ADVERTISEMENT

ಅಸ್ವಸ್ಥಗೊಂಡಿದ್ದ ಮರಿಯಾನೆ ಸಾವು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 19:30 IST
Last Updated 8 ಏಪ್ರಿಲ್ 2012, 19:30 IST

ಎಚ್.ಡಿ.ಕೋಟೆ: ತೀವ್ರ ಭೇದಿಯಿಂದ ಅಸ್ವಸ್ಥಗೊಂಡು ಮೇಟಿಕುಪ್ಪೆ ಗ್ರಾಮದ ಜಮೀನಿನಲ್ಲಿ ಮಲಗಿದ್ದ ಕಾಡಾನೆ ಮರಿ ಶನಿವಾರ ಮೃತಪಟ್ಟಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಚಿಕಿತ್ಸೆ ನೀಡಿದರೂ ಆನೆ ಮರಿ ಚೇತರಿಸಿಕೊಳ್ಳಲಿಲ್ಲ.

ಆಹಾರ ಅರಸಿ ಕಾಡಿನಿಂದ 4 ಆನೆಗಳು ಈಚೆಗೆ ಮೇಟಿಕುಪ್ಪೆ ಗ್ರಾಮದತ್ತ ಬಂದಿದ್ದವು. ಆ ಗುಂಪಿನಲ್ಲಿ 2 ವರ್ಷದ ಗಂಡಾನೆ ಮರಿ ತೀವ್ರವಾಗಿ ನಿತ್ರಾಣಗೊಂಡು ಮೇಟಿಕುಪ್ಪೆ ರೈತರ ಜಮೀನಿನಲ್ಲಿ ಮಲಗಿತ್ತು.
ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಅದರ ರಕ್ಷಣೆಗೆ ಮುಂದಾದರು. ಪಶುವೈದ್ಯ ಡಾ.ವೆಂಕಟರಾಮು ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದರು.
 
ಆ ಸಂದರ್ಭದಲ್ಲಿ ತುಸು ಚೇತರಿಸಿಕೊಂಡ ಮರಿ ಕಾಡಿನತ್ತ ಹೆಜ್ಜೆ ಹಾಕಲು ಹೊರಟಿತು. ಆದರೆ ಸಾಧ್ಯವಾಗಲಿಲ್ಲ. ಟ್ರ್ಯಾಕ್ಟರ್ ಸಹಾಯದಿಂದ ವಲಯ ಅರಣ್ಯ ಕಚೇರಿ ಸಮೀಪಕ್ಕೆ ತಂದು ಪುನಃ ಚಿಕಿತ್ಸೆ  ಕೊಡಿಸಲಾಯಿತು. ಆದರೂ ಪ್ರಯೋಜನವಾಗಲಿಲ್ಲ ಎಂದು ವಲಯ ಅರಣ್ಯಾಧಿಕಾರಿ ಸಂತೋಷ ನಾಯಕ್ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.