ADVERTISEMENT

ಅಕ್ರಮ ಗಣಿಗಾರಿಗೆ ವಿರೋಧ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:30 IST
Last Updated 14 ಫೆಬ್ರುವರಿ 2011, 18:30 IST

ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ದೊಡ್ಡತೋಳೂರು ಗ್ರಾಮದ ಊರಡವಿ ಜಾಗವನ್ನು  ವ್ಯಕ್ತಿಯೊಬ್ಬರು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡು ಗಣಿಗಾರಿಕೆ ನಡೆಸಲು ಮುಂದಾಗಿರುವುದನ್ನು ತಡೆಯುವಂತೆ ಆಗ್ರಹಿಸಿ ಕಾವೇರಿ ಸೇನೆ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ನಗರದ ಅರಣ್ಯ ಭವನದ ಮುಂದೆ ಪ್ರತಿಭಟನೆ ನಡೆಸಿದರು.

ಕಾವೇರಿ ಸೇನೆಯ ಜಿಲ್ಲಾ ಸಂಚಾಲಕ ರವಿಚಂಗಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಊರಡವಿ ಜಾಗದಲ್ಲಿ ವ್ಯಕ್ತಿಯೊಬ್ಬರು ಗಣಿಗಾರಿಕೆ ನಡೆಸಲು ಯಂತ್ರೋಪಕರಣಗಳನ್ನು ಸಜ್ಜಾಗಿಟ್ಟಿದ್ದಾರೆ.ಆದ್ದರಿಂದ ಕೂಡಲೇ  ಈ ಜಾಗದಲ್ಲಿ ಗಣಿಗಾರಿಕೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದರು.

ದೊಡ್ಡತೋಳೂರು ಗ್ರಾಮದ ಊರಡವಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಎರಡು ಜೆಸಿಬಿ  ಯಂತ್ರಗಳನ್ನು ಸಜ್ಜಾಗಿಡಲಾಗಿದೆ. ಗಣಿಗಾರಿಕೆ ನಡೆಸಲು ಉದ್ದೇಶಿಸಿರುವ ಕೆಳಭಾಗದಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿದ್ದು, ಇದರಿಂದ ಅಲ್ಲಿನ ನಿವಾಸಿಗಳಿಗೂ ತೊಂದರೆಯಾಗಲಿದೆ ಎಂದು ಆರೋಪಿಸಿದರು.

ತೋಳೂರು ಶೆಟ್ಟಳ್ಳಿ ಗ್ರಾ.ಪಂ. ಸದಸ್ಯ ಡಿ.ಎಸ್. ಕುಶಾಲಪ್ಪ, ಸ್ಥಳೀಯರಾದ ಡಿ.ಎಸ್. ಕಾಳಪ್ಪ, ಕಾವೇರಿಸೇನೆ ಪದಾಧಿಕಾರಿಗಳಾದ ಹೊಸಬೀಡು ಶಶಿ, ಸನ್ನಿ ಪೂವಯ್ಯ, ಹೊಸಬೀಡು ಪ್ರದೀಪ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಆನಂತರ ಎಸಿಎಫ್ ಪ್ರಸನ್ನಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೋಮವಾರಪೇಟೆ ತಾಲ್ಲೂಕು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಎಸಿಎಫ್ ಭರವಸೆ ನೀಡಿದ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.