ADVERTISEMENT

ಅದ್ದೂರಿ ಅಷ್ಟಲಕ್ಷ್ಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ಶಿವಮೊಗ್ಗ: ಬೆಳಕಿನ ಹಬ್ಬ ದೀಪಾವಳಿಯಲ್ಲಿ ಅಂಗಡಿ-ಮನೆಗಳಲ್ಲಿ ಪೂಜೆಯ ಸಂಭ್ರಮ ಮನೆಮಾಡಿದ್ದರೆ, ಶಿವಮೊಗ್ಗದ ಗಾಂಧಿನಗರದ ~ಎ~ ಬ್ಲಾಕ್‌ನ ನಾಲ್ಕನೇ ತಿರುವಿನ ಅಭಿನೇತ್ರಿ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಅಷ್ಟಲಕ್ಷ್ಮೀಯರನ್ನು ಪ್ರತಿಷ್ಠಾಪಿಸಲಾಗಿದೆ.

ಬುಧವಾರದಿಂದ ಆರಂಭವಾದ ಲಕ್ಷ್ಮೀ ಪೂಜೆ ಮುಂದಿನ ಏಳು ದಿವಸದವರೆಗೆ ನೆರವೇರಲಿದೆ. ನೆರೆಹೊರೆಯವರು ಈ ಪೂಜೆಯಲ್ಲಿ ವಿಶೇಷವಾಗಿ ಪಾಲ್ಗೊಳ್ಳುತ್ತಿದ್ದಾರೆ.

 ಅಭಿನೇತ್ರಿ ಅವರ ಮನೆಯಲ್ಲಿ ಗಜಲಕ್ಷ್ಮೀ, ವಿಜಯಲಕ್ಷ್ಮೀ, ಧೈರ್ಯಲಕ್ಷ್ಮೀ, ಸಂತಾನಲಕ್ಷ್ಮೀ, ಧನಲಕ್ಷ್ಮೀ, ಸೌಭಾಗ್ಯಲಕ್ಷ್ಮೀ, ವಿದ್ಯಾಲಕ್ಷ್ಮೀ ಹಾಗೂ ಧಾನ್ಯಲಕ್ಷ್ಮೀ ಅವರನ್ನು ಪ್ರತಿಷ್ಠಾಪಿಸಲಾಗಿದೆ. ಧನಲಕ್ಷ್ಮೀಯ ಕೈಯಲ್ಲಿ ನೋಟುಗಳನ್ನು ಇಟ್ಟಿರುವುದು ಇಲ್ಲಿಯ ವಿಶೇಷವಾಗಿದೆ.   

ಕಳೆದ ಏಳು ವರ್ಷಗಳಿಂದ ಲಕ್ಷ್ಮೀ ದೇವತೆಯನ್ನು ಬೇರೆ ರೀತಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ, ಇದು ಎಂಟನೇ ವರ್ಷವಾಗಿದ್ದರಿಂದ ಅಷ್ಟಲಕ್ಷ್ಮೀಯರನ್ನು ಇಡಲಾಗಿದೆ. ಈ ಹಿಂದೆ ವಿಷ್ಣು ಅವತಾರ, ಕೈಲಾಸದಲ್ಲಿ ಲಕ್ಷ್ಮೀ, ನೀರಿನಲ್ಲಿ, ಉಯ್ಯಾಲೆಯಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಲಾಗಿತ್ತು. ಲಕ್ಷ್ಮೀಯ ಮುಖ ಅಂಗಡಿಯಲ್ಲಿ ಸಿಗುತ್ತದೆ. ವಿಶೇಷವಾಗಿ ಥರ್ಮಕೋಲ್‌ನ್ನು ಬಳಸಲಾಗಿದೆ.  ಮೂರು ದಿವಸ ಹಗಲು-ರಾತ್ರಿ ಕುಳಿತು ಡ್ರೆಸ್, ಅಲಂಕಾರಗಳನ್ನು ಮಾಡಲಾಗಿದೆ ಎನ್ನುತ್ತಾರೆ ಅಭಿನೇತ್ರಿ.

ಏಳು ವರ್ಷಗಳಿಂದ ಇದನ್ನು ಆಚರಿಸುತ್ತಾ ಬಂದಿದ್ದೇವೆ. ಇದರಲ್ಲೇ ನೆಮ್ಮದಿ, ತೃಪ್ತಿ ಕಂಡಿದ್ದೇವೆ. ನಮ್ಮ ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನೂ ಕಂಡಿದ್ದೇವೆ. ಕುಟುಂಬದಲ್ಲಿ ಸಾಮರಸ್ಯ ಇದೆ ಎನ್ನುತ್ತಾರೆ ಅಭಿನೇತ್ರಿ ಅವರ ತಾಯಿ ಶಶಿಕಲಾ ಪಾರಸ್ ಜೈನ್.

ವಿಶೇಷವಾಗಿ ಪ್ರತಿಷ್ಠಾಪಿಸಿರುವ ಈ ಅಷ್ಟಲಕ್ಷ್ಮೀಯರ ವೀಕ್ಷಣೆಗೆ ಸಾರ್ವಜನಿರಿಗೆ ಮುಕ್ತ ಪ್ರವೇಶವಿದೆ. ಆಸಕ್ತರು ಇವರ ಮನೆಗೆ ಭೇಟಿ ನೀಡಿ, ವೀಕ್ಷಿಸಬಹುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.