ADVERTISEMENT

ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ

ಮೊಳಕಾಲ್ಮುರು: ಸಾಂಕ್ರಾಮಿಕ ರೋಗ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:18 IST
Last Updated 26 ಡಿಸೆಂಬರ್ 2012, 5:18 IST

ಮೊಳಕಾಲ್ಮುರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಡೆಂಗೆ, ಮಲೇರಿಯಾ ಮತು ಚಿಕನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಹತೋಟಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಲಾಯಿತು.

ಈಚೆಗೆ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯಸಭೆಯಲ್ಲಿ ಮಾತನಾಡಿದ ಸದಸ್ಯರಾದ ಲಕ್ಷ್ಮೀದೇವಿ ಮತ್ತು ಅಡವಿ ಮಾರಯ್ಯ, ರೋಗಗಳು ಹೆಚ್ಚಳವಾಗುತ್ತಾ ಆತಂಕ ಮೂಡಿಸಿದೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ರೋಗಿಗಳಿಗೆ ತೊಂದರೆಯಾಗಿದೆ ಎಂದರು. ಚಿಕ್ಕೇರಹಳ್ಳಿ ಆರೋಗ್ಯ ಉಪಕೇಂದ್ರಕ್ಕೆ ವಾರಕ್ಕೆ ಒಮ್ಮೆಯಾದರೂ ವೈದ್ಯರು ಭೇಟಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಲಕ್ಷ್ಮೀದೇವಿ ಮನವಿ ಮಾಡಿದರು. ರೋಗ ಲಕ್ಷಣಗಳು ಮತ್ತು ಹರಡುವಿಕೆ ಬಗ್ಗೆ ಸೂಕ್ತ ಪ್ರಚಾರ  ಕೈಗೊಳ್ಳುವಂತೆ ಇಒ ಅಂಜನ್‌ಕುಮಾರ್ ಆರೋಗ್ಯಾಧಿಕಾರಿ ತುಳಸಿ ರಂಗನಾಥ್ ಅವರಿಗೆ ಸೂಚಿಸಿದರು.

ಶಿಶು ಅಭಿವೃದ್ಧಿ ಅಧಿಕಾರಿ ತಿರುಮಲಯ್ಯ ಮಾತನಾಡಿ, ಗ್ರಾಮಪಂಚಾಯ್ತಿಗೆ ಒಂದರಂತೆ ಮಂಜೂರಾಗಿರುವ 15 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ನಿರ್ಮಿತಿಕೇಂದ್ರ ತೀವ್ರ ವಿಳಂಬ ಮಾಡುತ್ತಿದೆ ಮತ್ತು ಭೂಸೇನಾ ನಿಗಮ ನಿರ್ಮಿಸಿರುವ ಆರು ಅಂಗನವಾಡಿ ಕಟ್ಟಡಗಳಲ್ಲಿ ಶೌಚಾಲಯ ನಿರ್ಮಿಸಿಲ್ಲ ಹಾಗೂ ಕಟ್ಟಡಗಳನ್ನು ಸಹ ಇಲಾಖೆ ವಶಕ್ಕೆ ನೀಡದೇ ಸತಾಯಿಸುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿಲ್ಲ ಮತ್ತು ಈಚೆಗೆ ವಿತರಣೆ ಮಾಡಿರುವ ಸೋಲಾರ್ ದೀಪಗಳು ಕಳಪೆಯಾಗಿದೆ ಎಂದು ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಇಒ ಅಂಜನ್‌ಕುಮಾರ್ ಸೂಚಿಸಿದರು.

ನಾಗಸಮುದ್ರದ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯ ಶಿಥಿಲವಾಗಿ ಬೀಳುವ ಸ್ಥಿತಿಯಲ್ಲಿದೆ. ಹಲವು ವರ್ಷಗಳಿಂದ ಕ್ರಮಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸದಸ್ಯ ಅಡವಿ ಮಾರಯ್ಯ ದೂರಿದರು.

ಜಿಲ್ಲಾಪಂಚಾಯ್ತಿ ಎಂಜಿನೀಯರ್ ಚಂದ್ರಶೇಖರ್ ಮಾಹಿತಿ ನೀಡಿ, 12-13ನೇ ಹಣಕಾಸು ಯೋಜನೆಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆರೂ.1 ಕೋಟಿ ಅನುದಾನ ಮಂಜೂರಾಗಿದ್ದು 8 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಎರಡು ಕಾರ್ಯಗಳು ಪ್ರಗತಿಯಲ್ಲಿವೆ. ಇದೇ ಸಾಲಿಗೆ ಅಂತರ್ಜಲ ಅಭಿವೃದ್ಧಿಗೆರೂ.75 ಲಕ್ಷ ಮತ್ತು ಪ್ಲೂರೈಡ್ ಶುದ್ಧೀಕರಣ ನೀರು ನೀಡುವ ಕೆಲಸಕ್ಕೆರೂ.32 ಲಕ್ಷ ಅನುದಾನ ಮಂಜೂರಾಗಿದ್ದು, ಕ್ರಮವಾಗಿ 9 ಹಾಗೂ 4 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾ.ಪಂ. ಅಧ್ಯಕ್ಷೆ ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಕಾಂತರೆಡ್ಡಿ, ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.