ಆನೇಕಲ್: ಅಪೌಷ್ಟಿಕತೆಯಿಂದ ಎಲ್ಲಾ ಮಕ್ಕಳು ಮುಕ್ತಿ ಹೊಂದುವಂತಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ತಿಳಿಸಿದರು.
ತಾಲ್ಲೂಕಿನ ಸರ್ಜಾಪುರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ಹಾಗೂ ಔಷಧಿಗಳನ್ನು ವಿತರಿಸಿ ಅವರು ಮಾತನಾಡಿದರು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಪ್ರತಿ ಮಗುವಿಗೆ ವಾರದಲ್ಲಿ ಎರಡು ದಿನ ಹಾಲು ಹಾಗೂ ನಾಲ್ಕು ದಿನ ಮೊಟ್ಟೆ ವಿತರಿಸಲಾಗುವುದು. 750 ರೂ. ಮೌಲ್ಯದ ಔಷಧಿಗಳ ಕಿಟ್ ವಿತರಿಸಲಾಗುವುದು. ಅವಶ್ಯಕತೆಯುಳ್ಳ ಮಕ್ಕಳಿಗೆ ಬಾಲ ಸಂಜೀವಿನಿ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಿಡಿಪಿಒ ನಿಶ್ಚಲ್ ಮಾತನಾಡಿ, ಸಮೀಕ್ಷೆಯಿಂದ ತಾಲ್ಲೂಕಿನಲ್ಲಿ 76 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ವಿವಿಧ ಕಾರ್ಯಕ್ರಮಗಳಿಂದಾಗಿ 11ಮಕ್ಕಳು ಈಗಾಗಲೇ ಅಪೌಷ್ಟಿಕತೆಯಿಂದ ಹೊರ ಬಂದಿದ್ದಾರೆ.
ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲ ಮಕ್ಕಳೂ ಅಪೌಷ್ಟಿಕತೆಯಿಂದ ಹೊರಬರಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ರಮೇಶ್ ಹಾಲಬಾವಿ, ನಿರೂಪಣಾಧಿಕಾರಿ ಎಂ.ಜಿ.ಪಾಲಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.