ADVERTISEMENT

ಅಡಿಕೆ: 15ಕ್ಕೆ ದೆಹಲಿಗೆ ರೈತರ ನಿಯೋಗ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:30 IST
Last Updated 6 ಮಾರ್ಚ್ 2011, 18:30 IST

ಶಿವಮೊಗ್ಗ: ಗುಟ್ಕಾ ಪ್ಲಾಸ್ಟಿಕ್ ಸ್ಯಾಷೇ ನಿಷೇಧದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಬರಬೇಕು ಎಂದು ಆಗ್ರಹಿಸಿ ನವದೆಹಲಿಗೆ ಹೊರಡಲಿರುವ ರೈತರ ನಿಯೋಗದ ನೇತೃತ್ವವನ್ನು ಮುಖ್ಯಮಂತ್ರಿ ವಹಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಮುಖಂಡರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.

ಗುಟ್ಕಾ ಪ್ಲಾಸ್ಟಿಕ್ ಸ್ಯಾಷೇ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಳೆಗಾರರ ನೆರವಿಗೆ ಬರಬೇಕು ಎಂದು ಆಗ್ರಹಿಸಿ ಇದೇ 15ರಂದು 15 ಸಾವಿರ ಜನ ರೈತರು ದೆಹಲಿಗೆ ನಿಯೋಗ ತೆರಳಲಿದ್ದಾರೆ.ಇದರ ನೇತೃತ್ವವನ್ನು ಮುಖ್ಯಮಂತ್ರಿ ವಹಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ಅಡಿಕೆ ವಹಿವಾಟು ಸ್ಥಗಿತಗೊಂಡಿದ್ದರಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ.ಆದ್ದರಿಂದ ಸಹಕಾರ ಸಂಸ್ಥೆಗಳು, ಬಡ್ಡಿ ರಹಿತ ಸಾಲ ನೀಡಬೇಕು ಎಂದು ರೈತರು ಆಗ್ರಹಿಸಿದರು. ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ದೆಹಲಿಗೆ ಪ್ರತಿಪಕ್ಷಗಳ ಮುಖಂಡರನ್ನೂ ಆಹ್ವಾನಿಸಿ.ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಹೋಗೋಣ’ ಎಂದರು.

ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ, ಪದಾಧಿಕಾರಿಗಳಾದ ಯಶವಂತರಾವ್ ಘೋರ್ಪಡೆ, ವೀರೇಶ್, ಜಯಪ್ಪಗೌಡ ಮತ್ತಿತರರು ನೇತೃತ್ವ ವಹಿಸಿದ್ದರು.ಮ್ಯಾಮ್‌ಕೋಸ್ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್, ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಸಭಾಪತಿ ಡಿ.ಎಚ್. ಶಂಕರಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.