬಳಗ ಹೊಂದಿದ್ದೀಯ. ಬೇಕಾದಷ್ಟು ರತ್ನಗಳುಳ್ಳವ. ಆದ್ದರಿಂದ ಮದುವೆಯ ವಿಷಯದಲ್ಲಿ ನಿನ್ನ ಬಂಧುಗಳು, ಹೆಂಡತಿ, ಮಕ್ಕಳು, ಗುರುಹಿರಿಯರ ಮಾತನ್ನು ಕೇಳು. ಆದರೆ ಪಾರ್ವತಿಯನ್ನು ಮಾತ್ರ ಕೇಳಬೇಡ. ಏಕೆಂದರೆ ರೋಗಿಗೆ ಔಷಧ ಇಷ್ಟವಾಗುವುದಿಲ್ಲ. ರೋಗಿಗೆ ಇಷ್ಟವಿಲ್ಲ ಅಂತ ಔಷಧ ನೀಡದಿದ್ದರೆ, ರೋಗ ವಾಸಿಯಾಗುವುದಿಲ್ಲ ಅಲ್ಲವೆ? ಪ್ರೇಮರೋಗದಿಂದ ಬಳಲುತ್ತಿರುವ ಪಾರ್ವತಿ ಮಾತಿಗೆ ಕಿವಿಗೊಟ್ಟು ಕೆಡಬೇಡ’ ಎಂದು ಬ್ರಾಹ್ಮಣವೇಷಧಾರಿ ಶಿವ ಹೇಳಿ, ಕೈಲಾಸಕ್ಕೆ ತೆರಳಿದ.

ಇಲ್ಲಿಗೆ ಶ್ರೀಶಿವಮಹಾಪುರಾಣದ ಪಾರ್ವತೀಖಂಡದಲ್ಲಿ ಮೂವತ್ತೊಂದನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.