ADVERTISEMENT

ಅಗ್ನಿ ತುಳಿತ ವೈಜ್ಞಾನಿಕ ಸತ್ಯ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ಸೇಡಂ:  ಮಂಗಳವಾರ ಬೆಳಗಿನ ಜಾವ ಭಕ್ತರು ಹೊಸ ಲುಂಗಿ, ಬನಿಯನ್ ಮತ್ತು ಹೆಗಲ ಮೇಲೆ ಕೆಂಪು ವಸ್ತ್ರ ಹಾಕಿಕೊಂಡು ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯ ಕಡೆ ದಾಪುಗಾಲು ಹಾಕುತ್ತಿರುವುದು ಸಾಮಾನ್ಯವಾಗಿತ್ತು.

ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಉಚ್ಚಾಯಿ ಮೆರವಣಿಗೆ, ಅಗ್ನಿ ತುಳಿತಕ್ಕೆ ನೂರಾರು ಭಕ್ತರು ಸೇರಿದ್ದರು. ಜಯಕಾರ ಮತ್ತು ಘೋಷಣೆಗಳ ಮಧ್ಯೆ ವಿವಿಧ ವಾದ್ಯ ತಂಡಗಳು ಮತ್ತು ಪುರವಂತರ ಹೆಜ್ಜೆಗಳು ಎಲ್ಲರ ಗಮನ ಸೆಳೆದವು.

ಅಗ್ನಿ ತುಳಿತದಿಂದ ಮನಸ್ಸಿನಲ್ಲಿರುವ ಮಾಡಿಕೊಂಡಿರುವ ಹರಕೆ ಈಡೇರುತ್ತದೆ. ಮನುಷ್ಯನಲ್ಲಿರುವ ಜಡತ್ವ ದೂರ ಆಗುತ್ತದೆ. ಹೀಗಾಗಿ ಅಗ್ನಿ ತುಳಿತ ಎನ್ನುವುದು ಧಾರ್ಮಿಕ ಕ್ರಿಯೆಯ ಜೊತೆಗೆ ವೈಜ್ಞಾನಿಕ ಸತ್ಯವಾಗಿರುವ ಕ್ರಿಯೆ ಎಂದು ದೇವಾಲಯದ ಪೀಠಾಧಿಪತಿ ಸದಾಶಿವ ಸ್ವಾಮೀಜಿ ನುಡಿದರು.

ಕಿರಾಣಾ ಬಜಾರ್ ಮೂಲಕ ಹಳೆ ಗಂಜ್ ರಸ್ತೆಯ ಅಗ್ಗಿಕಟ್ಟೆ ಬಳಿ ಸಹಸ್ರಾರು ಭಕ್ತರು ಸೇರಿದ್ದರು. ಉಚ್ಚಾಯಿ ಮೆರವಣಿಗೆ ಬಸವಣ್ಣನ ಕಟ್ಟೆ ಬಳಿ ಸಾಗಿ ಬಂದು ಅಗ್ನಿ ಕುಂಡದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಸದಾಶಿವ ಸ್ವಾಮೀಜಿ ಉಚ್ಚಾಯಿಯಾಂದಿಗೆ ಅಗ್ನಿ ಪ್ರವೇಶ ಮಾಡಿ ಚಾಲನೆ ನೀಡಿದರು.  ನಂತರ ಮಕ್ಕಳು, ಯುವಕರು, ಯುವತಿಯರು, ವಯೋವೃದ್ಧರು ಅದರಲ್ಲೂ ಮಹಿಳೆಯರು ಮಕ್ಕಳನ್ನು ಹೊತ್ತು ಸಾಗಿ ಬಂದದ್ದು ವಿಶೇಷವಾಗಿತ್ತು.

ಬದುಕಿನಲ್ಲಿ ಬಂದೊದಗಿದ ತೊಂದರೆ ನಿವಾರಣೆ, ಸಂತಾನ ಪ್ರಾಪ್ತಿ ಮತ್ತು ಅಭಿವೃದ್ದಿಗಾಗಿ ಅಗ್ನಿಯಲ್ಲಿ ಸಾಗಿ ಬಂದು ಹರಕೆ ತೀರಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಪುರವಂತರು ಕತ್ತಿ ವರಸೆ ಮತ್ತು ಮುಖದ ಎರಡೂ ಕೆನ್ನೆಗಳ ಮೂಲಕ ಕಬ್ಬಿಣದ ಸಲಾಕೆಗಳನ್ನು ತೂರಿಸಿಕೊಳ್ಳುವ ಮೂಲಕ ನೆರೆದ ಸಹಸ್ರಾರು ಭಕ್ತರನ್ನು ಆಶ್ಚರ್ಯಗೊಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.