ADVERTISEMENT

ದೇವರ ಹುಡುಕಾಟದಲ್ಲಿ...

ಪಶ್ಚಿಮದ ಅರಿವು /ಹಾರಿತಾನಂದ
Published 25 ಜುಲೈ 2018, 19:30 IST
Last Updated 25 ಜುಲೈ 2018, 19:30 IST

ಭಜನೆಯ ತಾಳದಲ್ಲಿ, ತೇರಿನ ಬಾವುಟಗಳ ಬಣ್ಣದಲ್ಲಿ, ಪಟಾಕಿಗಳ ವಾಸನೆಯಲ್ಲಿ, ನೆಲ್ಲಿ–ಹುಣಸೆಕಾಯಿಗಳ ತೋರಣದಲ್ಲಿ ದೇವರನ್ನು ಕಂಡದ್ದು ಆಯಿತು. ಹೀಗೆ ಕಣ್ಣಿಗೆ ಕಾಣುವ ವಿವರಗಳಲ್ಲಿ ಕಂಡ ದೇವರನ್ನು ನಿರಾಕಾರ ಎಂದೂ ಗುರುತಿಸಿಯೂ ಆಯಿತು. ಇದು ದೇವರು ಕಾಣಿಸಿದ ಮೊದಲ ಹಂತ – ಎಂದಿದ್ದಾರೆ, ಯಶವಂತ ಚಿತ್ತಾಲ. ಬಾಲ್ಯದಲ್ಲಿ ಕಂಡ ದೇವರು ಮುಂದಿನ ಹಂತದಲ್ಲಿ ಸಾಕಾರ–ಸಗುಣನಾದನಂತೆ. ಚಿತ್ತಾಲರು ನೀಡಿರುವ ಆ ವಿವರಗಳೂ ಮನನೀಯವಾಗಿದೆ:

‘ನಿರಾಕಾರನಾಗಿ ಹುಟ್ಟಿದ ದೇವರು ಸಾಕಾರ ಸಗುಣನಾದದ್ದು ಬಹಳ ಮುಂದೆ – ಹಿರಿಯರಿಂದ, ಭಾಷೆಯ, ಧರ್ಮ–ಧಾರ್ಮಿಕ ವಿಧಿಗಳ ಸಂಸ್ಕಾರ ಪಡೆದ ಕಾಲದಲ್ಲಿ. ತಲೆಗೆ ಚಂಡಿಕೆ ಮೂಡಿತ್ತು; ಕೊರಳಿಗೆ ಜನಿವಾರ ಬಂದಿತ್ತು; ಪಾಪ–ಪುಣ್ಯ, ಒಳಿತು–ಕೆಡಕು, ಸ್ವರ್ಗ–ನರಕಗಳು ಹುಟ್ಟಿಕೊಂಡಿದ್ದವು. ದೇವಾಲಯ–ಮಠಗಳಲ್ಲಿ ನಡೆಯುತ್ತಿದ್ದ ಕೀರ್ತನೆಗಳಲ್ಲಿ, ಭಜನೆಯ ಸಪ್ತಾಹಗಳಲ್ಲಿ, ಪುರಾಣ–ಪ್ರವಚನಗಳಲ್ಲಿ ದೇವರು ಅವತಾರಪುರುಷನಾಗಿದ್ದ; ಸೃಷ್ಟಿಕರ್ತ–ಸೃಷ್ಟಿನಿಯಾಮಕನಾಗಿದ್ದ; ದಯಾಘನ–ವಿಘ್ನಹರ್ತಾರನಾಗಿದ್ದ; ಶಿಷ್ಟಪರಿಪಾಲಕ–ದುಷ್ಟವಿನಾಶಕನಾಗಿದ್ದ. ನಾನು ಬೆಳೆದ ಪರಿಸರದಲ್ಲಿಯ ದೇವಾಲಯಗಳಲ್ಲಿಯ, ನಮ್ಮ ಮನೆಯ ಕತ್ತಲೆ ತುಂಬಿದ ದೇವರ ಕೋಣೆಯಲ್ಲಿಯ ಮೂರ್ತಿಯಾಗಿದ್ದ. ಜಗುಲಿಯ ಗೋಡೆಗೆ ತೂಗುಹಾಕಿದ್ದ ಪಟಗಳಾಗಿದ್ದ. ಅಭಿಷೇಕ, ಪೂಜೆ, ನೈವೇದ್ಯ ಪಡೆಯುತ್ತಿದ್ದ. ಬಂಡೀಹಬ್ಬದ ದಿನಗಳಲ್ಲಿ ಕುರಿಕೋಳಿಗಳ ರಕ್ತ ಕುಡಿಯುತ್ತಿದ್ದ. ಮುರ್ಕಂಡೀ ದೇವಸ್ಥಾನ, ದೇವತೀ ದೇಗುಲಗಳ ಗುನಗರಲ್ಲಿ ‘ಭಾರ’ವಾಗಿ ಬರುತ್ತಿದ್ದ. ಒಳ್ಳೆಯವರಿಗೆ ವರ, ತಪ್ಪಿದವರಿಗೆ ದಂಡ ವಿಧಿಸುತ್ತಿದ್ದ. ಮಾನವರೂಪಿಯಾಗಿಯೂ ಅಮಾನುಷನಾಗಿದ್ದ. ಭಕ್ತಿ ಆದರಗಳಂತೆ ಭಯಕ್ಕೂ ಕಾರಣನಾಗಿದ್ದ – ಅನುಭವದೂರನಾಗಿದ್ದ.’

ಬಾಲ್ಯದಲ್ಲಿ ನಮ್ಮ ಭಾವಕ್ಕೆ ಸಿಗುವ ದೇವರು ಅನಂತರ ಅವನನ್ನು ನಮ್ಮ ನಂಬಿಕೆಯಲ್ಲೂ ಆಚರಣೆಯಲ್ಲಿಯೂ ಕಾಣಲುತೊಡಗುತ್ತೇವೆ. ಇದನ್ನೇ ಚಿತ್ತಾಲರು ಎರಡನೆಯ ಹಂತ ಎಂದಿರುವುದು. ಈ ಸ್ಥಿತಿಯಲ್ಲಿ ನಮ್ಮ ಭಯ–ಆತಂಕ–ಆಸೆ–ನಿರಾಸೆಗಳ ಜೊತೆಯಲ್ಲಿ ಇತರರ ಭಯ–ಆತಂಕ–ಆಸೆ–ನಿರಾಸೆಗಳೂ ನಮ್ಮನ್ನು ಪ್ರಭಾವಿಸುತ್ತಿರುತ್ತವೆ. ಈ ಕಾರಣದಿಂದಲೇ ಎನಿಸುತ್ತದೆ ದೇವರನ್ನು ನಾವು ಸಾಕಾರನನ್ನಾಗಿಯೂ ಸಗುಣನನ್ನಾಗಿಯೂ ಸಾಕ್ಷಾತ್ಕರಿಸಿಕೊಳ್ಳಲು ಹಂಬಲಿಸುತ್ತೇವೆ. ಏಕೆಂದರೆ ಅವನು ನಮ್ಮನ್ನು ಕಾಪಾಡಬೇಕಾಗುತ್ತದೆ, ನಮ್ಮ ಶತ್ರುಗಳನ್ನು ಶಿಕ್ಷಿಸಬೇಕಾಗುತ್ತದೆ; ನಮಗೆ ಏನೇನು ಬೇಕೋ ಅವೆಲ್ಲವನ್ನೂ ಅವನು ಕೊಡಬೇಕಾಗುತ್ತದೆ; ನಮ್ಮ ಜೊತೆಯಲ್ಲಿಯೇ ಇದ್ದುಕೊಂಡು ನಮ್ಮನ್ನು ಪ್ರತಿಕ್ಷಣವೂ ಕಾಪಾಡಬೇಕಾಗುತ್ತದೆ. ನಮ್ಮ ಈ ದೇವರು ನಮ್ಮಲ್ಲಿ ಭಕ್ತಿಯನ್ನು ಹುಟ್ಟಿಸುತ್ತಾನೆ, ನಮ್ಮಿಂದ ಪೂಜೆಯನ್ನು ಸ್ವೀಕರಿಸುತ್ತಾನೆ; ಆ ಭಕ್ತಿಗೂ ಪೂಜೆಗೂ ಒಲಿದು ಪ್ರತಿಫಲದ ರೂಪದಲ್ಲಿ ವರಗಳನ್ನೂ ನೀಡಬಲ್ಲವನಾಗಿರುತ್ತಾನೆ. ದೇವರ ಈ ಹಂತದ ರೂಪವೇ ನಾವು ಪ್ರಪಂಚದಲ್ಲಿ ಹೆಚ್ಚಾಗಿ ನೋಡುವುದು. ಅವನನ್ನು ಹೆಚ್ಚೆಚ್ಚು ಸಗುಣವಾಗಿಯೂ ಸಾಕಾರವಾಗಿಯೂ ಕಲ್ಪಿಸಿಕೊಂಡಂತೆಲ್ಲ ಅವನ ಬಗ್ಗೆ ಸಾಕಷ್ಟು ಸಮಸ್ಯೆಗಳೂ ಗೊಂದಲಗಳೂ ಪ್ರಶ್ನೆಗಳೂ ಕಾಣಿಸಿಕೊಳ್ಳತೊಡಗುತ್ತವೆ. ಏಕೆಂದರೆ ಸಗುಣ–ಸಾಕಾರರೂಪಗಳು ನಮ್ಮ ಇಂದ್ರಿಯಾನುಭವಗಳನ್ನು ನೆಚ್ಚಿಕೊಂಡೇ ಮೂಡಿಕೊಂಡಿರುತ್ತವೆ. ಆದರೆ ನಮ್ಮ ಈ ಅನುಭವಗಳಿಗೆ ಮಿತಿಯಿರುವುದು. ಮಿತಿಯಿರುವ ಅನುಭಗಳ ಆಧಾರಮೇಲೆ ಮಿತಿಯಿರದ ತತ್ತ್ವನ್ನು ಗ್ರಹಿಸುವುದಾದರೂ ಹೇಗೆ? ಇಂಥದೊಂದು ಪ್ರಶ್ನೆ ನಮ್ಮಲ್ಲಿ ಹುಟ್ಟಬೇಕು. ಇಲ್ಲದಿದ್ದರೆ ನಮ್ಮ ಮಿತಿಗಳನ್ನೇ ಶಕ್ತಿ ಎಂದು ಭ್ರಮಿಸಿಕೊಂಡು, ಅವನ್ನೇ ನಾವು ಕಾಣುವ ‘ದೇವರ’ಲ್ಲಿ ಆರೋಪಿಸುತ್ತೇವೆ. ಆಗ ಒಂದೊಂದಾಗಿ ಸಮಸ್ಯೆಗಳು ಎದುರಾಗುತ್ತವೆ. ಉದಾಹರಣೆಗೆ: ‘ದೇವರು ಯಾವತ್ತು ಒಳ್ಳೆಯವರನ್ನು ಕಾಪಾಡುತ್ತಾನೆ’ – ಎಂದು ಹೇಳುತ್ತೇವೆ ಎಂದಿಟ್ಟುಕೊಳ್ಳಿ. ‘ಒಳ್ಳೆಯವರು ಯಾರು?’ ಇಂಥದೊಂದು ಪ್ರಶ್ನೆ ಆ ಕೂಡಲೇ ಹುಟ್ಟಿಕೊಳ್ಳದಿರದು. ಈ ಪ್ರಶ್ನೆಗೆ ಉತ್ತರಿಸುವುದು ಸುಲಭವೇನಲ್ಲ. ನಮಗೆ ಯಾರು ಒಳ್ಳೆಯವರು ಎಂದು ಕಾಣುತ್ತಾರೋ ಅವರು ಇತರರಿಗೆ ಕೆಟ್ಟವರು ಎಂದು ಕಾಣಬಹುದು; ನಮಗೆ ಕೆಟ್ಟವರಾಗಿರುವವರು ಇತರರಿಗೆ ಒಳ್ಳೆಯವರಾಗಿರಬಹುದು. ಹಾಗಾದರೆ ‘ಒಳ್ಳೆಯವರನ್ನು ದೇವರು ಕಾಪಾಡುತ್ತಾನೆ’ ಎನ್ನುವುದನ್ನು ಹೇಗೆ ಅರ್ಥೈಸಿಕೊಳ್ಳುವುದು.

ADVERTISEMENT

ಎರಡನೆಯ ಹಂತದಲ್ಲಿ ಸ್ಪಷ್ಟತೆ ಸಿಗದಿದ್ದಾಗ ಮೂರನೇ ಹಂತದಲ್ಲಿ ದೇವರ ಕಲ್ಪನೆ ಇನ್ನೊಂದು ಆಯಾಮವನ್ನು ಪಡೆದುಕೊಳ್ಳುವುದು. ಚಿತ್ತಾಲರಲ್ಲಿ ನಡೆದ ಈ ಹಂತವನ್ನು ಅವರು ‘ಮೂರ್ತಿಭಂಜಕತೆಯ ಕಾಲ’ – ಎಂದು ಕರೆದಿದ್ದಾರೆ. ಆದರೆ ಎಲ್ಲರಲ್ಲೂ ಇದು ಹೀಗೆಯೇ ನಡೆಯಬೇಕು ಎಂದೇನಿಲ್ಲ. ಆದರೆ ದೇವರ ಬಗ್ಗೆಯ ಕಲ್ಪನೆಯನ್ನು ಸರಿಯಾಗಿ ಗ್ರಹಿಸದೆ ಉಂಡುಂಡೆಯಾಗಿ ನುಂಗಿದರೆ, ಆಗ ಅದು ಅಜೀರ್ಣವಾಗುವುದು. ಆಗ ದೇವರು ನಮಗೆ ವಿರೋಧಪಕ್ಷದ ನಾಯಕನಾಗಿಯೇ ಕಾಣುತ್ತಾನೆ, ಅಷ್ಟೆ! ಈ ಮೂರನೆಯ ಹಂತವನ್ನು ದಾಟಿ ಮುಂದಕ್ಕೆ ಹೋದರೆ ಆಗ ದೇವರ ಕಲ್ಪನೆ ಇನ್ನೊಂದು ಆಯಾಮವನ್ನು ಪಡೆಯುತ್ತದೆ. ಈ ಹಂತವನ್ನು ಚಿತ್ತಾಲರು ನಿರೂಪಿಸಿದ್ದಾರೆ. ನಮ್ಮ ಜೀವನಾನುಭವಗಳೇ ನಮ್ಮನ್ನು ಪಾಕಮಾಡಿರುತ್ತವೆ. ನಮ್ಮ ಎಷ್ಟು ಸರಿ–ತಪ್ಪುಗಳ ಎಣಿಕೆಯೇ ಬೇರೆ ರೀತಿ ಕಾಣಿಸಿಕೊಳ್ಳಲು ಆರಂಭವಾಗಿರುತ್ತದೆ. ಈ ಹಂತವೇ ದೇವರನ್ನು ಹುಡುಕಲು ಸರಿಯಾದ ಕಾಲ. ಆದರೆ ಈ ಕಾಲ ಯಾವಾಗ ಬೇಕಾದರೂ ಒದಗಬಹುದೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.