ADVERTISEMENT

ಅಂಬೇಡ್ಕರ್ ಭವನ ನಿರ್ಮಿಸದಿದ್ದರೆ ಹೋರಾಟ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 19:30 IST
Last Updated 15 ಏಪ್ರಿಲ್ 2011, 19:30 IST
ಅಂಬೇಡ್ಕರ್ ಭವನ ನಿರ್ಮಿಸದಿದ್ದರೆ ಹೋರಾಟ
ಅಂಬೇಡ್ಕರ್ ಭವನ ನಿರ್ಮಿಸದಿದ್ದರೆ ಹೋರಾಟ   

ವಿಜಯಪುರ : ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನವನ್ನು ದೇವನಹಳ್ಳಿಯಲ್ಲಿ ನಿರ್ಮಿಸಲು 2 ಕೋಟಿ ರೂಪಾಯಿ ಬಿಡುಗಡೆಯಾಗಿರುವುದಾಗಿ ಹೇಳಲಾಗುತ್ತಿದ್ದು, ಇಲ್ಲಿಯವರೆಗೆ ಕಾಮಗಾರಿ ಆರಂಭವಾಗಿಲ್ಲ. ಮುಂದಿನ ಅಂಬೇಡ್ಕರ್ ಜಯಂತಿ ವೇಳೆಗೆ ಅಂಬೇಡ್ಕರ್ ಭವನ ನಿರ್ಮಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸಮೀಪದ ಕೋರಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ, ಬಾಬು ಜಗಜೀವನ್‌ರಾಮ್ ಜಯಂತಿ ಪ್ರಯುಕ್ತ ಶಿವಕನ್ಯ ಆರ್.ದೇವರಾಜು ಮತ್ತು ಎಂ.ವೀರಪ್ಪ ಅವರು ನಿರ್ಮಿಸಿರುವ ಅಂಬೇಡ್ಕರ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾವು ಶಾಸಕರಾಗಿದ್ದ ಅವಧಿಯಲ್ಲಿ ದೇವನಹಳ್ಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 77 ಲಕ್ಷ ರೂ. ಬಿಡುಗಡೆಯಾಗಿತ್ತು. ಸಂಪನ್ಮೂಲವಿದ್ದರೂ ನಿರ್ವಹಣೆ ಕೊರತೆಯಿಂದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಎದ್ದು ಕಾಣುತ್ತಿದೆ ಎಂದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಕೆ.ಶಿವಪ್ಪ ಮಾತನಾಡಿ, ರಾಷ್ಟ್ರದ ಪ್ರಗತಿಯಲ್ಲಿ ಯುವಕರ ಪಾತ್ರ ಮಹತ್ವದ್ದು. ಯುವಪೀಳಿಗೆ ಮೌಲ್ಯಗಳಡಿಯಲ್ಲಿ ಬೆಳೆದು ಉತ್ತಮ ಸಮಾಜ ನಿರ್ಮಿಸಲು ಕಂಕಣ ತೊಡಬೇಕು ಎಂದರು.

ಕಿಮ್ಸ್ ಅಧ್ಯಕ್ಷ ಬಿ.ಮುನೇಗೌಡ, ಜಿ.ಪಂ.ಮಾಜಿ ಸದಸ್ಯ ಪಿಳ್ಳಮುನಿಶಾಮಪ್ಪ ಮಾತನಾಡಿದರು. ವಿಜಯಪುರದ ಪುರಸಭಾ ಮಾಜಿ ಸದಸ್ಯ ಆರ್.ದೇವರಾಜು ಅಂಬೇಡ್ಕರ್ ಭವನ ಉದ್ಘಾಟಿಸಿದರು. ಜಿ.ಪಂ.ಮಾಜಿ ಸದಸ್ಯ ವೀರಪ್ಪ ಅಧ್ಯಕ್ಷತೆವಹಿಸಿದ್ದರು. ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಮುನಿಶಾಮಿಗೌಡ ಬಾಬು ಜಗಜೀವನರಾಮ್ ಭಾವಚಿತ್ರ ಅನಾವರಣಗೊಳಿಸಿದರು. ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಶ್ರೀರಾಮಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಶ್ರೀನಿವಾಸ್, ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಆರ್.ಮುನೇಗೌಡ, ಆವತಿ ತಾ.ಪಂ.ಸದಸ್ಯ ರಾಮಪ್ಪ, ಪುರಸಭಾ ಸದಸ್ಯ ನವೀನ್ ಕುಮಾರ್, ಹುರುಳುಗುರ್ಕಿ ಶ್ರೀನಿವಾಸ್, ಬೆಂಗಳೂರು ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಎನ್.ನಾರಾಯಣಸ್ವಾಮಿ, ಕೋರಮಂಗಲ ಗ್ರಾ.ಪಂ.ಸದಸ್ಯ ಸಿ.ಚೆನ್ನರಾಯಪ್ಪ, ಸಿ.ನಾರಾಯಣಪ್ಪ, ಶಿವಾನಂದ, ಎ.ತಮ್ಮಣ್ಣ, ಎಂಪಿಸಿಎಸ್ ನಿರ್ದೇಶಕರು, ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೆ.ವಿ.ಬೈರೇಗೌಡ ನಿರೂಪಿಸಿದರು. ಶಿವಾನಂದ ಸ್ವಾಗತಿಸಿದರು.

ವಿವಿಧೆಡೆ ಅಂಬೇಡ್ಕರ್ ಜಯಂತಿ:
ಸಮೀಪದ ವೆಂಕಟಗಿರಿಕೋಟೆ ಗ್ರಾಮದ ಗಂಗಾತಾಯಿ ದೇವಾಲಯದ ಬಳಿ ಅಂಬೇಡ್ಕರ್ ಯುವಕಸಂಘದ ವತಿಯಿಂದ ಅಂಬೇಡ್ಕರ್ ಮತ್ತು ಜಗಜೀವನರಾಂ ಜಯಂತಿ ನಡೆಯಿತು.ಮಂಜುನಾಥ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಚಂದ್ರಶೇಖರ್ ಮಾತನಾಡಿ, ಮಕ್ಕಳಲ್ಲಿ ಅಧ್ಯಯನಶೀಲತೆ ವೃದ್ಧಿಗೊಳ್ಳಬೇಕು. ಹಿರಿಯರ ಆದರ್ಶಗಳನ್ನು ಅನುಕರಿಸಬೇಕು ಎಂದರು. ಗ್ರಾ.ಪಂ. ಸದಸ್ಯ ಚಿಟ್ಟೆಪ್ಪ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಎಸ್‌ಸಿ.ಎಸ್‌ಟಿ ಘಟಕದ ಅಧ್ಯಕ್ಷ ಸಿ.ಈರಪ್ಪ, ಎಂಪಿಸಿಎಸ್ ಮಾಜಿ ಅಧ್ಯಕ್ಷ ಚಿನ್ನಪ್ಪ, ಗೋವಿಂದಪ್ಪ, ಶಿವಕುಮಾರ್, ಡಿಸ್ಕೋ, ಸಿ.ಆಂಜಿನಪ್ಪ, ವಿಜಯ್,  ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.