ADVERTISEMENT

ಅರಣ್ಯ ಸಂರಕ್ಷಣೆಗೆ ವಿಶೇಷ ನಿಧಿ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ಗೋಣಿಕೊಪ್ಪಲು: ಕೊಡಗಿನಲ್ಲಿ ಅರಣ್ಯ ಸಂಪತ್ತನ್ನು ರಕ್ಷಿಸುವ ದೃಷ್ಟಿಯಿಂದ ಸರ್ಕಾರ ವಿಶೇಷ ನಿಧಿ ಸ್ಥಾಪಿಸಿ ಪ್ರತಿ ವರ್ಷ ಹೆಚ್ಚಿನ ಅನುದಾನ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಶಾಲಪ್ಪ ಒತ್ತಾಯಿಸಿದರು.

ಪೊನ್ನಂಪೇಟೆ ಅರಣ್ಯ ಕಾಲೇಜಿನ ಸಭಾಂಗಣದಲ್ಲಿ ಅರಣ್ಯ ಇಲಾಖೆ, ಪಶ್ಚಿಮ ಘಟ್ಟ ಕಾರ್ಯಪಡೆ, ಕೆನಡಿಯನ್ ಮಾಡೆಲ್ ಫಾರೆಸ್ಟ್ ನೆಟ್‌ವರ್ಕ್ ಹಾಗೂ ಅರಣ್ಯ ಕಾಲೇಜು ಸಂಯುಕ್ತವಾಗಿ  ಜನಪ್ರತಿನಿಧಿಗಳಿಗಾಗಿ ಬುಧವಾರ ಆಯೋಜಿಸಿದ್ದ `ಕೊಡಗಿನ ಅರಣ್ಯಗಳ ಪಾರಂಪರಿಕ ಮೌಲ್ಯ~ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾವೇರಿ ನೀರಿನ ಬಳಕೆದಾರರು, ಸಂಘಟನೆಗಳು ಹಾಗೂ ಸರ್ಕಾರ ಕೊಡಗಿನ ಅಭಿವೃದ್ಧಿಗೆ ಪ್ರತಿವರ್ಷ ಕನಿಷ್ಠ ರೂ. 1 ಸಾವಿರ ಕೋಟಿ ಹಣ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.

ಕೊಡಗಿನ ಜನತೆಗೆ ಅರಣ್ಯ ರಕ್ಷಣೆ ರಕ್ತಗತವಾಗಿ ಬಂದಿದೆ. ಕೊಡಗಿನಲ್ಲಿ ಇಂದಿಗೂ ರಕ್ಷಿತವಾಗಿರುವ ದೇವರಕಾಡು ಇದಕ್ಕೆ ನಿದರ್ಶನ. ಆದರೂ ಕೊಡಗಿನ ಜನತೆಗೆ ಪರಿಸರ ವಿರೋಧಿಗಳು ಎಂಬ ಹಣೆ ಪಟ್ಟಿ ಕಟ್ಟುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ರವಿ ಕುಶಾಲಪ್ಪ ಹೇಳಿದರು.

ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಡಾ.ಸಿ.ಜಿ.ಕುಶಾಲಪ್ಪ ಮಾತನಾಡಿ ಕಾವೇರಿ ನದಿ ನೀರಿನ ರಕ್ಷಣೆಗಾಗಿ `ಕಾವೇರಿ ಜಲಾನಯನ ಅಭಿವೃದ್ಧಿ ಪ್ರಾಧಿಕಾರ~ ರಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. 

ಪ್ರಾಧ್ಯಾಪಕ ಡಾ.ದೇವಗಿರಿ, ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಜಿ.ಎಸ್. ಮೋಹನ್ ಪ್ರಬಂಧ ಮಂಡಿಸಿದರು. ವಿರಾಜಪೇಟೆ ಡಿಎಫ್‌ಒ ಪುಟ್ಟಸ್ವಾಮಿ, ಮಡಿಕೇರಿ ಡಿಎಫ್‌ಒ ಆನಂದ್, ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಜಯಶಂಕರ್, ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ.ಎನ್.ಎ. ಪ್ರಕಾಶ್, ಜಿ.ಪಂ.ಉಪಾಧ್ಯಕ್ಷೆ  ಎಚ್.ಎಂ.ಕಾವೇರಿ, ತಾ.ಪಂ.,ಜಿ.ಪಂ. ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.