ADVERTISEMENT

ಅಸ್ಪೃಶ್ಯತೆ ಇನ್ನೂ ಜೀವಂತ: ವಿಷಾದ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2011, 19:30 IST
Last Updated 5 ಏಪ್ರಿಲ್ 2011, 19:30 IST
ಅಸ್ಪೃಶ್ಯತೆ ಇನ್ನೂ ಜೀವಂತ: ವಿಷಾದ
ಅಸ್ಪೃಶ್ಯತೆ ಇನ್ನೂ ಜೀವಂತ: ವಿಷಾದ   

ಸೋಮವಾರಪೇಟೆ: ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ ಎಂದು ತಹಶೀಲ್ದಾರ್ ಎ.ದೇವರಾಜ್ ವಿಷಾದ ವ್ಯಕ್ತಪಡಿಸಿದರು.

ಮಂಗಳವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ಏರ್ಪಡಿಸಿದ ಬಾಬು ಜಗಜೀವನರಾಂ 104ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಜಗಜೀವನರಾಂ ದೇಶದ ಪ್ರಗತಿಗಾಗಿ ಅಹರ್ನಿಶಿ ದುಡಿದರು. ದೀನ ದಲಿತರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದರು. ಅವರು ಕೇವಲ ಒಂದು ವರ್ಗದ ನಾಯಕರಾಗಿ ಮೂಡಿ ಬರದೆ ಇಡೀ ದೇಶಕ್ಕೆ ಮಾದರಿ ನೇತಾರರಾಗಿ ಹೊರ ಹೊಮ್ಮಿದರು ಎಂದರು.

ಹಸಿರು ಕ್ರಾಂತಿಯ ಹರಿಕಾರರಾಗಿ ದೇಶದ ಆಹಾರದ ಬವಣೆಯನ್ನು ನೀಗಿಸಲು ಶ್ರಮಿಸಿ ಇದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಕೇಂದ್ರ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ ಮಾಡಿದ ಸಾಧನೆ ಇಂದಿಗೂ ಸ್ಮರಣಾರ್ಹವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಿವಪ್ಪ ಮಾತನಾಡಿ, ಜಗಜೀವನರಾಂ ಅವರ ಮಾರ್ಗದರ್ಶನ ಮತ್ತು ಅವರ ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ನಾಯಕತ್ವ ಬೆಳೆಯಲು ಸಾಧ್ಯ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜ್ಯೋತಿ ಶಿವಣ್ಣ, ಸವಿತಾ ಸತೀಶ್, ಪೊನ್ನಪ್ಪ, ಎಂ.ಡಿ.ಸುಬ್ಬಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ.ಎನ್.ನಾಗರಾಜ್ ಉಪಸ್ಥಿತರಿದ್ದರು.

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಎನ್.ನರಸಿಂಹಮೂರ್ತಿ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್.ಎಸ್.ಬಲರಾಂ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.