ADVERTISEMENT

ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನ ತಪ್ಪನ್ನು ಮನ್ನಿಸಿದ ಶಿವ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 16 ನವೆಂಬರ್ 2022, 21:17 IST
Last Updated 16 ನವೆಂಬರ್ 2022, 21:17 IST
   

ಬ್ರಹ್ಮನನ್ನು ಕೊಲ್ಲಲು ಮುಂದಾದ ಶಿವನನ್ನು ದೇವತೆಗಳು ತಡೆದು, ಬ್ರಹ್ಮನನ್ನು ಕ್ಷಮಿಸುವಂತೆ ಪ್ರಾರ್ಥಿಸುತ್ತಾರೆ.

‘ಜಗತ್ತಿಗೆ ಪಿತಾಮಹನೆನಿಸಿದ ಬ್ರಹ್ಮನು ನಿನ್ನ ಅನುಗ್ರಹದಿಂದ ರಜೋಗುಣಪ್ರಧಾನವಾಗಿ ಜಗತ್ಕರ್ತನಾಗಿದ್ದಾನೆ. ನಿನ್ನ ಅನುಗ್ರಹದಿಂದ ಲಭಿಸಿದ ಸತ್ತ್ವಗುಣದಿಂದ ಹರಿಯು ಜಗತ್ಪಾಲಕನಾಗಿದ್ದಾನೆ. ತಮೋಗುಣದಿಂದ ರುದ್ರನಾದ ನೀನು ಸಂಹಾರಕರ್ತನಾಗಿರುವೆ. ರುದ್ರನಾದ ನೀನೇ ಪರಮಾತ್ಮಸ್ವರೂಪ. ಹರಿಬ್ರಹ್ಮಾದಿಗಳಿಗಿಂತ ಶ್ರೇಷ್ಠ; ಜಗತ್ತೆಲ್ಲವನ್ನೂ ವ್ಯಾಪಿಸಿರುವ ಜಗನ್ನಾಥ. ಕಣ್ಣಿಗೆ ಗೋಚರಿಸುವ ಮಹಾಭೂತಗಳು, ಕಣ್ಣಿಗೆ ಕಾಣದ ಸೂಕ್ಷ್ಮ ಭೂತಗಳು, ಇಂದ್ರಿಯಗಳೆಲ್ಲವೂ ಜಗನ್ಮೂರ್ತಿಯಾದ ನಿನ್ನ ಸ್ವರೂಪವಾಗಿವೆ. ಅವುಗಳೆಲ್ಲ ನಿನ್ನ ಅಧೀನದಲ್ಲಿಯೇ ಇರುವುವು. ಸಪ್ತಸಮುದ್ರಗಳೇ ನಿನ್ನ ವಸ್ತ್ರಗಳು. ದಿಕ್ಕುಗಳೇ ನಿನಗೆ ಭುಜಗಳು. ಸ್ವರ್ಗವು ನಿನ್ನ ಶಿರಸ್ಸು. ಆಕಾಶವು ನಿನ್ನ ನಾಭಿಯು. ಗಾಳಿಯು ನಿನ್ನ ನಾಸಿಕ. ಅಗ್ನಿ, ಸೂರ್ಯ, ಚಂದ್ರರು ನಿನ್ನ ಮೂರು ಕಣ್ಣುಗಳು. ಮೇಘಗಳು ನಿನ್ನ ತಲೆಗೂದಲು. ನಕ್ಷತ್ರ, ತಾರಕ, ಗ್ರಹಗಳು ನಿನ್ನ ಆಭರಣಗಳು. ಇಂತಹ ವಿರಾಡ್ರೂಪನಾದ ನಿನ್ನನ್ನು ನಾವು ಹೇಗೆ ಸ್ತುತಿಸಬೇಕೋ ಗೊತ್ತಾಗುತ್ತಿಲ್ಲ. ನೀನು ಮಾತಿಗೂ ಮನಸ್ಸಿಗೂ ನಿಲುಕದ ಸ್ವರೂಪವುಳ್ಳವನಾಗಿರುವೆ. ಐದು ಮುಖವುಳ್ಳವನಾದ ನೀನು, ಐವತ್ತುಕೋಟಿ ರೂಪವುಳ್ಳವನಾಗಿ, ತ್ರಿಮೂರ್ತಿಸ್ವರೂಪನಾಗಿ, ಜ್ಞಾನರೂಪನಾಗಿ ಇಂದ್ರಿಯಗಳಿಗೆ ಅಗೋಚರನಾಗುವೆ.ಎಂಟು ದಿಕ್ಕುಗಳುಳ್ಳಂತಹ ವಿರಾಡ್ರೂಪವನ್ನು ಧರಿಸಿರುವ ಪರಮೇಶ್ವರನಿಗೆ ಕೋಟಿ ಕೋಟಿ ನಮಸ್ಕಾರ’ ಎಂದು ದೇವತೆಗಳು ಸ್ತುತಿಸಿದಾಗ ಪರಮೇಶ್ವರ ಬ್ರಹ್ಮನನ್ನು ಕ್ಷಮಿಸಿ, ಅಭಯವನ್ನು ದಯಪಾಲಿಸಿದ.

ಬ್ರಹ್ಮ ಮರ್ದಿಸಿದ ರೇತಸ್ಸಿನಿಂದ ಮಹಾಕಾಂತಿಶಾಲಿಗಳಾದ ಅನೇಕ ಕಿಡಿಗಳು ಹುಟ್ಟಿದವು. ಜ್ವಲಿಸುವ ಆ ವೀರ್ಯದ ಕಣಗಳಿಂದ ವಾಲಖಿಲ್ಯರೆಂಬ ಸಾವಿರಾರು ಋಷಿಗಳು ಜನಿಸಿದರು. ಆ ಋಷಿಗಳೆಲ್ಲರೂ ಬ್ರಹ್ಮನ ಬಳಿಗೆ ‘ತಂದೆ, ಓ ತಂದೆ’ ಎನ್ನುತ್ತಾ ಬಂದರು. ಮುಜುಗರಕ್ಕೊಳಗಾದ ಬ್ರಹ್ಮ ಕೋಪದಿಂದ ‘ವಾಲಖಿಲ್ಯರೇ, ನೀವೆಲ್ಲರೂ ಗಂಧಮಾದನ ಪರ್ವತಕ್ಕೆ ನಡೆಯಿರಿ. ಸೂರ್ಯನ ಶಿಷ್ಯರಾಗಿ ಘೋರತಪಸ್ಸನ್ನಾಚರಿಸಿ ಮಹಾಮುನಿಗಳಾಗಿ’ ಎಂದ.

ADVERTISEMENT

ಬ್ರಹ್ಮ ತನ್ನ ತಪ್ಪನ್ನು ಕ್ಷಮಿಸುವಂತೆ ಶಂಕರನ ಮುಂದೆ ಕೈಮುಗಿದು ನಿಂತು, ‘ಮಹಾದೇವನೆ, ಜಗತ್ತಿನ ಎಲ್ಲ ಕಾರ್ಯಗಳನ್ನು ಮಾಡಿಸುವವನು ನೀನೇ. ನನ್ನ ಈ ಕುಕೃತ್ಯಕ್ಕೇ ಪ್ರೇರಕಶಕ್ತಿಯೂ ನೀನೇ. ನಿನ್ನ ಲೀಲೆ ಯಾರೂ ಊಹಿಸಲಾರರು. ನೀನೇ ಜಗತ್ತನ್ನು ಸೃಷ್ಟಿಸುವವನು, ಪಾಲಿಸುವವನು ಮತ್ತು ಸಂಹರಿಸುವವನು. ನಿನ್ನ ಇಚ್ಛೆಯಿಂದಲೇ ಜಗತ್ತೆಲ್ಲವೂ ನಿಂತಿದೆ. ಇದನ್ನು ಈಗ ನಾನು ಚೆನ್ನಾಗಿ ತಿಳಿದೆ’ ಎಂದು ಭಕ್ತಿಯಿಂದ ಸ್ತುತಿಸಿದ.

ವಿಷ್ಣು ಮೊದಲಾದ ದೇವತೆಗಳು, ಮುನಿಗಳು, ಸಿದ್ಧರು ಮಹೇಶ್ವರನನ್ನು ಸ್ತುತಿಸಿದರು. ದೀನಸ್ತುತಿಯನ್ನು ಕೇಳಿ ಪ್ರಸನ್ನನಾದ ಶಿವ, ಎಲ್ಲರಿಗೂ ಅನುಗ್ರಹ ನೀಡಿದ. ‘ಕಾಮಮಾಯೆ ಎಂಥವರ ಮನಸ್ಸನ್ನೂ ಹಾಳು ಮಾಡುತ್ತದೆ ಎಂಬುದಕ್ಕೆ ಸೃಷ್ಟಿಕರ್ತನಾದ ಬ್ರಹ್ಮನ ವರ್ತನೆಯೇ ಸಾಕ್ಷಿಯಾಗಿದೆ. ಇದಕ್ಕಾಗಿಯೇ ಕಾಮವಿಕಾರಗಳನ್ನು ನಿಗ್ರಹಿಸಿ, ನಾನು ಸದಾ ಧ್ಯಾನಾಸಕ್ತನಾಗಿರುತ್ತೇನೆ. ಧ್ಯಾನದಿಂದ ಮನಸ್ಸು ನಿರ್ಮಲವಾಗುತ್ತೆ, ಕೆಟ್ಟ ಆಲೋಚನೆಗಳು ಸುಳಿಯುವುದಿಲ್ಲ. ಧ್ಯಾನದ ಮಹಿಮೆಯನ್ನು ಭೂಲೋಕದ ಜನರಿಗೆಲ್ಲಾ ತಿಳಿಸಿ, ಜಗತ್ತು ನಿಷ್ಕಲ್ಮಶವಾಗಿರುವಂತೆ ಮಾಡಿ’ ಎಂದು ಬೋಧಿಸಿದ.

ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ನಲವತ್ತೊಂಬತ್ತನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.