ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಸ್ತ್ರೀಕುಲರಕ್ಷಕ ಕೃಷ್ಣ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 13 ನವೆಂಬರ್ 2020, 19:30 IST
Last Updated 13 ನವೆಂಬರ್ 2020, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   
""

ಭಾರತೀಯ ಸಂಸ್ಕೃತಿಗೆ ಉತ್ತಮ ಅಂಕಿತ ಹಾಕಿದ ಶ್ರೇಯಸ್ಸು ಶ್ರೀಕೃಷ್ಣನಿಗೆ ಸಲ್ಲುತ್ತದೆ. ಜಾತಿ-ವರ್ಣ ತಾರತಮ್ಯಗಳಿಂದ ಬಳಲುತ್ತಿದ್ದ ಭಾರತೀಯ ಸಮಾಜಕ್ಕೆ ಭಾವೈಕ್ಯದ ಗಟ್ಟಿ ಅಡಿಪಾಯ ಹಾಕಿದ್ದು ಸಹ ಶ್ರೀಕೃಷ್ಣ ಪರಮಾತ್ಮನಿಗೆ ಸಲ್ಲುತ್ತದೆ. ಅದರಲ್ಲೂ ಸ್ತ್ರೀಕುಲಕ್ಕೆ ಆತ ಹಾಕಿ ಕೊಟ್ಟ ಗೌರವ ಭಾರತದ ಸಾಮಾಜಿಕ ವ್ಯವಸ್ಥೆಗೆ ಮುಕುಟಪ್ರಾಯವಾಗಿದೆ. ಹೆಣ್ಣು ಎಲ್ಲಿ ಗೌರವಿಸಲ್ಪಡುತ್ತಾಳೊ ಅಲ್ಲಿ ದೇವರು ನೆಲೆಸಿರುತ್ತಾನೆ ಎಂಬ ಮಾತನ್ನು ಅಕ್ಷರಶಃ ಸಾಕ್ಷೀಕರಿಸಿದ ಕೀರ್ತಿ ಸಹ ಶ್ರೀಕೃಷ್ಣನಿಗೆ ನಿಸ್ಸಂದೇಹವಾಗಿ ಸಲ್ಲುತ್ತದೆ. ಭಾರತದ ಸಾಮಾಜಿಕ ಮತ್ತು ನೈತಿಕ ಮೌಲ್ಯವನ್ನು ಬಲಪಡಿಸಿದ ಶ್ರೀಕೃಷ್ಣ ನಿಜಕ್ಕೂ ಸ್ತ್ರೀಲೋಲನಲ್ಲ, ಸ್ತ್ರೀಲಾಲನಾ ಗೊಲ್ಲ; ಪರಿಪೂರ್ಣ ವ್ಯಕ್ತಿತ್ವದ ಮಹಾಪುರುಷ.

ಶ್ರೀಕೃಷ್ಣ ಹೆಸರಿಗೆ ತಕ್ಕಂತೆ ಕರಿಯ. ಕುಲಕ್ಕೆ ತಕ್ಕಂತೆ ಶೂದ್ರ. ಆದರೆ ಬುದ್ಧಿಯಲ್ಲಿ ಕುಶಾಗ್ರಮತಿ. ನಡೆ-ನುಡಿಯಲ್ಲಿ, ವಿವೇಚನೆಯ ಪರಿಧಿಯಲ್ಲಿ ಅಪ್ಪಟ ಬಂಗಾರ. ರಾಕ್ಷಸಬುದ್ಧಿಯ ಜನರಿಗೆ ಬುದ್ಧಿ ಕಲಿಸಲೆಂದೇ ಹುಟ್ಟಿ ಬಂದ ಪರಮಾವತಾರಿ. ನರಕಾಸುರನನ್ನು ಕೊಂದು, ಬಂಧಿತ ಸ್ತ್ರೀಯರನ್ನ ಶ್ರೀಕೃಷ್ಣ ಮದುವೆಯಾಗಿದ್ದು ದುರಾಸೆಯಿಂದಲ್ಲ. ಅವರೆಲ್ಲಾ ಸಮಾಜದಲ್ಲಿ ಗೌರವಯುತವಾಗಿ ಬಾಳಲೆಂಬ ಸದುದ್ದೇಶದಿಂದ. ನರಕಾಸುರನಿಂದ ಮಾನಹೋದ ಸ್ತ್ರೀಯರೆಂದು ಜನರು ಹೀನವಾಗಿ ನಡೆಸಿಕೊಳ್ಳಬಾರದು ಎಂಬ ಕಾರಣಕ್ಕೆ ಶ್ರೀಕೃಷ್ಣ ಅವರಿಗೆಲ್ಲಾ ಪತ್ನಿಯರೆಂಬ ಗೌರವ ಸ್ಥಾನಕೊಟ್ಟ. ಆದರೆ ಇಷ್ಟಪಟ್ಟು ಮದುವೆಯಾದ ಪಟ್ಟದರಸಿ ರುಕ್ಮಿಣಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊಂಡ. ಆದರ್ಶಪತಿಗೆ ಮತ್ತೊಂದು ಹೆಸರೇ ಶ್ರೀಕೃಷ್ಣ ಅನ್ನುವ ಮಟ್ಟಿಗೆ ತನ್ನ ಸ್ಥಾನ-ಮಾನ ಕಾಪಾಡಿಕೊಂಡ.

ಕರಿಯ-ಬಿಳಿಯ ಎಂಬ ವರ್ಣಭೇದದಲ್ಲಿ ದೂರಾಗಿದ್ದ ಮನಸ್ಸುಗಳನ್ನು ಒಗ್ಗೂಡಿಸಿದ ಹೆಗ್ಗಳಿಕೆ ಸಹ ಶ್ರೀಕೃಷ್ಣನಿಗಿದೆ. ವರ್ಣತಾರತಮ್ಯದಲ್ಲಿ ಕಚ್ಚಾಡುತ್ತಿದ್ದ ಜನರ ತೊಗಲಿಗೆ ಬಣ್ಣ ಎರಚಿ, ಅವರೆಲ್ಲಾ ಭೇದ-ಭಾವವಿಲ್ಲದೆ ಬೆರೆಯಲು ಹೋಳಿಹಬ್ಬ ಆಚರಣೆಗೆ ತಂದ. ಕುರುವಂಶೀಯರಲ್ಲ ಪಾಂಡವರು ಅಂತ ಪಿತ್ರಾರ್ಜಿತ ಸ್ವತ್ತು ನೀಡದೆ ಕಾದಾಟಕ್ಕಿಳಿದ ದುರ್ಯೋಧನನಿಗೆ ಬುದ್ಧಿ ಕಲಿಸಿದ. ‘ವಸುಧೈವ ಕುಟುಂಬಕಂ’ ಅಂತ ಜಗತ್ತಿನ ಜನರೆಲ್ಲಾ ಒಂದೇ ತಾಯಿಯ ಕರುಳ ಬಳ್ಳಿಗಳೆಂದು ಸಾರಿದ. ಕುರುಕ್ಷೇತ್ರದಲ್ಲಿ ಭಗವದ್ಗೀತೆ ಹಾಡಿ ನೀತಿಯ ಮಹಾಪೂರವನ್ನೆ ಹರಿಸಿದ.

ADVERTISEMENT

ಹೀಗಾಗಿಯೇ ಪ್ರಾಜ್ಞರು ಶ್ರೀಕೃಷ್ಣನನ್ನು ಭಾರತೀಯ ಆಧ್ಯಾತ್ಮಿಕೆಯ ಜಗದ್ಗುರು ಅನ್ನುತ್ತಾರೆ. ಶ್ರೀಕೃಷ್ಣ ಅವತರಿಸಿರದಿದ್ದರೆ ಭಾರತೀಯ ಧರ್ಮ-ಸಂಸ್ಕೃತಿಯಲ್ಲಿ ಸಾರವೇ ಇರುತ್ತಿರಲಿಲ್ಲ ಅನ್ನುವವರೂ ಇದ್ದಾರೆ. ಏಕೆಂದರೆ, ಭಾರತೀಯ ಸಂಸ್ಕೃತಿಗೆ ಆಧುನಿಕತೆಯ ಸ್ಪರ್ಶದ ಜೊತೆಗೆ ಸಾಮಾಜಿಕ ನೀತಿಯ ಅಮೃತ ತುಂಬಿದ್ದು ಶ್ರೀಕೃಷ್ಣ. ಪರರನ್ನು ದೂಷಿಸುವ-ಹಂಗಿಸುವ ವಿಕೃತ ಬುದ್ಧಿಗಳಿಗೆ ತಿಳಿವಳಿಕೆ ನೀಡಿದ. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಕಾಲಿನ ಉಂಗುಷ್ಠದಿಂದ ನೆತ್ತಿಯವರೆಗೂ ಅವಲೋಕಿಸಿ ನಿರ್ಧರಿಸಬೇಕೆಂಬ ವಿಶಾಲತನ ಅವನಿಗಿತ್ತು. ಹೀಗಾಗಿ ಯಾದವೀಕಲಹದಿಂದ ನೊಂದು ಕುಳಿತಿದ್ದಾಗ ಕಾಲಿನ ಉಂಗುಷ್ಠಕ್ಕೆ ಸಿಕ್ಕಿಕೊಂಡ ಬೇಡನ ಬಾಣವನ್ನು ಹಗುರವಾಗಿ ಪರಿಗಣಿಸದೆ, ತನ್ನ ನೆತ್ತಿಯಲ್ಲಿ ಕೊರೆಯುತ್ತಿದ್ದ ಯೋಚನಾಲಹರಿಗೆ ಅಂತ್ಯ ಹಾಡಿ ‘ಕಾಲಯಾನ’ ಮಾಡಿದ.

ಭಾರತದ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಇಟ್ಟ; ಕರ್ಮಠವಾಗುತ್ತಿದ್ದ ಸಂಸ್ಕೃತಿಗೆ ಬದಲಾವಣೆಯ ಗಾಳಿ ಬೀಸಿದ ಶ್ರೀಕೃಷ್ಣ. ಭಾರತೀಯರ ಭಾವೈಕ್ಯಕ್ಕೆ ಸಾಕ್ಷಿಪ್ರಜ್ಞೆಯಂತಿರುವ ಶ್ರೀಕೃಷ್ಣನನ್ನು ನರಕಚತುರ್ದಶಿ ಸಂದರ್ಭದಲ್ಲಿ ಕೊಂಡಾಡುವುದಕ್ಕೆ ಸೀಮಿತವಾಗಿಸದೆ, ಅವನು ಸಾರಿದ ಸಾಮಾಜಿಕ ಮೌಲ್ಯಗಳನ್ನು ಕಾಪಾಡಲು ಬದುಕನ್ನು ಮೀಸಲಿಡಬೇಕು. ಇಂದು ಇದ್ದು, ನಾಳೆ ಸಾಯುವ ನಮ್ಮ ಜೀವ ಸದಾ ‘ಸಚ್ಚಿದಾನಂದ’ಭಾವದಲಿ ಪರರ ಒಳಿತಿಗೆ ಮಿಡಿಯಬೇಕು. ಇದೇ ಶ್ರೀಕೃಷ್ಣನಿಗೆ ಸಲ್ಲಿಸುವ ಭಕ್ತಿಪೂರ್ವಕ ನಮನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.